ನಿಮ್ಮ ಡೆಸ್ಕ್‌ಟಾಪ್ ಕ್ಲೀನ್ ಇರಲಿ

2
837

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ: ಮೇ 19, 2014
ಸದಾ ಕಾಲ ನೀವು ಕಂಪ್ಯೂಟರ್ ಮುಂದೆಯೇ ಕೂರುತ್ತಾ ಕೆಲಸ ಮಾಡುವವರಾದರೆ ನಿಮ್ಮ ಕೆಲಸ ಕಾರ್ಯಗಳನ್ನು ಎಷ್ಟರ ಮಟ್ಟಿಗೆ ಅಚ್ಚುಕಟ್ಟಾಗಿ, ಸಂಘಟಿತವಾಗಿ ಮತ್ತು ಯೋಜಿತ ರೀತಿಯಲ್ಲಿ ಮಾಡುತ್ತೀರಿ ಎಂಬುದನ್ನು ನಿಮ್ಮ ಕಂಪ್ಯೂಟರ್ ಪರದೆಯ ಡೆಸ್ಕ್‌ಟಾಪ್ ಹೇಳುತ್ತದೆ. ಡೆಸ್ಕ್‌ಟಾಪ್‌ನಲ್ಲೇ ಸಾಕಷ್ಟು ಫೈಲ್‌ಗಳನ್ನು ಸೇವ್ ಮಾಡುತ್ತೀರೆಂದಾದರೆ, ಒಂದೋ ನೀವು ಬಿಡುವಿಲ್ಲದೆ ಕೆಲಸ ಮಾಡುತ್ತೀರಿ ಎಂದು ತಿಳಿದುಕೊಂಡು ಸುಮ್ಮನಾಗಬಹುದು; ಇಲ್ಲವೇ, ನಿಮ್ಮಷ್ಟು ಉದಾಸೀನತೆ ತೋರುವವರು ಯಾರೂ ಇಲ್ಲ, ಕಂಪ್ಯೂಟರ್‌ನ ಬಗ್ಗೆ ನಿಮಗೆ ಕಾಳಜಿಯೇ ಇಲ್ಲ, ಕೆಲಸದಲ್ಲಿ ಅಶಿಸ್ತು ಎಂದು ಕೂಡ ಅಂದುಕೊಳ್ಳಬಹುದು.

ಈ ಮಾತು ಯಾಕೆಂದರೆ, ಡೆಸ್ಕ್‌ಟಾಪ್‌ನಲ್ಲಿ ಸೇವ್ ಮಾಡಿಡುವ ಯಾವುದೇ ಫೈಲ್‌ಗಳಿಗೆ ರಕ್ಷಣೆ ಇರುವುದಿಲ್ಲ ಎಂಬುದು ನೆನಪಿರಲಿ. ಡೆಸ್ಕ್‌ಟಾಪ್ ಮೇಲೆ ಸೇವ್ ಮಾಡಿಡುವ ಫೈಲ್‌ಗಳು ದಿಢೀರನೇ ನಾಪತ್ತೆಯಾಗಬಹುದು, ಡಿಲೀಟ್ ಆಗಿಬಿಡಬಹುದು, ಡೆಸ್ಕ್‌ಟಾಪ್‌ನಾದ್ಯಂತ ತುಂಬಿಹೋಗಿರುವ ಫೈಲ್‌ಗಳ ಮಧ್ಯೆ ನಿಮಗೆ ಬೇಕಾಗಿರುವುದನ್ನು ಹುಡುಕುವುದೇ ಕಷ್ಟವಾಗಬಹುದು, ತುರ್ತು ಏನಾದರೂ ಕೆಲಸ ಮಾಡಬೇಕಿರುವ ಸಂದರ್ಭದಲ್ಲಿ ಇವುಗಳಿಂದಾಗಿ ಮಾನಸಿಕವಾಗಿಯೂ ಒತ್ತಡ ಹೆಚ್ಚಾಗಬಹುದು. ಈ ರೀತಿ ಆಗದಂತೆ ತಡೆಯುವುದೇ ಜಾಣತನ.

