Huawei Honor 10 lite Review: AI ಕ್ಯಾಮೆರಾದ ಅದ್ಭುತ ಫೋನ್

0
392

ಅವಿನಾಶ್ ಬಿ.

ಚೀನಾದ ಪ್ರಮುಖ ಮೊಬೈಲ್ ಬ್ರ್ಯಾಂಡ್‌ಗಳ ಸಾಲಿನಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹ್ಯುವೈ, ಹೊಸ ವರ್ಷಕ್ಕೆ ಭಾರತದಲ್ಲಿ ಹಾನರ್ 10 ಲೈಟ್ (Huawei Honor 10 lite) ಸ್ಮಾರ್ಟ್ ಫೋನ್ ಬಿಡುಗಡೆಗೊಳಿಸಿದೆ. ಜನವರಿ 20ರಿಂದ ಫ್ಲಿಪ್‌ಕಾರ್ಟ್ ಹಾಗೂ ಹಾನರ್ ಇಂಡಿಯಾ ವೆಬ್ ತಾಣಗಳಲ್ಲಿ ಖರೀದಿಗೆ ಲಭ್ಯ ಇರುವ ಈ ಫೋನನ್ನು ಸುಮಾರು ಎರಡು ವಾರ ಬಳಸಿ ನೋಡಿದೆ. ಇದು ಹೇಗಿದೆ? ಅತ್ಯಾಧುನಿಕ ವೈಶಿಷ್ಟ್ಯಗಳೆಲ್ಲವೂ ಇರುವ ಈ ಫೋನ್, ತನ್ನ ಸ್ಪೆಸಿಫಿಕೇಶನ್‌ಗಳಿಗಿಂತಲೂ ಕ್ಯಾಮೆರಾ ವೈಶಿಷ್ಟ್ಯಗಳಿಂದಾಗಿ, ವಿಶೇಷವಾಗಿ 24 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾದಿಂದಾಗಿ ಹೆಚ್ಚು ಗಮನ ಸೆಳೆದಿದೆ. ಫೋಟೋಗಳು ಮತ್ತು ಬ್ಯಾಟರಿ ಇದರ ಹೆಗ್ಗಳಿಕೆ.

