Apple iPad 10 Review: ಮಿನಿ ಲ್ಯಾಪ್‌ಟಾಪ್ ಸಾಮರ್ಥ್ಯದ ಆ್ಯಪಲ್ ಐಪ್ಯಾಡ್ 10

ಆ್ಯಪಲ್ ಐಪ್ಯಾಡ್‌ಗಳು ತನ್ನದೇ ಆದ ಕಾರಣಗಳಿಗಾಗಿ ಆಕರ್ಷಣೆಯನ್ನು ಉಳಿಸಿಕೊಂಡು ಬಂದಿವೆ. ಇದೀಗ ಈ ವರ್ಷ Apple iPad 10th Generation ಮಾರುಕಟ್ಟೆಗೆ ಬಂದಿದೆ. ಕಳೆದ ವರ್ಷದ ಐಪ್ಯಾಡ್-9ನೇ ಪೀಳಿಗೆಯ ಸಾಧನಕ್ಕಿಂತ ಇದು ಹೇಗೆ ಭಿನ್ನ? ಪ್ರಜಾವಾಣಿಗೆ ರಿವ್ಯೂಗೆ ದೊರೆತ ಸಾಧನವನ್ನು ಮೂರು ವಾರ ಬಳಸಿ ನೋಡಿದಾಗಿನ ಅನುಭವ ಇಲ್ಲಿದೆ.

ವಿನ್ಯಾಸ
ಮೊದಲು ಗಮನ ಸೆಳೆಯುವುದೇ ಇದು ಅರ್ಧ ಕಿಲೋಗಿಂತಲೂ ಹಗುರವಾದ ಸಾಧನ ಎಂಬುದಕ್ಕಾಗಿ. ತೀರಾ ತೆಳುವಾಗಿದೆ ಮತ್ತು 500 ಗ್ರಾಂಗಿಂತಲೂ ಕಡಿಮೆ ತೂಕ ಹೊಂದಿರುವ, 10.9 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಸ್ಕ್ರೀನ್ ಸುತ್ತಲಿನ ಖಾಲಿ ಜಾಗ (ಬೆಝೆಲ್) ತೀರಾ ಕಡಿಮೆಯಿದ್ದು, ವಿಡಿಯೊ, ಗೇಮ್ ಅಥವಾ ಚಿತ್ರಗಳ ವೀಕ್ಷಣೆಗೆ ಪೂರಕವಾಗಿದೆ. ಯುಎಸ್‌ಬಿ ಟೈಪ್ ಸಿ ಚಾರ್ಜಿಂಗ್ ವ್ಯವಸ್ಥೆಗೆ ಆ್ಯಪಲ್ ಹೊಂದಿಕೊಂಡಿರುವುದು ಗಮನಿಸಬೇಕಾದ ಅಂಶ. ಇದುವರೆಗೆ ಆ್ಯಪಲ್‌ಗಷ್ಟೇ ಸೀಮಿತವಾಗಿದ್ದ ಲೈಟ್ನಿಂಗ್ ಕನೆಕ್ಟರ್ ಕೇಬಲ್ ಬಳಸಬೇಕಾಗುತ್ತಿತ್ತು. ಈಗ ಎಲ್ಲ ಕಂಪನಿಗಳೂ ಏಕಪ್ರಕಾರವಾಗಿ ಟೈಪ್-ಸಿ ಚಾರ್ಜಿಂಗ್ ವ್ಯವಸ್ಥೆಯತ್ತ ಹೊರಳುತ್ತಿರುವುದು ಆಶಾದಾಯಕ ಬೆಳವಣಿಗೆ.

