ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಮುಖಪುಟ ವರದಿ(ಜನವರಿ 19, 2014)
ಶಾಲಾ-ಕಾಲೇಜುಗಳಲ್ಲಿ ಪಾಠ ಕೇಳುವಾಗ ತೂಕಡಿಸದವರು ಕಡಿಮೆ. ಯಾವುದಾದರೂ ಸೆಮಿನಾರ್‌ಗೆ ಹೋಗಿರುತ್ತೀರಿ. ಭಾಷಣ ಕೇಳಿ ಬೋರ್ ಆಗಿರುತ್ತಾ, ಕಣ್ಣು ಎಳೆಯುತ್ತಿರುತ್ತದೆ. ಎದುರಿಗಿರುವ ಡೆಸ್ಕ್‌ಗೆ ತಲೆ ಬಡಿಯುವ ಮುನ್ನ ಸಾವರಿಸಿಕೊಂಡು, ಯಾರಾದರೂ ನೋಡಿಬಿಟ್ಟರೋ ಅಂತ ಕಣ್ಣಾಲಿಗಳನ್ನು ಅತ್ತಿತ್ತ ಹೊರಳಿಸಿ ದೃಢಪಡಿಸಿಕೊಳ್ಳುತ್ತೀರಿ. ಇನ್ನು, ಇತ್ತೀಚೆಗೆ ರಾತ್ರಿ ಪ್ರಯಾಣದ ಬಸ್‌ಗಳ ಅಪಘಾತದ ಸುದ್ದಿಗಳನ್ನು ಕೇಳುತ್ತಿದ್ದೇವೆ. ಚಾಲಕನಿಗೇನಾದರೂ ನಿದ್ದೆಯ ಮಂಪರು ಬಡಿಯಿತೋ, ಅಪಾಯ ತಪ್ಪಿದ್ದಲ್ಲ.
ಇವೆಲ್ಲವೂ ‘ತೂಕ’ದ ಸಂಗತಿಗಳೇ ಆದರೂ, ತೂಕಡಿಸುವವರಿಂದ, ತೂಕಡಿಸುವವರಿಗಾಗಿ, ತೂಕಡಿಕೆ ತಡೆಯುವುದಕ್ಕೋಸ್ಕರವೇ ಸಾಧನವೊಂದು ರೂಪುಗೊಳ್ಳುತ್ತಿದೆ. ಇದನ್ನು ಧರಿಸಿದವರನ್ನು ನೋಡಿದರೆ, ‘ಈತ ಹಾಡು ಕೇಳಲು ಕಿವಿಯಲ್ಲಿ ಹೆಡ್‌ಸೆಟ್ ಇರಿಸಿಕೊಂಡಿದ್ದಾನೆ’ ಎಂದಷ್ಟೇ ಅಂದುಕೊಳ್ಳಬಹುದು, ಆದರೆ ಒಳಗಿನ ವಿಷಯ ಮಂಪರಿನಲ್ಲಿದ್ದವರಿಗೆ ಮಾತ್ರ ಗೊತ್ತು. ಇದುವೇ ತೂಕಡಿಸುವವರನ್ನು ತಿವಿದು ಎಚ್ಚರಿಸಬಲ್ಲ ಸಾಧನ ‘ವಿಗೋ’.
ವಿಶೇಷತಃ ರಾತ್ರಿ ಚಾಲಕರಿಗಾಗಿಯೇ ಇದನ್ನು ವಿನ್ಯಾಸಪಡಿಸಲಾಗಿದೆ. ಚಾಲಕನ ಕಣ್ಣು ರೆಪ್ಪೆಯ ಚಲನೆ ಮತ್ತು ದೇಹದ ಚಲನೆಯನ್ನು ಅಳೆಯುತ್ತಾ, ಆತ ನಿದ್ದೆಗೆ ಜಾರುತ್ತಿದ್ದಾನೆಯೇ ಎಂದು ತಿಳಿದುಕೊಳ್ಳುತ್ತದೆ ಈ ವಿಗೋ. ತೂಕಡಿಸುವ ಸಾಧ್ಯತೆ ಇದೆಯೆಂದಾದರೆ ಮೆದುವಾದ ಕಂಪನ, ಎಲ್ಇಡಿ ಬೆಳಕು, ಅಥವಾ ಜೋರಾದ ಹಾಡಿನ ಮೂಲಕ ಎಚ್ಚರಿಸುವ ಕೆಲಸ ಮಾಡುತ್ತದೆ.
ವಾಷಿಂಗ್ಟನ್‌ನಲ್ಲಿ ಈ ಸಾಧನವನ್ನು ಈಗಾಗಲೇ ಪ್ರಾಯೋಗಿಕವಾಗಿ ಹೊರಬಿಡಲಾಗಿದೆ. ಇದರಲ್ಲಿ ಇನ್‌ಫ್ರಾರೆಡ್ ಸೆನ್ಸರ್, ಅಕ್ಸೆಲರೋಮೀಟರ್ ಇದೆ. ಹ್ಯಾಂಡ್ಸ್‌ಫ್ರೀ ಬ್ಲೂಟೂತ್ ಸಾಧನವಾಗಿಯೂ ಕಾರ್ಯನಿರ್ವಹಿಸುತ್ತದೆ ಅಂದರೆ ಕಿವಿಯಲ್ಲಿ ಇದನ್ನು ಇರಿಸಿಕೊಂಡು ಸ್ಮಾರ್ಟ್ ಫೋನ್‌ನಲ್ಲಿ ಮಾತನಾಡಬಹುದು, ಹಾಡು ಕೇಳಬಹುದು. ಯಾವಾಗ, ಹೇಗೆ ತಮ್ಮನ್ನು ಎಚ್ಚರಿಸಬೇಕೆಂಬುದನ್ನು ಬಳಕೆದಾರರೇ ನಿರ್ಣಯಿಸಬಹುದು. ಅಲ್ಲದೆ, ನಮ್ಮ ಶರೀರದ ಪೂರ್ತಿ ಎಚ್ಚರದ ಸ್ಥಿತಿ ಮತ್ತು ಅತ್ಯಂತ ಕ್ಷಮತೆ ಇರುವ ಸಮಯವನ್ನೂ ವಿಗೋ ಸಾಧನವು ತಿಳಿಸುತ್ತದೆ.
ತೂಕಡಿಸುವಾಗಲೇ ಹೊಳೆದ ಐಡಿಯಾ
ಕುತೂಹಲವೆಂದರೆ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ಕೇಳುತ್ತಿದ್ದಾಗ ತೂಕಡಿಸುತ್ತಲೇ ಇಂಥದ್ದೊಂದು ಸಾಧನ ಅಭಿವೃದ್ಧಿಪಡಿಸಬೇಕೆಂಬ ಐಡಿಯಾ ಹೊಳೆಯಿತು ಎಂದಿದ್ದಾರೆ ಇದರ ಡೆವಲಪರ್‌ಗಳಾದ ಜೇಸನ್ ಗುಯ್, ಡ್ರ್ಯೂ ಕ್ಯಾರಾಬಿನೊಸ್ ಮತ್ತು ಜೊನಾಥನ್ ಕೆರ್ನ್.
ಈ ತಿಂಗಳಾಂತ್ಯದೊಳಗೆ ಆ್ಯಪಲ್ ಮತ್ತು ಆಂಡ್ರಾಯ್ಡ್‌ಗೆ ಆ್ಯಪ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಏಪ್ರಿಲ್ ವೇಳೆಗೆ ಉತ್ಪಾದನೆ ಆರಂಭವಾಗಲಿದ್ದು, ಮೇ ತಿಂಗಳಲ್ಲಿ ವಿಶ್ವಾದ್ಯಂತ ಮಾರುಕಟ್ಟೆಗೆ ಆಗಮಿಸಲಿದೆ. ಚೀನಾದ ಶೆಂಝೆನ್‌ನ ಹಾರ್ಡ್‌ವೇರ್ ಅಭಿವೃದ್ಧಿ ಕಾರ್ಯಕ್ರಮವೊಂದರ ಅಡಿಯಲ್ಲಿ ಮೂರು ತಿಂಗಳಿಂದ ವಿಗೋ ಅಭಿವೃದ್ಧಿಯಾಗುತ್ತಿದೆ. ಅಂದ ಹಾಗೆ ಈ ಪ್ರಾಜೆಕ್ಟ್ ಸಾಗುತ್ತಿರುವುದು ಕ್ರೌಡ್ ಸೋರ್ಸಿಂಗ್ ಅಂದರೆ, ಸಾರ್ವಜನಿಕರಿಂದ ಹಣ ಸಂಗ್ರಹಿಸುವ ಮೂಲಕ.
* ಹೆಚ್ಚು ಸಮಯ ನಿದ್ದೆಗೆಟ್ಟು ಎಚ್ಚರದಲ್ಲಿರಬೇಕಾದರೆ ವಿಗೋ ಧರಿಸಬಹುದು
* ವಿಗೋ ಸಾಧನವನ್ನು ಬ್ಲೂಟೂತ್ ಮೂಲಕ ನಿಮ್ಮ ಮೊಬೈಲ್ ಸಾಧನಕ್ಕೂ ಸಂಪರ್ಕಿಸಬಹುದು.
* ಹೇಗೆ, ಯಾವಾಗ ನಿಮ್ಮನ್ನು ಬಡಿದೆಬ್ಬಿಸಬೇಕು ಎಂಬುದನ್ನು ನೀವೇ ಹೊಂದಿಸಬಹುದು
* 20 ಗ್ರಾಂ ತೂಕ
* ರೀಚಾರ್ಜೆಬಲ್ ಲೀಥಿಯಂ-ಪಾಲಿಮರ್ ಬ್ಯಾಟರಿ (ಒಮ್ಮೆ ಚಾರ್ಜ್ ಮಾಡಿದರೆ 2-3 ದಿನಕ್ಕೆ ಸಾಕು)
* ಕಣ್ಣು ಮತ್ತು ಕಣ್ರೆಪ್ಪೆ ಚಲನೆ ಗುರುತಿಸುವ ಸಾಮರ್ಥ್ಯವುಳ್ಳ ಇನ್‌ಫ್ರಾರೆಡ್ ಸೆನ್ಸರ್
* ಬ್ಲೂಟೂತ್ 4.0 ಚಿಪ್
* RM Cortex-M0 16MHz ಪ್ರೊಸೆಸರ್