ಸಹಾಯದ ಕೋರಿಕೆಯಿರುವ ಸ್ನೇಹಿತರ ಇ-ಮೇಲ್ ಬಗ್ಗೆ ಎಚ್ಚರ!

0
376

Email Bewareಫೇಸ್‌ಬುಕ್‌ನಲ್ಲಿನ ನಮ್ಮ ಖಾಸಗಿ ಮಾಹಿತಿಯು ಕೇಂಬ್ರಿಜ್ ಅನಲಿಟಿಕಾ ಸಂಸ್ಥೆಯ ಪಾಲಾಗಿರುವುದು, ಆ ಬಳಿಕ ಜಿಮೇಲ್ ಮಾಹಿತಿಯೂ ಆ್ಯಪ್ ಡೆವಲಪರ್‌ಗಳಿಗೆ ಸೋರಿಕೆಯಾಗಿದೆ ಅಂತ ಸುದ್ದಿಯಾಗಿರುವುದು – ಅಂತರ್ಜಾಲದಲ್ಲಿ ನಮ್ಮ ಪ್ರೈವೆಸಿ ಅಥವಾ ಖಾಸಗಿತನ/ಗೌಪ್ಯತೆ ಕಾಯ್ದುಕೊಳ್ಳಬೇಕಾದುದರ ಅಗತ್ಯದ ಬಗ್ಗೆ ಮತ್ತೆ ಮತ್ತೆ ನಮ್ಮನ್ನು ಎಚ್ಚರಿಸಿದೆ. ನಮ್ಮ ಇಮೇಲ್ ಖಾತೆಯ ಬಗ್ಗೆ ಎಚ್ಚರಿಕೆ ವಹಿಸಲೇಬೇಕು, ಯಾಕೆಂದರೆ ಹೆಚ್ಚಿನವರು ಆಂಡ್ರಾಯ್ಡ್ ಮೊಬೈಲ್ ಫೋನ್ ಬಳಸುತ್ತಿರುವುದರಿಂದಾಗಿ, ಅದಕ್ಕೆ ಸಂಬಂಧಿಸಿದಂತೆ, ಗೂಗಲ್ ಒದಗಿಸಿರುವ ಜಿಮೇಲ್ ಎಂಬ ಇಮೇಲ್ ಸಂವಹನ ಖಾತೆ ಬೇಕೇಬೇಕು. ಆದರೆ, ನಿಮ್ಮ ಇಮೇಲ್ ವಿಳಾಸವನ್ನು ಯಾರಿಗೂ ಕೊಡದಿದ್ದರೂ, ಅದು ಹೇಗೆ ರಾಶಿ ರಾಶಿ ಜಾಹೀರಾತುಗಳು, ಪ್ರಚಾರ ಸಂಬಂಧಿತ ಇಮೇಲ್‌ಗಳು, ಸ್ಪ್ಯಾಮ್ ಸಂದೇಶಗಳು ಬರುತ್ತಿರುತ್ತವೆ ಎಂಬ ಬಗ್ಗೆ ಎಂದಾದರೂ ಯೋಚಿಸಿದ್ದೀರಾ?

ಇದಕ್ಕೆ ಬಹುತೇಕ ಕಾರಣ, ನಮ್ಮದೇ ನಿರ್ಲಕ್ಷ್ಯ. ಅದೆಂದರೆ, ಯಾವುದೋ ಜಾಹೀರಾತು ಧುತ್ತನೇ ಪಾಪ್-ಅಪ್ ಆಗುತ್ತದೆ, ಅದಕ್ಕೆ ಕ್ಲಿಕ್ ಮಾಡಿರುತ್ತೇವೆ, ಇಲ್ಲವೆಂದಾದರೆ, ಮೊಬೈಲ್ ಫೋನ್‌ಗೆ ಯಾವುದೋ ಆ್ಯಪ್ ಅಳವಡಿಸಿಕೊಳ್ಳುವಾಗ ಅಥವಾ ಕಂಪ್ಯೂಟರಿಗೆ ತಂತ್ರಾಂಶ ಅಳವಡಿಸಿಕೊಳ್ಳುವಾಗ, ಏನು ಬರೆದಿದೆ ಎಂದೆಲ್ಲಾ ನೋಡದೆ ಕ್ಲಿಕ್ ಮಾಡುತ್ತೇವೆ, ಇಲ್ಲವೇ, ಯಾವುದೋ ಒಂದು ಫಾರ್ಮ್ ತುಂಬುವ ವೇಳೆ, “ನಿಮ್ಮ ಇಮೇಲ್ ವಿಳಾಸ” ಎಂದಿರುವಲ್ಲಿ, ಆಲೋಚಿಸದೆಯೇ ನಮೂದಿಸಿರುತ್ತೇವೆ.

