ಪ್ರತಿವರ್ಷ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ವಿಶ್ವಾದ್ಯಂತ ಸ್ನೇಹ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ತನ್ನಿಮಿತ್ತ ಈ ಲೇಖನ.
“ವ್ಯಕ್ತಿಯೊಬ್ಬನನ್ನು ಅರ್ಥ ಮಾಡಿಕೊಳ್ಳಬೇಕಿದ್ದರೆ ಅವನ/ಳ ಗೆಳೆಯರು ಯಾರು ಅಂತ ತಿಳಿದುಕೊಂಡರೆ ಸಾಕು” ಎಂಬಲ್ಲಿಗೆ ಸ್ನೇಹ ಎಂಬ ಪದದ ಅರ್ಥವ್ಯಾಪ್ತಿ ಎಷ್ಟೊಂದು ವಿಶಾಲವಾದುದು ಎಂಬುದು ವೇದ್ಯವಾಗುತ್ತದೆ.
ಹೌದು. ನೋವುಗಳನ್ನೆಲ್ಲಾ ಬಿಚ್ಚಿಟ್ಟು ನಿರಾಳವಾಗಿಬಿಡಲು, ಭುಜದಲ್ಲಿ ತಲೆಯಿಟ್ಟೋ, ಬೊಗಸೆಯಲ್ಲಿ ಮುಖವಿರಿಸಿಯೋ… ಕಾಡುತ್ತಿರುವ, ಮರುಕಳಿಸುತ್ತಿರುವ ದುಃಖ ದುಮ್ಮಾನಗಳನ್ನೆಲ್ಲಾ ಮರೆತುಬಿಡಲು ಅಥವಾ ಮನಸ್ಸಿಗಾದ ಸಂತಸದ ಮೇಘಗಳ ಓಘವನ್ನು ಹಂಚಿಕೊಳ್ಳಲು ಒಬ್ಬ ಗೆಳೆಯನೋ, ಗೆಳತಿಯೋ ಇದ್ದಿದ್ದರೆ?…
ಹೀಗಂತ ಬಹುಶಃ ಒಂದಿಲ್ಲೊಂದು ಸಂದರ್ಭದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಅನ್ನಿಸಿರುತ್ತದೆ. ಗೆಳೆತನವೆಂಬ ಅಮೂಲ್ಯ ರತ್ನಕ್ಕಿರುವ ಶಕ್ತಿ ಅಗಾಧ. “ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ” ಎಂಬಂತೆ, ಈ ಗೆಳೆತನವೆಂಬ ಬಂಧವು ಎಷ್ಟು ಬಲಯುತವಾಗಿ, ಶಕ್ತಿಶಾಲಿಯಾಗಿರುತ್ತದೆಯೋ, ಅಷ್ಟೇ ಮೃದುವೂ, ಕೋಮಲವೂ ಆಗಿರಬಲ್ಲುದು.
ಈಗಿನ ಸ್ಥಿತಿ ನೋಡಿ. ‘ಗೆಳೆಯರೆಂದರೆ ಯಾರು, ಗೆಳೆಯರೇಕೆ ಬೇಕು’ ಎಂದು ಕೇಳಿದಾಗ ಬಹುತೇಕವಾಗಿ ವ್ಯಕ್ತವಾಗುವ ಉತ್ತರವೆಂದರೆ… ದುಃಖ ಮರೆಸುವ, ಕಷ್ಟಕಾಲದಲ್ಲಿ ನೆರವಾಗುವ ಗೆಳೆಯರಿದ್ದರೆಷ್ಟು ಚೆನ್ನ ಎಂಬುದು. ಬಹುಶಃ ಈ ಮಾತುಗಳು ಅವರ ಬಾಯಿಯಿಂದ ಯೋಚಿಸದೆಯೇ ಹೊರಬರುವಂಥವುಗಳೋ ಅಥವಾ ನಿರ್ಲಕ್ಷ್ಯದಿಂದಲೇ ಉದುರುವಂಥವುಗಳೋ…
ಬರೇ ಇಷ್ಟಕ್ಕಾಗಿಯೇ ಇರುವುದೇ ನಮ್ಮ ಗೆಳೆಯರು/ಗೆಳತಿಯರು ಅಂತಲೂ ಒಮ್ಮೆ ಯೋಚಿಸಬಾರದೇ?
