ಕಳೆದ ಅಕ್ಟೋಬರ್ ತಿಂಗಳಲ್ಲಿ ಆ್ಯಪಲ್‌ನ ಐಫೋನ್ 13, ಮಿನಿ, ಪ್ರೊ ಮತ್ತು ಪ್ರೋ ಮ್ಯಾಕ್ಸ್ ಬಿಡುಗಡೆಯಾಗಿದ್ದವು. ಅವುಗಳಲ್ಲಿ ಪ್ರಜಾವಾಣಿ ರಿವ್ಯೂಗೆ ದೊರೆತಿರುವ ಐಫೋನ್ 13 (512 ಜಿಬಿ ಮಾಡೆಲ್) ಅನ್ನು ಎರಡು ವಾರಗಳ ಕಾಲ ಬಳಸಿದಾಗ ಗಮನಕ್ಕೆ ಬಂದ ಅಂಶಗಳು ಇಲ್ಲಿವೆ. [ಐಫೋನ್ 13 ಪ್ರೋ ಹೇಗಿದೆ? ಇಲ್ಲಿದೆ ಮಾಹಿತಿ].
ಐಫೋನ್ 13ರಲ್ಲಿ ಕಳೆದ ವರ್ಷದ ಐಫೋನ್ 12ಕ್ಕಿಂತ ಹೆಚ್ಚಿನ ಸುಧಾರಣೆಗಳೇನೂ ಕಂಡುಬಂದಿಲ್ಲವಾದರೂ, ದುಬಾರಿ ಶ್ರೇಣಿಯ ಐಫೋನ್ ಪ್ರೋ ಮತ್ತು ಪ್ರೋ ಮ್ಯಾಕ್ಸ್ ಮಾದರಿಗಳಲ್ಲಿರುವ ಅತ್ಯುತ್ಕೃಷ್ಟವಾದ ವೈಶಿಷ್ಟ್ಯವೊಂದನ್ನು ಐಫೋನ್ 13ರಲ್ಲಿ ಅಳವಡಿಸಲಾಗಿದೆ. ಅದುವೇ ಸಿನೆಮ್ಯಾಟಿಕ್ ಮೋಡ್. ಜೊತೆಗೆ ದುಪ್ಪಟ್ಟು ಸ್ಟೋರೇಜ್ ಸಾಮರ್ಥ್ಯ, ಉತ್ತಮ ಪ್ರೊಸೆಸರ್ – ಇವು ಐಫೋನ್ 13 ಕುಟುಂಬದಲ್ಲೇ ಕೊಂಚ ಕಡಿಮೆ ಬೆಲೆಗೆ ಲಭ್ಯವಾಗುತ್ತದೆ ಎಂಬುದು ಈ ಮಾಡೆಲ್‌ನ ಹೆಗ್ಗಳಿಕೆಗಳಲ್ಲೊಂದು.
ಬೆಲೆ ಗಮನಿಸಿದರೆ, 128GB ಮಾದರಿಯ ಬೆಲೆ 79,900 ರಿಂದ ಪ್ರಾರಂಭ. 256ಜಿಬಿ ಮಾದರಿಗೆ 10 ಸಾವಿರ ರೂ. ಹೆಚ್ಚು. ಈ ಬಾರಿ ಇದೇ ಮೊದಲ ಬಾರಿಗೆ 512 ಜಿಬಿ ಸಾಮರ್ಥ್ಯದ ಐಫೋನ್ 13 ಮಾದರಿಯನ್ನೂ ಪರಿಚಯಿಸಲಾಗಿದ್ದು, ಇದರ ಬೆಲೆ ಇನ್ನೂ ಇಪ್ಪತ್ತು ಸಾವಿರ ರೂ. ಹೆಚ್ಚು. ಅಂದರೆ 1,09,900 ರೂ. ಆಗುತ್ತದೆ.