ವಿನ್ಯಾಸ
6.21 ಇಂಚು (15.77 cm) ಸ್ಕ್ರೀನ್ ಗಾತ್ರ ಇದ್ದರೂ (ಸ್ಕ್ರೀನ್‌ನಲ್ಲಿ ಕರ್ಣ ರೇಖೆಯ ಅಂದರೆ, ಎಡ ಕೆಳ ತುದಿಯಿಂದ ಬಲ ಮೇಲ್ತುದಿವರೆಗಿನ ಉದ್ದ), ಲಂಬವಾಗಿರುವುದರಿಂದ ಒಂದೇ ಕೈಯಲ್ಲಿ ಹಿಡಿಯಲು ಹೆಚ್ಚು ಅನುಕೂಲಕರ. ಹಿಂಭಾಗದ ಕವಚವೇ ಇದರ ಪ್ಲಸ್ ಪಾಯಿಂಟ್‌ಗಳಲ್ಲೊಂದು. ಹೊಳೆಯುವ ಗಾಜಿನಂತೆ ಕಂಡರೂ ಇದು ಗಾಜಲ್ಲ. ಏಳು ಪದರಗಳು ಇದರಲ್ಲಿವೆ ಎಂದು ಕಂಪನಿ ಹೇಳಿಕೊಂಡಿದೆ. ಫೋನ್ ತೆಳುವಾಗಿದೆ ಮತ್ತು ನೋಡಲು ಪ್ರೀಮಿಯಂ ನೋಟ ಹೊಂದಿದೆ. ಎಡಭಾಗದಲ್ಲಿ ಪವರ್ ಹಾಗೂ ವಾಲ್ಯೂಮ್ ಬಟನ್‌ಗಳು, ಸ್ಕ್ರೀನ್‌ನ ಕೆಳ ಭಾಗದಲ್ಲಿ ಇಯರ್‌ಫೋನ್‌ಗಾಗಿ 3.5 ಮಿಮೀ ಜ್ಯಾಕ್, ಚಾರ್ಜಿಂಗ್ ಪೋರ್ಟ್, ಮೈಕ್ ಹಾಗೂ ಸ್ಪೀಕರ್‌ಗಳಿದ್ದರೆ, ಮೇಲ್ಭಾಗದಲ್ಲಿ ಸಿಮ್ ಕಾರ್ಡ್ ಟ್ರೇ ಇದೆ. ಸ್ಕ್ರೀನ್‌ನ ಮೇಲ್ಭಾಗದಲ್ಲಿ, ಇದುವರೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಂದಿರುವ ಫೋನ್‌ಗಳಲ್ಲಿಯೇ ಅತ್ಯಂತ ಪುಟ್ಟದಾದ ನಾಚ್ (ಡ್ಯೂ-ಡ್ರಾಪ್ ಅಂತ ಕಂಪನಿ ಕರೆದುಕೊಂಡಿದೆ. ಡಿಸ್‌ಪ್ಲೇ ಪರದೆಯ ಮೇಲೆ ಕ್ಯಾಮೆರಾಕ್ಕೆ ಮಾತ್ರ ಇರುವ ಜಾಗ ಇದು) ಇರುವುದರಿಂದಾಗಿ ಪೂರ್ಣವಾದ ಚಿತ್ರ ವೀಕ್ಷಣೆಗೆ ಹೆಚ್ಚು ಅನುಕೂಲ. ಬೇರೆ ಕೆಲವು ಫೋನ್‌ಗಳಲ್ಲಿ ಈ ನಾಚ್ ಎಂಬ ಭಾಗದಲ್ಲಿ ಸ್ಪೀಕರ್, ಪ್ರಾಕ್ಸಿಮಿಟಿ ಸೆನ್ಸರ್‌ಗಳೂ ಇರುತ್ತಿದ್ದವು. ಈಗಿನ ಫೋನ್‌ಗಳ ವಿಶೇಷತೆ ಎಂದರೆ ನಾಚ್ ಎಷ್ಟು ಸಾಧ್ಯವೋ ಅಷ್ಟು ಚಿಕ್ಕದಾಗಿಸುವುದು.

ಉಳಿದಂತೆ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್ ಇದ್ದು, ಹಗುರ ಇರುವುದರಿಂದ ಒಂದೇ ಕೈಯಲ್ಲಿ ಕಾರ್ಯಾಚರಿಸುವುದು ಸುಲಭವಾಗಿದೆ.

ಹಾರ್ಡ್‌ವೇರ್
24 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೋನಿ ಸೆನ್ಸರ್ ಇರುವ ಸೆಲ್ಫೀ ಕ್ಯಾಮೆರಾ ಇದರ ವಿಶೇಷತೆಗಳಲ್ಲೊಂದು. ವಿಮರ್ಶಿಸಲು ವಿಜಯ ಕರ್ನಾಟಕಕ್ಕೆ ಲಭ್ಯವಾಗಿರುವ ಫೋನ್ 4 ಜಿಬಿ RAM ಹಾಗೂ 64 ಜಿಬಿ ಇಂಟರ್ನಲ್ ಮೆಮೊರಿ ಹೊಂದಿದೆ. ಆಂಡ್ರಾಯ್ಡ್ ಪೈ (9.0) ಆಧಾರಿತ EMUI 9 ಆವೃತ್ತಿಯ ಕಾರ್ಯಾಚರಣಾ ವ್ಯವಸ್ಥೆ ಇದರಲ್ಲಿದೆ. 2340×1080 ರೆಸೊಲ್ಯುಶನ್ ಸ್ಕ್ರೀನ್ ಜತೆಗೆ, HiSilicon Kirin 710F ಚಿಪ್‌ಸೆಟ್ (ಸಿಪಿಯು) ಇದರಲ್ಲಿದೆ. ವೇಗವಾದ LPDDR4X RAM ಇರುವುದರಿಂದಾಗಿಯೋ ಏನೋ, ಹಲವಾರು ಆ್ಯಪ್‌ಗಳನ್ನು ಏಕಕಾಲದಲ್ಲಿ ತೆರೆದಿಡುವಾಗಲೂ ಯಾವುದೇ ಲ್ಯಾಗಿಂಗ್ (ನಿಧಾನಗತಿ, ಹ್ಯಾಂಗಿಂಗ್) ಗಮನಕ್ಕೆ ಬಂದಿಲ್ಲ.

