ಕೋವಿಡ್-19 ಕಾಡಿದಾಗಿನಿಂದ ಆನ್‌ಲೈನ್ ಹಣ ಪಾವತಿಯ ವ್ಯವಸ್ಥೆಗೆ ಜನರು ಹೆಚ್ಚು ಹೆಚ್ಚು ಒಗ್ಗಿಕೊಳ್ಳಲಾರಂಭಿಸಿದ್ದಾರೆ. ಡಿಜಿಟಲ್ ಪಾವತಿ (ಪೇಮೆಂಟ್) ವ್ಯವಸ್ಥೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಉತ್ತೇಜನ ನೀಡಿದ ಬಳಿಕ ಈ ಸಂಖ್ಯೆಯೂ ಹೆಚ್ಚಾಗತೊಡಗಿದೆ. ಪೂರಕವಾಗಿ, ಡಿಜಿಟಲ್ ಪಾವತಿಯನ್ನು ಸುಲಭವಾಗಿಸಿದ್ದು ಮತ್ತು ಜನಸಾಮಾನ್ಯರಿಗೂ ತಲುಪುವಂತೆ ಮಾಡಿರುವುದು ಸ್ಮಾರ್ಟ್ ಫೋನ್‌ಗಳ ಬೆಲೆ. ಸ್ಮಾರ್ಟ್ ಫೋನ್‌ಗಳ ಮಾರಾಟದೊಂದಿಗೆ ಡಿಜಿಟಲ್ ಪಾವತಿಯೂ ಬೆಳೆಯತೊಡಗಿರುವುದು ಸುಳ್ಳಲ್ಲ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರೇ ಕಳೆದ ವಾರ ಹೇಳಿರುವಂತೆ, ಭಾರತದಲ್ಲಿ 2022ರ ಫೆಬ್ರವರಿ ತಿಂಗಳೊಂದರಲ್ಲೇ ₹8.26 ಟ್ರಿಲಿಯನ್ (8.25 ಲಕ್ಷ ಕೋಟಿ) ಹಣ ಡಿಜಿಟಲ್ ರೂಪದಲ್ಲಿ ವಿನಿಮಯವಾಗಿದೆ. ಇದು ಒಂದು ವರ್ಷ ಹಿಂದಿನ ಪ್ರಮಾಣಕ್ಕೆ ಹೋಲಿಸಿದರೆ ದುಪ್ಪಟ್ಟು. ಅಂದರೆ ಡಿಜಿಟಲ್ ಪಾವತಿಯ ಅಗಾಧತೆ ಎಷ್ಟೆಂಬುದು ತಿಳಿಯುತ್ತದೆ. ಕಳೆದ ವಾರ, ಫೀಚರ್ (ಬೇಸಿಕ್) ಫೋನ್‌ಗಳಲ್ಲಿಯೂ ಡಿಜಿಟಲ್ ಪಾವತಿಗೆ ಅನುಕೂಲವಾಗುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಅವಕಾಶ ನೀಡಿದ್ದು, ಹಣಕಾಸು ವಹಿವಾಟು ಮತ್ತಷ್ಟು ಹೆಚ್ಚಲಿದೆ.
ಜನರು ಹೆಚ್ಚು ಹೆಚ್ಚು ಆ್ಯಪ್ ಆಧಾರಿತ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಳಸುತ್ತಿರುವ ಈ ಸಂದರ್ಭದಲ್ಲಿ ಯುಪಿಐ, ಡಿಜಿಟಲ್ ವಾಲೆಟ್, ಫೋನ್ ಪೇ, ಗೂಗಲ್ ಪೇ, ಪೇಟಿಎಂ – ಈ ಹೆಸರುಗಳು ಬಹುತೇಕರಿಗೆ ಗೊಂದಲ ಮೂಡಿಸಿವೆ. ಯಾವುದು ಉತ್ತಮ, ಯಾವುದು ಹೇಗೆ ಕೆಲಸ ನಿರ್ವಹಿಸುತ್ತದೆ, ಸುರಕ್ಷಿತವೇ ಎಂಬ ಆತಂಕ ಕೆಲವರಿಗೆ. ಹಾಗಿದ್ದರೆ ವಾಲೆಟ್ ಹಾಗೂ ಯುಪಿಐ – ಏನು ವ್ಯತ್ಯಾಸ? ತಿಳಿದುಕೊಳ್ಳೋಣ.
