Samsung Galaxy Z Flip 4 Review: ಮಡಚುವ ಫೋನ್‌ಗಳು ಹೊಸದಲ್ಲ. ಹಿಂದೆ ಬಂದಿದ್ದ ಹಲವು ಫೀಚರ್ ಫೋನ್‌ಗಳನ್ನು (ಸ್ಯಾಮ್‌ಸಂಗ್, ನೋಕಿಯಾ, ಮೋಟೋರೋಲ) ಕೂಡ ಮಡಚಬಹುದಾಗಿತ್ತು. ಆದರೆ, ಅವುಗಳ ಕೀಬೋರ್ಡ್ ಮತ್ತು ಸ್ಕ್ರೀನ್ ಪ್ರತ್ಯೇಕವಾಗಿದ್ದು, ಮಡಚಿ ಅವುಗಳನ್ನಷ್ಟೇ ಮಡಚಬಹುದಾಗಿತ್ತು. ಈಗ ಸ್ಕ್ರೀನನ್ನೇ ಮಡಚುವ ಕಾಲ. ಕಳೆದ ಬಾರಿ ರಿವ್ಯೂ ಮಾಡಿರುವುದು ಉದ್ದುದ್ದ ಮಡಚುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಝಡ್ ಫೋಲ್ಡ್ 4. ಈಗಿನದು ಅಡ್ಡಡ್ಡ ಮಡಚುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಝಡ್ ಫ್ಲಿಪ್. ಪ್ರಜಾವಾಣಿಗೆ ರಿವ್ಯೂಗೆ ದೊರೆತಿರುವುದು ಇದರ ನಾಲ್ಕನೇ ಆವೃತ್ತಿ “ಸ್ಯಾಮ್‌ಸಂಗ್ ಗ್ಯಾಲಕ್ಸಿ ಝಡ್ ಫ್ಲಿಪ್ 4” ಫೋನ್. ಮಾರುಕಟ್ಟೆಗೆ ಬಿಡುಗಡೆಯಾಗುವ ಮುಂಚೆಯೇ ರಿವ್ಯೂಗೆ ದೊರೆತಿರುವ ಈ ಮಡಚುವ ಫೋನನ್ನು ಒಂದು ವಾರ ಬಳಸಿ ನೋಡಿದಾಗಿನ ಅನುಭವದ ಮಾಹಿತಿ ಇಲ್ಲಿದೆ.
ವಿನ್ಯಾಸ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಝಡ್ ಫ್ಲಿಪ್ 4 – ಇದು ಮೇಲಿಂದ ಕೆಳಗೆ ಮಡಚುವ ಅಥವಾ ಫ್ಲಿಪ್ ಮಾಡುವ ಫೋನ್. ಇದರಲ್ಲಿ ಎರಡು ಸ್ಕ್ರೀನ್‌ಗಳಿರುತ್ತವೆ. ಫೋನ್ ಕರೆ ಅಥವಾ ಸಂದೇಶ ಬಂದರೆ ಮಡಚಿರುವಾಗಲೇ ಕಾಣಿಸಲು ಅನುವಾಗುವಂತೆ ಇರುವ 1.9 ಇಂಚಿನ ಪುಟ್ಟ ಸ್ಕ್ರೀನ್ (ಹಿಂಭಾಗದಲ್ಲಿ ಕ್ಯಾಮೆರಾ ಇರುವ ಜಾಗ) ಮತ್ತೊಂದು, ಕರೆ ಸ್ವೀಕರಿಸಬೇಕಿದ್ದರೆ ಅಥವಾ ಬೇರೇನಾದರೂ ಕೆಲಸ ಮಾಡಬೇಕಿದ್ದರೆ ಮಡಚಿದ ಫೋನನ್ನು ತೆರೆದಾಗ (ಫ್ಲಿಪ್ ಮಾಡಿದಾಗ) ಇರುವ 6.7 ಇಂಚಿನ ದೊಡ್ಡ ಪರದೆ. ಮಡಚಿದಾಗ ಜೇಬಿನೊಳಗೆ ಸುಲಭವಾಗಿ ಕೂರುತ್ತದೆ. ಎರಡು ಪ್ರಧಾನ ಕ್ಯಾಮೆರಾಗಳು, ಮುಂಭಾಗದಲ್ಲೊಂದು ಸೆಲ್ಫೀ ಕ್ಯಾಮೆರಾ, ಬೆರಳಚ್ಚು ಲಾಕ್ ಇರುವ ಪವರ್ ಬಟನ್, ಸುಲಭವಾಗಿ ತೆರೆದುಕೊಳ್ಳುವಂತಾಗಲು ಬಿಂಜ್ (ಬಿಜಾಗರಿ) ಮತ್ತು ಅದರಲ್ಲಿನ ಸ್ಯಾಮ್‌ಸಂಗ್ ಟ್ರೇಡ್‌ಮಾರ್ಕ್. ಕೈಯಲ್ಲಿ ಹಿಡಿದುಕೊಂಡರೆ, ಕೆಲವು ಸಮಯದ ಹಿಂದೆ ವಿಸಿಟಿಂಗ್ ಕಾರ್ಡ್, ಕ್ರೆಡಿಟ್-ಡೆಬಿಟ್ ಕಾರ್ಡ್ ಇರಿಸಿಕೊಳ್ಳಲು ಬಳಕೆಯಾಗುತ್ತಿದ್ದ ಪುಟ್ಟ ಪೆಟ್ಟಿಗೆಯಂತೆ ಕಾಣಿಸುತ್ತದೆ.
ಕ್ವಾಲ್‌ಕಂ ಸ್ನ್ಯಾಪ್‌ಡ್ರ್ಯಾಗನ್ 8+ 1ನೇ ಪೀಳಿಗೆಯ ಪ್ರೊಸೆಸರ್, 3700 mAh ಬ್ಯಾಟರಿ ಇದರಲ್ಲಿದ್ದು, ಜೇಬಿನಲ್ಲಿರಿಸಿಕೊಳ್ಳಲು ಸ್ವಲ್ಪ ಮಟ್ಟಿಗೆ ಹೆಚ್ಚು ತೂಕ ಅನ್ನಿಸುತ್ತದೆ. ಅಲ್ಯೂಮೀನಿಯಂ ಫ್ರೇಮ್ ಅಂದವಾಗಿ ಕಾಣಿಸುತ್ತದೆ. ಆದರೆ, ಹೆಚ್ಚು ಕಾಳಜಿಯಿಂದ ಈ ಫೋನ್ ಬಳಸಬೇಕಾಗುತ್ತದೆ. ಯಾಕೆಂದರೆ, ಜೇಬು ಅಥವಾ ಕೈಚೀಲದಲ್ಲಿ ಹಾಕುವಾಗ ಅದರಲ್ಲಿ ನಾಣ್ಯಗಳು, ಕೀಲಿಕೈಗಳು ಇಲ್ಲದಂತೆ ನೋಡಿಕೊಳ್ಳಬೇಕು. ಅವುಗಳೇನಾದರೂ ಸ್ಕ್ರೀನ್‌ಗಳ ನಡುವೆ ಸಿಲುಕಿಹಾಕಿಕೊಂಡರೆ ಸ್ಕ್ರೀನ್‌ಗೆ ಹಾನಿಯಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಎಚ್ಚರಿಕೆ ಬೇಕು ಅಂತ ಸ್ಯಾಮ್‌ಸಂಗ್ ಕಂಪನಿಯೇ ಹೇಳುತ್ತದೆ. ಸಾಮಾನ್ಯ ಗೀರುಗಳಿಂದ ರಕ್ಷಿಸಲು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್+ ಗಾಜಿನ ಕವಚದ ರಕ್ಷೆಯಿದೆ.
