ಎಲ್ಲ ಕಡೆ ಈಗ ಸಿಸಿ ಟಿವಿ ಕ್ಯಾಮೆರಾದ್ದೇ ಮಾತು. ಭದ್ರತೆಗಾಗಿ, ಕಳ್ಳ ಕಾಕರನ್ನು ಪತ್ತೆ ಮಾಡಲು, ಯಾರು ಏನು ಮಾಡಿದರು ಎಂಬುದನ್ನೆಲ್ಲ ತಿಳಿಯಲು, ಸಿಗ್ನಲ್‌ನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ್ದನ್ನು ಪತ್ತೆ ಮಾಡಿ ಮನೆಗೇ ನೋಟಿಸ್ ಕಳುಹಿಸಲು… ಹೀಗೆ ವೈವಿಧ್ಯಮಯ ಕೆಲಸ-ಕಾರ್ಯಗಳಿಗೆ ಕಣ್ಗಾವಲು ಯಂತ್ರವು ಬಳಕೆಯಾಗುತ್ತಿದೆ.
ಈಗಂತೂ ಕೂಡುಕುಟುಂಬಗಳಿಲ್ಲ. ಇದ್ದರೂ ಒಂದು ಮನೆಯಲ್ಲಿ ಪತಿ-ಪತ್ನಿ ಇಬ್ಬರೂ ದುಡಿಯಬೇಕಾದ ಪರಿಸ್ಥಿತಿ ಇದ್ದಾಗ, ಮನೆಯಲ್ಲಿ ಹಿರಿಯರನ್ನು, ಮಕ್ಕಳನ್ನು ನೋಡಿಕೊಳ್ಳುವವರು ಯಾರು? ಅವರೇನಾದರೂ ಅತ್ತಿತ್ತ ಹೋಗುವಾಗ ಬಿದ್ದುಬಿಟ್ಟರೆ? ಅಥವಾ ಕಳ್ಳ ನುಗ್ಗಿದರೆ? ಇಂಥ ಪರಿಸ್ಥಿತಿಯಲ್ಲಿ ಕಣ್ಗಾವಲು ಇರಿಸಿ, ಕಚೇರಿಯಲ್ಲಿ ಕುಳಿತುಕೊಂಡೇ ಮನೆಯಲ್ಲೇನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ವೈಫೈ ಕ್ಯಾಮೆರಾಗಳು ನೆರವಾಗುತ್ತವೆ. ಐಷಾರಾಮಿ ಮನೆಗಳಲ್ಲಷ್ಟೇ ಅಲ್ಲದೆ, ಸಣ್ಣಪುಟ್ಟ ಮನೆಗಳಿಗೆ ಅನುಕೂಲವಾಗುವ ದರದಲ್ಲಿ ಇಂಥ ಕ್ಯಾಮೆರಾಗಳು ದೊರೆಯುತ್ತವೆ. ಇಂಥದ್ದೇ ಒಂದು ವೈಫೈ ಕ್ಯಾಮೆರಾವನ್ನು ಇಲ್ಲಿ ಪರಿಚಯಿಸಲಾಗಿದೆ.
ಇದು ಗೋದ್ರೆಜ್ ಕಂಪನಿಯು ಹೊರತಂದಿರುವ ಸ್ಪಾಟ್‌ಲೈಟ್ ಪಿಟಿ ಕ್ಯಾಮೆರಾ ಹೆಸರಿನ ವೈಫೈ ಕ್ಯಾಮೆರಾ. ಮನೆಯಲ್ಲಿ ಇಂಟರ್ನೆಟ್ ಸಂಪರ್ಕವಿದ್ದರಾಯಿತು. ಇದನ್ನು ಮನೆಯೊಳಗೆ ಅಳವಡಿಸಿ, ವಯೋವೃದ್ಧ ಪ್ರೀತಿಪಾತ್ರರು ಏನು ಮಾಡಿದರು, ತಿಂಡಿ-ಊಟ ಮಾಡಿದರೇ? ಮಾತ್ರೆ ತೆಗೆದುಕೊಂಡರೇ ಎಂಬುದನ್ನೆಲ್ಲ ಕಚೇರಿಯಲ್ಲಿದ್ದುಕೊಂಡೇ, ಮೊಬೈಲ್ ಫೋನ್ ಮೂಲಕವೇ ವೀಕ್ಷಿಸುತ್ತಾ, ಮಾತ್ರೆ ತೆಗೆದುಕೊಳ್ಳಲು ಅವರಿಗೆ ಧ್ವನಿಯ ಮೂಲಕ ನೆನಪಿಸಲು ಕೂಡ ನೆರವಾಗುತ್ತದೆ ಇದು.
