ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಬಿಲ್ಟ್ ಕನ್ನಡ ಟೈಪಿಂಗ್ ತಂತ್ರಾಂಶ

0
706

ಮಾಹಿತಿ@ತಂತ್ರಜ್ಞಾನ: ವಿಕ ಅಂಕಣ-52, 16 ಸೆಪ್ಟೆಂಬರ್ 2013
ಸ್ಮಾರ್ಟ್‌ಫೋನ್‌ಗಳ ಬಗ್ಗೆ ಭಾರತೀಯರಿಗೆ ಆಸಕ್ತಿ/ಆಕರ್ಷಣೆ ಹೆಚ್ಚಾಗುತ್ತಿರುವುದನ್ನು ಅಗ್ಗದ ಫೋನ್ ತಯಾರಕ ಕಂಪನಿಗಳು ಸರಿಯಾಗಿಯೇ ಮನಗಂಡಿವೆ. ಬ್ರ್ಯಾಂಡೆಡ್ ಫೋನ್‌ಗಳ ಬೆಲೆಯಿಂದಾಗಿ ಕಂಗೆಟ್ಟಿರುವ ಗ್ರಾಹಕರಿಗೆ ದೇಶೀ ಕಂಪನಿಗಳು ಸಾಕಷ್ಟು ವೈಶಿಷ್ಟ್ಯಗಳನ್ನು ಕಡಿಮೆ ದರದಲ್ಲಿ ನೀಡುತ್ತಾ ಆಕರ್ಷಿಸುತ್ತಿವೆ. ಭಾರತೀಯರಿಗೆ ತಮ್ಮ ಭಾಷೆಯ ಮೇಲೆ ಅಭಿಮಾನ ಹೆಚ್ಚು ಎಂಬುದನ್ನು ಅವುಗಳು ತಿಳಿದುಕೊಂಡಷ್ಟು ಬ್ರ್ಯಾಂಡೆಡ್ ಕಂಪನಿಗಳು ಅರ್ಥ ಮಾಡಿಕೊಂಡಂತಿಲ್ಲ. ನಮ್ಮ ನಮ್ಮ ಮಾತೃ ಭಾಷೆಯಲ್ಲೇ (ನಮಗಾದರೆ ಕನ್ನಡ) ಓದಬೇಕು ಮತ್ತು ಬರೆಯುವಂತಾಗಬೇಕು ಎಂಬ ಭಾರತೀಯರ ತುಡಿತವನ್ನು ಮನಗಂಡ ಸ್ಥಳೀಯ ಕಂಪನಿಗಳು ಇದಕ್ಕೆ ಪೂರಕವಾಗಿ ಕೆಲಸ ಮಾಡಿವೆ ಎಂಬುದಕ್ಕೆ ಒಂದು ಉದಾಹರಣೆ ಇಲ್ಲಿದೆ.

ದೊಡ್ಡ ದೊಡ್ಡ ಮೊಬೈಲ್ ಫೋನ್ ತಯಾರಕ ಸಂಸ್ಥೆಗಳು ಮಾಡದೇ ಇರುವುದನ್ನು ಇಂಟೆಕ್ಸ್ ಎಂಬ ಎಲೆಕ್ಟ್ರಾನಿಕ್ಸ್ ತಯಾರಕ ತಂತ್ರಜ್ಞಾನ ಸಂಸ್ಥೆಯೊಂದು ಮಾಡಿ ತೋರಿಸಿದೆ. ಅದರ ಕೆಲವು ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯುಳ್ಳ (ಆಪರೇಟಿಂಗ್ ಸಿಸ್ಟಂ) ಸ್ಮಾರ್ಟ್‌ಫೋನ್‌ಗಳಲ್ಲಿ ಕನ್ನಡ ಸಹಿತ ಭಾರತದ ಒಟ್ಟು 17 ಭಾಷೆಗಳಲ್ಲಿ ಟೈಪ್ ಮಾಡುವ ತಂತ್ರಾಂಶವು ಇನ್-ಬಿಲ್ಟ್ ಆಗಿಯೇ ಬರುತ್ತಿದೆ ಎಂಬುದು ತಿಳಿದದ್ದೇ ಅದನ್ನು ಕೊಂಡುಕೊಂಡ ಬಳಿಕ.

ಈ ಅಪ್ಲಿಕೇಶನ್ ಹೆಸರು “ಮಾತೃಭಾಷಾ”. ನನಗೆ ತಿಳಿದ ಮಟ್ಟಿಗೆ ಈ ಆ್ಯಪ್ ಸದ್ಯಕ್ಕೆ ಬೇರೆ ಯಾವುದೇ ಮೊಬೈಲ್/ಸ್ಮಾರ್ಟ್‌ಫೋನ್‌ಗಳಿಗೆ ಲಭ್ಯವಿಲ್ಲ.