ಡಿಜಿಟಲ್ ಬ್ಯಾಲೆನ್ಸ್
ಮೊಬೈಲ್ ಬಳಕೆ ಬಗ್ಗೆ ಜನರಲ್ಲಿ ಇತ್ತೀಚೆಗೆ ಜಾಗೃತಿ ಮೂಡುತ್ತಿರುವುದರಿಂದ ಅದಕ್ಕೆ ಸಂಬಂಧಿಸಿದ ಡಿಜಿಟಲ್ ಬ್ಯಾಲೆನ್ಸ್ ಎಂಬ ವೈಶಿಷ್ಟ್ಯ ಇದರಲ್ಲಿ ಅಳವಡಿಸಲಾಗಿದೆ. ಅಂದರೆ ನಾವು ಎಷ್ಟು ಹೊತ್ತು ಫೋನ್ ಬಳಸುತ್ತೇವೆ ಎಂಬುದರ ಮೇಲೆ ನಿಗಾ ಇರಿಸಿ, ಅದನ್ನು ನಿಯಂತ್ರಿಸಲು ನಮಗೆ ಅನುಕೂಲ ಮಾಡಿಕೊಳ್ಳಬಹುದು. ದಿನಕ್ಕೆ ಇಷ್ಟು ಸಮಯ ಮಾತ್ರ ಮೊಬೈಲ್ ಬಳಸುತ್ತೇನೆ ಅಂತ ಸ್ಕ್ರೀನ್ ಟೈಮ್ ಹೊಂದಿಸಿಟ್ಟುಕೊಂಡರೆ, ಆ ಸಮಯಕ್ಕೆ ಸ್ಕ್ರೀನ್ ಆಫ್ ಆಗಿ, ನೀವು ಮತ್ತೆ ಅನುಮತಿ ನೀಡಿದರೆ, ಅದನ್ನು ವಿಸ್ತರಿಸಬಹುದು. ಇದರಲ್ಲಿ ಆ್ಯಪ್‌ಗಳ ಮೇಲೂ (ಯೂಟ್ಯೂಬ್, ಫೇಸ್‌ಬುಕ್, ವಾಟ್ಸ್ಆ್ಯಪ್ ಇತ್ಯಾದಿ) ಸಮಯದ ಮಿತಿ ಹೇರಬಹುದು. ಸದ್ಯದ ಮಟ್ಟಿಗಂತೂ ಇದೊಂದು ಅತ್ಯುತ್ತಮ ವೈಶಿಷ್ಟ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದೇ ರೀತಿ ಬೆಡ್ ಟೈಮ್ ಎಂಬ ಆಯ್ಕೆಯ ಮೂಲಕ ಮಲಗುವ ಸಮಯವನ್ನು ಹೊಂದಿಸಿಟ್ಟುಕೊಂಡರೆ, ಪ್ರತಿ ದಿನ ಆ ಹೊತ್ತಿಗೆ ಸ್ಕ್ರೀನ್ ಕಪ್ಪು-ಬಿಳುಪಿಗೆ ಮಾರ್ಪಾಟಾಗುತ್ತದೆ ಮತ್ತು ಆ ಸಮಯದಲ್ಲಿ ಆ್ಯಪ್‌ಗಳನ್ನು ಬ್ಲಾಕ್ ಮಾಡುವ ಆಯ್ಕೆಯೂ ಇದರಲ್ಲಿದೆ.