ಐಫೋನ್ 12ಕ್ಕೆ ಹೋಲಿಸಿದರೆ ಐಫೋನ್ 13 ಕೊಂಚ ದಪ್ಪ ಮತ್ತು ತೂಕವಿದೆ. ಅಂದರೆ 0.25 ಮಿಮೀ ದಪ್ಪ ಹೆಚ್ಚಳವಾಗಿದ್ದು, 11 ಗ್ರಾಂ ತೂಕವೂ ಹೆಚ್ಚಿಸಲಾಗಿದೆ. ಆದರೆ ಪಕ್ಕನೇ ಗೊತ್ತಾಗುವುದಿಲ್ಲ. ಐಫೋನ್ 13 ಸರಣಿಯ ಎಲ್ಲ ಫೋನ್‌ಗಳಲ್ಲಿರುವಂತೆ ಸ್ಕ್ರೀನ್ ಮುಂಭಾಗದ ನಾಚ್ (ಕ್ಯಾಮೆರಾ ಲೆನ್ಸ್ ಇರುವ ಖಾಲಿ ಭಾಗ) ಶೇ.20ರಷ್ಟು ಕಿರಿದಾಗಿರುವುದರಿಂದ ಫೋಟೊ, ವಿಡಿಯೊ ವೀಕ್ಷಣೆಗೆ ಕೊಂಚ ಅನುಕೂಲ. ದೊಡ್ಡ ವ್ಯತ್ಯಾಸವೆಂದರೆ, ಹಿಂಭಾಗದಲ್ಲಿ ಚೌಕಾಕಾರದ ಕ್ಯಾಮೆರಾ ಸೆಟಪ್‌ನಲ್ಲಿ ಎರಡು ಲೆನ್ಸ್‌ಗಳು ಕರ್ಣರೇಖೆಯಲ್ಲಿದ್ದು, ಆಕರ್ಷಕವಾಗಿದೆ. ಅಲ್ಯೂಮೀನಿಯಂ ಚೌಕಟ್ಟುಗಳು, ಹಿಂಭಾಗದಲ್ಲಿ ಗಾಜಿನ ಕವಚ ಮತ್ತು ಮುಂಭಾಗದಲ್ಲಿ ಆ್ಯಪಲ್‌ನ ಸಿರಾಮಿಕ್ ಶೀಲ್ಡ್ ಕವಚವಿದೆ. ಚೆನ್ನಾಗಿ ಹಿಡಿತಕ್ಕೆ ಸಿಗುವ ಈ ಫೋನ್, ತನ್ನ ವಿನ್ಯಾಸದಿಂದಾಗಿ ಬಳಕೆಗೂ ಅನುಕೂಲಕರವಾಗಿದೆ. ಬಾಕ್ಸ್‌ನಲ್ಲಿ ಹೆಡ್‌ಸೆಟ್ ಆಗಲೀ, ಚಾರ್ಜರ್ ಆಗಲೀ ಇಲ್ಲ. ಟೈಪ್-ಸಿ ಲೈಟ್ನಿಂಗ್ ಕೇಬಲ್ ಮಾತ್ರ ಇದೆ.
6.1 ಇಂಚಿನ OLED ಸೂಪರ್ ರೆಟಿನಾ ಸ್ಕ್ರೀನ್ ಇದ್ದು, ಆ್ಯಪಲ್‌ನ ಟ್ರೂಟೋನ್ ವೈಶಿಷ್ಟ್ಯದಿಂದಾಗಿ, ವಾತಾವರಣದ ಬೆಳಕಿಗೆ ಅನುಗುಣವಾಗಿ ಕಲರ್ ಟೆಂಪರೇಚರ್ (ಬಣ್ಣದ ತೀವ್ರತೆ) ಕೂಡ ಬದಲಾಗುತ್ತದೆ. ಆ್ಯಪಲ್‌ನ ಅತ್ಯಾಧುನಿಕವಾದ ಎ15 ಬಯೋನಿಕ್ ಚಿಪ್ ಸೆಟ್ ಇದರ ಪ್ಲಸ್ ಪಾಯಿಂಟ್. ವೇಗವಾದ ಬ್ರೌಸಿಂಗ್, ಬ್ಯಾಟರಿ ಉಳಿತಾಯಕ್ಕೆ ಇದು ಸಹಕಾರಿ. ಡ್ಯುಯಲ್ ಇ-ಸಿಮ್ ವ್ಯವಸ್ಥೆ, ವೈಫೈ 6.0, ಬ್ಲೂಟೂತ್ 5.0 ಬೆಂಬಲವಿದ್ದು, ಫಿಂಗರ್‌ಪ್ರಿಂಟ್ ಸೆನ್ಸರ್ ಇಲ್ಲವಾದರೂ ಫೇಸ್ ಐಡಿ ಮೂಲಕ ಸ್ಕ್ರೀನ್ ಅನ್‌ಲಾಕಿಂಗ್ ಸುಲಭವಾಗುತ್ತದೆ.