ಡಿಸ್‌ಪ್ಲೇ
ಫೋನನ್ನು ಫ್ಲಿಪ್ ಮಾಡಿದಾಗ 6.7 ಇಂಚು (ಕರ್ಣರೇಖೆ) ಫುಲ್ ಹೆಚ್‌ಡಿ+ಪರದೆಯಲ್ಲಿ ಚಿತ್ರ, ವಿಡಿಯೊಗಳು ಅತ್ಯಂತ ನಿಖರವಾಗಿ, ಸ್ಪಷ್ಟವಾಗಿ, ವರ್ಣಮಯವಾಗಿ ಸುಂದರವಾಗಿ ಗೋಚರಿಸುತ್ತವೆ. ಮಡಚಿದಾಗಿನ ಕವರ್ ಸ್ಕ್ರೀನ್ 1.9 ಇಂಚು (ಕರ್ಣರೇಖೆಯಲ್ಲಿ) ಇದ್ದು, ನೋಟಿಫಿಕೇಶನ್, ಹವಾಮಾನ ಮಾಹಿತಿ, ಸ್ಕ್ರೀನ್ ರೆಕಾರ್ಡಿಂಗ್, ಹಾಡುಗಳನ್ನು ಪ್ಲೇ ಮಾಡುವುದು, ಗಡಿಯಾರ ಮತ್ತು ಇತರ ಕಾರ್ಯಗಳಿಗೂ ವಿಜೆಟ್‌ಗಳಿವೆ. ಸ್ವೈಪ್ ಮಾಡಿದರಾಯಿತು. ನಮಗೆ ಬೇಕಾದ ಆ್ಯಪ್‌ನ ವಿಜೆಟ್ ಅನ್ನು ಇಲ್ಲಿ ಸೇರಿಸಿಕೊಳ್ಳಬಹುದು.
ಕ್ಯಾಮೆರಾ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಝಡ್ ಫ್ಲಿಪ್ 4ನ ಕ್ಯಾಮೆರಾ ಅತ್ಯಂತ ಚೆನ್ನಾಗಿದೆ. ಪ್ರಧಾನ ಕ್ಯಾಮೆರಾದಲ್ಲಿ ತಲಾ 12 ಮೆಗಾಪಿಕ್ಸೆಲ್‌ಗಳ ಎರಡು ಲೆನ್ಸ್‌ಗಳಿದ್ದರೆ (ವೈಡ್ ಹಾಗೂ ಅಲ್ಟ್ರಾವೈಡ್), ಸೆಲ್ಫೀ ಕ್ಯಾಮೆರಾ 10MP ಸಾಮರ್ಥ್ಯ ಹೊಂದಿದೆ. ಪ್ರಧಾನ ಕ್ಯಾಮೆರಾದಿಂದಲೇ ಹೆಚ್ಚು ಗುಣಮಟ್ಟದ ಸೆಲ್ಫೀ ಚಿತ್ರವನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಪ್ರಧಾನ ಕ್ಯಾಮೆರಾ ತೆರೆದಾಗ, ಬಲ ಮೇಲ್ಭಾಗದಲ್ಲಿರುವ ‘ಕವರ್ ಸ್ಕ್ರೀನ್ ಪ್ರಿವ್ಯೂ’ ಬಟನ್ ಒತ್ತಿ ಆನ್ ಮಾಡಿಕೊಂಡರಾಯಿತು.
