ನಾನೂ ಹೋಗ್ಬಂದೆ ಜರ್ಮನಿಯ ಕಾರುಗಳ ಲೋಕಕ್ಕೆ!

0
699

ವೋಕ್ಸ್ ವ್ಯಾಗನ್ ಫ್ಯಾಕ್ಟರಿ ಎದುರು
ವೂಲ್ಫ್ಟ್ ಬರ್ಗ್ ವೋಕ್ಸ್ ವ್ಯಾಗನ್ ಫ್ಯಾಕ್ಟರಿ ಎದುರು

ಕವಿಗಳು ಮತ್ತು ಚಿಂತಕರ ನಾಡು ಎಂದು ಕರೆಯಲಾಗುವ (Das Land der Dichter und Denker) ಜರ್ಮನಿಯಿಂದ, ನಮ್ಮ ನಿಮ್ಮೆಲ್ಲರ ಹೆಮ್ಮೆಯ ವೆಬ್‌ದುನಿಯಾವನ್ನು ಪ್ರತಿನಿಧಿಸುವ ಆಹ್ವಾನವೊಂದು ಕೈಬೀಸಿ ಕರೆದಾಗ, ಯಾವುದೋ ಹೊರದೇಶಕ್ಕೆ ಹೋಗುತ್ತೇನೆ ಎಂಬುದಷ್ಟೇ ನನ್ನ ಸಂತಸವಾಗಿರಲಿಲ್ಲ, ಬದಲಾಗಿ, ವಾಣಿಜ್ಯಾತ್ಮಕವಾಗಿ ಯೂರೋಪಿನ ಅತ್ಯಂತ ಬಲಿಷ್ಠ ರಾಷ್ಟ್ರವೊಂದಕ್ಕೆ ಮತ್ತು ಜನಸಾಮಾನ್ಯರಿಗೆ ಅಪರೂಪ ಎಂದು ಪರಿಗಣಿಸಲಾಗುವ ನಾಡೊಂದಕ್ಕೆ ಹೋಗುತ್ತಿದ್ದೇನೆ ಎಂಬ ಹೆಮ್ಮೆಯೂ ಜೊತೆಗಿತ್ತು.

ಅಸಾಧಾರಣ ಯುವ ಪತ್ರಕರ್ತರ ಅರಿವು (ಔಟ್‌ಸ್ಟ್ಯಾಂಡಿಂಗ್ ಯಂಗ್ ಜರ್ನಲಿಸ್ಟ್ಸ್ ಸ್ಕಾಲರ್‌ಶಿಪ್) ಕಾರ್ಯಕ್ರಮದಡಿಯಲ್ಲಿ ಯೂರೋಪಿನ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆ ವೋಕ್ಸ್‌ವ್ಯಾಗನ್ (ಜರ್ಮನ್ ಭಾಷೆಯಲ್ಲಿ ಉಚ್ಚರಿಸುವುದು ಫೋಕ್ಸ್‌ವ್ಯಾಗನ್) ಆಹ್ವಾನದಿಂದಾಗಿ, ತಂಡದಲ್ಲಿ ಏಕೈಕ ಕನ್ನಡಿಗನಾಗಿ ವೆಬ್‌ದುನಿಯಾವನ್ನು ಪ್ರತಿನಿಧಿಸುತ್ತಿರುವುದು ನನಗೆ ಮತ್ತಷ್ಟು ಹಿರಿಮೆಯ ಸಂಗತಿಯಾಗಿತ್ತು.

ಜೀವಮಾನದಲ್ಲೇ ದೊರೆಯಬಹುದಾದ ಅಪರೂಪದ ಅವಕಾಶವಿದು. ಅಮೆರಿಕ, ಆಸ್ಟ್ರೇಲಿಯಾ, ಸಿಂಗಾಪುರ ಮುಂತಾದೆಡೆಗಳಿಗೆ ಹೋಲಿಸಿದರೆ ಯೂರೋಪಿನ ಎರಡನೇ ಅತಿದೊಡ್ಡ ರಫ್ತುದಾರ ಮತ್ತು ಆಮದುದಾರ ರಾಷ್ಟ್ರ ಜರ್ಮನಿ ಭೇಟಿಗೆ ಅವಕಾಶ ದೊರೆಯುವುದೇ ಅಪರೂಪ. ಅಂತಲೇ ವೆಬ್‌ದುನಿಯಾ ಸಹೋದ್ಯೋಗಿಗಳು, ಗೆಳೆಯರು ಬೆನ್ನುತಟ್ಟಿ ಬೀಳ್ಕೊಟ್ಟಾಗ ಮನಸ್ಸಿನಲ್ಲಿ ಅದೇನೋ ಹೆಮ್ಮೆ.