ವಾಸ್ತವವಾಗಿ ಆನ್‌ಲೈನ್‌ನಲ್ಲಿ ನಮ್ಮ ಇಮೇಲ್ ವಿಳಾಸವನ್ನು ಎಲ್ಲರಿಗೂ ಕಾಣಿಸುವಂತೆ ಎಲ್ಲೂ ಬಹಿರಂಗವಾಗಿ ಬರೆದುಕೊಂಡಿರಬಾರದು ಎಂಬ ಅಲಿಖಿತ ಶಿಷ್ಟಾಚಾರವೊಂದಿದೆ. ನಮ್ಮ ಬ್ಲಾಗಿನಲ್ಲೋ, ಫೇಸ್‌ಬುಕ್ ಪೋಸ್ಟ್‌ನಲ್ಲೋ ಇಮೇಲ್ ವಿಳಾಸವನ್ನು ಪ್ರಕಟಿಸಬಾರದು. ಅಂತರ್ಜಾಲದಲ್ಲಿ ಕ್ರಾಲ್ ಮಾಡುತ್ತಾ ಇಮೇಲ್ ವಿಳಾಸವನ್ನು ಸಂಗ್ರಹಿಸಿ ಸ್ಪ್ಯಾಮ್ ಸಂದೇಶ ಕಳುಹಿಸುವ ಸ್ವಯಂಚಾಲಿತ ತಂತ್ರಜ್ಞಾನದ ಆತಂಕವೇ ಇದಕ್ಕೆ ಪ್ರಧಾನ ಕಾರಣ.

