ಸುನೋಜೀ, ಬರುತ್ತಿದೆ 5G!: ನೀವು ತಿಳಿಯಬೇಕಾದ ವಿಚಾರ

0
268

5G is coming5ಜಿ ಎಂಬುದು ಮೊಬೈಲ್ ನೆಟ್‌ವರ್ಕ್‌ನ ಅತ್ಯಾಧುನಿಕ ತಂತ್ರಜ್ಞಾನ. ಇದರಲ್ಲಿ ‘ಜಿ’ ಅಕ್ಷರವು ಜನರೇಶನ್ ಅಥವಾ ಪೀಳಿಗೆ/ತಲೆಮಾರು ಎಂಬುದನ್ನು ಸೂಚಿಸುತ್ತದೆ. ಬಹುಶಃ 1ನೇ ಪೀಳಿಗೆ ತಂತ್ರಜ್ಞಾನವನ್ನು ನಾವು-ನೀವು ಬಳಸಿರಲಿಕ್ಕಿಲ್ಲ. ಮೊಬೈಲ್ ಫೋನ್ ನಾವು ಬಳಸಲಾರಂಭಿಸಿದ್ದೇ 2ಜಿ ತಂತ್ರಜ್ಞಾನದ ಮೂಲಕ. ಅದಕ್ಕೆ ಮೊದಲು 1973ರಲ್ಲಿ ಅಮೆರಿಕದ ಎಂಜಿನಿಯರ್ ಮಾರ್ಟಿನ್ ಕೂಪರ್ ಎಂಬಾತ, ಮೋಟೋರೋಲ ಕಂಪನಿಯ ತನ್ನ ಜತೆಗಾರರೊಂದಿಗೆ ಸೇರಿ ಮೊದಲ ಬಾರಿಗೆ ಮೊಬೈಲ್ ಫೋನ್ ರೂಪಿಸಿ, ಕರೆ ಮಾಡಿ ಇತಿಹಾಸ ಸೃಷ್ಟಿಸಿದ್ದ.

ಅಂದಿನಿಂದ ಈ ಮೊಬೈಲ್ ಫೋನೆಂಬ ಅಂಗೈಯ ಅರಮನೆಯು ಬೆಳೆದು ನಿಂತ ಬಗೆ ಅಗಾಧ. ಅದಕ್ಕೆ ಬೇಕಾಗಿರುವ ನೆಟ್‌ವರ್ಕ್ ತಂತ್ರಜ್ಞಾನವೂ ತಲೆಮಾರುಗಳಂತೆಯೇ ಪ್ರಗತಿ ಸಾಧಿಸುತ್ತಾ ಹೋಯಿತು. ದೇಶದಲ್ಲಿ 1ಜಿ, 2ಜಿ, 3ಜಿ ಆಗಿ 4ಜಿವರೆಗೆ ತಲುಪಿದ ಈ ತಂತ್ರಜ್ಞಾನವು ಈಗ 5ಜಿ ಮೆಟ್ಟಿಲು ಏರಲು ಸಜ್ಜಾಗಿದೆ.

ಆರಂಭಿಕ ದಿನಗಳಲ್ಲಿ ನಿಸ್ತಂತು (ವೈರ್‌ಲೆಸ್) ಮೂಲಕ ಧ್ವನಿ ಮತ್ತು ಪಠ್ಯದ ಸಂವಹನ ಮಾತ್ರ ನಡೆಯುತ್ತಿತ್ತು. 2ಜಿ ಬಂದಾಗ EDGE ಹಾಗೂ CDMA ತಂತ್ರಜ್ಞಾನದ ಮೂಲಕ ಇಂಟರ್ನೆಟ್ ಕೂಡ ಮೊಬೈಲ್ ಫೋನ್‌ಗೆ ಬಂದಿತು. 3ಜಿಯಲ್ಲಿ (GPRS/HSDPA) ಇಂಟರ್ನೆಟ್ ಸಂವಹನಕ್ಕೆ ವೇಗ ದೊರೆಯಿತು. 4ಜಿಯಲ್ಲಿ (LTE) ಮತ್ತಷ್ಟು ವೇಗ ಸಿಕ್ಕಿತು.