ಕೇವಲ ನೋವು ಹಂಚಿಕೊಳ್ಳಲು ಅಂತ ತಿಳಿದುಕೊಂಡರೆ ಬಹುಶಃ ಅದು ಮಿತ್ರತ್ವ ಆಗಲಾರದು. ಅದು ಸ್ವಾರ್ಥ. ಗೆಳೆತನವೆಂಬ ಅನೂಹ್ಯ ಬಂಧವೊಂದು ಎರಡು ಹೃದಯಗಳನ್ನು, ಎರಡು ಮನಸ್ಸುಗಳನ್ನು ಹತ್ತಿರ ತರುತ್ತದೆ ಎಂದಾದರೆ, ಅಲ್ಲಿ ಸ್ವಾರ್ಥಕ್ಕೆಡೆಯಿರುವುದಿಲ್ಲ ಮತ್ತು ಇರಲೂಬಾರದು. ನೋವು ಮಾತ್ರವಲ್ಲ, ನಲಿವು ಕೂಡ ನಮ್ಮ ಗೆಳೆಯರೊಂದಿಗೆ ಹಂಚಿಕೊಂಡರೆ ಆ ನಲಿವಿನ ಪ್ರಮಾಣ ಹೆಚ್ಚಾಗುವುದನ್ನು ನಾವೆಲ್ಲಾ ಗಮನಿಸಿರಬಹುದು. ಗೆಳೆತನವೆಂಬುದು ಕೊಡು-ಕೊಳ್ಳುವಿಕೆ. ಆದರೆ ಇಲ್ಲಿ ಸ್ವಾರ್ಥ ಬರಬಾರದು, ಅಪೇಕ್ಷೆ ಇರಬಾರದು, ಪರಸ್ಪರರ ಬದುಕನ್ನು ಸಂತೋಷವಾಗಿಸುವ, ಉತ್ತುಂಗಕ್ಕೇರಿಸುವ, ಪರಸ್ಪರರಿಗೆ ನೆರವಾಗುವ, ಸ್ಪಂದಿಸುವ ಆದಮ್ಯ ಮನದಿಚ್ಛೆ ಅಲ್ಲಿರುತ್ತದೆ.
ಅದೇ ಅಲ್ಲವೇ ಗೆಳೆತನವೆಂಬ ಒಲವಿನ ಗೆಲುವಿನ ಬೆಸುಗೆಯ ಸಾಮರ್ಥ್ಯ? ಆತ್ಮೀಯನೆಂಬ… ಆತ್ಮಕ್ಕೆ ಸಮೀಪವಾಗುವ ಆ ಮಹಾನುಭಾವನೊಂದಿಗೆ ನೋವು ಹಂಚಿಕೊಂಡರೆ ಅದು ಕರಗಿ ನೀರಾಗಿ ಒಂದು ಪುಟ್ಟ ತೊರೆಯಾಗಿ ಹರಿದು ಹೋಗುತ್ತದೆ, ಆದರೆ ನಲಿವು ಹಂಚಿಕೊಂಡರೋ… ಅದು ಸಂತಸದ ಸಾಗರವಾಗುತ್ತದೆ, ಆನಂದದ ಆಗರವಾಗುತ್ತದೆ.
ಸ್ನೇಹ ದಾರಿ ತಪ್ಪುವ ಬಗ್ಗೆ ಒಂದಷ್ಟು ಯೋಚಿಸಿದರೆ… “ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು” ಎಂಬ ಕವಿವಾಣಿಯೆಲ್ಲಿ… ಹಣವಿದ್ದರಷ್ಟೇ ಹತ್ತಿರ ಬರುವ ಈ ಧಾವಂತ ಯುಗದ ಹೊಸ ಪೀಳಿಗೆಯೆಲ್ಲಿ?.. ಎಂಬುದು ಯೋಚಿಸಬೇಕಾದ ಸಂಗತಿ.
