ಸ್ಮಾರ್ಟ್ ಫೋನ್ ಖರೀದಿಸುವಾಗ ಬಹುತೇಕರು ವಿಚಾರಿಸುವುದು, ‘ಕ್ಯಾಮೆರಾ ಹೇಗಿದೆ’ ಅಂತ. ಅಷ್ಟರ ಮಟ್ಟಿಗೆ ಈಗಿನ ಸ್ಮಾರ್ಟ್‌ಫೋನ್‌ಗಳಲ್ಲಿ ಸೆಲ್ಫೀ, ಚಿತ್ರಗಳನ್ನು ತೆಗೆಯುವುದು ಆಕರ್ಷಣೆಯಾಗಿಬಿಟ್ಟಿದೆ. ಅದನ್ನು ಮನಗಂಡಿರುವ ಫೋನ್ ತಯಾರಿಕಾ ಕಂಪನಿಗಳು ಕೂಡ ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೋಗಳನ್ನು ಒದಗಿಸುವ ಹಾಗೂ ಆಕರ್ಷಕ ಫೋಟೋಗಳನ್ನು ಮೂಡಿಸುವ ಕ್ಯಾಮೆರಾ ತಂತ್ರಜ್ಞಾನದತ್ತ ಹೆಚ್ಚು ಆಸ್ಥೆ ವಹಿಸಿ, ಮಾರುಕಟ್ಟೆಯಲ್ಲಿ ಪೈಪೋಟಿಗಿಳಿದಿವೆ.
ಒಂದು ಗಮನಿಸಬೇಕಾದ ವಿಚಾರವೆಂದರೆ, ಅಷ್ಟು ಮೆಗಾಪಿಕ್ಸೆಲ್, ಇಷ್ಟು ಮೆಗಾಪಿಕ್ಸೆಲ್ ಎಂದು ಕಂಪನಿಗಳು ಎಷ್ಟೇ ಜಾಹೀರಾತು ಮಾಡಿಕೊಂಡರೂ, ಚಿತ್ರದಲ್ಲಿ ಸ್ಪಷ್ಟತೆ ಇರುವುದಿಲ್ಲ. ಹಳೆಯ 2 ಮೆಗಾಪಿಕ್ಸೆಲ್ ಸಾಮರ್ಥ್ಯದ ನೋಕಿಯಾ ಫೋನ್‌ಗಳಲ್ಲಿ ಮೂಡಿಬಂದ ಚಿತ್ರಗಳನ್ನೊಮ್ಮೆ ನೆನಪಿಸಿಕೊಳ್ಳಿ. ಈಗಿನ ಕೆಲವು ಸ್ಮಾರ್ಟ್‌ಫೋನ್‌ಗಳ 16, 24 ಇತ್ಯಾದಿ ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾಗಳಲ್ಲಿಯೂ ಅಂಥ ಸ್ಪಷ್ಟತೆ ಇಲ್ಲ. ಅಂದರೆ, ಕ್ಯಾಮೆರಾದ ಲೆನ್ಸ್/ಸೆನ್ಸರ್ ಯಾವ ಗುಣಮಟ್ಟದ್ದು ಎಂಬುದರ ಮೇಲೆ ಚಿತ್ರವು ಅವಲಂಬಿತವಾಗಿದೆ.
ಈಗಿನ ಫೋನ್‌ಗಳಲ್ಲಿ ಡ್ಯುಯಲ್ ಕ್ಯಾಮೆರಾ (ಅಂದರೆ ಎರಡು ಕ್ಯಾಮೆರಾ ಲೆನ್ಸ್‌ಗಳುಳ್ಳ) ವ್ಯವಸ್ಥೆ ಬಂದಿದೆ. ಇದರ ಜತೆಗೆ ಹಲವಾರು ಮೋಡ್‌ಗಳೂ ಇವೆ. ‘ಬೊಕೇ’ ಮತ್ತು ‘ಪೋರ್ಟ್ರೇಟ್’ ಎಂಬ ಮೋಡ್‌ಗಳಿವೆಯಲ್ಲ, ಅದೇನು ಅಂತ ಕೇಳಿದವರಿದ್ದಾರೆ. ಅವರಿಗಾಗಿ ಮತ್ತು ಈ ಕುರಿತು ತಿಳಿದುಕೊಳ್ಳುವ ಆಸಕ್ತರಿಗಾಗಿ ಇಲ್ಲಿದೆ ಮಾಹಿತಿ.