ಹಳೇ ಕಾರು ಮಾಡೆಲ್ ಬಳಿ
ಹಳೇ ಕಾರು ಮಾಡೆಲ್ ಬಳಿ
19 ಮಂದಿ ಪತ್ರಕರ್ತರ ದಂಡಿನಲ್ಲಿ ಎನ್‌ಡಿಟಿವಿ, ಟೈಮ್ಸ್ ನೌ, ಬೂಮರಾಂಗ್ ಟಿವಿ, ಝೀ ಬಿಜಿನೆಸ್, ಸಿಎನ್‌ಬಿಸಿ ನೆಟ್ವರ್ಕ್-18 ಮುಂತಾದ ಚಾನೆಲ್‌ಗಳ ಪ್ರತಿನಿಧಿಗಳು ಹಾಗೂ ಪಿಟಿಐ, ಪಿಟಿಐ ಭಾಷಾ, ಟೈಮ್ಸ್ ಆಫ್ ಇಂಡಿಯಾ, ಫೈನಾನ್ಷಿಯಲ್ ಎಕ್ಸ್‌ಪ್ರೆಸ್, ಡಿಎನ್ಎ, ದಿ ಹಿಂದು, ದಿ ವೀಕ್, ಬಿಜಿನೆಸ್ ವರ್ಲ್ಡ್, ಬಿಜಿನೆಸ್ ಇಂಡಿಯಾ, ಇಟಿ ಝಿಗ್ ವೀಲ್ಸ್. ಟ್ವೆಂಟಿ-20 ಮೀಡಿಯಾ, ಮುಂತಾದ ರಾಷ್ಟ್ರೀಯ ಮಾಧ್ಯಮಗಳೊಂದಿಗೆ, ಭಾರತದ 9 ಭಾಷೆಗಳಲ್ಲಿ ಇಂಟರ್ನೆಟ್ ಸೇವೆ ಒದಗಿಸುತ್ತಿರುವ ಏಕೈಕ ಪೋರ್ಟಲ್ ವೆಬ್‌ದುನಿಯಾವನ್ನು ಪ್ರತಿನಿಧಿಸುತ್ತಿದ್ದುದು ಅತೀವ ಹೆಮ್ಮೆಯ ಸಂಗತಿಯಾಗಿತ್ತು. ಅದರಲ್ಲಿ ದಕ್ಷಿಣ ಭಾರತದಿಂದ ಈ ಮಾಧ್ಯಮಗಳನ್ನು ಪ್ರತಿನಿಧಿಸಲು ಅವಕಾಶ ಸಿಕ್ಕಿರುವವರಲ್ಲಿ ದಿ ಹಿಂದೂ ಬಿಟ್ಟರೆ, ವೆಬ್‌ದುನಿಯಾಕ್ಕೆ ಮಾತ್ರ.

ಆಗಸ್ಟ್ 29ರಂದು ಬೆಳ್ಳಂಬೆಳಗ್ಗಿನ ಬಿಸಿಲ ಬೆವರಿನೊಂದಿಗೆ ಚೆನ್ನೈಯಿಂದ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಜಿಟಿಜಿಟಿ ಮಳೆಯ ಸುಸ್ವಾಗತ. ಬೇಸಿಗೆಯಿಂದ ಮಳೆಗಾಲಕ್ಕೆ ದಿಢೀರ್ ಮಾರ್ಪಾಡು. ಅಲ್ಲಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಐಷಾರಾಮಿ ಹೋಟೆಲ್ ಟ್ರೈಡೆಂಟ್‌ನಲ್ಲಿ ಕೊಠಡಿ ವ್ಯವಸ್ಥೆ. ಹದಿಮೂರು ವರ್ಷಗಳ ಹಿಂದೆ ನನ್ನ ವೃತ್ತಿ ಜೀವನವನ್ನು ಆರಂಭಿಸಿದ ಈ ವಾಣಿಜ್ಯ ನಗರಿಯಿಂದು ಅದ್ಭುತವಾಗಿ ಬೆಳೆದಿದೆ, ಬದಲಾಗಿದೆ – ಬಹುಶಃ ನನ್ನ ಜೀವನದ ಗತಿಯಂತೆಯೇ! ಕಂಪನಿ ಒದಗಿಸಿದ ಕಾರಿನಲ್ಲಿ ಒಂದಿಷ್ಟು ಸುತ್ತಾಡಿದಾಗ, ಶ್ರೀಕೃಷ್ಣ ಲೀಲೋತ್ಸವಕ್ಕೆ ಮತ್ತು ನಾಡಹಬ್ಬದ ಒಡೆಯ ಗಣಪನನ್ನು ಸ್ವಾಗತಿಸಲು ಇಡೀ ನಗರಕ್ಕೆ ನಗರವೇ ಸಜ್ಜಾಗುತ್ತಾ ಅಲ್ಲಲ್ಲಿ ಕಂಡು ಬಂದ ಹೋರ್ಡಿಂಗ್‌ಗಳು, ಬ್ಯಾನರ್‌ಗಳನ್ನು ನೋಡಿ, ಅಲ್ಲಿ ಹಬ್ಬ ಹರಿದಿನಗಳೂ ವಾಣಿಜ್ಯೀಕರಣಗೊಳ್ಳುತ್ತಿವೆ ಹಾಗೂ ರಾಜಕೀಕರಣಗೊಳ್ಳುತ್ತಿವೆ ಎಂಬುದನ್ನು ಸಂಕೇತಿಸುತ್ತಿತ್ತು.