ಐಪ್ಯಾಡ್ ನಾಲ್ಕು ಬಣ್ಣಗಳಲ್ಲಿ (ನೀಲಿ, ನಸುಗುಲಾಬಿ, ಸಿಲ್ವರ್, ಹಳದಿ) ಲಭ್ಯವಿದ್ದು, ರಿವ್ಯೂಗೆ ದೊರೆತ ನಸುಗುಲಾಬಿ ಬಣ್ಣದ ಸಾಧನದ ಜೊತೆಗೆ ಸುಂದರವಾದ ಅದೇ ಬಣ್ಣದ ಕವರ್ ಕೂಡ ಇದೆ. ಇದನ್ನೇ ಐಪ್ಯಾಡ್ ಸ್ಟ್ಯಾಂಡ್ ಆಗಿ ಪರಿವರ್ತಿಸಬಹುದು. ಇದರ ಜೊತೆಗೆ, ಮ್ಯಾಜಿಕ್ ಕೀಬೋರ್ಡ್ ಫೋಲಿಯೋ ನೀಡಲಾಗಿದ್ದು (ಪ್ರತ್ಯೇಕ ಖರೀದಿಗೆ ಲಭ್ಯ, ಬೆಲೆ ಸುಮಾರು ₹24,900), ಇದನ್ನು ಅಯಸ್ಕಾಂತದ ಮೂಲಕ ಐಪ್ಯಾಡ್‌ಗೆ ಜೋಡಿಸಿ, ಮಿನಿ ಲ್ಯಾಪ್‌ಟಾಪ್ ಮಾದರಿಯಲ್ಲಿ ಕೆಲಸ ಮಾಡಬಹುದು.

ಕ್ಯಾಮೆರಾ
ಮುಂಭಾಗ ಹಾಗೂ ಹಿಂಭಾಗದಲ್ಲಿ ವಿಡಿಯೊ ಕಾನ್ಫರೆನ್ಸ್‌ಗೆ ಅನುಕೂಲವಾಗಿ 12 ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾ ಲೆನ್ಸ್ ಇದೆ. ಹಿಂಭಾಗದ ಕ್ಯಾಮೆರಾ ಲೆನ್ಸ್ ಎಂದಿನಂತೆ ಪಾರ್ಶ್ವ ಭಾಗದಲ್ಲಿದ್ದರೆ, ಮುಂಭಾಗದ ಕ್ಯಾಮೆರಾವು ಮೇಲ್ಭಾಗದ ಮಧ್ಯದಲ್ಲಿ ಇರಿಸಲಾಗಿರುವುದು ಹೊಸ ಬೆಳವಣಿಗೆಯಾಗಿದ್ದು, ಆನ್‌ಲೈನ್ ಮೀಟಿಂಗ್ ವೇಳೆ ಇತರರಿಗೆ ನಮ್ಮ ಮುಖವು ಸರಿಯಾಗಿ ಕಾಣಿಸಲು ಪೂರಕವಾಗಿದೆ.

ಹಿಂಭಾಗದ ಕ್ಯಾಮೆರಾದಲ್ಲಿ 2x ಆಪ್ಟಿಕಲ್ ಹಾಗೂ 5x ಡಿಜಿಟಲ್ ಝೂಮ್ ಮಾಡುವ ಆಯ್ಕೆಯಿರುವುದು ಅನುಕೂಲಕರ. ಮುಂಭಾಗದ ಕ್ಯಾಮೆರಾದಲ್ಲಿ ವೈಡ್ ಆ್ಯಂಗಲ್ ಲೆನ್ಸ್ ಮೂಲಕ ಅಗಲವಾದ ಚಿತ್ರವನ್ನು ಅಥವಾ ವಿಡಿಯೊವನ್ನು ಸೆರೆಹಿಡಿಯಬಹುದು. ಇದು ಹೆಚ್ಚು ಜನ ಇರುವಲ್ಲಿ, ಆನ್‌ಲೈನ್ ಮೀಟಿಂಗ್ ಸಂದರ್ಭದಲ್ಲಿ ಅನುಕೂಲಕ್ಕೆ ಬರುತ್ತದೆ. ಕ್ಯಾಮೆರಾದ ಗುಣಮಟ್ಟ ಸಾಕಷ್ಟು ಸುಧಾರಿಸಿದ್ದು, ಚಿತ್ರಗಳು ಸಾಧಾರಣವಾಗಿ ಸೆರೆಯಾಗುತ್ತವೆ.