ಬ್ಯಾಟರಿ
3400 mAh ಸಾಮರ್ಥ್ಯದ ಬ್ಯಾಟರಿ ಇದರಲ್ಲಿದೆ. ಆದರೆ, ಕಿರಿನ್ 710 ಪ್ರೊಸೆಸರ್ ಇರುವುದರಿಂದ ಇದರಲ್ಲಿ ಬ್ಯಾಟರಿಯ ಬಾಳಿಕೆಯು ಸ್ವಲ್ಪಮಟ್ಟಿಗೆ ಹೆಚ್ಚು. ಫೇಸ್‌ಬುಕ್, ವೀಡಿಯೋ ಹಾಗೂ ಕೆಲವು ಗೇಮ್ಸ್ ಬಳಸುವಾಗ (ಎಲ್ಲ ಸ್ಮಾರ್ಟ್ ಮೊಬೈಲ್‌ಗಳಂತೆ) ಬ್ಯಾಟರಿ ಹೆಚ್ಚು ಹೀರಿಕೊಳ್ಳುತ್ತದೆ. ಅವುಗಳನ್ನು ಬಿಟ್ಟು, ಕರೆ, ಸಂದೇಶ, ವಾಟ್ಸ್ಆ್ಯಪ್ ಮತ್ತು ಆಡಿಯೋ ಪ್ಲೇ ಮುಂತಾದ ಸಾಮಾನ್ಯ ಕನಿಷ್ಠ ಆ್ಯಪ್‌ಗಳ ಬಳಕೆಯಿದ್ದರೆ, ದಿನಕ್ಕೆ ಒಮ್ಮೆ ಚಾರ್ಜ್ ಮಾಡಿದರೆ ಸಾಕಾಗುತ್ತದೆ.

ಕ್ಯಾಮೆರಾ
24 ಮೆಗಾಪಿಕ್ಸೆಲ್ ಸೋನಿ ಸೆನ್ಸರ್ ಇರುವ ಸೆಲ್ಫೀ ಕ್ಯಾಮೆರಾ ಹಾಗೂ ಹಿಂಭಾಗದಲ್ಲಿ 13 MP + 2 MP (ಡ್ಯುಯಲ್) ಕ್ಯಾಮೆರಾಗಳು ಉತ್ತಮ ಫೋಟೋಗ್ರಫಿಗೆ ಅನುಕೂಲ ಮಾಡಿಕೊಡುತ್ತಿವೆ. ವಿಶೇಷತಃ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಬಳಕೆಯಾಗುವ ಎರಡೂ ಕ್ಯಾಮೆರಾಗಳು ವಿಭಿನ್ನ ದೃಶ್ಯಗಳನ್ನು ಗುರುತಿಸಿ, ಅದಕ್ಕೆ ತಕ್ಕಂತೆ ಸ್ವಯಂಚಾಲಿತವಾಗಿ ಫೋಟೋಗಳನ್ನು ತೆಗೆಯಲು ನೆರವು ನೀಡುತ್ತದೆ. ಅದೇ ರೀತಿ, ಸೆಲ್ಫೀ ಕ್ಯಾಮೆರಾದಲ್ಲೂ 8 ದೃಶ್ಯಗಳ (ರಾತ್ರಿ ಮೋಡ್, ಬೀಚ್, ಸ್ನೋ, ಸ್ಕೈ, ಗಿಡ, ಹೂವು, ಕೊಠಡಿ, ವೇದಿಕೆ) ಮೋಡ್‌ಗಳು ಉತ್ತಮ ಫೋಟೋಗಳನ್ನು ತೆಗೆಯಬಹುದು. ಮುಂಭಾಗದ ಕ್ಯಾಮೆರಾದಲ್ಲಿ ಎಐ ಆಧಾರಿತ ಮುಖ ಗುರುತಿಸುವಿಕೆ ವೈಶಿಷ್ಟ್ಯವೂ ಇದ್ದು, ಫೋಟೋ ತೆಗೆದುಕೊಳ್ಳುತ್ತಿರುವವರ ವಯಸ್ಸು, ಲಿಂಗವನ್ನೂ ಅಂದಾಜು ಮಾಡಬಲ್ಲುದು. ಸೆಲ್ಫೀ ಕ್ಯಾಮೆರಾದಲ್ಲಿರುವ ಪೋರ್ಟ್ರೇಟ್ ಮೋಡ್, ಚಿತ್ರದ ಫ್ರೇಮ್‌ನಲ್ಲಿರುವ ಎಲ್ಲ ಮುಖಗಳನ್ನೂ ಫೋಕಸ್ ಮಾಡುತ್ತದೆ. ಹೀಗಾಗಿ ಚಿತ್ರದಲ್ಲಿ ಮುಖ ಬ್ಲರ್ ಆಗಿ ಮಿಸ್ ಆಗುವ ಸಾಧ್ಯತೆಗಳು ಕಡಿಮೆ. ಕಡಿಮೆ ಬೆಳಕಿನಲ್ಲಿಯೂ ಫೋಟೋದಲ್ಲಿ ಉತ್ತಮ ಡೀಟೇಲ್ಸ್ ಲಭ್ಯವಾಗಿದೆ.