ಡೆಸ್ಕ್‌ಟಾಪ್‌ನಲ್ಲೇ ಜನ ಯಾಕೆ ಫೈಲ್‌ಗಳನ್ನು ಸೇವ್ ಮಾಡುತ್ತಾರೆಂದರೆ, ಅಲ್ಲಿ ನೇರವಾಗಿ ಸೇವ್ ಮಾಡಿದರೆ ನಮ್ಮ ಕೆಲಸವನ್ನು ಸುಲಭಗೊಳಿಸಲು, ಸಮಯ ಉಳಿಸಲು ಸಾಕಷ್ಟು ಮಟ್ಟಿಗೆ ನೆರವಾಗುತ್ತದೆ ಎಂಬ ಭಾವನೆ. ಇಮೇಲ್/ಇಂಟರ್ನೆಟ್‌ನಿಂದ ಡೌನ್‌ಲೋಡ್ ಮಾಡಿದ ಯಾವುದೇ ಫೋಟೋ, ವೀಡಿಯೋ, ಆಡಿಯೋ ಫೈಲ್‌ಗಳು ಅಥವಾ ವರ್ಡ್/ಎಕ್ಸೆಲ್/ಪವರ್ ಪಾಯಿಂಟ್ ಫೈಲುಗಳು ಇಲ್ಲವೇ ಯಾವುದೇ ಪ್ರೋಗ್ರಾಂಗಳ exe ಫೈಲ್‌ಗಳು… ಹೀಗೆ ಡೆಸ್ಕ್‌ಟಾಪ್ ತುಂಬಿಸಲು ಸಾಕಷ್ಟು ಮಾರ್ಗೋಪಾಯಗಳಿರುತ್ತವೆ. ತತ್‌ಕ್ಷಣಕ್ಕೆ ಬೇಕಾಗುತ್ತದೆ ಎಂಬ ಉದ್ದೇಶದಿಂದ ನಾವು ಅವುಗಳೆಲ್ಲವನ್ನೂ ಈ ಡೆಸ್ಕ್‌ಟಾಪ್ ಮೇಲೆಯೇ ಉಳಿಸಿಕೊಳ್ಳುತ್ತೇವೆ, ತನ್ಮೂಲಕ ನಾವಾಗಿಯೇ ಗೊಂದಲದ ಜಾಲದಲ್ಲಿ ಸಿಲುಕುತ್ತೇವೆ.

ಡೆಸ್ಕ್‌ಟಾಪ್ ಮೇಲೆ ಸೇವ್ ಮಾಡುವುದು ತೀರಾ ಸರಳ, ಸುಲಭವಾದರೂ, ಅದು ಸುರಕ್ಷಿತವಲ್ಲವೆಂಬ, ಅದರಿಂದಾಗುವ ನಷ್ಟ ಮತ್ತು ಸಮಸ್ಯೆಗಳ ಕುರಿತ ಅರಿವು ಹೆಚ್ಚಿನವರಿಗೆ ಇರಲಾರದು.

ಸುರಕ್ಷಿತವಲ್ಲ ಹೇಗೆ?: ಮೊದಲನೆಯದಾಗಿ, ನಮ್ಮ ಕಂಪ್ಯೂಟರಿನಲ್ಲಿರುವ ಹಾರ್ಡ್ ಡಿಸ್ಕ್ ಅನ್ನು ಸಿ, ಡಿ, ಇ, ಎಫ್ ಇತ್ಯಾದಿ… ಹಲವಾರು ಡ್ರೈವ್‌ಗಳಾಗಿ ವಿಭಾಗಿಸಲಾಗಿರುತ್ತದೆ. ಕಂಪ್ಯೂಟರಿನ ಕಾರ್ಯಾಚರಣಾ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ) ಹಾಗೂ ಬಹುತೇಕ ಎಲ್ಲ ಪ್ರೋಗ್ರಾಂಗಳು, ತಂತ್ರಾಂಶಗಳು ಇನ್‌ಸ್ಟಾಲ್ ಆಗಿರುವುದು ಮತ್ತು ಕೆಲಸ ಮಾಡುವುದು ‘ಸಿ’ ಡ್ರೈವ್‌ನಲ್ಲಿ. ಉಳಿದ ಡ್ರೈವ್‌ಗಳಲ್ಲಿ ನಮ್ಮ ಯಾವುದೇ ಫೈಲ್‌ಗಳನ್ನು ಸಂಗ್ರಹಿಸಲಾಗುತ್ತದೆ.

ಗಮನಿಸಬೇಕಾದ ಅಂಶವೆಂದರೆ, ವಿಂಡೋಸ್ ಕಾರ್ಯಾಚರಣಾ ವ್ಯವಸ್ಥೆಯಿರುವ ಕಂಪ್ಯೂಟರುಗಳಲ್ಲಿ ಮೈ ಡಾಕ್ಯುಮೆಂಟ್ಸ್, ಮೈ ಪಿಕ್ಚರ್ಸ್, ಮೈ ವೀಡಿಯೋಸ್ ಮುಂತಾದ ಫೋಲ್ಡರ್‌ಗಳಿರುತ್ತವೆ. ಅಂದರೆ ಡೀಫಾಲ್ಟ್ ಆಗಿ ಫೈಲುಗಳು, ಫೋಟೋಗಳು, ವೀಡಿಯೋಗಳು, ಹಾಡುಗಳು ಆಯಾ ಫೋಲ್ಡರ್‌ಗಳಲ್ಲಿ ಸೇವ್ ಆಗಲು ಪ್ರೇರೇಪಿಸುತ್ತವೆ. ಈ ಎಲ್ಲ ಫೋಲ್ಡರ್‌ಗಳು ಹಾಗೂ ಡೆಸ್ಕ್‌ಟಾಪ್ ಕೂಡ ಇರುವುದು ಕಂಪ್ಯೂಟರಿನ ಪ್ರಧಾನ ಭಾಗವಾಗಿರುವ ‘ಸಿ’ ಡ್ರೈವ್‌ನಲ್ಲೇ. ಹೀಗಾಗಿ ಈ ಫೋಲ್ಡರ್‌ಗಳಲ್ಲಿ ಫೈಲುಗಳನ್ನು ಇರಿಸಿದರೆ, ನಿಮ್ಮ ಕಂಪ್ಯೂಟರಿನ ಕಾರ್ಯಾಚರಣೆಯಂತೂ ನಿಧಾನವಾಗಿಬಿಡುತ್ತದೆ. ‘ಸಿ’ ಡ್ರೈವ್‌ನಲ್ಲಿ ಫೈಲುಗಳು ಕಡಿಮೆಯಿದ್ದಷ್ಟೂ ಕಂಪ್ಯೂಟರ್ ಚೆನ್ನಾಗಿ, ವೇಗವಾಗಿ ಕಾರ್ಯನಿರ್ವಹಿಸುತ್ತದೆ.

ಇದೂ ಅಲ್ಲದೆ, ಒಂದೊಮ್ಮೆ ಕಾರ್ಯಾಚರಣಾ ವ್ಯವಸ್ಥೆಯೇ ಕರಪ್ಟ್ (ದೋಷಪೂರಿತ) ಆಗಿಬಿಟ್ಟರೆ, ಮತ್ತು ಸಿಸ್ಟಂ ಅನ್ನು ಫಾರ್ಮ್ಯಾಟ್ ಮಾಡಬೇಕಾಗಿ ಬಂದರೆ, ‘ಸಿ’ ಡ್ರೈವ್‌ನಲ್ಲಿರುವ ಎಲ್ಲ ಫೈಲುಗಳನ್ನೂ ಸುರಕ್ಷಿತವಾಗಿ ಮರಳಿ ಪಡೆಯುವುದು ಅಸಾಧ್ಯ. ಅಥವಾ ಯಾವುದೋ ಫೈಲಲ್ಲಿ ಕೆಲಸ ಮಾಡುತ್ತಿರುತ್ತೀರಿ ಎಂದಿಟ್ಟುಕೊಳ್ಳಿ, ದಿಢೀರನೇ ಅದು ಹ್ಯಾಂಗ್ ಆಗಿಬಿಡುತ್ತದೆ, ಫೈಲ್‌ನಲ್ಲಿರುವ ಅಂಶಗಳೆಲ್ಲವೂ ನಿಮಗೆ ಗೊತ್ತಿಲ್ಲದಂತೆಯೇ ಆಕಸ್ಮಿಕವಾಗಿ ಅಳಿಸಿಹೋಗಿರುತ್ತವೆ. ಇಂತಹಾ ಸಮಸ್ಯೆಗಳನ್ನು ತಪ್ಪಿಸಲು ಫೈಲುಗಳನ್ನು ‘ಸಿ’ ಡ್ರೈವ್‌ನಿಂದ ದೂರ ಇರಿಸಿ.

ಅದಕ್ಕೇನು ಮಾಡಬೇಕು: ಪಾರ್ಟಿಷನ್ ಆಗಿರುವ ಈ ಡ್ರೈವ್‌ಗಳಿಂದಲೇ ನಮ್ಮ ವ್ಯವಸ್ಥಿತಗೊಳಿಸುವಿಕೆ ಪ್ರಕ್ರಿಯೆ ಆರಂಭಿಸಬೇಕು. ಡಿ ಡ್ರೈವ್‌ನಲ್ಲಿ ಹಾಡು, ಸಂಗೀತ, ಫೋಟೋ ಮಾತ್ರವೆಂದೋ, ಎಫ್ ಡ್ರೈವ್‌ನಲ್ಲಿ ಕಚೇರಿಗೆ ಸಂಬಂಧಪಟ್ಟ ಫೈಲುಗಳು ಮಾತ್ರವೆಂದೋ ಅಥವಾ ಜಿ ಡ್ರೈವ್‌ನಲ್ಲಿ ಬೇರೆ ಖಾಸಗಿ ಫೈಲುಗಳು… ಹೀಗೆ ನಿಮಗೆ ಬೇಕಾದಂತೆ ನಿರ್ಧಾರ ಮಾಡಿಕೊಂಡು ಬಿಡಿ.

ಅದರಲ್ಲಿ ಅತೀ ಹೆಚ್ಚು ಮತ್ತು ಪ್ರತಿ ದಿನವೂ ಬಳಕೆಯಾಗುವ ಫೈಲುಗಳಿಗಾಗಿ ಒಂದು ಪ್ರತ್ಯೇಕ ಫೋಲ್ಡರ್ ರಚಿಸಿಟ್ಟುಕೊಳ್ಳಿ. ಡೆಸ್ಕ್‌ಟಾಪ್‌ನಲ್ಲಿ ಈ ಫೋಲ್ಡರ್‌ನ ಶಾರ್ಟ್‌ಕಟ್ ಮಾಡಿಟ್ಟುಕೊಂಡುಬಿಡಿ. ಇದರಿಂದ ಪ್ರತಿ ಬಾರಿಯೂ ಮೈ ಕಂಪ್ಯೂಟರ್‌ಗೆ ಹೋಗಿ, ಅಲ್ಲಿಂದ ನಮಗೆ ಬೇಕಾದ ಡ್ರೈವ್ ಮೂಲಕ ಸಂಬಂಧಪಟ್ಟ ಫೋಲ್ಡರ್‌ಗೆ ನ್ಯಾವಿಗೇಶನ್ ಮಾಡುವ ಕೆಲಸ ತಪ್ಪುತ್ತದೆ. ಡೆಸ್ಕ್‌ಟಾಪ್‌ನಿಂದ ನೇರವಾಗಿ ಶಾರ್ಟ್‌ಕಟ್ ಕ್ಲಿಕ್ ಮಾಡಿದರಾಯಿತು. ಡೆಸ್ಕ್‌ಟಾಪ್‌ನಲ್ಲಿ ಸೇವ್ ಮಾಡಿದಷ್ಟೇ ಸುಲಭ ಮಾರ್ಗವಿದು.

2 COMMENTS

  1. ಡೆಸ್ಕ್‌ಟಾಪ್ ಮೇಲೆ ಸೇವ್ ಮಾಡಿಡುವ ಫೈಲ್‌ಗಳು ದಿಢೀರನೇ ನಾಪತ್ತೆಯಾಗಬಹುದು, ಡಿಲೀಟ್ ಆಗಿಬಿಡಬಹುದು ಅಂದಿದ್ದೀರಿ. ಆದರೆ ಹೀಗೆ ಡೆಸ್ಕ್ ಟಾಪಲ್ಲಿರುವ ಅಥವಾ ಬೇರೆಲ್ಲೇ ಇರುವ ಯಾವ ಫೈಲೂ (ತನ್ನಿಂತಾನೇ) ದಿಢೀರನೆ ನಾಪತ್ತೆಯಾಗಲು, ಅಳಿಸಿಹೋಗಲು ಸಾಧ್ಯವಿಲ್ಲ. 🙂

    • ಹಹಹಾ… ಮಕ್ಕಳು ಏನೋ, ಎಲ್ಲೋ ಮೌಸ್ ಆಡಿಸುತ್ತಾ ಇರುವಾಗ… ಅಪ್ಪಿ ತಪ್ಪಿ, ಯಾವುದೋ ಕೀ ಒತ್ತಿದರೆ, ಅಥವಾ ರೀಸೈಕಲ್ ಬಿನ್‌ಗೇ ಡ್ರ್ಯಾಗ್ ಆ್ಯಂಡ್ ಡ್ರಾಪ್ ಮಾಡಿದರೆ, ಮತ್ತು ಫೈಲ್ ಕರಪ್ಟ್ ಆಗುವ ಮೂಲಕ, ಸಿಸ್ಟಂಗೆ ಸಮಸ್ಯೆಯಾದಾಗ… ಇತ್ಯಾದಿತ್ಯಾದಿ ಕಾರಣಗಳಿಂದ 🙂

LEAVE A REPLY

Please enter your comment!
Please enter your name here