ಫೇಸ್‌ಬುಕ್‌ನಲ್ಲಿ ವಹಿಸಲೇಬೇಕಾದ ಎಚ್ಚರಿಕೆ. ಯಾವತ್ತೂ ಕೂಡ ಅಶ್ಲೀಲ ವೀಡಿಯೋಗಳ ಲಿಂಕ್‌ಗಳನ್ನು ಕ್ಲಿಕ್ ಮಾಡಲೇಬೇಡಿ. ಇದನ್ನು ನಮ್ಮ ಸಾಮಾಜಿಕ ಜಾಲ ತಾಣದ ನಿಯಮಗಳಲ್ಲಿ ಒಂದನ್ನಾಗಿಸಿಕೊಳ್ಳುವುದಷ್ಟೇ ಅಲ್ಲ, ಇದರ ಹಿಂದೆ ಮತ್ತೊಂದು ಬಲುದೊಡ್ಡ ಕಾರಣವೂ ಇದೆ. ಈಗಾಗಲೇ ನಿಮ್ಮ ಸ್ನೇಹಿತರ ಬಳಗದಲ್ಲಿ ಅಶ್ಲೀಲ ಚಿತ್ರಗಳ ವೀಡಿಯೋಗಳಿರುವುದು ಹಾಗೂ ಅದಕ್ಕೆ ನಿಮ್ಮನ್ನು ಟ್ಯಾಗ್ ಮಾಡಿರುವುದರಿಂದ ಸಾಕಷ್ಟು ಮಂದಿ ಕಸಿವಿಸಿ ಅನುಭವಿಸಿರಬಹುದು. ನಿಮ್ಮ ಸ್ನೇಹಿತರು ಅಂಥವರಿರಲಾರರು ಎಂಬ ಬಗ್ಗೆ ನಿಮಗೆ ಸ್ಪಷ್ಟ ಅರಿವಿದ್ದರೂ, ಆತ/ಆಕೆ ಹಾಗೆ ಮಾಡಿದರಲ್ಲಾ ಎಂದು ಅಚ್ಚರಿ ಪಡುತ್ತೀರಿ.
ಇದರ ಹಿಂದೆ ಮಾಲ್‌ವೇರ್‌ನ ಕೈಚಳಕವಿದೆ. ಯಾರೋ ಪುಂಡುಪೋಕರಿಗಳು ಇಂಥಾ ಮಾಲ್‌ವೇರ್‌ಗಳನ್ನು ಫೇಸ್‌ಬುಕ್‌ನೊಳಗೂ ಛೂ ಬಿಟ್ಟಿದ್ದಾರೆ. ಕೆಲವು ದಿನಗಳಿಂದ ಹಲವರ ಟೈಮ್‌ಲೈನ್‌ಗಳಲ್ಲಿ ಈ ರೀತಿಯ ಸಾಕಷ್ಟು ಅಶ್ಲೀಲ ವೀಡಿಯೋಗಳು ಹರಿದಾಡುತ್ತಿದ್ದವು. ಇದನ್ನು ಕ್ಲಿಕ್ ಮಾಡಿದರೆ ಸಾಕು, ಈ ವೈರಸ್ ಹರಡುತ್ತದೆ. ಇದು ಕ್ಲಿಕ್ ಮೂಲಕ ಹರಡುವ ಸಾಂಕ್ರಾಮಿಕ ರೋಗವಿದ್ದಂತೆ.