ಬ್ಯಾಟರಿ ಬಗ್ಗೆ ಹೇಳುವುದಾದರೆ, ಶೇಕಡಾವಾರು ಎಷ್ಟು ಬಾಕಿ ಇದೆ ಎಂಬುದು ಸ್ಕ್ರೀನ್ ಮೇಲೆ ತೋರಿಸುವ ವ್ಯವಸ್ಥೆ ಇಲ್ಲವಾದರೂ, ಒಂದಿಷ್ಟು ಬ್ರೌಸಿಂಗ್, ವಿಡಿಯೊ, ಇಮೇಲ್, ವಾಟ್ಸ್ಆ್ಯಪ್ ಮುಂತಾದ ಸಾಮಾನ್ಯ ಬಳಕೆಯಲ್ಲಿ ಒಂದುವರೆ ದಿನಕ್ಕೆ ಯಾವುದೇ ತೊಂದರೆಯಾಗಿಲ್ಲ.
ಕ್ಯಾಮೆರಾ
ಐಫೋನ್ 13 ಪ್ರೋ ಮಾಡೆಲ್‌ನಷ್ಟು ಸ್ಫುಟವಾಗಿರುವ ಫಲಿತಾಂಶವನ್ನು ಈ 13 ಮಾಡೆಲ್‌ನಿಂದ ನಿರೀಕ್ಷಿಸಲಾಗದು. ಆದರೆ, ಹಿಂಭಾಗದಲ್ಲಿ ಎರಡು ಮತ್ತು ಮುಂಭಾಗದ ಸೆಲ್ಫೀ ಕ್ಯಾಮೆರಾಗಳು 12 ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿದ್ದು, ಉತ್ತಮ ಫೋಟೋ, ವಿಡಿಯೊಗಳನ್ನು ದಾಖಲಿಸಿಕೊಳ್ಳಬಹುದು. ವಸ್ತುಗಳ ಮೇಲಿನ ಫೋಕಸ್ ಸ್ವಯಂಚಾಲಿತವಾಗಿ ಬದಲಾಗುವ ಸಿನೆಮ್ಯಾಟಿಕ್ ಮೋಡ್ ಇದರಲ್ಲಿರುವುದರಿಂದ, ಯೂಟ್ಯೂಬರ್‌ಗಳಿಗೆ ಅಥವಾ ಸಾಮಾನ್ಯ ವಿಡಿಯೊ ಮಾಡುವವರಿಗೆ ಅತ್ಯಂತ ಹೆಚ್ಚು ಅನುಕೂಲವಿದೆ. ಆದರೆ ಸಿನೆಮ್ಯಾಟಿಕ್ ಮೋಡ್ ಅನ್ನು ಬೇಕಾದಾಗಲಷ್ಟೇ ಬಳಸಿಕೊಳ್ಳಬೇಕು. ಸದಾಕಾಲ ಈ ಮೋಡ್‌ನಲ್ಲೇ ಶೂಟ್ ಮಾಡುವುದು ಸೂಕ್ತವಲ್ಲ. ಅಲ್ಟ್ರಾವೈಡ್ ಕ್ಯಾಮೆರಾಗಳು ರಾತ್ರಿಯ ವೇಳೆ ತೆಗೆಯುವ ಫೊಟೋಗಳನ್ನೂ ಚೆನ್ನಾಗಿ ಸೆರೆಹಿಡಿಯಬಲ್ಲವು. ಪೋರ್ಟ್ರೇಟ್ ಶಾಟ್‌ಗಳು ಚೆನ್ನಾಗಿವೆ. ಕೊಂಚ ದೂರದಿಂದ ಪೋರ್ಟ್ರೇಟ್ (ಹಿನ್ನೆಲೆ ಮಸುಕಾಗಿಸುವ) ಶಾಟ್‌ಗಳನ್ನು ತೆಗೆಯಬೇಕಾಗುತ್ತದೆ. ಪುಟ್ಟ ವಸ್ತುವನ್ನು ತೀರಾ ಸಮೀಪದಿಂದ ಚಿತ್ರೀಕರಿಸುವ ನಿಟ್ಟಿನಲ್ಲಿ ಈಗ ಬಹುತೇಕ ಎಲ್ಲ ಸ್ಮಾರ್ಟ್ ಫೋನ್‌ಗಳಲ್ಲಿರುವ ಮ್ಯಾಕ್ರೋ ಲೆನ್ಸ್ ಇದರಲ್ಲಿಲ್ಲ.