ಕೋವಿಡ್-19 ಆರೋಗ್ಯ ಬಿಕ್ಕಟ್ಟು ಸ್ವಲ್ಪವೇ ದೂರವಾಗಿ, ಈಗ ಮನೆಯಿಂದಲೇ ಕೆಲಸ ಮಾಡುವ ಅವಕಾಶವೂ ಕಡಿಮೆಯಾಗಿ ಕಚೇರಿ ಕೆಲಸಗಳು ಶುರುವಾಗಿವೆ. ಹೀಗಾಗಿ ವಾರಕ್ಕೊಮ್ಮೆ ಅಥವಾ ಎರಡು ವಾರಗಳಿಗೊಮ್ಮೆ ಊರಿಗೆ ಹೋಗಲು ಸಾಧ್ಯ. ಮನೆಯಲ್ಲಿ ಹಿರಿಯರಿದ್ದರೆ ಅವರನ್ನೂ ನೋಡಿಕೊಳ್ಳಬೇಕಲ್ಲ! ಇದಕ್ಕೆ ಪೂರಕವಾಗಿದೆ ಈ ಕ್ಯಾಮೆರಾ.
ಸ್ಪಾಟ್‌ಲೈಟ್ ಪಿಟಿ (ಪ್ಯಾನ್-ಟಿಲ್ಟ್) ಹಾಗೂ ಸ್ಪಾಟ್‌ಲೈಟ್ ಫಿಕ್ಸ್‌ಡ್ ಎಂಬ ಎರಡು ನಮೂನೆಗಳಲ್ಲಿ ವೈಫೈ ಕ್ಯಾಮೆರಾ ಲಭ್ಯವಿದೆ. ಪಿಟಿ ಮಾದರಿಯ ವಿಶೇಷವೆಂದರೆ, ಅದರ ಕ್ಯಾಮೆರಾವನ್ನು ಬೇಕಾದ ಕೋನಕ್ಕೆ ತಿರುಗಿಸಬಹುದು. ನೋಡಲು ಆಕರ್ಷಕವಾಗಿದೆ.
ಅಳವಡಿಸುವುದು ಸುಲಭ
ಗೋದ್ರೆಜ್ ಸೆಕ್ಯುರಿಟಿ ಸೊಲ್ಯುಶನ್ಸ್ ವಿನ್ಯಾಸಪಡಿಸಿರುವ ಸ್ಪಾಟ್‌ಲೈಟ್ ಹೋಂ ಕ್ಯಾಮೆರಾವನ್ನು ಅಳವಡಿಸುವುದು ತೀರಾ ತೀರಾ ಸುಲಭ. ಸೂಚನೆಗಳನ್ನು ಅನುಸರಿಸುತ್ತಾ ಹೋದರೆ ನಾವಾಗಿಯೇ ಅಳವಡಿಸಬಹುದು. ಇದಕ್ಕೆ ವೈಫೈ ಸಂಪರ್ಕ ಬೇಕು ಮತ್ತು ಮೊಬೈಲ್ ಆ್ಯಪ್ ಮೂಲಕವೇ ಎಲ್ಲವನ್ನೂ ನಿಭಾಯಿಸಬಹುದು. ಬಾಕ್ಸ್‌ನಲ್ಲಿ ಪವರ್ ಕೇಬಲ್ ಜೊತೆಗಿದೆ. ಕ್ಯಾಮೆರಾವನ್ನು ಹೊರತೆಗೆದು, ಒಂದೋ ಗೋಡೆಯ ಮೇಲೆ ಅಳವಡಿಸಬಹುದು (ಮೊಳೆ ಹಾಕಬೇಕಾಗುತ್ತದೆ) ಇಲ್ಲವೇ, ಪ್ಲಗ್ ಪಾಯಿಂಟ್ ಸಮೀಪದಲ್ಲಿ ಹೆಚ್ಚುವರಿಯಾಗಿರುವ ಬಲ್ಬ್ ಹೋಲ್ಡರ್ ಪಾಯಿಂಟ್ ಮೇಲೆ ಕೂರಿಸಬಹುದು. ಅಥವಾ, ಮೇಜು ಇಲ್ಲವೇ ಕಪಾಟು ಮುಂತಾದ ಸಮತಟ್ಟಾದ ಮೇಲ್ಮೈ ಮೇಲೆ ಇರಿಸಬಹುದು. ಆದರೆ ಪ್ಲಗ್ ಪಾಯಿಂಟ್ ಸಮೀಪದಲ್ಲಿರಬೇಕು.
ನಂತರ ಗೋದ್ರೆಜ್ ಸ್ಪಾಟ್‌ಲೈಟ್ ಆ್ಯಪ್ ಅಳವಡಿಸಿಕೊಂಡು, ಅದನ್ನು ತೆರೆದಾಗ, ಮೊದಲ ಬಾರಿ ವೈಫೈಗೆ ಸಂಪರ್ಕಿಸಬೇಕಾಗುತ್ತದೆ. ಇದಕ್ಕಾಗಿ ಸ್ಮಾರ್ಟ್‌ಫೋನ್ ಅದೇ ವೈಫೈ ನೆಟ್‌ವರ್ಕ್‌ಗೆ ಸಂಪರ್ಕಿಸಿರಬೇಕಾಗುತ್ತದೆ. ನಂತರ ಪ್ಲಸ್ ಗುರುತನ್ನು ಒತ್ತಿ, ಕ್ಯಾಮೆರಾ ಹಿಂಭಾಗದಲ್ಲಿರುವ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರಾಯಿತು. ಕೆಲವೇ ಕ್ಷಣಗಳಲ್ಲಿ ಕ್ಯಾಮೆರಾ ಸಿದ್ಧವಾಗುತ್ತದೆ.
ಹೇಗೆ ಕೆಲಸ ಮಾಡುತ್ತದೆ
ವೈಫೈ ಕ್ಯಾಮೆರಾಕ್ಕೆ ಸದಾ ಕಾಲ ಪವರ್ ಆನ್ ಆಗಿರಬೇಕು. ವೈಫೈ ಇಂಟರ್ನೆಟ್ ಸಂಪರ್ಕ ಇರಬೇಕು. ನಾವು ದೂರದಲ್ಲಿರುವಾಗ, ಇಂಟರ್ನೆಟ್ ಸಂಪರ್ಕವಿರುವ ಮೊಬೈಲ್‌ನಲ್ಲಿ ಆ್ಯಪ್ ತೆರೆದರೆ, ಮನೆಯೊಳಗಿನ ದೃಶ್ಯಗಳು ಕ್ಯಾಮೆರಾ ಮೂಲಕವಾಗಿ ಸ್ಟ್ರೀಮ್ ಆಗುತ್ತವೆ. ಕಂಪ್ಯೂಟರಿನಲ್ಲಿ ಬ್ರೌಸರ್ ಮೂಲಕವೂ ಈ ವಿಡಿಯೊವನ್ನು ವೀಕ್ಷಿಸುತ್ತಿರಬಹುದು. ಪಕ್ಕದಲ್ಲಿರುವ ಮೈಕ್ ಬಟನ್ ಒತ್ತಿದರೆ, ‘ಅಮ್ಮಾ, ಮಾತ್ರೆ ತಗೊಳಿ, ಊಟ ಮಾಡಿ’ ಅಂತೆಲ್ಲ ಹೇಳಿದರೆ, ಮನೆಯಲ್ಲಿರುವ ಅವರಿಗೂ ಆ ಕ್ಯಾಮೆರಾದಲ್ಲೇ ಕೇಳಿಸುತ್ತದೆ. ಇದು ಉಭಯ-ಮಾರ್ಗದಲ್ಲಿ ಮಾತನಾಡುವ ವ್ಯವಸ್ಥೆ. ಅವರೇನಾದರೂ ಹೇಳಿದರೆ ಕಚೇರಿಯಲ್ಲೋ, ಪ್ರಯಾಣದಲ್ಲೋ ಅಥವಾ ದೂರದಲ್ಲೆಲ್ಲೋ ಇರುವ ನಮಗೂ ಕೇಳಿಸುತ್ತದೆ. ಕ್ಯಾಮೆರಾದ ಕೋನವನ್ನು ದೂರದಲ್ಲಿರುವ ಆ್ಯಪ್ ಮೂಲಕವೇ (ರಿಮೋಟ್ ಆಗಿ) ನಿಯಂತ್ರಿಸಬಹುದಾಗಿದೆ ಎಂಬುದು ವಿಶೇಷ. 110 ಡಿಗ್ರಿ ಕೋನದಲ್ಲಿರುವ ಎಲ್ಲವೂ ಗೋಚರಿಸುತ್ತದೆ.