“ಹೇಯ್… ಅಂವ ನಮ್ಜೊತೆ ಕುಡಿಯೋಕೆ ಬರಲ್ಲ ಕಣೋ… ಅವ್ನ ಸಹವಾಸ ಬೇಡ” ಅಂತ ದೂರವಾಗುವ, “ಯಾವಾಗ್ ನೋಡಿದ್ರೂನೂ ಕೆಲ್ಸ, ಕೆಲ್ಸ ಅಂತ ಸಾಯ್ತಿರ್ತಾನೆ… ಮೋಜು ಮಾಡೋ ಸಮಯಕ್ಕಾಗದ ಅವನಂಥ ಗೆಳೆಯರು ಇದ್ರೆಷ್ಟು ಬಿಟ್ರೆಷ್ಟು…” ಅನ್ನುತ್ತಲೇ ಗೆಳೆತನವೆಂಬ ಬಂಧದ ಮೂಲಕ್ಕೇ ಕೊಡಲಿ ಹಾಕುವ, “ಏನಪ್ಪಾ ಅವ್ನು, ಒಂದ್ನೂರು ರೂಪಾಯಿ ಕೇಳ್ದಾಗ ಇಲ್ಲಾಂತಾನೆ… ಎಂಥಾ ಫ್ರೆಂಡಪ್ಪಾ ಅವ್ನು” ಅಂತ ಫ್ರೆಂಡ್‌ಶಿಪ್ ಅನ್ನೋ ಮಧುರ-ಪವಿತ್ರ ಸಂಬಂಧವನ್ನು ತನ್ನದೇ ರೀತಿಯಲ್ಲಿ ವ್ಯಾಖ್ಯಾನಿಸುವ ಮಂದಿಯ ನಡುವೆ ಗೆಳೆತನವನ್ನೆಲ್ಲಿ ಹುಡುಕೋದು ಎಂಬ ಒಂದಿಷ್ಟು ಗೊಂದಲಗಳೂ ಆಗಾಗ್ಗೆ ಯಾರಿಗಾದರೂ ಕಾಡಿದ್ದಿರಬಹುದು.
ಬೇಡ ಬೇಡವೆಂದರೂ ಮನಸ್ಸು ಈಗಿನ ಗೆಳೆತನದ ಪರಿಸ್ಥಿತಿಯತ್ತ ಹೊರಳುತ್ತದೆ. ಗೆಳೆತನದ ಹೆಸರಿನಲ್ಲಿ ಏನೆಲ್ಲಾ ಆಗುತ್ತಿದೆ… ಒಬ್ಬ ಹುಡುಗ- ಒಬ್ಬ ಹುಡುಗಿ ಅಥವಾ ಒಬ್ಬ ಮಧ್ಯ ವಯಸ್ಕ ಪುರುಷ-ಮಹಿಳೆ ಸನ್ಮನದ ಮಿತ್ರರು ಅಂತ ಸಮಾಜದ ದೃಷ್ಟಿಯಲ್ಲಿ ಅನ್ನಿಸಿಕೊಳ್ಳಲು ಎಷ್ಟೆಲ್ಲಾ ಹೆಣಗಾಡಬೇಕಾಗುತ್ತದೆ. ಇಲ್ಲಿ ಗೆಳೆತನದ ಮಧ್ಯೆ ಲಿಂಗಭೇದ ಕಾಣಿಸಿಕೊಂಡಾಗ ಬಹುಶಃ ಅದು ಗೆಳೆತನದ ತಾಕತ್ತಿಗೆ ಸವಾಲು ಕೂಡ ಹೌದು, ಅಗ್ನಿಪರೀಕ್ಷೆಯೂ ಹೌದು. ಇಲ್ಲಿ ಸ್ನೇಹ ಮತ್ತು ಪ್ರೇಮದ ನಡುವೆ ಒಂದು ತೆಳು ಪರದೆ ಇರುತ್ತದೆ. ಸ್ನೇಹದ ನಡುವೆ ಸ್ವಾರ್ಥದ ಚುಕ್ಕೆ ಕಾಣಿಸಿಕೊಂಡರೂ ಅದು ಸ್ನೇಹವಾಗಲಾರದು, ಪ್ರೇಮವೋ ಕಾಮವೋ ಆಗಿ ಹಾದಿ ತಪ್ಪಬಹುದು. ಸ್ನೇಹಾನುಬಂಧದ ಪಾವಿತ್ರ್ಯ ಕೆಡಬಹುದು.
ಕಷ್ಟಕಾಲದಲ್ಲಿ ಪರಸ್ಪರ ನೆರವು ನೀಡುವ ಮತ್ತು ಸಹಾಯ ಬೇಡುವ ವಿಷಯ ಬಂದಾಗ, ಇಲ್ಲಿ ಸ್ವಾರ್ಥ ಮತ್ತು ಗೆಳೆತನದ ನಡುವೆ ಇರುವುದು ಕೂದಲೆಳೆಯ ಅಂತರವಷ್ಟೆ ಎಂಬುದನ್ನು ಗಮನಿಸಬೇಕು. ಈ ಗೆಳೆತನವೆಂಬುದು ಏಕಮುಖವಾದಾಗ ಅದು ಹಾದಿ ತಪ್ಪಿ ಸ್ವಾರ್ಥದ ತಿರುವು ಪಡೆಯುತ್ತದೆ. ಹಾಗಾಗದಂತೆ ಎಚ್ಚರ ವಹಿಸುವುದು ಪರಿಶುಭ್ರ ಸ್ನೇಹಕ್ಕೆ ರಹದಾರಿ.
“ಏನಪ್ಪಾ, ಇಡೀ ವಿಶ್ವಾನೇ ನಮ್ಮ ಮುಷ್ಠಿಯಲ್ಲಿಟ್ಕೋಬೌದು ಅನ್ನೋ ಮೊಬೈಲ್ ಫೋನ್ ಇರುವಾಗಲೂ ನಿನ್ನನ್ನು ಮಾತಾಡ್ಸೋದಂದ್ರೆ ಭೂಮಿ-ಆಕಾಶ ಒಂದು ಮಾಡ್ಬೇಕಾಗುತ್ತೆ” ಅಂತ ನಮ್ಮ ಆತ್ಮೀಯ ವಲಯವು ಆಗಾಗ್ಗೆ ಗುನುಗುತ್ತಿರುವುದನ್ನು ಕೇಳಿರಬಹುದು. ಹೌದಲ್ಲ..?!. ಜೀವನ ಬರೇ ಯಾಂತ್ರಿಕವಾಗುತ್ತಿದೆಯಲ್ಲ… ದುಡಿತವೇ ಮುಖ್ಯವಾದಾಗ ಗೆಳೆತನದ ಬಂಧ ಸಡಿಲವಾಗುತ್ತಿದೆಯಲ್ಲ…?! ಸ್ನೇಹವೆಂಬೊಂದು ಆತ್ಮೀಯ ಅನುಬಂಧ ಸಣ್ಣ ಕೂದಲೆಳೆಯ ಮೂಲಕ ಎರಡು ಮನಸ್ಸುಗಳನ್ನು ಅತ್ಯಂತ ಕ್ಷೀಣವಾಗಿ ಬೆಸೆಯುತ್ತಿದೆ. ಹಾಗಾಗಬಾರದು. ಮಾನವ ಸಂಘಜೀವಿ, ವಿಶಿಷ್ಟವಾದ, ಅನ್ಯತ್ರ ಅಲಭ್ಯವಾದ ಈ ಸ್ನೇಹ ಅವನಿಗಷ್ಟೇ ಸೀಮಿತ ಅಂತ ತಿಳಿದುಕೊಂಡಿರೋ… ತಪ್ಪು ತಪ್ಪು… ನಮ್ಮ ಕಣ್ಣೆದುರೇ ಸ್ನೇಹ ಭಾವನೆಯನ್ನು ತೋರುವ, ಪರಸ್ಪರ ಸಾಂತ್ವನ ಮಾಡಿಕೊಳ್ಳುವ, ಕೊಡು-ಕೊಳ್ಳುವಿಕೆಯಲ್ಲೇ ಕಾಲ ಕಳೆಯುತ್ತಿರುವ ಮೂಕಪ್ರಾಣಿಗಳಾದ ನಾಯಿ-ಬೆಕ್ಕುಗಳನ್ನೂ ನಾವು ನೋಡಿದ್ದೇವೆ, ಕೇಳಿದ್ದೇವೆ. ಇದು ಗೆಳೆತನವು ಮಾನವೀಯತೆಗೆ ಹೊರತಾಗಿಯೂ ತನ್ನ ವೃಕ್ಷದ ಕೊಂಬೆಗಳನ್ನು ಚಾಚಿವೆ ಎಂಬುದಕ್ಕೆ ಉದಾಹರಣೆಯಾಗಬಹುದಲ್ಲವೇ?