ಕ್ಯಾಮೆರಾವನ್ನು ಯಾವುದಾದರೂ ವಸ್ತುವಿನ ಮುಂದೆ ಹಿಡಿದರೆ, ಅದನ್ನು ಶಾಪಿಂಗ್ ಮಾಡುವ ತಾಣಗಳನ್ನೂ ಈ ಎಐ ಕ್ಯಾಮೆರಾ ತೋರಿಸುತ್ತದೆ. ಕ್ಯಾಲೊರಿ ಪತ್ತೆ, ಸ್ಮಾರ್ಟ್ ಫೇಸ್ ಅನ್‌ಲಾಕ್ ಕೂಡ ಇದರಲ್ಲಿದೆ.

ವೈಶಿಷ್ಟ್ಯಗಳು
ಡ್ಯುಯಲ್ VoLTE (ಎರಡೂ ಸಿಮ್ ಕಾರ್ಡ್‌ಗಳಲ್ಲಿ VoLTE ಬಳಸಬಹುದು), ಪೇಟಿಎಂ ಬಳಕೆದಾರರು ಒಂದೇ ಕ್ಲಿಕ್‌ನಲ್ಲಿ ಹಣ ಪಾವತಿ ಮಾಡುವ ಆಯ್ಕೆ ಇದರಲ್ಲಿದೆ. ಇದರಲ್ಲಿರುವ ಪಾರ್ಟಿ ಮೋಡ್ ಬಳಸಿ, ಕನಿಷ್ಠ 6 ಹಾನರ್ ಸಾಧನಗಳನ್ನು ಪರಸ್ಪರ ಸಂಪರ್ಕಿಸಿ ಏಕಕಾಲದಲ್ಲಿ ಒಂದೇ ಹಾಡನ್ನು ಆರು ಮಂದಿಯೂ ತಮ್ಮ ತಮ್ಮ ಸಾಧನಗಳಲ್ಲಿ ಕೇಳಬಹುದು. ವಾಹನ ಚಾಲನೆಯ ವೇಳೆ ಬಳಸುವ ರೈಡ್ ಮೋಡ್ ಉಪಯೋಗಿಸಿದರೆ, ಕರೆ ಅಥವಾ ಸಂದೇಶಗಳ ಅನಗತ್ಯ ನೋಟಿಫಿಕೇಶನ್, ಸದ್ದು ಇಲ್ಲವಾಗುತ್ತದೆ.