ಇಮೇಲ್ ಬಳಕೆ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ, ನಮ್ಮ ಪಾಸ್‌ವರ್ಡ್ ಬೇರೆಯವರ ಪಾಲಾಗಿ (ಹ್ಯಾಕ್ ಆಗಿ) ಅನಾಹುತಗಳೂ ಆಗಬಹುದು. ಇದು ಬೆದರಿಕೆಯಲ್ಲ, ವಾಸ್ತವ. ಕೆಲವರಿಗಾದರೂ ಈ ಅನುಭವ ಆಗಿದ್ದಿರಬಹುದು. ನಿಮ್ಮ ಸ್ನೇಹಿತರಿಂದಲೇ ನಿಮಗೊಂದು ಇಮೇಲ್, ‘ನಾನು ಕಾರ್ಯನಿಮಿತ್ತ ಲಂಡನ್‌ಗೆ ಬಂದೆ, ಕ್ರೆಡಿಟ್ ಕಾರ್ಡ್ ಇದ್ದ ಪರ್ಸ್ ಕಳವಾಗಿದೆ. ಇಲ್ಲಿ ಸಿಕ್ಕಿಹಾಕಿಕೊಂಡಿದ್ದೀನಿ, ದಯವಿಟ್ಟು ತುರ್ತಾಗಿ ನನ್ನ ಈ ಖಾತೆಗೆ ಒಂದಷ್ಟು ಹಣ ಹಾಕಿದರೆ ಮಹದುಪಕಾರವಾಗುತ್ತದೆ’ ಎಂಬಂಥ ಒಕ್ಕಣೆ. ಎಷ್ಟಾದರೂ ಕಷ್ಟದಲ್ಲಿರುವ ಮಿತ್ರನಿಗೆ ಸಹಾಯ ಮಾಡುವ ಮನಸ್ಸು ನಿಮ್ಮದು, ಹಣ ಕಳುಹಿಸಿರುತ್ತೀರಿ; ಅದು ಕೂಡ ಹೆಚ್ಚು ಯೋಚನೆ ಮಾಡದೆ. ಇದರಲ್ಲೇನು ತಪ್ಪು? ಹೌದು, ನಿಮ್ಮ ಆ ಸ್ನೇಹಿತನ ಇಮೇಲ್ ಐಡಿಯನ್ನು ಯಾರೋ ಹ್ಯಾಕ್ ಮಾಡಿ, ಅದರ ಮೂಲಕ ಕಾಂಟ್ಯಾಕ್ಟ್ ಪಟ್ಟಿಯಲ್ಲಿರುವ ಎಲ್ಲರಿಗೂ ಇದೇ ಸಂದೇಶವನ್ನು ಕಳುಹಿಸಿದ್ದಾನೆ. ಹೇಗೂ ಈಗ ಆನ್‌ಲೈನ್‌ನಲ್ಲೇ ಯಾವುದೇ ಭಾಷೆಯಿಂದ ಯಾವುದೇ ಭಾಷೆಗೆ ಅನುವಾದ ಮಾಡುವ ವ್ಯವಸ್ಥೆಯೂ ಇರುವುದರಿಂದ, ತಪ್ಪು ತಪ್ಪು ಕನ್ನಡದಲ್ಲೇ ಇಂಥ ಸಂದೇಶ ಬಂದಿದ್ದಿರಬಹುದು. ಕನ್ನಡದಲ್ಲೇ ಬಂದಿದೆ ಎಂದಾಗ ಸಂದೇಹದ ಧಾವಂತ ಸ್ವಲ್ಪ ಕಡಿಮೆಯಾಗಿರುತ್ತದೆ. ಬಂದಿರುವ ಇಮೇಲ್ ಸಂದೇಶದಲ್ಲಿರುವ ಬ್ಯಾಂಕ್ ಖಾತೆಯ ಸಂಖ್ಯೆ ಮಾತ್ರ ಹ್ಯಾಕರ್‌ನದು. ಅದಕ್ಕೆ ಬಂದ ಹಣವನ್ನೆಲ್ಲ ಡ್ರಾ ಮಾಡಿಕೊಂಡ ಬಳಿಕ ಆ ಖಾತೆಯನ್ನೇ ಆತ ಮುಚ್ಚಿಬಿಟ್ಟಿರುತ್ತಾನೆ.

ಈ ಕಾರಣಕ್ಕೆ, ಇಮೇಲ್ ಖಾತೆಗಳನ್ನು ನಿಮ್ಮ ಮೊಬೈಲ್ ನಂಬರಿಗೆ ಲಿಂಕ್ ಮಾಡಿ, 2 ಸ್ಟೆಪ್ ವೆರಿಫಿಕೇಶನ್ ವ್ಯವಸ್ಥೆಯನ್ನೂ ಎನೇಬಲ್ ಮಾಡಿಕೊಳ್ಳಿ, ಆನ್‌ಲೈನ್ ವಂಚನೆಯಿಂದ ಸುರಕ್ಷಿತವಾಗಿರಿ. ಅನ್ಯರಿಗೆ ಊಹಿಸಲಾಗದ ಪಾಸ್‌ವರ್ಡ್ ಹೊಂದುವುದು ಮತ್ತು ಆಗಾಗ್ಗೆ ಪಾಸ್‌ವರ್ಡ್ ಬದಲಿಸುವುದು ಇಷ್ಟವಿಲ್ಲದಿದ್ದರೂ ಭದ್ರತೆಗಾಗಿ ಅನಿವಾರ್ಯ.

ಮಾಹಿತಿ@ತಂತ್ರಜ್ಞಾನ ವಿಜಯ ಕರ್ನಾಟಕ ಅಂಕಣ for 30 ಜುಲೈ 2018 by ಅವಿನಾಶ್ ಬಿ.

LEAVE A REPLY

Please enter your comment!
Please enter your name here