ಜೊತೆಗೆ, ಇದರಲ್ಲಿರುವ ಮೋಷನ್ ಸೆನ್ಸರ್ ಎಂಬ ವೈಶಿಷ್ಟ್ಯವು, ವ್ಯಕ್ತಿಗಳು ಚಲಿಸಿದರೆ ಅಥವಾ ಏನಾದರೂ ಅಸಹಜ ಚಲನೆ ಕಂಡುಬಂದರೆ, ಮೊಬೈಲ್ ಆ್ಯಪ್‌ಗೆ ಅಲರ್ಟ್ ನೋಟಿಫಿಕೇಶನ್ ಕಳುಹಿಸುವ ವ್ಯವಸ್ಥೆಯನ್ನೂ ಹೊಂದಿದೆ. ಆಂತರಿಕವಾಗಿ 128 ಜಿಬಿ ಸಾಮರ್ಥ್ಯ ಮೆಮೊರಿ ಕಾರ್ಡ್ ಅಳವಡಿಸಬಹುದಾಗಿದೆ. ಹಿಂದಿನ ಕ್ಯಾಮೆರಾ ದೃಶ್ಯಾವಳಿಗಳು ಬೇಡವೆಂದಾದರೆ, ಇಷ್ಟು ಸಾಕಾಗುತ್ತದೆ. ಹೆಚ್ಚುವರಿ ಬೇಕೆಂದಾದರೆ, ಕ್ಲೌಡ್‌ನಲ್ಲಿ ಕೂಡ (ಆನ್‌ಲೈನ್ ಸರ್ವರ್‌ನಲ್ಲಿ) ಈ ವಿಡಿಯೊ ದೃಶ್ಯಗಳನ್ನು ಉಳಿಸಿಕೊಳ್ಳಬಹುದು. ಇದಕ್ಕಾಗಿ ಹಣ ಪಾವತಿಸಬೇಕಾಗುತ್ತದೆ.
ರಾತ್ರಿ ವೇಳೆಯ ದೃಶ್ಯವೂ ಈ ಕ್ಯಾಮೆರಾದ ಮೂಲಕ ಚೆನ್ನಾಗಿ ಕಾಣಿಸುತ್ತದೆ. ಸುಮಾರು 30 ಅಡಿ ದೂರದಿಂದಲೂ ರಾತ್ರಿ ವೇಳೆ ಬಹುತೇಕ ಸ್ಪಷ್ಟ ಚಿತ್ರಗಳು ಕಾಣಿಸುತ್ತವೆ. ಅಂತರ್-ನಿರ್ಮಿತವಾದ ಮೈಕ್ ಮತ್ತು ಸ್ಪೀಕರ್ ಇರುವುದರಿಂದ, ಪರಸ್ಪರ ಸಂವಹನಕ್ಕೆ ಸೂಕ್ತವಾಗಿರುವ ಇದರ ಬೆಲೆ ₹5999. ಸಾಕಷ್ಟು ಕೊಡುಗೆಗಳೂ ಇರುವುದರಿಂದ ಕಡಿಮೆ ಬೆಲೆಗೆ ಲಭ್ಯವಾಗುತ್ತದೆ.