ದಶಕದ ಹಿಂದೆ ತಿಂದಿದ್ದ ವಡಾ-ಪಾವ್ ರುಚಿಯ ನೆನಪು ಉಮ್ಮಳಿಸಿ ಬಂದು, ಮತ್ತೊಮ್ಮೆ ವಡಾ ಪಾವ್ ಸವಿದು ಹೋಟೆಲ್‌ಗೆ ಮರಳಿದಾಗ ರಾತ್ರಿ 10 ಗಂಟೆ. ಮಧ್ಯರಾತ್ರಿ ಕಳೆದು 2.50ಕ್ಕೆ ಫ್ರಾಂಕ್‌ಫರ್ಟ್ ತೆರಳುವ ಲುಫ್ತಾನ್ಸಾ ವಿಮಾನ ಏರಬೇಕಾಗಿತ್ತು. ಮಳೆಯಿಂದಾಗಿ ಒಂದು ಗಂಟೆ ತಡವಾಗಿ ಹೊರಟ ವಿಮಾನ, 9 ಗಂಟೆ ಪ್ರಯಾಣದ ಬಳಿಕ ಫ್ರಾಂಕ್‌ಫರ್ಟ್ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಇಳಿದಾಗ, ದೆಹಲಿಯಿಂದ ಬಂದ 10 ಮಂದಿಯ ತಂಡ ನಮ್ಮನ್ನು ಸೇರಿಕೊಂಡಿತು. ಓಹ್! ಫ್ರಾಂಕ್‌ಫರ್ಟ್‌ನಲ್ಲಿ ಹರ್ಟ್ ಮಾಡುತ್ತಿತ್ತು ಚಳಿಗಾಲದ ಕುಳಿರ್ಗಾಳಿ! ಅಲ್ಲಿಗೆ ವರ್ಷದ ಮೂರೂ ಋತುಗಳನ್ನು ಇಪ್ಪತ್ತನಾಲ್ಕು ಗಂಟೆಗಳೊಳಗೆ ಅನುಭವಿಸಿದ ವಿಶೇಷ ದಾಖಲೆ! ಅಲ್ಲಿಂದ ಹ್ಯಾನೋವರ್‌ಗೆ ಲುಫ್ತಾನ್ಸಾ-ಸ್ಟಾರ್ ಅಲಯನ್ಸ್ ವಿಮಾನದಲ್ಲಿ ಪ್ರಯಾಣ. ಅಲ್ಲಿ ನಮಗಾಗಿ ಕಾದಿದ್ದ ಬಸ್ಸೇರಿ, ಕಾರುಗಳ ಮಾಯಾನಗರಿ, ವೋಕ್ಸ್‌ವ್ಯಾಗನ್ ಕಾರಿನ ಜನ್ಮಭೂಮಿಯೂ ಕರ್ಮಭೂಮಿಯೂ ಆಗಿರುವ ವೂಲ್ಫ್ಸ್‌ಬರ್ಗ್‌ಗೆ ತಲುಪಿದಾಗ ಮಾಯಾಲೋಕವೊಂದಕ್ಕೆ ಕಾಲಿಟ್ಟ ಹಾಗಿತ್ತು. ಅಬ್ಬಾ! ಎಲ್ಲಿ ನೋಡಿದರೂ ಕಾರುಗಳು… ವೋಕ್ಸ್‌ವ್ಯಾಗನ್‌ನ ಬ್ರಾಂಡ್-ಕುಟುಂಬ ವರ್ಗಕ್ಕೆ ಸೇರಿದ ಕಾರುಗಳೇ ಎಲ್ಲೆಲ್ಲೂ! ಉಳಿದ ಬ್ರಾಂಡ್ ಕಾರುಗಳ ಸಂಖ್ಯೆ ಅಬ್ಬಬ್ಬಾ ಎಂದರೆ ಶೇ10-15 ಮಾತ್ರ!