ವಿಡಿಯೊ ಹಾಗೂ ಫೋಟೋಗಳಿಗೆ ಪ್ರಧಾನ ಕ್ಯಾಮೆರಾದಲ್ಲಿಯೇ ಪೋರ್ಟ್ರೇಟ್ ಮೋಡ್ ಬಳಸುವ ಆಯ್ಕೆ ತುಂಬ ಇಷ್ಟವಾಯಿತು. ಪೋರ್ಟ್ರೇಟ್ ಮೋಡ್‌ನಲ್ಲಿ (ಹಿನ್ನೆಲೆಯನ್ನು ಮಸುಕಾಗಿಸಿ, ಮುಖವನ್ನು ಪ್ರಧಾನವಾಗಿ ಬಿಂಬಿಸುವ ವಿಧಾನ) ಭಾವಚಿತ್ರ ತೆಗೆದ ಬಳಿಕ, ಹಿನ್ನೆಲೆಯ ಬಣ್ಣ ಬದಲಾಯಿಸುವ ಎಡಿಟಿಂಗ್ ಆಯ್ಕೆ ಕೂಡ ಇದೆ.
ಮಂದ ಬೆಳಕಿನಲ್ಲೂ ಈ ಕ್ಯಾಮೆರಾಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ವ್ಲಾಗರ್‌ಗಳಿಗೆ (ವಿಡಿಯೊ ಬ್ಲಾಗರ್‌ಗಳು) ಇದು ಯಾಕೆ ಇಷ್ಟವಾಗಬಹುದು ಎಂದರೆ, ಇದನ್ನು ಅರ್ಧ ಮಡಚಿದಾಗ, ಅಂಗೈಯಲ್ಲಿಟ್ಟುಕೊಂಡೇ ವಿಡಿಯೊ, ಫೋಟೋ ಸೆರೆಹಿಡಿಯಬಹುದು. ಸಾಮಾನ್ಯ ಸ್ಥಿತಿಯಲ್ಲಿ ಕೈಯಲ್ಲಿ ತುಂಬ ಹೊತ್ತು ಫೋನ್ ಹಿಡಿದುಕೊಳ್ಳುವುದು ಕಷ್ಟವಾಗುತ್ತದೆ. ಹೀಗಾಗಿ ಅರ್ಧ ಮಡಚಿ, ಮೇಲಿನ ಸ್ಕ್ರೀನ್‌ನಲ್ಲಿ ಚಿತ್ರ ವೀಕ್ಷಿಸಿ, ಕೆಳಗಿನ ಸ್ಕ್ರೀನ್‌ನಲ್ಲಿ ಟಚ್ ಪ್ಯಾಡ್ ಮೂಲಕ ವಿಭಿನ್ನ ನಿಯಂತ್ರಕಗಳನ್ನು ಬಳಸಿ, ಸುಂದರವಾದ ವಿಡಿಯೊ, ಚಿತ್ರ ಸೆರೆಹಿಡಿಯುವುದು ಸುಲಭವಾಗುತ್ತದೆ.
3700 mAh ಸಾಮರ್ಥ್ಯದ ಬ್ಯಾಟರಿಯಿದೆ. ಬಹುಶಃ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಗೆ ಈ ಪುಟ್ಟ ಫೋನ್‌ನಲ್ಲಿ (ಮಡಚುವಾಗ) ಅವಕಾಶ ಸಾಲದು ಎನಿಸುತ್ತದೆಯಾದರೂ, ಸಾಮಾನ್ಯ ಕೆಲಸ ಕಾರ್ಯಗಳಿಗೆ ಒಂದು ದಿನದ ಚಾರ್ಜ್‌ಗೆ ಯಾವುದೇ ಸಮಸ್ಯೆಯಿಲ್ಲ. ಬಾಕ್ಸ್‌ನಲ್ಲಿ ಚಾರ್ಜರ್ ಇಲ್ಲದಿರುವುದು ಕೊರತೆ ಅನಿಸುತ್ತದೆ. 25W ವರೆಗಿನ ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆಯಾದುದರಿಂದ, ಸುಮಾರು 50% ಚಾರ್ಜ್ ಬೇಗ ಆಗುತ್ತದೆ. ನಂತರ ಚಾರ್ಜಿಂಗ್ ನಿಧಾನವಾಗುವುದು ಗಮನಕ್ಕೆ ಬಂತು. ಸಾಮಾನ್ಯವೆನಿಸುವ 15W ಚಾರ್ಜರ್‌ನಲ್ಲಿ ಶೂನ್ಯ ಮಟ್ಟದಿಂದ ಪೂರ್ತಿಯಾಗಿ ಚಾರ್ಜ್ ಆಗಲು 3 ಗಂಟೆ ಬೇಕಾಗುತ್ತದೆ.
