ನಾವು ನಿಯಂತ್ರಿಸಬೇಕಾದ ಮೊಬೈಲ್ ಫೋನ್ ಇಂದು ನಮ್ಮನ್ನೇ ನಿಯಂತ್ರಿಸುತ್ತಿದೆ. ತಂತ್ರಜ್ಞಾನವೊಂದರ ಬಳಕೆ ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬುದಕ್ಕಿದು ಸಾಕ್ಷಿ. ಗೇಮ್ಸ್, ಇಂಟರ್ನೆಟ್, ಸೋಷಿಯಲ್ ಮೀಡಿಯಾದಲ್ಲಿ ತಲ್ಲೀನರಾಗಿರುವುದು, ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು, ತಮ್ಮಷ್ಟಕ್ಕೆ ತಾವೇ ಮಾತಾಡುತ್ತಿದ್ದಾರೆಂಬಂತೆ ಅಥವಾ ತಮ್ಮಷ್ಟಕ್ಕೇ ತಾವೇ ವಿಭಿನ್ನ ಹಾವಭಾವಗಳನ್ನು ಪ್ರದರ್ಶಿಸುತ್ತಿದ್ದಾರೋ ಎಂಬಂತಿರುವವರನ್ನು ಕಂಡಾಗ ಅನ್ನಿಸಿದ್ದಿದು.
ವಿಶೇಷವಾಗಿ ಶಾಲಾ ಮಕ್ಕಳಲ್ಲಿ ಮೊಬೈಲ್ ಫೋನ್ ಚಾಳಿ ಅತಿಯಾಗುತ್ತಿದೆ. ವಾಟ್ಸ್ಆ್ಯಪ್, ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ಬರುವ ಸಂಗತಿಗಳೇ ಪರಮ ಸತ್ಯ ಎಂದು ನಂಬುವವರ ಸಂಖ್ಯೆ ವೃದ್ಧಿಯಾಗುತ್ತಿದೆ. ಯಾವುದೇ ಋಣಾತ್ಮಕ ಸಂಗತಿಯು ಬಲುಬೇಗನೇ ಫಾರ್ವರ್ಡ್ ಆಗುತ್ತಿರುವಂತೆಯೇ, ಸುಳ್ಳನ್ನೇ ಹಲವು ಬಾರಿ ಹೇಳಿದರೆ ಸತ್ಯ ಅನ್ನಿಸುವ ಆತಂಕಗಳನ್ನು ನಾವೆಲ್ಲರೂ ನೋಡಿದ್ದೇವೆ. ವಿದ್ಯಾರ್ಜನೆ ಮಾಡಬೇಕಾದ ಮಕ್ಕಳು ಇಂಟರ್ನೆಟ್ ಸಂಪರ್ಕವಿರುವ ಮೊಬೈಲ್‌ನಲ್ಲಿ ಎಲ್ಲ ಜ್ಞಾನವೂ ಸಿಗುತ್ತದೆ ಎಂದುಕೊಂಡೇ ಬೆಳೆಯುತ್ತಿದ್ದಾರೆ. ಆದರೆ, ಅವೆಲ್ಲವೂ ಸತ್ಯ ಅಲ್ಲ ಎಂದು ತಿಳಿಸುವ ಜವಾಬ್ದಾರಿ ನಮ್ಮ ಮೇಲಿದೆ.
ಕಿರಿಯರಲ್ಲದೆ, ಹಿರಿಯರು ಕೂಡ ಮೊಬೈಲ್ ಫೋನ್‌ಗಳ ಮೂಲಕ ಹರಡುವ ಫೇಕ್ ಸುದ್ದಿಗಳನ್ನು ಫಾರ್ವರ್ಡ್ ಮಾಡುತ್ತಾರೆ ಮತ್ತು ಅದು ನಿಜವೋ, ಸುಳ್ಳೋ ಎಂದು ಪರಾಮರ್ಶಿಸುವ ಗೋಜಿಗೆ ಹೋಗುವುದಿಲ್ಲ. ಕಳೆದ ವಾರ ಮೆಸೆಂಜರ್ ಕೂಡ ಹ್ಯಾಕ್ ಆಗಿ, ಅದರಲ್ಲಿ ನಿಮ್ಮ ಸ್ನೇಹಿತರೇ ಹಣ ಕಳುಹಿಸುವಂತೆ ಕೋರಿರಬಹುದು. ಹಣ ಬೇಕಿದ್ದರೆ ಮೆಸೆಂಜರ್‌ನಲ್ಲಿ ಕೇಳುತ್ತಾರೆಯೇ? ನೇರವಾಗಿ ಫೋನ್ ಮಾಡಬಹುದಿತ್ತಲ್ಲಾ ಅಂತ ಯೋಚಿಸುವ ಗೋಜಿಗೆ ನಾವೂ ಹೋಗುವುದಿಲ್ಲ.