ಈ ವೇಗ ಎಂದರೇನು?
ಒಂದು ನಿರ್ದಿಷ್ಟ ಫೈಲ್ ಒಂದನ್ನು ಯಾವುದಾದರೂ ಜಾಲ ತಾಣದಿಂದ ಡೌನ್‌ಲೋಡ್ ಅಥವಾ ಅಪ್‌ಲೋಡ್ ಮಾಡಲು ಎಷ್ಟು ಸೆಕೆಂಡ್ ಬೇಕಾಗುತ್ತದೆ ಎಂಬುದರ ಆಧಾರದಲ್ಲಿ ವೇಗವನ್ನು ಅಳೆಯಲಾಗುತ್ತದೆ. ಉದಾಹರಣೆಗೆ, 100 ಎಂಬಿಪಿಎಸ್ ಎಂದರೆ ಸೆಕೆಂಡಿಗೆ 100 ಮೆಗಾಬಿಟ್ಸ್ (ಅಂದರೆ 12.5 ಮೆಗಾಬೈಟ್) ದತ್ತಾಂಶವನ್ನು ವಿನಿಮಯ ಮಾಡಿಕೊಳ್ಳಬಹುದು ಎಂದರ್ಥ. 2ಜಿಯಲ್ಲಿ ಸೆಕೆಂಡಿಗೆ ಗರಿಷ್ಠ ವೇಗ 50 (ಕಿಲೋಬಿಟ್ಸ್) ಕೆಬಿ, 3ಜಿಯಲ್ಲಿ 21 ಎಂಬಿ (ಮೆಗಾಬಿಟ್ಸ್), 1 ಜಿಬಿ (ಗಿಗಾಬಿಟ್ಸ್) ವರೆಗೆ ಇದ್ದರೆ, 5ಜಿಯಲ್ಲಿ 35 ಜಿಬಿವರೆಗೂ ದತ್ತಾಂಶ ವಿನಿಮಯ ವೇಗ ಇರುತ್ತದೆಯಂತೆ.

5ಜಿ ಬಗ್ಗೆ ತಿಳಿಯಲೇಬೇಕಾದ ಅಂಶಗಳು

* 5ಜಿ ತಂತ್ರಜ್ಞಾನವು ಮನುಷ್ಯರ ನಡುವಿನ ಹಾಗೂ ಮನುಷ್ಯ ಮತ್ತು ಯಂತ್ರಗಳ ನಡುವಿನ (ವಸ್ತುಗಳ ಅಂತರ್ಜಾಲ ಅಂದರೆ IoT – Internet of Things) ಸಂವಹನಕ್ಕೂ ವೇಗ ದೊರಕಿಸುತ್ತದೆ.

* ದತ್ತಾಂಶದ ಕೆಬಿ, ಎಂಬಿ ಅಲ್ಲ, ಬದಲಾಗಿ ಜಿಬಿ (ಗಿಗಾಬಿಟ್) ಫೈಲ್‌ಗಳ ವಿನಿಮಯವು ಕೆಲವೇ ಸೆಕೆಂಡುಗಳಲ್ಲಿ ಸಾಧ್ಯ.

* ಈಗಿರುವ 4ಜಿ VoLTE ತಂತ್ರಜ್ಞಾನಕ್ಕಿಂತಲೂ ಇದರ ಕಾರ್ಯಕ್ಷಮತೆ ಹೆಚ್ಚು ಮತ್ತು ವೆಚ್ಚವೂ ಕಡಿಮೆ.

* 5ಜಿ ತಂತ್ರಜ್ಞಾನವು ಸ್ವಯಂಚಾಲಿತ ವಾಹನಗಳು, ವಸ್ತುಗಳ ಅಂತರ್ಜಾಲ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI), ಯಂತ್ರದ ಕಲಿಕೆ ಮುಂತಾದ ವಿಭಾಗದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಲಿದ್ದು, ಹೊಸ ಯುಗಕ್ಕೆ ನಾಂದಿ ಹಾಡಲಿದೆ.

* ಸದ್ಯಕ್ಕೆ ಭಾರತದಲ್ಲಿ 5ಜಿ ಪರೀಕ್ಷಾ ಹಂತದಲ್ಲಿದ್ದು, ನೋಕಿಯಾ, ಎರಿಕ್ಸನ್, ಸ್ಯಾಮ್‌ಸಂಗ್, ಝಡ್‌ಟಿಇ ಹಾಗೂ ಇತ್ತೀಚೆಗೆ ಚೀನಾ ಮೂಲದ ಹುವಾವೆ (Huawei) ಕಂಪನಿಗೂ ಇದರ ಪರೀಕ್ಷೆಗೆ ಅನುಮತಿ ದೊರೆತಿದೆಯಷ್ಟೇ.

* ಈಗ ಮೊಬೈಲ್ ಇಂಟರ್ನೆಟ್ ಮತ್ತು ಕರೆ ದರಗಳು ಹೆಚ್ಚುತ್ತಿರುವ ಹಂತದಲ್ಲಿ ಈ ಅಗ್ಗದ ತಂತ್ರಜ್ಞಾನ ಬಂದರೆ, ಜನರಿಗೆ ಅನುಕೂಲ.

ಈಗ ನಮ್ಮಲ್ಲಿ 4ಜಿ ತಂತ್ರಜ್ಞಾನ ಬಂದರೂ ಕೆಲವು ಕಡೆ ಈಗಲೂ ಇಂಟರ್ನೆಟ್ ಬಳಸುವಾಗ ‘E’ ಎಂಬ ಅಕ್ಷರವು ಮೊಬೈಲ್‌ನ ಸಿಗ್ನಲ್ ಬಾರ್ ಪಕ್ಕದಲ್ಲಿ ಕಾಣಿಸುತ್ತದೆ. ಅಂದರೆ, ಅದು ತೀರಾ ನಿಧಾನಗತಿಯ 2ಜಿ (EDGE) ಇಂಟರ್ನೆಟ್ ಸಂಪರ್ಕ ಎಂದರ್ಥ. 4ಜಿಗೆ ಪೂರ್ಣ ಪ್ರಮಾಣದಲ್ಲಿ ಮೂಲ ಸೌಕರ್ಯ ಇಲ್ಲ. ಹೀಗಿರುವಾಗ ದೇಶವು 5ಜಿಗೆ ಎಷ್ಟು ಸಿದ್ಧವಾಗಿದೆ ಎಂಬುದು ಕಾದು ನೋಡಬೇಕಾದ ಅಂಶ.

ಏನೇ ಆದರೂ, ಮುಂದೆ ಮೊಬೈಲ್ ಖರೀದಿ ಮಾಡುವಾಗ ಮತ್ತು ಪದೇ ಪದೇ ಮೊಬೈಲ್ ಫೋನ್ ಬದಲಾಯಿಸುವ ಚಾಳಿ ಇಲ್ಲವೆಂದಾದರೆ, 5ಜಿ ಸೌಕರ್ಯಕ್ಕೆ ಸಿದ್ಧವಾಗಿರುವ ಮೊಬೈಲ್ ಫೋನ್‌ಗಳನ್ನೇ (ಈಗಾಗಲೇ ಮಾರುಕಟ್ಟೆಗೆ ಬರಲಾರಂಭಿಸಿವೆ) ಖರೀದಿಸುವುದು ಜಾಣತನ.

Published in Prajavani on 09 Jan 2020 by ಅವಿನಾಶ್ ಬಿ.

LEAVE A REPLY

Please enter your comment!
Please enter your name here