ಈ ಕನ್ನಡ ಕೀಬೋರ್ಡ್ ಉಳಿದೆಲ್ಲ ಕೀಬೋರ್ಡ್ ಶೈಲಿಗಳಿಗಿಂತ (ಟ್ರಾನ್ಸ್‌ಲಿಟರೇಶನ್/ಕೆಜಿಪಿ/ಇನ್‌ಸ್ಕ್ರಿಪ್ಟ್ ಇತ್ಯಾದಿ) ವಿಭಿನ್ನ. ಯಾವುದೇ ಒಂದು ವ್ಯಂಜನಾಕ್ಷರವನ್ನು ಒತ್ತಿದರೆ, ಅದು ಸ್ವರಾಕ್ಷರದೊಂದಿಗೆ ಕೂಡಿಕೊಂಡು ಆಗುವ ಗುಣಿತಾಕ್ಷರಗಳೆಲ್ಲವೂ ಕೀಬೋರ್ಡ್ ಮೇಲೆ ಪ್ರದರ್ಶಿತವಾಗುತ್ತದೆ. ಉದಾ. ಕ ಎಂಬ ಕೀಲಿ ಒತ್ತಿದರೆ, ಅದರ ಕಾಗುಣಿತಾಕ್ಷರಗಳಾದ ಕಾ, ಕಿ, ಕೀ, ಕು, ಕೂ…. ಹೀಗೆ ಎಲ್ಲವೂ ಪ್ರದರ್ಶಿತಗೊಳ್ಳುತ್ತವೆ. ಎಲ್ಲ ವ್ಯಂಜನಾಕ್ಷರಗಳಿಗೂ ಈ ವ್ಯವಸ್ಥೆ ಇದೆ. ಹೀಗಾಗಿ ವ್ಯಂಜನಗಳನ್ನು ಒತ್ತಿದ ಬಳಿಕ ಸ್ವರಾಕ್ಷರದ ಕೂಡಿಕೆಗಳಿಗಾಗಿ ತಡಕಾಡಬೇಕಾದ ಪ್ರಮೇಯ ಇಲ್ಲಿರುವುದಿಲ್ಲ.

ಈ ಸ್ಮಾರ್ಟ್‌ಫೋನ್‌ನಲ್ಲಿ ಕನ್ನಡ (ಅಥವಾ ಬೇರಾವುದೇ ಭಾರತೀಯ) ಭಾಷೆಯ ಕೀಬೋರ್ಡ್ ‘ಮಾತೃಭಾಷಾ’ ಎನೇಬಲ್ ಮಾಡಬೇಕಿದ್ದರೆ ನೀವು ಮಾಡಬೇಕಾದುದಿಷ್ಟು: ಅದರ ಸೆಟ್ಟಿಂಗ್ಸ್ ಪುಟಕ್ಕೆ ಹೋಗಿ. ಲ್ಯಾಂಗ್ವೇಜ್ ಆಂಡ್ ಇನ್‌ಪುಟ್ಸ್ ಎಂದಿರುವಲ್ಲಿ ಕ್ಲಿಕ್ ಮಾಡಿ, ಡೀಫಾಲ್ಟ್ ಅಂತ ಇರುವಲ್ಲಿ ಕನ್ನಡ ಆಯ್ಕೆ ಮಾಡಿಕೊಳ್ಳಿ.

ಯಾವುದೇ ಎಸ್ಎಂಎಸ್/ಇಮೇಲ್ ಅಥವಾ ಇನ್ಯಾವುದೇ ಸಂದೇಶ ಬರೆಯಬೇಕಿದ್ದರೆ, ಸ್ಕ್ರೀನ್ ಮೇಲೆ ಕೀಬೋರ್ಡ್ ಕಾಣಿಸಿಕೊಳ್ಳುತ್ತದೆ. ಅಲ್ಲಿ ಬಲಭಾಗದಲ್ಲಿ ‘ಕನ್ನ’ ಎಂಬ ಬಟನ್ ಕ್ಲಿಕ್ ಮಾಡಿದರೆ, ಕನ್ನಡದಲ್ಲಿ ಟೈಪ್ ಮಾಡಬಹುದು. ಕನ್ನಡ ಆ್ಯಕ್ಟಿವ್ ಆದ ಬಳಿಕ ಅದೇ ಕೀಲಿಯು ABC ಆಗಿ ಪರಿವರ್ತಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಇಂಗ್ಲಿಷ್ ಟೈಪ್ ಮಾಡಬಹುದು.