ಉದಾಹರಣೆಗೆ, ಫೇಸ್‌ಬುಕ್‌ನಲ್ಲಿ ಈ ಮಾಲ್‌ವೇರ್ ಒಂದು ಫ್ಲ್ಯಾಶ್ ಅಪ್‌ಡೇಟ್ ರೂಪದಲ್ಲಿ ಅಡಗಿ ಕುಳಿತಿರುತ್ತದೆ. ಸಾಮಾನ್ಯವಾಗಿ ನಿಮ್ಮ ಸ್ನೇಹಿತರೊಬ್ಬರು ತಮ್ಮ ಟೈಮ್‌ಲೈನ್‌ನಲ್ಲಿ ಅಶ್ಲೀಲ ವೀಡಿಯೋ ಒಂದನ್ನು ಶೇರ್ ಮಾಡಿರುತ್ತಾರೆ. ನೀವದನ್ನು ಕ್ಲಿಕ್ ಮಾಡುತ್ತೀರಿ (ಮಾಡಲೇಬಾರದು). ಆಗ ವೀಡಿಯೋ ಪ್ಲೇ ಆಗತೊಡಗುತ್ತದೆ. ಆರಂಭದ ಕೆಲವು ಸೆಕೆಂಡುಗಳಲ್ಲಿ ಏನೂ ಆಗುವುದಿಲ್ಲ. ಕೆಲವು ಸೆಕೆಂಡು ಕಳೆದ ಬಳಿಕ ವೀಡಿಯೋ ಕಾಣಿಸುವುದಿಲ್ಲ, ವೀಡಿಯೋ ನೋಡಬೇಕಿದ್ದರೆ ನೀವು ಫ್ಲ್ಯಾಶ್ ಅಪ್‌ಡೇಟ್ ಒಂದನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಪಾಪ್ಅಪ್ ವಿಂಡೋದಲ್ಲಿ ಸೂಚನೆ ಪ್ರದರ್ಶನವಾಗುತ್ತದೆ.
ಅಪ್‌ಡೇಟ್ ಮಾಡಿಕೊಳ್ಳಲೆಂದು ನೀವು ಅದನ್ನು ಕ್ಲಿಕ್ ಮಾಡಿದರೆ ಮುಗೀತು, ಟ್ರೋಜನ್ ವೈರಸ್ ಒಂದು ನಿಮ್ಮ ಕಂಪ್ಯೂಟರನ್ನು ಹೈಜಾಕ್ ಮಾಡಬಹುದು, ನಿಮ್ಮ ಕೀಬೋರ್ಡ್ ಮತ್ತು ಮೌಸ್ ಮೇಲೆ ಅದು ನಿಯಂತ್ರಣ ಸಾಧಿಸಬಲ್ಲುದು.
ಈ ರೀತಿ ವೈರಸ್ ಸೋಂಕು ತಗುಲಿದರೆ, ಇದೇ ಮಾಲ್‌ವೇರ್ ನಿಮ್ಮ ಫೇಸ್‌ಬುಕ್ ಗೋಡೆಯಲ್ಲಿ ಅಶ್ಲೀಲ ತಾಣಗಳ ಲಿಂಕ್‌ಗಳನ್ನು ಪೋಸ್ಟ್ ಮಾಡುತ್ತಾ ಹೋಗುತ್ತದೆ ಮತ್ತು ಪ್ರತಿ ಬಾರಿಯೂ ಕನಿಷ್ಠ 20 ಸ್ನೇಹಿತರನ್ನು ಟ್ಯಾಗ್ ಮಾಡುತ್ತಾ ಹೋಗುತ್ತದೆ. ಅವೆಲ್ಲವೂ ನಿಮ್ಮ ಪ್ರೊಫೈಲ್‌ನಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳುತ್ತದೆ.
ಈಗಾಗಲೇ ಹಲವರು ಈ ಪರಿಸ್ಥಿತಿಯನ್ನು ಎದುರಿಸಿರಬಹುದು. ಹೀಗಾಗಿ ಆತ್ಮ ಸಂಯಮವೇ ಇದಕ್ಕಿರುವ ಮದ್ದು. ಫೇಸ್‌ಬುಕ್‌ನಲ್ಲಿ ಅಶ್ಲೀಲ ವೀಡಿಯೋ ಚಿತ್ರಗಳನ್ನು ಕ್ಲಿಕ್ ಮಾಡುವುದರಿಂದ ದೂರವಿರಬೇಕೆಂಬುದು ಮೂಲಭೂತ ನಿಯಮ.
-ನೆಟ್ಟಿಗ (ವಿಕದಲ್ಲಿ)