ಹೋಟೆಲಿನಲ್ಲಿ ಇತರ ಪತ್ರಕರ್ತರೊಂದಿಗೆ
ಹೋಟೆಲಿನಲ್ಲಿ ಇತರ ಪತ್ರಕರ್ತರೊಂದಿಗೆ
ಕಾರು ಫ್ಯಾಕ್ಟರಿ: ಶತಮಾನದಷ್ಟು ಸುದೀರ್ಘ ಇತಿಹಾಸವುಳ್ಳ, 1.6 ಚದರ ಕಿ.ಮೀ. (395 ಎಕರೆ) ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ವೋಕ್ಸ್‌ವ್ಯಾಗನ್ ಒಳಾಂಗಣ ಕಾರು ಫ್ಯಾಕ್ಟರಿಗೆ ಹೊಕ್ಕರೆ ಅದೊಂದು ಅದ್ಭುತ ಯಂತ್ರಮಾನವರ ಲೋಕ. ರೋಬೋಟ್‌ಗಳಿಂದ ಕಾರು ಬಿಡಿಭಾಗ ಜೋಡಣೆಯ ಅದ್ಭುತ ಮಸಲತ್ತು ಕಣ್ಣಾರೆ ಕಾಣಬೇಕು! ಈ ಕಾರು ಫ್ಯಾಕ್ಟರಿಯಲ್ಲಿ 48 ಸಾವಿರ ಉದ್ಯೋಗಿಗಳೂ (ಯಂತ್ರಮಾನವರಲ್ಲ!) ಇದ್ದಾರೆಂದು ಕೇಳಿ ಮತ್ತಷ್ಟು ಅಚ್ಚರಿಯಾಯಿತು. ಇಲ್ಲಿ ದಿನವೊಂದಕ್ಕೆ 3000ಕ್ಕೂ ಹೆಚ್ಚು ಕಾರುಗಳು ತಯಾರಾಗುವ ಸಾಮರ್ಥ್ಯವನ್ನು ಈ ಫ್ಯಾಕ್ಟರಿ ಹೊಂದಿದೆ! ಇದರೊಳಗೆ ಪ್ರವಾಸಿಗರಿಗೆಂದೇ ಇರಿಸಲಾಗಿರುವ ಪುಟ್ಟ ರೈಲನ್ನು ಟಾರ್ಸ್ಟೆನ್ ಕ್ರಾಮ್ ಎಂಬವರು ಚಲಾಯಿಸುತ್ತಾ ನೀಡುತ್ತಿದ್ದ ವಿವರಣೆಯಂತೂ ನಮ್ಮನ್ನು ಮಂತ್ರಮುಗ್ಧರನ್ನಾಗಿಸಿತ್ತು. ಒಂದು ಕಾರಿನ ಸಂಪೂರ್ಣ ಉತ್ಪಾದನಾ-ಚಕ್ರವನ್ನು ಇಷ್ಟು ಹತ್ತಿರದಿಂದ ನೋಡುತ್ತಿರುವುದು ಬಹುಶಃ ಜೀವಮಾನದ ಶ್ರೇಷ್ಠ, ಅಪರೂಪದ ಅವಕಾಶಗಳಲ್ಲೊಂದು ಎಂದರೆ ಅತಿಶಯೋಕ್ತಿಯಲ್ಲ.