ಕಾರ್ಯಾಚರಣೆ
ಈ ಬಾರಿ ಪವರ್ ಕೀಲಿಯಲ್ಲಿ ಟಚ್ ಐಡಿ ಸೆನ್ಸರ್ ಸೇರಿಸಲಾಗಿದೆ. ಶಕ್ತಿಶಾಲಿಯಾದ ಎ14 ಬಯೋನಿಕ್ ಚಿಪ್‌ಸೆಟ್ ಇದ್ದು, ಬ್ರೌಸಿಂಗ್, ವಿಡಿಯೊ ವೀಕ್ಷಣೆ, ಹಲವು ಆ್ಯಪ್‌ಗಳ ತೆರೆಯುವಿಕೆ ಮುಂತಾದ ಯಾವುದೇ ಕೆಲಸ ಕೂಡ ಅತ್ಯಂತ ಸುಲಲಿತವಾಗಿ, ವೇಗವಾಗಿ ಸಾಗುತ್ತದೆ. ಮಲ್ಟಿ ಟಾಸ್ಕಿಂಗ್ ಅಂದರೆ… ಸುಮಾರು ಆರೇಳು ಬ್ರೌಸರ್ ವಿಂಡೋಗಳನ್ನು ತೆರೆದಿಟ್ಟು, ಹಿನ್ನೆಲೆ ಸಂಗೀತದ ಸ್ಟ್ರೀಮಿಂಗ್ ಇರಿಸಿ, ಪವರ್ ಪಾಯಿಂಟ್ ಪ್ರೆಸೆಂಟೇಶನ್ ರಚಿಸುವ ಸಂದರ್ಭದಲ್ಲಿ, ಯಾವುದೇ ವಿಳಂಬ (ಲೇಟೆನ್ಸಿ) ಅನುಭವಕ್ಕೆ ಬಂದಿಲ್ಲ. ಸ್ಕ್ರೀನ್‌ನ ಸ್ಪರ್ಶ ಸಂವೇದನೆಯಂತೂ ಅತ್ಯುತ್ತಮವಾಗಿದೆ. ಮೂರು ವಾರ ಬಳಸಿ ನೋಡಿದಾಗ ಅನ್ನಿಸಿದ್ದೆಂದರೆ, ಮೂಲಭೂತ ಕಂಪ್ಯೂಟಿಂಗ್, ವರ್ಡ್, ಪಿಪಿಟಿ ಮುಂತಾದ ಡಾಕ್ಯುಮೆಂಟ್ ರಚನೆಯೇ ಮೊದಲಾದ ಕೆಲಸಗಳಾದರೆ ಇದು ಲ್ಯಾಪ್‌ಟಾಪ್‌ಗೆ ಅತ್ಯುತ್ತಮ ಪರ್ಯಾಯವಾಗಬಹುದು. ಸ್ಲಿಮ್ ಹಾಗೂ ಹಗುರವಾಗಿದ್ದು, ಒಯ್ಯುವುದಕ್ಕೂ ಸುಲಭ. ಸ್ಪರ್ಶ ಸಂವೇದಿ ಸ್ಕ್ರೀನ್ ಕೂಡ ಇರುವುದರಿಂದ ಕೆಲಸಗಳು ಮತ್ತಷ್ಟು ಸರಾಗವಾಗಬಹುದು. ಅತ್ಯಾಧುನಿಕ ಐಪ್ಯಾಡ್ ಒಎಸ್ 16.1 ಕಾರ್ಯಾಚರಣಾ ವ್ಯವಸ್ಥೆಯೊಂದಿಗೆ, ಮ್ಯಾಕ್‌ಬುಕ್‌ನಲ್ಲಿ (ಆ್ಯಪಲ್‌ನ ಲ್ಯಾಪ್‌ಟಾಪ್) ಕೆಲಸ ಮಾಡಿದಷ್ಟೇ ತೃಪ್ತಿ ನೀಡುತ್ತದೆ. ಮತ್ತು ಕಚೇರಿಯಲ್ಲಿ ಮ್ಯಾಕ್‌ಬುಕ್ ಬಳಸುತ್ತಿದ್ದರೆ, ಮನೆಯಲ್ಲಿ ಬಳಸುವ ಐಪ್ಯಾಡ್ ಜೊತೆಗೆ ಸಿಂಕ್ರನೈಸ್ ಮಾಡಿ ಹೆಚ್ಚಿನ ಕೆಲಸಗಳನ್ನು ಸುಲಭವಾಗಿ ನಿಭಾಯಿಸಬಹುದು.