ಒಟ್ಟಾರೆ ಹೇಗಿದೆ…
4 ಜಿಬಿ RAM ಹಾಗೂ 64 ಜಿಬಿ ಇಂಟರ್ನಲ್ ಮೆಮೊರಿ ಇರುವ ಮಾಡೆಲ್‌ನಲ್ಲಿ ಹಲವು ಆ್ಯಪ್‌ಗಳನ್ನು ಏಕಕಾಲಕ್ಕೆ ಬಳಸಿದಾಗ, ಹ್ಯಾಂಗಿಂಗ್, ಆ್ಯಪ್ ಕ್ರ್ಯಾಶ್ ಮುಂತಾದ ಯಾವುದೇ ತೊಡಕುಗಳು ಎದುರಾಗಿಲ್ಲ. ಕಾರ್ಯಾಚರಣೆಯು ವೇಗವಾಗಿಯೂ, ಸುಲಲಿತವಾಗಿಯೂ ಇತ್ತು. ಹೊರಾಂಗಣ ಚಿತ್ರಗಳು ಅದ್ಭುತ ಸ್ಪಷ್ಟತೆಯೊಂದಿಗೆ ಮೂಡಿಬಂದಿವೆ. 13,999 ರೂ.ಗೆ ಈ ಅತ್ಯಾಧುನಿಕ ವೈಶಿಷ್ಟ್ಯಗಳುಳ್ಳ ಈ ಫೋನ್ ಹಣಕ್ಕೆ ತಕ್ಕ ಮೌಲ್ಯ (Value For Money) ಎನ್ನಬಹುದು.

  • ನಿಮ್ಮ ಅವಗಾಹನೆಗಾಗಿ, ಮುಖ್ಯ ವೈಶಿಷ್ಟ್ಯಗಳು
  • ಸ್ಕ್ರೀನ್ ಗಾತ್ರ: 6.21″ (15.77 cm)
  • ಸ್ಕ್ರೀನ್ ರೆಸೊಲ್ಯುಶನ್ 1080 x 2340 ಪಿಕ್ಸೆಲ್ಸ್
  • ಕಾರ್ಯಾಚರಣಾ ವ್ಯವಸ್ಥೆ: ಆಂಡ್ರಾಯ್ಡ್ 9.0 (Pie)
  • ಪ್ರೊಸೆಸರ್: ಒಕ್ಟಾ ಕೋರ್ (2.2 GHz, ಕ್ವಾಡ್ ಕೋರ್, ಕೋರ್ಟೆಕ್ಸ್ A73 + 1.7 GHz, ಕ್ವಾಡ್ ಕೋರ್ ಕೋರ್ಟೆಕ್ಸ್ A53)
  • ಬ್ಯಾಟರಿ: 3400 mAh.
  • ಹಿಂಭಾಗದ ಕ್ಯಾಮೆರಾ 13 MP + 2 MP (ಡ್ಯುಯಲ್ ಕ್ಯಾಮೆರಾ)
  • ಮುಂಭಾಗದ ಕ್ಯಾಮೆರಾ: 24 ಮೆಗಾಪಿಕ್ಸೆಲ್
  • ಸೆನ್ಸರ್‌ಗಳು: ಲೈಟ್ ಸೆನ್ಸರ್, ಪ್ರಾಕ್ಸಿಮಿಟಿ ಸೆನ್ಸರ್, ಆಕ್ಸೆಲೆರೋಮೀಟರ್, ಕಂಪಾಸ್, ಫಿಂಗರ್‌ಪ್ರಿಂಟ್ ಸೆನ್ಸರ್
  • Mali-G51 MP4 GPU.
  • ಸ್ಟೋರೇಜ್: 64 GB (512 GBವರೆಗೆ ವಿಸ್ತರಿಸಬಹುದು)
  • ಗಾತ್ರ: 7.9 mm ದಪ್ಪ ಹಾಗೂ 162 ಗ್ರಾಂ ತೂಕ.
  • ಡ್ಯುಯಲ್ ಸಿಮ್, 4G VoLTE
  • 19.5:9 ಆಸ್ಪೆಕ್ಟ್ ಅನುಪಾತ, ಬೆಝೆಲ್ ರಹಿತ ಡಿಸ್‌ಪ್ಲೇ, ಕೆಪಾಸಿಟಿವ್ ಟಚ್‌ಸ್ಕ್ರೀನ್

ರಿವ್ಯೂ: ವಿಜಯ ಕರ್ನಾಟಕದಲ್ಲಿ

LEAVE A REPLY

Please enter your comment!
Please enter your name here