ಓದಲು ತೀರಾ ಕಷ್ಟವಾಗುವ, ಅಥವಾ ಓದುವುದೇ ಬೇಡ ಅನ್ನಿಸುವ ರೀತಿಯಲ್ಲಿ ಬರೆಯಲಾಗುವ ಕಂಗ್ಲಿಷ್ (ಇಂಗ್ಲಿಷ್ ಲಿಪಿಯಲ್ಲಿ ಕನ್ನಡ) ಭಾಷೆಗೆ ತಿಲಾಂಜಲಿ ನೀಡುವ ನಿಟ್ಟಿನಲ್ಲಿ ಇದು ಕೂಡ ಒಂದು ಪ್ರಮುಖ ಹೆಜ್ಜೆ ಎಂದುಕೊಳ್ಳಬಹುದು. ಇಂಟೆಕ್ಸ್ ಕಂಪನಿಯ ಆಕ್ವಾ ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಈ ವ್ಯವಸ್ಥೆ ಲಭ್ಯವಿದೆ. ಈ ಕೀಬೋರ್ಡನ್ನು ಬಳಸಿ, ಫೇಸ್‌ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ, ಅದೇ ರೀತಿ ವಿಜಯ ಕರ್ನಾಟಕ ಡಾಟ್ ಕಾಂ ತಾಣದಲ್ಲಿನ ಸುದ್ದಿ/ಲೇಖನಗಳಿಗೆ ನಿಮ್ಮ ಅನಿಸಿಕೆಗಳನ್ನು ಕೂಡ ಅಚ್ಚ ಕನ್ನಡದಲ್ಲಿ ಪ್ರಕಟಿಸಬಹುದು. ಕನ್ನಡ ಮಾತ್ರವಲ್ಲದೆ, ನಿಮಗೆ ಬೇರಾವುದೇ ಭಾಷೆಗಳು ಗೊತ್ತಿದ್ದರೆ, ಆಯಾ ಭಾಷೆಯ ಸ್ನೇಹಿತರೊಂದಿಗೆ ವ್ಯವಹರಿಸಲು ಈ ಕೀಬೋರ್ಡನ್ನು ಬಳಸಬಹುದು. ಹಿಂದಿ, ಉರ್ದು, ತಮಿಳು, ಬಂಗಾಳಿ, ಅಸ್ಸಾಮೀಸ್, ಪಂಜಾಬಿ, ಗುಜರಾತಿ, ಸಂಸ್ಕೃತ, ಮೈಥಿಲಿ, ಮರಾಠಿ, ಬೋಡೋ, ಸಂತಾಲಿ, ಮಣಿಪುರಿ, ಸಿಂಧಿ, ಡೋಗ್ರಿ, ಕೊಂಕಣಿ, ನೇಪಾಳಿ, ಮಲಯಾಳಂ, ಒಡಿಯಾ ಮತ್ತು ತೆಲುಗು ಭಾಷೆಗಳ ಕೀಬೋರ್ಡ್‌ಗಳು ಇಲ್ಲಿ ಲಭ್ಯ ಇವೆ.

ಮೊಬೈಲ್ ಫೋನ್ ದಿಗ್ಗಜ ಸಂಸ್ಥೆಗಳೇ ಒದಗಿಸದ ಮತ್ತು ಕೇವಲ ಹೊರಗಿನ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಿದರೆ ಮಾತ್ರವೇ ಕನ್ನಡ ಟೈಪಿಂಗ್ ಅವಕಾಶ ನೀಡುವ ಸ್ಮಾರ್ಟ್‌ಫೋನ್‌ಗಳ ನಡುವೆ, ಬಳಕೆಗೆ ಸರಳವೂ ಆಗಿರುವ ಕೀಬೋರ್ಡ್ ತಂತ್ರಾಂಶವನ್ನು ಅಷ್ಟೇನೂ ಹೆಸರು ಮಾಡದ ಕಂಪನಿಯೊಂದು ತನ್ನ ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಿಯೇ ನೀಡುತ್ತದೆ ಎಂಬುದು ಬ್ರ್ಯಾಂಡೆಡ್ ಕಂಪನಿಗಳು ಎಚ್ಚೆತ್ತುಕೊಳ್ಳುವಂತೆ ಮಾಡಬೇಕಾದ ಕರೆಗಂಟೆಯೂ ಹೌದು.

LEAVE A REPLY

Please enter your comment!
Please enter your name here