ಇನ್ನು, ಕೋವಿಡ್ ನಂತರದ ಅವಧಿಯಲ್ಲಿ ಕಚೇರಿ ಅಥವಾ ಬೇರಾವುದೇ ವಿಷಯಕ್ಕೆ ಸಂಬಂಧಿಸಿದ ವಿಡಿಯೊ ಕರೆಗಳಿಗೆ ಈ ಸಾಧನ ತುಂಬ ಉಪಯುಕ್ತ. ಉದಾಹರಣೆಗೆ, ಗೂಗಲ್ ಮೀಟ್‌ನಲ್ಲಿ ಮೀಟಿಂಗ್ ಮಾಡುವುದಿದ್ದರೆ, ಇದನ್ನು ಅರ್ಧ ತೆರೆದು ಟೇಬಲ್ ಮೇಲೆ ಇಟ್ಟರಾಯಿತು. ಸಂವಹನ ಸುಲಭ. ವಿಡಿಯೊ ರೆಕಾರ್ಡಿಂಗ್ ಕೂಡ ಟೇಬಲ್ ಮೇಲೆ ಇಡುವುದಕ್ಕೆ ಈ ಮಡಚುವ ವೈಶಿಷ್ಟ್ಯವು ಉಪಯುಕ್ತ.
ಕಾರ್ಯಸಾಮರ್ಥ್ಯ
ಕ್ವಾಲ್ಕಮ್ ಸ್ನ್ಯಾಪ್‌ಡ್ರ್ಯಾಗನ್ 8+ನ 1ನೇ ಪೀಳಿಗೆಯ ಪ್ರೊಸೆಸರ್, 8ಜಿಬಿ RAM ಜೊತೆಗೆ ಅತ್ಯುತ್ತಮ ಮತ್ತು ಸುಲಲಿತವಾದ ಬ್ರೌಸಿಂಗ್ ಅನುಭವವಾಗಿದೆ. ಆಸ್ಫಾಲ್ಟ್ 9ರಂತಹ ಭರ್ಜರಿ ಗ್ರಾಫಿಕ್ಸ್ ಇರುವ ಗೇಮ್‌ಗಳನ್ನು ಆಡುವ ಸಂದರ್ಭದಲ್ಲಿ ಯಾವುದೇ ರೀತಿಯ ಲೇಟೆನ್ಸಿ, ಸ್ಥಾಗಿತ್ಯ ಇತ್ಯಾದಿ ಸಮಸ್ಯೆಯಿಲ್ಲ. ಆಂಡ್ರಾಯ್ಡ್‌ನ ಅತ್ಯಾಧುನಿಕ 12ನೇ ಆವೃತ್ತಿ ಆಧಾರಿತ ಒನ್ ಯುಐ 4.1.1 ಕಾರ್ಯಾಚರಣೆ ವ್ಯವಸ್ಥೆಯಿದೆ. ಜೊತೆಗೆ, ಸ್ಕ್ರೀನ್ ಅನ್‌ಲಾಕ್ ಮಾಡುವುದಕ್ಕೆ ಫಿಂಗರ್‌ಪ್ರಿಂಟ್ ಸೆನ್ಸರ್, ಮುಖ ಗುರುತಿಸುವ ತಂತ್ರಜ್ಞಾನಗಳು ಚೆನ್ನಾಗಿ ಕೆಲಸ ಮಾಡುತ್ತವೆ.