ಆಟೋಸ್ಟಾಟ್: ಜಗತ್ತಿನ ಅತಿ ದೊಡ್ಡ ಕಾರು ವಿತರಣಾ ಕೇಂದ್ರವೆಂದು ಪರಿಗಣಿಸಲಾಗಿರುವ, ಎರಡು ಗಾಜಿನ ಟವರ್‌ಗಳಿರುವ ಕುಂಡನ್‌ಸೆಂಟರ್ (ಒಂದೊಂದು ಗಾಜಿನ ಟವರ್‌ನಲ್ಲಿ ತಲಾ 400 ಕಾರುಗಳು ಗ್ರಾಹಕರಿಗೆ ವಿತರಣೆಗೆ ಸಿದ್ಧ) ಬಳಿಯಲ್ಲೇ, ಆಟೋಸ್ಟಾಟ್ ಎಂಬ ಕಾರುಗಳ ಥೀಮ್ ಪಾರ್ಕ್ ಇದೆ. ಇಲ್ಲಿ ವೋಕ್ಸ್‌ವ್ಯಾಗನ್ ಮತ್ತು ಅದರ ಪ್ರತಿಸ್ಪರ್ಧಿ ಕಂಪನಿಗಳದ್ದೂ ಸೇರಿದಂತೆ 400ಕ್ಕೂ ಹೆಚ್ಚು ವಾಹನಗಳು, ಕಾರುಗಳ ಇತಿಹಾಸದ ಮೈಲಿಗಲ್ಲುಗಳಾಗಿ ಒಂದೊಂದು ಇತಿಹಾಸ ಸಾರುತ್ತವೆ. ಪಕ್ಕದಲ್ಲೇ, ಕಾರು ಹೇಗೆಲ್ಲಾ ಚಲಾಯಿಸಬಹುದು, ಎಷ್ಟು ಗಟ್ಟಿ ಇದೆ ಎಂದೆಲ್ಲಾ ಪರೀಕ್ಷಿಸಲು ಟೆಸ್ಟ್ ಟ್ರ್ಯಾಕ್ ಇದೆ. ಇಲ್ಲಿ ಹಳ್ಳ ದಿಣ್ಣೆಗಳು, ಮೆಟ್ಟಿಲುಗಳು, ನೀರು, ಹೊಂಡ-ಗುಂಡಿಯ ಮಾರ್ಗ ಮತ್ತು ಮರಳಿನಲ್ಲೆಲ್ಲಾ ಕಾರು ಓಡಿಸಿ ನೋಡಬಹುದು. ನನಗೂ ಕೂಡ ವೋಕ್ಸ್‌ವ್ಯಾಗನ್‌ನ ಟಾರೆಗ್ (Touarag) ಕಾರಿನ ಟೆಸ್ಟ್ ಡ್ರೈವಿಂಗ್ ಅವಕಾಶ ಸಿಕ್ಕಿತ್ತು. ಗೇರುಗಳಿಲ್ಲದ, ಕ್ಲಚ್ ಕೂಡ ಇಲ್ಲದ ಪೂರ್ಣ ಸ್ವಯಂಚಾಲಿತ ಕಾರು ಇದು. ಇದರ ಸವಾರಿ ಅದ್ಭುತ! ಕೊಳ್ಳೋಣವೆಂದುಕೊಂಡು ಬೆಲೆ ಕೇಳಿದರೆ…. ಅಂದಾಜು 55 ಲಕ್ಷ ರೂಪಾಯಿ ಮಾತ್ರ!

Fronfurtier ಪತ್ರಿಕೆಯ ಕಚೇರಿಯಲ್ಲಿ ಬೊಂಬೆ ಜೊತೆ
Fronfurtier ಪತ್ರಿಕೆಯ ಕಚೇರಿಯಲ್ಲಿ ಬೊಂಬೆ ಜೊತೆ
ಐದು ದಿನಗಳ ಪ್ರವಾಸದ ಅವಧಿಯಲ್ಲಿ ಜರ್ಮನಿಯ ರಾಷ್ಟ್ರೀಯ ಸಂಸತ್ತು ‘ಬುಂಡೆಸ್ಟಾಗ್’ಗೆ ಭೇಟಿ ನೀಡುವ ಅವಕಾಶವೂ ದೊರೆಯಿತು. ಅಲ್ಲಿ ಸಂಸತ್ತಿನೊಳಗೆ ನೈಸರ್ಗಿಕ ಬೆಳಕು ಒದಗಿಸುವ ವ್ಯವಸ್ಥೆಗೆ ಮಾರುಹೋದೆವು. ನಂತರ ಬರ್ಲಿನ್ ಅನ್ನು 360 ಡಿಗ್ರಿಯಲ್ಲಿ ವೀಕ್ಷಣೆ ಮಾಡಬಹುದಾದ, ಟಿವಿ ಟವರ್ ಎಂದು ಪ್ರೀತಿಯಿಂದ ಕರೆಯಲಾಗುವ, 368 ಮೀಟರ್ ಎತ್ತರದ, ಬರ್ಲಿನ್‌ನ ಅತಿ ಎತ್ತರದ ಬರ್ಲಿನ್ ಫರ್ನ್‌ಸೇಟರ್ಮ್ (Fernsehturm), ಲಿಫ್ಟ್ ಮೂಲಕ ಮೇಲೇರಿ, ಅದರ ಮಧ್ಯದಲ್ಲಿರುವ ಗೋಳದಂತಹಾ ಭಾಗದಲ್ಲಿ, ನಿಧಾನವಾಗಿ ಸುತ್ತುವ ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಾ, ಇಡೀ ಜರ್ಮನಿಯನ್ನು ಪಕ್ಷಿನೋಟದ ಮೂಲಕ ವೀಕ್ಷಿಸಿ ಇಳಿದು ಮೇಲೆ ನೋಡಿದಾಗ, ಅಬ್ಬಾ, ನಾವು ಏರಿದ್ದು ಈ ಪುಟ್ಟ ಕಂಬದೊಳಗೆಯೇ? ಎಂಬ ಉದ್ಗಾರ ಬಾಯಿಯಿಂದ ಹೊರಬಂದಿತ್ತು!