ಆಡಿಯೋ ಕೂಡ ಗುಣಮಟ್ಟದಿಂದ ಕೂಡಿದೆ. ಯೂಟ್ಯೂಬ್ ಅಥವಾ ಬೇರಾವುದೇ ಮಾಧ್ಯಮದ ಮೂಲಕ ವಿಡಿಯೊ ವೀಕ್ಷಣೆ, ಆನ್‌ಲೈನ್ ಮೀಟಿಂಗ್ ವೇಳೆ ಇದು ಅನುಭವಕ್ಕೆ ಬಂತು.

ರಿವ್ಯೂಗೆ ದೊರೆತಿರುವುದು ವೈಫೈ- ಸೆಲ್ಯುಲಾರ್ ಮಾಡೆಲ್, ಎಂದರೆ ಸಿಮ್ ಕಾರ್ಡ್ ಬಳಸಬಹುದಾಗಿರುವ ಸಾಧನ. ಇದು 4ಜಿ ಎಲ್‌ಟಿಇ ಮಾತ್ರವಲ್ಲದೆ 5ಜಿಯನ್ನೂ ಬೆಂಬಲಿಸುತ್ತದೆ. ಈಗಷ್ಟೇ ನಮ್ಮ ದೇಶದಲ್ಲಿ 5ಜಿ ಆರಂಭವಾಗಿರುವುದರಿಂದ ಅನುಕೂಲ ಹೆಚ್ಚು.

ಬ್ಯಾಟರಿ
ದಿನಕ್ಕೆ ಮೂರ್ನಾಲ್ಕು ಗಂಟೆ ಐಪ್ಯಾಡ್ ಬಳಸಿದರೆ, ವಿಶೇಷವಾಗಿ ವೈಫೈ ಸಂಪರ್ಕದ ಮೂಲಕ, ಕನಿಷ್ಠ 3 ದಿನಗಳಿಗೆ ಬ್ಯಾಟರಿ ಚಾರ್ಜ್ ಉಳಿಯುತ್ತದೆ ಎಂಬುದು ಗಮನಾರ್ಹ ವಿಚಾರ. ಆದರೆ ವಿಡಿಯೊ ಕರೆಗಳಿದ್ದರೆ ಸ್ವಲ್ಪ ಹೆಚ್ಚು ಬ್ಯಾಟರಿ ಬೇಕಾಗುವುದು ಸಹಜ.

ಒಟ್ಟಿನಲ್ಲಿ ಹೇಳುವುದಾದರೆ, 9ನೇ ಪೀಳಿಗೆಯ ಐಪ್ಯಾಡ್‌ಗಿಂತ Apple iPad 10th Generation ಹೆಚ್ಚು ಶಕ್ತಿಶಾಲಿಯಾಗಿದೆ. ಉತ್ತಮ ಡಿಸ್‌ಪ್ಲೇ, ಹೆಚ್ಚು ವೇಗ ಹೊಂದಿದೆ. ಆ್ಯಪಲ್ ಐಡ್ಯಾಪ್ 10ನೇ ಪೀಳಿಗೆ 64GB ಮಾಡೆಲ್ ಬೆಲೆ ₹44,900 ಹಾಗೂ 256GB ವೈಫೈ ಮಾಡೆಲ್ ಬೆಲೆ ₹59,900 ಹಾಗೂ 256ಜಿಬಿ ಸೆಲ್ಯೂಲಾರ್ ಬೆಂಬಲವಿರುವ ಮಾಡೆಲ್ ಬೆಲೆ ₹74,900.

Apple iPad 10th Generation Review by Avinash B in Prajavani on 26 Nov 2022

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

2 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

2 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

3 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

4 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

9 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

9 months ago