ಇದರಲ್ಲೊಂದು ಫ್ಲೆಕ್ಸ್ ಮೋಡ್ ಎಂಬ ವೈಶಿಷ್ಟ್ಯವಿದೆ. ಸೆಟ್ಟಿಂಗ್ಸ್‌ನ ಅಡ್ವಾನ್ಸ್‌ಡ್ ಫೀಚರ್ಸ್‌ನ ಲ್ಯಾಬ್ಸ್ ಎಂಬ ವಿಭಾಗಕ್ಕೆ ಹೋದರೆ, ಅಲ್ಲಿ ಫ್ಲೆಕ್ಸ್ ಮೋಡ್ ಪ್ಯಾನೆಲ್ ಅನ್ನು ಸಕ್ರಿಯಗೊಳಿಸುವ ಆಯ್ಕೆ ಗೋಚರಿಸುತ್ತದೆ. ಇಲ್ಲಿ, ಯಾವೆಲ್ಲ ಆ್ಯಪ್‌ಗಳು ಫ್ಲೆಕ್ಸ್ ಮೋಡ್‌ನಲ್ಲಿ ಕಾರ್ಯಾಚರಿಸಬೇಕೆಂದು ಆಯ್ದುಕೊಳ್ಳಬಹುದು. ಅಂದರೆ, ಈ ಫೋನನ್ನು 90 ಡಿಗ್ರಿ ಮಡಚಿದಾಗ, ಮೇಲಿನ ಸ್ಕ್ರೀನ್‌ನಲ್ಲಿ ಆ್ಯಪ್ ಕಾಣಿಸುತ್ತದೆ ಮತ್ತು ಕೆಳಗಿನ ಸ್ಕ್ರೀನ್‌ನಲ್ಲಿ ಅದರ ನಿಯಂತ್ರಕಗಳ ಬಟನ್ ಗೋಚರಿಸುತ್ತದೆ. ಅದನ್ನು ಟಚ್ ಪ್ಯಾಡ್ ಆಗಿ ಬಳಸಬಹುದು. ಕೆಲವು ಅಂತರ್‌ನಿರ್ಮಿತವಾಗಿ ಬಂದಿರುವ ಆ್ಯಪ್‌ಗಳಿಗೆ ಇದು ಡೀಫಾಲ್ಟ್ ಆಗಿ ಆನ್ ಇರುತ್ತದೆ. ಉಳಿದಂತೆ, ಈ ಮೋಡ್ ಬೆಂಬಲಿಸುವ ಆ್ಯಪ್‌ಗಳಿಗೆ ನಾವೇ ಬೇಕಿದ್ದರೆ ಮಾತ್ರ ಫ್ಲೆಕ್ಸ್ ಮೋಡ್ ಆನ್ ಮಾಡಿಕೊಳ್ಳಬೇಕಾಗುತ್ತದೆ.
ಒಟ್ಟಾರೆ ಹೇಗಿದೆ?
ಬ್ಯಾಟರಿ ಸಾಮರ್ಥ್ಯ ಕೊಂಚ ಕಡಿಮೆಯಾಯಿತು ಅನ್ನಿಸಿದರೂ, ಸ್ಟೈಲ್ ಇಷ್ಟಪಡುವವರಿಗೆ, ಹೊಸ ಸ್ಮಾರ್ಟ್ ಫೋನ್‌ನಲ್ಲಿ ಫ್ಲೆಕ್ಸ್ ಮೋಡ್‌ನಂತಹ ಅತ್ಯಾಧುನಿಕ ಸೌಕರ್ಯಗಳನ್ನು ಬಳಸುವ ತುಡಿತ ಇರುವವರಿಗೆ ಇದು ಇಷ್ಟವಾಗಬಹುದು. ಇದರ ಬೆಲೆ ₹89,000 (128GB | 8GB) ಹಾಗೂ ₹94,999 (256GB | 8GB).
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…