ವಾಸ್ತವವಾಗಿ ಬೊಕೇ (Bokeh) ಮತ್ತು ಪೋರ್ಟ್ರೇಟ್ (Portrait) ಎರಡೂ ಒಂದೇ. ಈ ಮೋಡ್ ಬಳಸಿ, ಒಳ್ಳೆಯ ಬೆಳಕುಳ್ಳ ಜಾಗದಲ್ಲಿ ಫೋಟೋ ತೆಗೆದರೆ, ಅದ್ಭುತ ಚಿತ್ರವೊಂದು ನಿಮ್ಮ ಫೋನ್ ಮೂಲಕವೇ ಮೂಡಿಬರುತ್ತದೆ. ಈ ಮೋಡ್ ವಿಶೇಷವಾಗಿ ಸೆಲ್ಫೀಗೆ ಅನುಕೂಲಕರ. ಇದು ವ್ಯಕ್ತಿಯನ್ನು ಅಥವಾ ವಸ್ತುವನ್ನು ಮಾತ್ರ ಫೋಕಸ್ ಮಾಡಿ, ಅವರ/ಅದರ ಹಿನ್ನೆಲೆಯನ್ನು ಮಸುಕಾಗಿಸಿದಾಗ, ಫೋಕಸ್ ಆಗಿರುವ ವಸ್ತು ಎದ್ದುಗಾಣುತ್ತದೆ. ಹಿಂದೆ ಡಿಎಸ್ಎಲ್ಆರ್ ಕ್ಯಾಮೆರಾಗಳಲ್ಲಿದ್ದ ಈ ವೈಶಿಷ್ಟ್ಯವೀಗ ಮೊಬೈಲ್ ಫೋನ್‌ಗಳಿಗೂ ಬಂದಿದೆ. ಎರಡರಲ್ಲೊಂದು ಕ್ಯಾಮೆರಾದ ಲೆನ್ಸ್ ಚಿತ್ರದ ಹಿನ್ನೆಲೆಯನ್ನು ಮಸುಕಾಗಿಸುವುದಕ್ಕಾಗಿ ಮತ್ತು ಆ ಮೂಲಕ ಚಿತ್ರಕ್ಕೆ ಹೆಚ್ಚಿನ ಸ್ಪಷ್ಟತೆ (ಡೆಪ್ತ್) ಒದಗಿಸಲು ಪೂರಕವಾಗಿರುತ್ತದೆ.
ಈ ಕೆಳಗಿನ ಸರಳ ಕ್ರಮಗಳನ್ನು ಅನುಸರಿಸಿ ಬೊಕೇ ಅಥವಾ ಪೋರ್ಟ್ರೇಟ್ ಎಫೆಕ್ಟ್ ಮೂಲಕ ಅದ್ಭುತ ಚಿತ್ರವೊಂದು ಮೂಡಿಬರಬಲ್ಲುದು.
- ಬೆಳಕು: ಸಹಜವಾದ ಬೆಳಕು ಇದ್ದರೆ ಉತ್ತಮ. ಕ್ಯಾಮೆರಾದ ಎದುರು ಭಾಗದಿಂದ ಬೆಳಕು ಬರುವಂತಿರಬಾರದು.
- ಸೂಕ್ತ ಹಿನ್ನೆಲೆ: ಸರಳವಾದ ಹಿನ್ನೆಲೆಯನ್ನು ಆಯ್ಕೆ ಮಾಡಿಕೊಂಡರೆ, ಆ ಭಾಗವು ಸೂಕ್ತವಾಗಿ ಮಸುಕಾಗುವ ಮೂಲಕ ಮುಖವು ಉತ್ತಮವಾಗಿ ಫೋಕಸ್ ಆಗುತ್ತದೆ.
- ಅಲುಗಾಡಬಾರದು: ಫೋಟೋ ತೆಗೆಯುವಾಗ ಕೈಗಳು ಅಲುಗಾಡಂತೆ ಸ್ಥಿರವಾಗಿರಬೇಕು.
- ಅಂತರ ಅತೀ ಮುಖ್ಯ. ಹೆಚ್ಚಿನ ಫೋನ್‌ಗಳಲ್ಲಿ ವ್ಯಕ್ತಿಯ ಮುಖವು ಕ್ಯಾಮೆರಾಕ್ಕಿಂತ ಅರ್ಧ ಮೀಟರ್ ದೂರ ಇದ್ದರೆ ಅದ್ಭುತ ಪೋರ್ಟ್ರೇಟ್ ಚಿತ್ರ ದೊರೆಯಬಹುದು.
ಇದು ಪೋರ್ಟ್ರೇಟ್ ಚಿತ್ರಗಳಿಗಷ್ಟೇ ಅಲ್ಲದೆ, ಎಲ್ಲ ರೀತಿಯ ಫೋಟೋಗಳಿಗೂ ಅನ್ವಯವಾಗುತ್ತದೆ. ಇವುಗಳನ್ನು ಬಳಸಿ, ಉತ್ತಮ ಫೋಟೋ ನಿಮ್ಮದಾಗಿಸಿಕೊಳ್ಳಿ.