ಯುಪಿಐ, ವಾಲೆಟ್‌ಗಿರುವ ವ್ಯತ್ಯಾಸ
ಯುಪಿಐ ಎಂದರೆ ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಏಕೀಕೃತ ಪಾವತಿ ವ್ಯವಸ್ಥೆ). ಇದು ಬ್ಯಾಂಕ್ ಖಾತೆ ಹೊಂದಿರುವ ಯಾರೇ ಆದರೂ ಒಂದು ಐಡಿ ರಚಿಸುವ ಮೂಲಕ ದೊರೆಯುವ ವ್ಯವಸ್ಥೆ. ಒಂದು ರೀತಿಯಲ್ಲಿ ನಮ್ಮ ಇಮೇಲ್ ವಿಳಾಸ ಇದ್ದಂತೆ, ಉದಾಹರಣೆಗೆ, ಹೆಸರಿನ ಮುಂದೆ @okaxis, @sbi, @okhdfc ಹೀಗೆ ಸೇರಿಸಿ, ಯುಪಿಐ ಐಡಿ ರಚಿಸಿಕೊಳ್ಳಬಹುದು. ಯುಪಿಐ ಐಡಿಗಳ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬಹುದು. ಆದರೆ ಡಿಜಿಟಲ್ ವಾಲೆಟ್ ಎಂಬುದು ಬ್ಯಾಂಕ್ ಖಾತೆಗಳ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ. ಯುಪಿಐ ಎಂಬುದು ವರ್ಚುವಲ್ (ಕಾಲ್ಪನಿಕ) ಪಾವತಿ ವಿಳಾಸವನ್ನು ಬಳಸಿದರೆ, ಡಿಜಿಟಲ್ ವಾಲೆಟ್ ನಮ್ಮ ಮೊಬೈಲ್ ಸಂಖ್ಯೆಯ ಆಧಾರದಲ್ಲಿ ಕೆಲಸ ಮಾಡುತ್ತದೆ. ಯುಪಿಐ ವಹಿವಾಟು ಎರಡು ಬ್ಯಾಂಕ್ ಖಾತೆಗಳ ನಡುವೆ ನಡೆದರೆ, ವಾಲೆಟ್ ವಹಿವಾಟು ಒಂದೇ ರೀತಿಯ ಡಿಜಿಟಲ್ ವಾಲೆಟ್‌ಗಳ ನಡುವೆ ನಡೆಯುತ್ತದೆ. ಉದಾಹರಣೆಗೆ, ಪೇಟಿಎಂ ಖಾತೆಗಳ ನಡುವೆ, ಎರಡು ಗೂಗಲ್ ಪೇ ಖಾತೆಗಳ ನಡುವೆ… ಹೀಗೆ. ಎಲ್ಲವೂ ಒಂದು ಮೊಬೈಲ್ ಫೋನ್‌ನ ಮೂಲಕವೇ ಆಗುತ್ತದೆ.
ಪೇಟಿಎಂ, ಫೋನ್ ಪೇ, ಗೂಗಲ್ ಪೇ ಆ್ಯಪ್‌ಗಳು
ದೇಶದಲ್ಲಿ ಹೆಚ್ಚು ಚಾಲ್ತಿಯಲ್ಲಿರುವುದು ಪೇಟಿಎಂ, ಫೋನ್ ಪೇ ಹಾಗೂ ಗೂಗಲ್ ಪೇ ಡಿಜಿಟಲ್ ಪಾವತಿ ಆ್ಯಪ್‌ಗಳು. ಇದರಲ್ಲಿ ಪೇಟಿಎಂ ಮತ್ತು ಫೋನ್ ಪೇ ಆ್ಯಪ್‌ಗಳಲ್ಲಿ ನಿರ್ದಿಷ್ಟ ಹಣವನ್ನು ಆನ್‌ಲೈನ್ ವಾಲೆಟ್ (ಸರಳವಾಗಿ ಹೇಳುವುದಾದರೆ ಅಂತರಜಾಲದ ಪರ್ಸ್) ಮೂಲಕ ಎಷ್ಟು ಬೇಕೋ ಅಷ್ಟು ಹಣ ಸಂಗ್ರಹಿಸಿಡಬಹುದು ಮತ್ತು ಅಲ್ಲಿಂದಲೇ ಪಾವತಿ ಮಾಡಬಹುದು. ಆದರೆ, ಗೂಗಲ್ ಪೇಯಲ್ಲಿ ಹಾಗಿಲ್ಲ; ಅದರಲ್ಲಿ ಲಿಂಕ್ ಆಗಿರುವ ಬ್ಯಾಂಕ್ ಖಾತೆಯಿಂದಲೇ ನೇರವಾಗಿ ಹಣ ಸಂದಾಯವಾಗುತ್ತದೆ. ಈ ಮೂರೂ ಆ್ಯಪ್‌ಗಳು ಕೆಲವೊಂದು ಸ್ಥಳೀಯ ಸೇವಾದಾರರಿಗೆ ಬಿಲ್ ಪಾವತಿಗೆ, ಮೊಬೈಲ್/ಟಿವಿ ರಿಚಾರ್ಜ್, ಬಸ್ಸು, ವಿಮಾನ, ರೈಲು ಬುಕಿಂಗ್ ಮುಂತಾದವುಗಳಿಗೆ ನೇರವಾಗಿ ಅನುಕೂಲ ಮಾಡಿಕೊಡುತ್ತವೆ. ಉದಾ. ಬಿಎಸ್ಸೆನ್ನೆಲ್, ನೀರಿನ ಬಿಲ್, ಕರೆಂಟ್ ಬಿಲ್, ಗ್ಯಾಸ್ ಬಿಲ್ ಇತ್ಯಾದಿ. (ಇವುಗಳನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ). ಇತ್ತೀಚೆಗೆ ವಿಮಾ ಪ್ರೀಮಿಯಂ, ಮ್ಯೂಚುವಲ್ ಫಂಡ್ ಹೂಡಿಕೆಗೂ ಇವು ಅವಕಾಶ ಮಾಡಿಕೊಡುತ್ತಿವೆ. ಅಲ್ಲದೆ, ಈಗೀಗ ಮಳಿಗೆಗಳಲ್ಲಿರುವ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿ ಮಾಡುವ ಆಯ್ಕೆ ಜನಪ್ರಿಯವಾಗುತ್ತಿದೆ.
ಪೇಟಿಎಂ ಅಥವಾ ಫೋನ್‌ಪೇಯಲ್ಲಿರುವಂತೆ ಪ್ರೀಪೇಯ್ಡ್ ಹಣವನ್ನು ಸಂಗ್ರಹಿಸಿಟ್ಟುಕೊಳ್ಳುವ ಒಂದು ಅನುಕೂಲವೆಂದರೆ, ಯಾವುದೇ ಪಾವತಿಗಾಗಿ ನಾವು ಬೇರೆಯವರಿಗೆ ನಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಬೇಕಾಗಿಲ್ಲ, ಈ ವಾಲೆಟ್‌ಗೆ ಮಾತ್ರ ವಿವರ ನೀಡಿದರೆ ಸಾಕು. ಮತ್ತು ಈ ವಾಲೆಟ್‌ಗೆ ಎಷ್ಟು ಬೇಕೋ ಅಷ್ಟು ಮೊತ್ತ ಮಾತ್ರ ಸೇರಿಸಿಕೊಂಡರೆ ಸುರಕ್ಷತೆ ಹೆಚ್ಚು.
ಯುಪಿಐನಲ್ಲಿ ಒಮ್ಮೆಗೆ 1 ಲಕ್ಷ ರೂ.ವರೆಗೆ ವಹಿವಾಟು ನಡೆಸಬಹುದಾಗಿದ್ದರೆ, ವಾಲೆಟ್‌ಗಳಲ್ಲಿ, ಕೆವೈಸಿ (ನಮ್ಮ ಹೆಸರು-ಗುರುತಿನ ದಾಖಲೆ) ಪೂರೈಸದಿರುವ ಗ್ರಾಹಕರಿಗೆ ತಿಂಗಳಿಗೆ ₹10 ಸಾವಿರ ಮಾತ್ರವೇ ವ್ಯವಹಾರ ನಡೆಸಬಹುದಾಗಿದೆ ಎಂಬುದು ನೆನಪಿನಲ್ಲಿರಲಿ.
ಒಟ್ಟಿನಲ್ಲಿ, ಸಣ್ಣಪುಟ್ಟ ಆನ್‌ಲೈನ್ ಪಾವತಿಗಳಿಗೆ ಪ್ರೀಪೇಯ್ಡ್ ವಾಲೆಟ್ ಬಳಸುವುದು ಸೂಕ್ತ. ದೊಡ್ಡ ಮೊತ್ತವಾದರೆ ಮತ್ತು ವಿಶ್ವಾಸಾರ್ಹ ತಾಣಗಳಲ್ಲಿ ವಹಿವಾಟು ನಡೆಸುವುದಿದ್ದರೆ ಪಾವತಿಗೆ ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸಬಹುದು.