ಗೂಗಲ್ ರೂಪಿಸಿದ ಸಾಮಾಜಿಕ ಜಾಲತಾಣ ಗೂಗಲ್ ಪ್ಲಸ್ ಜನ ಸಾಮಾನ್ಯರನ್ನು ಬಲವಾಗಿ ತಲುಪುವಲ್ಲಿ ವಿಫಲವಾಗಿದೆಯಾದರೂ, ಫೋಟೋಗಳನ್ನು ನಿರ್ವಹಿಸಬಹುದಾದ ಅದರ ಕಾರ್ಯಸಾಮರ್ಥ್ಯದ ಬಗ್ಗೆ ಜನರಿಗೆ ಮೆಚ್ಚುಗೆ ಇತ್ತು. ಈ ಕಾರಣಕ್ಕಾಗಿ ಗೂಗಲ್ ಈಗ ಇತ್ತೀಚೆಗಷ್ಟೇ ‘Google Photos’ ವಿಭಾಗವನ್ನು ಗೂಗಲ್ ಪ್ಲಸ್‌ನಿಂದ ಪ್ರತ್ಯೇಕಿಸಿರುವುದು ಹೆಚ್ಚಿನವರಿಗೆ ತಿಳಿದಿರಬಹುದು. ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಮತ್ತು ಕಂಪ್ಯೂಟರ್‌ಗಳಿಂದಲೂ ಕೆಲಸ ಮಾಡಬಹುದಾದ ‘ಗೂಗಲ್ ಫೋಟೋಸ್’ಗೆ ಈಗ ಮತ್ತಷ್ಟು ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಈ ಉಚಿತ ಸೇವೆಯ ಹೊಸ ವಿಶೇಷತೆಯೆಂದರೆ, ಇದರಲ್ಲಿ ಅಪರಿಮಿತ (ಅನ್‌ಲಿಮಿಟೆಡ್) ಫೋಟೋ ಸಂಗ್ರಹಣೆಗೆ ಅವಕಾಶ ನೀಡಲಾಗಿದೆ. ಸ್ಮಾರ್ಟ್ ಫೋನ್, ಟ್ಯಾಬ್ಲೆಟ್‌ಗಳಿಗೆ ಆ್ಯಪ್ ಲಭ್ಯವಿದ್ದರೆ, ಕಂಪ್ಯೂಟರಿನಲ್ಲಿ photos.google.com ತಾಣಕ್ಕೆ ಹೋದರಾಯಿತು.
ಫೋನ್‌ನಿಂದ, ಕ್ಯಾಮೆರಾದಿಂದ ತೆಗೆದಿರುವ ಫೋಟೋ ಹಾಗೂ ವೀಡಿಯೊಗಳನ್ನು ಈಗ ಗೂಗಲ್ ಫೋಟೋಸ್ ಆನ್‌ಲೈನ್ ಸಂಗ್ರಹಣಾ ತಾಣದಲ್ಲಿ (ಕ್ಲೌಡ್‌ನಲ್ಲಿ) ಸೇವ್ ಮಾಡಿಟ್ಟುಕೊಂಡು ಬೇಕಾದಾಗ ನೋಡಬಹುದು. ಆದರೆ ಇಂಟರ್ನೆಟ್ ಸಂಪರ್ಕ ಬೇಕು ಮತ್ತು ಅದು ಕೂಡ ಅನ್‌ಲಿಮಿಟೆಡ್ ಡೇಟಾ ಪ್ಯಾಕ್ ಇದ್ದರೆ ಮತ್ತಷ್ಟು ಅನುಕೂಲ. ಸಂಗ್ರಹಣಾ ಸಾಮರ್ಥ್ಯ ಅನ್‌ಲಿಮಿಟೆಡ್ ಆಗಿರುವುದರಿಂದ, ನಿಮ್ಮ ಫೋನ್‌ನಲ್ಲಿ ನಿಮಗೆ ಫೋಟೋ ಅಥವಾ ವೀಡಿಯೊಗಳಿಂದಾಗಿ ಸ್ಟೋರೇಜ್ ಸಮಸ್ಯೆಗಳು ಬರುವ ಸಾಧ್ಯತೆ ಇರುವುದಿಲ್ಲ. ಈಗ ಜಾಸ್ತಿ ರೆಸೊಲ್ಯುಶನ್ ಇರುವ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆಯಲು ಹೆಚ್ಚಿನ ಸ್ಮಾರ್ಟ್ ಫೋನ್‌ಗಳು ಅವಕಾಶ ಮಾಡಿಕೊಡುತ್ತಿವೆ. ಅಪರಿಮಿತ ಸ್ಟೋರೇಜ್ ಬೇಕೆಂದಾದರೆ, 16 ಮೆಗಾಪಿಕ್ಸೆಲ್ ಸಾಮರ್ಥ್ಯಕ್ಕಿಂತ ಕಡಿಮೆಯ ಫೋಟೋ ಅಥವಾ 1080 ಪಿಕ್ಸೆಲ್ ಒಳಗಿರುವ ರೆಸೊಲ್ಯುಶನ್‌ನ ವೀಡಿಯೊಗಳನ್ನು ಮಾತ್ರ ಫೋಟೋ ಆ್ಯಪ್‌ನಲ್ಲಿ ಸೇರಿಸಬಹುದಾಗಿದೆ. ಇಲ್ಲವಾದಲ್ಲಿ, ಅದು ತಾನಾಗಿಯೇ ಈ ರೆಸೊಲ್ಯುಶನ್‌ಗಳಿಗೆ ಫೋಟೋ ಅಥವಾ ವೀಡಿಯೊಗಳನ್ನು ಕುಗ್ಗಿಸುತ್ತದೆ.
ವೃತ್ತಿಪರ ಫೋಟೋಗ್ರಾಫರ್‌ಗಳಿಗಾದ್ರೆ ಈ ರೆಸೊಲ್ಯುಶನ್ ಸಾಕಾಗದು. ಇದಕ್ಕಾಗಿ ಜಿಮೇಲ್‌ಗೆ ಲಿಂಕ್ ಆಗಿರುವ ಗೂಗಲ್ ಡ್ರೈವ್ ಬಳಸಬಹುದು. ಆದರೆ, ಪ್ರತಿಯೊಂದು ಜಿಮೇಲ್ ಖಾತೆಗೆ (ಜಿಮೇಲ್, ಗೂಗಲ್ ಪ್ಲಸ್, ಗೂಗಲ್ ಡ್ರೈವ್ ಸೇರಿದಂತೆ) ಇಲ್ಲಿ ಗರಿಷ್ಠ 15 ಜಿಬಿ ಸ್ಥಳಾವಕಾಶ ಮಾತ್ರ ಎಂಬುದು ನೆನಪಿರಲಿ. ಹೆಚ್ಚು ಸ್ಥಳಾವಕಾಶ ಬೇಕಿದ್ದರೆ ಮತ್ತು ಹಣ ಪಾವತಿಸಿದರೆ (ತಿಂಗಳಿಗೆ 10 ಡಾಲರ್ ಅಥವಾ ಸುಮಾರು 650 ರೂ.) 1 ಟೆರಾಬೈಟ್ (ಟಿಬಿ) ಸ್ಟೋರೇಜ್ ಸಿಗುತ್ತದೆ. ಕಡಿಮೆ ಸಾಕೆಂದಾದರೆ, ತಿಂಗಳಿಗೆ 2 ಡಾಲರ್ (ಸುಮಾರು 130 ರೂ.) ಕೊಟ್ಟರೆ 100 ಜಿಬಿ ಸ್ಟೋರೇಜ್ ಸಿಗುತ್ತದೆ.
ಗೂಗಲ್ ಫೋಟೋಸ್ ಅನುಕೂಲವೆಂದರೆ, ನಾವು ಅಪ್‌ಲೋಡ್ ಮಾಡಿದ ಫೋಟೋಗಳನ್ನು ಅದು ತಾನಾಗಿಯೇ ಗುರುತಿಸಿ, ಸ್ಥಳದ ಆಧಾರದಲ್ಲಿ ಅಥವಾ ಬೇರೇನಾದರೂ ವಿಷಯಗಳ (ಮದುವೆ, ಬರ್ತ್‌ಡೇ, ವಿಹಾರ ಇತ್ಯಾದಿ) ಆಧಾರದಲ್ಲಿ ಗುಂಪು ಮಾಡಿಟ್ಟುಕೊಳ್ಳುತ್ತದೆ. ಉದಾಹರಣೆಗೆ, ಮದುವೆಯ ಫೋಟೋಗಳನ್ನು ನೋಡಬೇಕೆಂದಿದ್ದರೆ Wedding ಅಂತ ಸರ್ಚ್ ಮಾಡಿದರೆ, ಮದುವೆಗೆ ಸಂಬಂಧಿಸಿದ ಎಲ್ಲ ಫೋಟೋಗಳನ್ನು ಅದು ನಿಮ್ಮೆದುರು ತಂದು ತೋರಿಸುತ್ತದೆ.
ಇದಲ್ಲದೆ, ಫೋಟೋವನ್ನು ತಾನಾಗಿಯೇ ಸುಂದರವಾಗಿಸುವ ತಂತ್ರಜ್ಞಾನ ಅದ್ಭುತವಾಗಿದೆ. ಎಡಿಟ್ ಮಾಡುವ ಐಕಾನ್ (ಪೆನ್ ಗುರುತು) ಕ್ಲಿಕ್ ಮಾಡಿದರೆ, Auto ಎಂಬ ಬಟನ್ ಒತ್ತಿದಾಗ, ಫೋಟೋ ಸುಂದರವಾಗಿ ಕಾಣಿಸುತ್ತದೆ. ಇಲ್ಲವೆಂದಾದರೆ, ನಾವೇ ಬ್ರೈಟ್‌ನೆಸ್, ಶಾರ್ಪ್‌ನೆಸ್, ಬೆಳಕು ಹೊಂದಿಸುವ ಆಯ್ಕೆಗಳು ಅಲ್ಲೇ ದೊರೆಯುತ್ತದೆ. ವೈವಿಧ್ಯಮಯ ಬಣ್ಣಗಳ ಕಾಂಬಿನೇಷನ್‌ನಲ್ಲಿ ನಿರ್ದಿಷ್ಟ ಚಿತ್ರ ಹೇಗೆ ಕಾಣಿಸುತ್ತದೆ ಎಂಬುದನ್ನೂ ತೋರಿಸಲಾಗುತ್ತದೆ. ನಮಗೆ ಬೇಕಾಗಿರುವುದನ್ನು ಆಯ್ಕೆ ಮಾಡಿಕೊಂಡು, ಸೇವ್ ಮಾಡಿಡಬಹುದು. ಇಷ್ಟೆಲ್ಲ ಆದ ಮೇಲೆ, ಇಲ್ಲಿಂದಲೇ ಫೇಸ್‌ಬುಕ್, ಟ್ವಿಟರ್ ಮತ್ತು ಗೂಗಲ್ ಪ್ಲಸ್‌ಗೆ ಶೇರ್ ಮಾಡಿಕೊಳ್ಳಬಹುದು.
ಸ್ಮಾರ್ಟ್ ಫೋನ್‌ನಲ್ಲಾದರೆ, ಗೂಗಲ್ ಫೋಟೋಸ್ ಆ್ಯಪ್‌ನಲ್ಲಿ ಫೋಟೋಗಳನ್ನು ಸೆಲೆಕ್ಟ್ ಮಾಡಿದಾಗ, ಆಲ್ಬಂ, ಮೂವೀ, ಆನಿಮೇಶನ್, ಕೊಲಾಜ್ ಮಾಡಬಹುದು. ಇಂಥದ್ದೇ ವಿಶಿಷ್ಟ ಕಾರಣಗಳಿಗಾಗಿ ಗೂಗಲ್ ಫೋಟೋಸ್ ಜನರಿಗೆ ಹೆಚ್ಚು ಆಪ್ತವಾಗಿದೆ. ಟ್ರೈ ಮಾಡಿ ನೋಡಿ.
ವಿಜಯ ಕರ್ನಾಟಕದಲ್ಲಿ ಮಾಹಿತಿ@ತಂತ್ರಜ್ಞಾನ- 128: ಅವಿನಾಶ್ ಬಿ. (01 ಜೂನ್ 2015)