ಯಾರಾದರೂ ಉಚಿತ ಐಫೋನ್ ಕೊಡಬಲ್ಲರೇ? ಅಥವಾ ಲಿಂಕ್ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಫೋನ್‌ಗೆ ನೂರಾರು ರೂಪಾಯಿ ರೀಚಾರ್ಜ್ ಆಗುವುದು ಸಾಧ್ಯವೇ? ‘ಮಗುವಿಗೆ ಅಗತ್ಯ ರಕ್ತ ಬೇಕಾಗಿದೆ, ತಕ್ಷಣ ಈ ಸಂಖ್ಯೆಗೆ ಕರೆ ಮಾಡಿ’ ಅಂತಲೋ, ಪುಟ್ಟ ಮಗುವಿಗೆ ಹೃದಯ ಶಸ್ತ್ರಚಿಕಿತ್ಸೆಗೆ ಧನ ಸಹಾಯ ಮಾಡಿ ಅಂತಲೋ, ಮಾನವೀಯ ನೆಲೆಯಲ್ಲಿ ಕೇಳಿಕೊಂಡ ಮನವಿಗಳು ಕೂಡ ವರ್ಷಗಳಿಂದ ಪುನರಾವರ್ತನೆಯಾಗುತ್ತಿರುತ್ತವೆ. ಪಾನೀಯದಲ್ಲಿ ಏಡ್ಸ್ ಹರಡಲಾಗುತ್ತದೆಯಂತೆ, ಮೋದಿ ಅವರು ಸ್ಕಾಲರ್‌ಷಿಪ್ ಕೊಡಿಸ್ತಾರಂತೆ ಮುಂತಾದ ಫೇಕ್ ಸಂದೇಶಗಳೂ ಇವೆ. ಇತ್ತೀಚೆಗೆ, ಕಲಾವಿದರೊಬ್ಬರ ಪತ್ನಿಗೆ ಆರೋಗ್ಯ ಸಮಸ್ಯೆಯಿದೆ, ತಕ್ಷಣ ಈ ಅಕೌಂಟಿಗೆ ಹಣ ಕಳುಹಿಸಿ ಅನ್ನೋ ಸಂದೇಶವು ಹಲವಾರು ಗ್ರೂಪುಗಳಿಗೆ ಹರಿದಾಡಿತು. ಕೊನೆಗೆ, ಕಲಾವಿದರಿಂದಲೇ ಸ್ಪಷ್ಟನೆ ಬಂತು. ‘ಹಣಕಾಸು ವ್ಯವಸ್ಥೆ ಆಗಿದೆ, ಯಾರಿಂದಲೂ ಹಣ ಸಹಾಯ ಮಾಡುವಂತೆ ಕೇಳಿರಲಿಲ್ಲ’ ಅಂತ.
ವಿಶೇಷ ಆಫರ್‌ಗಳು, ಕೆಲವೇ ದಿನಗಳಲ್ಲಿ ತೂಕ ಕಳೆದುಕೊಳ್ಳುವುದು, ಡಯಾಬಿಟಿಸ್‌ಗೆ ರಾಮ ಬಾಣ, ಎರಡೇ ದಿನದಲ್ಲಿ ಎರಡು ಕೆಜಿ ತೂಕ ಹೆಚ್ಚಿಸಿಕೊಳ್ಳಿ… ಇಂತಹಾ ಟ್ರೆಂಡಿಂಗ್ ವಿಷಯಗಳ ಬಗ್ಗೆ ಕೂಡ ಎಚ್ಚರ ಇರಬೇಕು.
ಈ ಕುರಿತು ಈಗ ಮೊಬೈಲ್‌ಗೆ ಆತುಕೊಂಡಿರುವ, ಮೊಬೈಲೇ ಸರ್ವಸ್ವ ಎಂದುಕೊಂಡಿರುವ ಕಿರಿಯರಲ್ಲಿ ಮತ್ತು ಇತ್ತೀಚೆಗೆ ಹಿರಿಯರಲ್ಲಿ ಕೂಡ, ಅರಿವು ಮೂಡಿಸುವ ಕೆಲಸ ಸುಶಿಕ್ಷಿತ ಪೀಳಿಗೆಯಿಂದ ಆಗಬೇಕಿದೆ.
ಈಗಾಗಲೇ ಫೇಕ್ ಸುದ್ದಿ ಹರಡದಂತೆ ಕೇಂದ್ರ ಸರಕಾರವು ವಾಟ್ಸ್ಆ್ಯಪ್‌ಗೆ ಚಾಟಿ ಬೀಸಿರುವುದು ಎಲ್ಲರಿಗೂ ಗೊತ್ತಿದೆ. ಇದಕ್ಕಾಗಿ ವಾಟ್ಸ್ಆ್ಯಪ್ ಹಾಗೂ ಅದರ ಒಡೆಯ ಫೇಸ್‌ಬುಕ್ ಕೂಡ ಎಚ್ಚೆತ್ತುಕೊಂಡಿದೆ. ಸತ್ಯಾಂಶ ಪತ್ತೆಗೆ, ಸುಳ್ಳು ಸುದ್ದಿ ಪ್ರಸಾರ ತಡೆಗೆ ತಂಡಗಳೇ ರೂಪುಗೊಳ್ಳುತ್ತಿವೆ. ಅದಕ್ಕಾಗಿಯೇ, ಯಾವುದೇ ವರದಿಯನ್ನು ಸುಳ್ಳು ಅಂತಾದರೆ, ಫೇಸ್‌ಬುಕ್‌ಗೆ ರಿಪೋರ್ಟ್ ಮಾಡುವ ಬಟನ್‌ಗಳೂ ಬಂದಿವೆ. ಕೋಟ್ಯಂತರ ಸಂದೇಶಗಳ ನಡುವೆ, ನಾವು ವರದಿ ಮಾಡಿದರೆ ಮಾತ್ರ ಫೇಸ್‌ಬುಕ್ ತಕ್ಷಣ ಕ್ರಮ ಕೈಗೊಳ್ಳುತ್ತದೆ. ಪ್ರಜ್ಞಾವಂತರು ಇದನ್ನು ಬಳಸಿಕೊಳ್ಳೋಣ. ಇಂಟರ್ನೆಟ್ಟಲ್ಲಿರೋ ಎಲ್ಲವೂ ಸತ್ಯವಲ್ಲ ಎಂಬುದನ್ನು ಕಿರಿಯರಿಗೆ, ಹಿರಿಯರಿಗೆ ತಿಳಿಹೇಳೋಣ.