ಆಪತ್ತಿಗಾದವನೇ ಆಪ್ತ ಎಂಬ ಮಾತಿನ ತಿರುಳು ಮತ್ತು ಎ ಫ್ರೆಂಡ್ ಇನ್ ನೀಡ್ ಇಸ್ ಎ ಫ್ರೆಂಡ್ ಇಂಡೀಡ್ ಎಂಬುದರ ವಾಕ್ಯಾರ್ಥವೂ, ಇವೆರಡರ ಭಾವಾರ್ಥವೂ ಒಂದೇ. ಮನುಷ್ಯ ಮನುಷ್ಯನ ನಡುವಿನ ಸಂಬಂಧಗಳು ಸಂಕೀರ್ಣವಾಗುತ್ತಿರುವ ಈ ಯುಗದಲ್ಲಿ, ಅವಿಭಕ್ತ ಕುಟುಂಬ ಪದ್ಧತಿ ಮರೆಯಾಗುತ್ತಿರುವ ಈ ಕಾಲದಲ್ಲಿ, ಅದೆಲ್ಲಿಂದ ಈ ಗೆಳೆಯನನ್ನು- ಗೆಳತಿಯನ್ನು ಸೃಷ್ಟಿಮಾಡಿದನೋ ಆ ಭಗವಂತ… ತಪಸ್ಸು ಮಾಡಿದರೂ ಸಿಗಲಾರದ ಆ ಒಂದು ಸ್ನೇಹದ ಕುಡಿ ನಮ್ಮ ಜೀವನವನ್ನು ಅದೆಷ್ಟು ಸುಂದರವಾಗಿಸುತ್ತಿಲ್ಲ…!!!
ಆ ಕಣ್ಣೀರೊರೆಸುವ ಕೈಗಳು, ತಲೆ ಸವರುವ ಕರಗಳು, ದುಗುಡಗಳಿಗೆ ಕಿವಿಯೊಡ್ಡುವ, ಬಿದ್ದಾಗ ಮೇಲೆತ್ತುವ ಭುಜಗಳು, ಅಧೋಮುಖಿಯಾದಾಗ ಉತ್ತೇಜಿಸುವ, ಸಂತೈಸುವ ಮನಸುಗಳು ಮಾತ್ರವಲ್ಲ, ಎದ್ದಾಗ ಸಂಭ್ರಮಿಸುವ, ದಾರಿ ತಪ್ಪಿದಾಗ ಕೈಹಿಡಿದು ತಿದ್ದುವ, ದೇಹವೆರಡು ಆತ್ಮವೊಂದೇ ಎಂಬಷ್ಟರ ಮಟ್ಟಿಗೆ ನಮ್ಮನ್ನು ಆವರಿಸಿಕೊಳ್ಳುವ, ಈ ಜೀವನವದೆಷ್ಟು ಸುಂದರ ಎಂಬ ಭಾವನೆಯನ್ನು ನಮಗೆ ಬೊಗಸೆಯಲ್ಲಿ ಕಟ್ಟಿಕೊಡುವ, ನೆರಳು ಪಡೆದು ನೆರಳು ಕೊಡುವ ಆ ಗೆಳೆತನದ ವೃಕ್ಷಗಳು ನೂರ್ಕಾಲ ಬಾಳಲಿ. ಸ್ನಿಗ್ಧ-ಮುಗ್ಧ ಮನದ ಗೆಳೆತನ ಚಿರಾಯುವಾಗಲಿ.
ಈ ಲೇಖನ “ವೆಬ್‌ದುನಿಯಾ” ದಲ್ಲಿ ಇಲ್ಲಿ ಪ್ರಕಟವಾಗಿದೆ.
ರಿಯಲ್ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ ರಿಯಲ್ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್ಶಿಪ್ ಚಿಪ್ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ ರಿಯಲ್ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.