ಅದರ ನಡುವೆ, ಭಾರತೀಯ ರಾಯಭಾರ ಕಚೇರಿ, ಜರ್ಮನಿಯ ಪತ್ರಕರ್ತರ ಒಕ್ಕೂಟ, ಅಲ್ಲಿನ ಪ್ರಮುಖ ದಿನಪತ್ರಿಕೆ ಫ್ರಾಂಕ್‌ಫರ್ಟರ್ ಅಲ್ಜೆಮೀನ್ ಕಚೇರಿ, ಸರಕಾರಿ ದೂರದರ್ಶನವಾದರೂ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿರುವ ಡೈಚ್‌ವಿಲ್ಲೆ (Deutsche Welle) ಟಿವಿ ಕೇಂದ್ರಕ್ಕೂ ಭೇಟಿ ನೀಡಿದೆವು. ನಂತರ ಯಹೂದಿಗಳ ಹತ್ಯಾಕಾಂಡದ ಪ್ರತೀಕವಾದ ಹೋಲೋಕಾಸ್ಟ್ ಸ್ಮಾರಕ, ತದನಂತರ ಯೂರೋಪಿನ ಅತ್ಯಂತ ಪ್ರಖ್ಯಾತ ಹೆಗ್ಗುರುತುಗಳಲ್ಲೊಂದಾಗಿರುವ ಬ್ರಾಂಡೆನ್‌ಬರ್ಗ್ ಗೇಟ್‌ಗೆ ಬಂದಾಗ ಮಳೆರಾಯ ಕಾದಿದ್ದ. ಆಕರ್ಷಕ ಕಾಮನಬಿಲ್ಲು ಮೂಡಿತ್ತು. ಸಂಜೆ 8 ಗಂಟೆಯವರೆಗೂ ಅಲ್ಲಿ ಬೆಳಕು ಇರುತ್ತಿದ್ದುದು ನೋಡಿ ಮುದವಾಯಿತು. ಇವಿಷ್ಟು ಜರ್ಮನಿ ಪ್ರವಾಸದ ಪಕ್ಷಿ ನೋಟ. ವಿವರಗಳು ಮುಂದಿನ ಲೇಖನದಲ್ಲಿ.

ಇನ್ನು ಜರ್ಮನಿ ಬಗೆಗೆ ಒಂದಿಷ್ಟು:
ಕಾಲಿಟ್ಟ ಕೂಡಲೇ ಇದು ಹೊರ ದೇಶ ಎಂದು ಅನ್ನಿಸಿಬಿಡುವುದೇಕೆ? ಏಕೆಂದರೆ ಇಲ್ಲಿನ ರಸ್ತೆಗಳು. ಹೌದು. ಯಾವುದೇ ಊರಿನ ಪರಿಸ್ಥಿತಿ ತಿಳಿಸುವುದೇ ಅಲ್ಲಿನ ರಸ್ತೆಗಳು. ಎಷ್ಟೊಂದು ಸ್ವಚ್ಛ ಮತ್ತು ಸುಂದರ! ಮತ್ತು ನಗರ ಎಂದು ಕರೆಸಿಕೊಂಡರೂ ಇಕ್ಕಟ್ಟಾದ ರಸ್ತೆಗಳಿಲ್ಲ. ಹೆಚ್ಚಿನವು ದ್ವಿಪಥ, ಚತುಷ್ಪಥ, ಷಟ್ಪಥ ಹಿರಿದಾದ ದಾರಿಗಳೇ! ಅದಕ್ಕೆ ಆತುಕೊಂಡಿರುವ ಕಟ್ಟಡಗಳು – ಎಷ್ಟು ವ್ಯವಸ್ಥಿತವಾಗಿ ನಗರವನ್ನು ರೂಪಿಸಲಾಗಿದೆ ಎಂಬುದನ್ನು ನೋಡಿದಾಗ, ಇದ್ದದ್ದನ್ನು ಬಾಚಿಕೊಂಡು, ರಸ್ತೆಯಲ್ಲಿಯೂ ಅತಿಕ್ರಮಿಸಿಕೊಂಡು ವ್ಯಾಪಾರ ಮಾಡುವ ನಮ್ಮ ಊರುಗಳ ನೆನಪಾಗುತ್ತದೆ.

ಜರ್ಮನಿ ಸಂಸತ್ತಿನ ಒಳಗೆ
ಜರ್ಮನಿ ಸಂಸತ್ತಿನ ಒಳಗೆ
ಜರ್ಮನ್ನರು ನಗರವನ್ನು ಎಷ್ಟು ವ್ಯವಸ್ಥಿತವಾಗಿ ರೂಪಿಸುತ್ತಿದ್ದಾರೆ, ಸಿಕ್ಕ ಯಾವುದೇ ಅವಕಾಶವನ್ನೂ ಪೋಲು ಮಾಡದೆ, ಭವಿಷ್ಯದ ಪೀಳಿಗೆಗೂ ಸಂಪನ್ಮೂಲ ಉಳಿಯುವಂತೆ ನೋಡಿಕೊಂಡು ಒಂದು ಪಟ್ಟಣವನ್ನು ಕಟ್ಟುತ್ತಿದ್ದಾರೆ ಎಂದರೆ, ನಮಗೇಕೆ ಸಾಧ್ಯವಾಗಲಾರದು? ಇದಕ್ಕೆ ದೊರೆಯುವ ಏಕೈಕ ಉತ್ತರವೆಂದರೆ ಜನಸಂಖ್ಯೆ. ಜನಸಂಖ್ಯೆ ಹೆಚ್ಚಾದಂತೆ, ಅಭಿವೃದ್ಧಿಗೆ ಅಡಚಣೆಯಾಗುತ್ತದೆ, ಸಂಪನ್ಮೂಲದ ಬೇಡಿಕೆ ಹೆಚ್ಚಾಗುತ್ತದೆ. ಹೀಗಾಗಿ ಹಣ ಮಾಡುವುದೇ ಏಕೈಕ ಉದ್ದೇಶವಾಗಿಬಿಡುತ್ತದೆ. ಭವಿಷ್ಯದ ಬಗೆಗೆ ಯೋಚಿಸುವ ಮನಸ್ಥಿತಿಗೆ ಕಾರ್ಮೋಡ ಕವಿದಿರುತ್ತದೆ. ಅದರ ನಡುವೆ ಜಾತಿ-ಪಂಗಡಗಳೆಂಬಂತಹಾ ಅಡ್ಡಗೋಡೆಗಳು ಮನುಷ್ಯನ ಮನಸ್ಸನ್ನು ಕುಬ್ಜವಾಗಿಸುತ್ತಿದೆ. ಹೀಗಂತ, ನಮ್ಮ ದೇಶವನ್ನು ಹೀಗಳೆಯುತ್ತಿಲ್ಲ. ಇದು ಪರಿಸ್ಥಿತಿಯ ಪ್ರಭಾವ ಎಂಬುದು ಗೊತ್ತು. ಆದರೆ, ಒಂದಿನಿತಾದರೂ ಯೋಚಿಸಿದರೆ, ದೂರದೃಷ್ಟಿ ಇದ್ದಿದ್ದರೆ ನಾವು ಇನ್ನಷ್ಟು ವ್ಯವಸ್ಥಿತವಾಗಿ ಜೀವನ ಮಾಡಬಹುದಿತ್ತು ಎಂಬುದು ಸುಳ್ಳಲ್ಲವಲ್ಲ!

ಜರ್ಮನಿಯ 3.57 ಸಾವಿರ ಚದರ ಕಿ.ಮೀ. ವಿಸ್ತೀರ್ಣದಲ್ಲಿ ಜನಸಂಖ್ಯೆ ಇರುವುದು 8.18 ಕೋಟಿಯಷ್ಟು, ಇಷ್ಟಾಗಿಯೂ ಇದು ಐರೋಪ್ಯ ಒಕ್ಕೂಟದಲ್ಲಿಯೇ ಅತೀ ಹೆಚ್ಚು ಜನಸಂಖ್ಯೆಯಿರುವ ರಾಷ್ಟ್ರ! 16 ರಾಜ್ಯಗಳ ಫೆಡರಲ್ ಪಾರ್ಲಿಮೆಂಟರಿ ಸರಕಾರ ಇಲ್ಲಿದೆ. ಅತ್ಯುಚ್ಚ ಮಟ್ಟದ ಜೀವನ ಶೈಲಿಯಿದ್ದರೂ ಸಾಮಾಜಿಕ ಭದ್ರತೆಯ ನಿಟ್ಟಿನಲ್ಲಿ ಅವರ ಕಾಳಜಿಯಿಂದಾಗಿಯೇ ಬಹುಶಃ ಅವರು ಸಿರಿವಂತಿಕೆಯಿಂದ ಮೆರೆಯುತ್ತಿರುವುದು. ಹಲವು ಕ್ಷೇತ್ರಗಳಲ್ಲಿ ವೈಜ್ಞಾನಿಕ ಮತ್ತು ತಂತ್ರಜ್ಞಾನದ ಲೀಡರ್ ಎಂದು ಪರಿಗಣಿಸಲ್ಪಟ್ಟಿದೆ ಜರ್ಮನಿ. ಇನ್ನೊಂದು ಗಮನ ಸೆಳೆದ ವಿಷಯವೆಂದರೆ, ಅವರ ಭಾಷಾಭಿಮಾನ. ಜಾಗತಿಕ ಭಾಷೆ ಎಂದು ಪರಿಗಣಿಸಲ್ಪಟ್ಟಿರುವ ಇಂಗ್ಲಿಷ್ ಪ್ರಚಲಿತದಲ್ಲಿದ್ದರೂ, ಅದರ ಮೇಲೆ ಹಿಡಿತ ಸಾಧಿಸಿದವರು ಭಾರತಕ್ಕೆ ಹೋಲಿಸಿದರೆ ಕಡಿಮೆ. ನಮ್ಮಲ್ಲಿ ನಾವು ರಾಷ್ಟ್ರಭಾಷೆ-ರಾಜ್ಯಭಾಷೆಯನ್ನು ಬಿಟ್ಟುಕೊಟ್ಟು, ಆಂಗ್ಲ ಭಾಷೆಯ ಪದಗಳಿಗೇ ಮೊರೆ ಹೋಗುತ್ತಿದ್ದರೆ, ಅವರು ಹಾಗಲ್ಲ. ಪಕ್ಕಾ ಜರ್ಮನ್ ಭಾಷೆಯೇ ಎಲ್ಲೆಲ್ಲೂ ನೋಡಸಿಗುತ್ತದೆ, ಕೇಳಸಿಗುತ್ತದೆ.

ಜಗಮಗಿಸುವ ರಾಜಧಾನಿ ನಗರ ಬರ್ಲಿನ್‌ನ ಟಿಗೆಲ್ ವಿಮಾನ ನಿಲ್ದಾಣದಿಂದ ಫ್ರಾಂಕ್‌ಫರ್ಟ್ ವಿಮಾನವೇರಿ, ಅಲ್ಲಿಂದ ಮರಳಿ ಲುಫ್ತಾನ್ಸಾ ವಿಮಾನದ ಮೂಲಕ ಚೆನ್ನೈ ಹಾದಿ ಹಿಡಿದಾಗ, ಐದು ದಿನಗಳಲ್ಲೇ ಆಪ್ತವಾಗಿಬಿಟ್ಟಿದ್ದ ಜರ್ಮನಿಯಿಂದ ಮತ್ತು ಜೊತೆಗೆ ಸಿಕ್ಕ ಹೊಸ ಗೆಳೆಯ-ಗೆಳತಿಯರಿಂದ ಬೀಳ್ಕೊಡುವ ಮನಸ್ಥಿತಿಯು ಎದೆಗೂಡನ್ನು ಭಾರವಾಗಿಸಿತ್ತು. ಜರ್ಮನಿಯ ಚಳಿಯ ನಡುವೆಯೂ ಹೃದಯದ ತುಂಬೆಲ್ಲಾ ಬೆಚ್ಚನೆಯ ಅನುಭವಗಳ ಗೋಪುರ. ಮರಳಿ ಭಾರತಕ್ಕೆ ಕಾಲಿಟ್ಟಾಗಲಂತಾ ನೆನಪಾಗಿದ್ದು, ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ (ಜನನಿ, ಜನ್ಮಭೂಮಿಗಳು ಸ್ವರ್ಗಕ್ಕಿಂತಲೂ ಮಿಗಿಲಾದವು) ಎಂಬ ಮಾತು.
[ವೆಬ್ ದುನಿಯಾದಲ್ಲಿ ಇಲ್ಲಿ ಪ್ರಕಟಿತ]

1 COMMENT

LEAVE A REPLY

Please enter your comment!
Please enter your name here