ಚಿತ್ರಗಳು, ವಿಡಿಯೊ, ಬಣ್ಣಗಳು ಅತ್ಯುತ್ತಮವಾಗಿ ಕಾಣಿಸುತ್ತವೆ. ಕಣ್ಣಿಗೂ ಹಿತಕರವಾಗಿರುವಂತೆ ಮತ್ತು ಕತ್ತಲಲ್ಲಿ ಸ್ಕ್ರೀನ್ ನೋಡುವಂತಾಗಲು ‘ನೈಟ್ ಶಿಫ್ಟ್’ ವೈಶಿಷ್ಟ್ಯವಿದೆ. ಇದರೊಂದಿಗೆ, ‘ಫೋಕಸ್’ ವೈಶಿಷ್ಟ್ಯ ಬಳಸುವ ಮೂಲಕ, ಸದ್ದು ಅಥವಾ ನೋಟಿಫಿಕೇಶನ್‌ನಿಂದ ತೊಂದರೆಯಾಗದಂತೆ ನಮಗೆ ಬೇಕಾದಂತೆ ಪ್ರೊಫೈಲ್ ಹೊಂದಿಸಿಕೊಳ್ಳಬಹುದು. ಸ್ಟೀರಿಯೋ ಸ್ಪೀಕರ್‌ಗಳು ಹಾಡುಗಳನ್ನು ಕೇಳಲು ಉತ್ತಮವಾಗಿವೆ. ಹಲವು ಆ್ಯಪ್‌ಗಳನ್ನು ತೆರೆದಿಟ್ಟು ಕೆಲಸ ಮಾಡುವಾಗಲೂ ಯಾವುದೇ ಲ್ಯಾಗಿಂಗ್ ಅನುಭವಕ್ಕೆ ಬಂದಿಲ್ಲ. ಗರಿಷ್ಠ ಗ್ರಾಫಿಕ್ ಇರುವ, ಹೆಚ್ಚು ತೂಕದ ಗೇಮ್‌ಗಳನ್ನು ಆಡುವಾಗಲೂ ಯಾವುದೇ ವಿಳಂಬದ (ಲ್ಯಾಗಿಂಗ್) ಅನುಭವಕ್ಕೆ ಬಂದಿಲ್ಲ. ಎ15 ಬಯೋನಿಕ್ ಚಿಪ್ ಇರುವುದು ಪ್ರಧಾನ ಕಾರಣ.
ಒಟ್ಟಿನಲ್ಲಿ ಐಫೋನ್ 13 ಎಂದಿನಂತೆ ತನ್ನ ಗುಣಮಟ್ಟ ಕಾಪಾಡಿಕೊಂಡಿದೆ. ಕಡಿಮೆ ಬೆಲೆ ಮತ್ತು ಸ್ವಲ್ಪ ಚಿಕ್ಕ ಗಾತ್ರದ ಐಫೋನ್ ಬೇಕೆಂದೆನಿಸಿದರೆ ಐಫೋನ್ 13 ಮಿನಿ ಇದೆ. ಮತ್ತು ಪ್ರೋ ಹಾಗೂ ಪ್ರೋ ಮ್ಯಾಕ್ಸ್ ಮಾದರಿಯಲ್ಲಿರುವ ಕೆಲವು ವೈಶಿಷ್ಟ್ಯಗಳೂ ಈ ಫೋನಲ್ಲಿವೆ. ಐಷಾರಾಮ ಮತ್ತು ಪ್ರತಿಷ್ಠೆಯ ಸಂಕೇತವಾಗಿ ಐಫೋನ್ ಈಗಲೂ ಜನಮಾನಸದಲ್ಲಿದೆ. ಆಂಡ್ರಾಯ್ಡ್ ಬಳಕೆದಾರರಿಗೆ ಇದು ದುಬಾರಿ ಎನ್ನಿಸಬಹುದು.