ಕ್ಯಾಮೆರಾ ಕೇಂದ್ರಿತ Tecno Camon i 2x ಹೇಗಿದೆ?

0
659

Tecno Camon i2Xಹಾಂಕಾಂಗ್ ಮೂಲದ ಟ್ರಾನ್ಸಿಯಾನ್ ಕಂಪನಿಯು ಭಾರತದಲ್ಲಿ ನಿಧಾನವಾಗಿ ತನ್ನ ಪ್ರಭಾವ ಬೀರಲಾರಂಭಿಸಿದೆ. ಅವರ ಟೆಕ್‌ನೋ ಬ್ರ್ಯಾಂಡ್‌ನ ಕ್ಯಾಮಾನ್ ಸರಣಿಯ ಫೋನ್‌ಗಳು ಹೆಸರಿನಲ್ಲೇ ಇರುವಂತೆ ಕ್ಯಾಮೆರಾಕ್ಕೆ ಹೆಚ್ಚು ಒತ್ತು ನೀಡುವ ಸ್ಮಾರ್ಟ್ ಫೋನ್‌ಗಳು. ಇದರ ಕ್ಯಾಮಾನ್ ಐ 2ಎಕ್ಸ್ ಎಂಬ ಫೋನ್ ಹೇಗಿದೆ?

ಮೊದಲು ಇದರ ವಿಶೇಷತೆ ಬಗ್ಗೆ ನೋಡೋಣ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ (13 ಹಾಗೂ 5 ಮೆಗಾಪಿಕ್ಸೆಲ್) ಇದೆ ಹಾಗೂ ಸೆಲ್ಫೀ ಕ್ಯಾಮೆರಾ ಎಐ (ಕೃತಕ ಬುದ್ಧಿಮತ್ತೆ) ಆಧಾರಿತ 16 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಜತೆಗೆ 4 ಜಿಬಿ RAM, 64 ಜಿಬಿ ಆಂತರಿಕ ಮೆಮೊರಿ, 6.2 ಇಂಚಿನ ನಾಚ್ ಡಿಸ್‌ಪ್ಲೇ ಸ್ಕ್ರೀನ್, 3750 mAh ಬ್ಯಾಟರಿ. ಜತೆಗೆ, ಸ್ಮಾರ್ಟ್ ಫಂಕ್ಷನ್‌ಗಳಿದ್ದು, ಫಿಂಗರ್‌ಪ್ರಿಂಟ್ ಹಾಗೂ ಫೇಸ್ ಅನ್‌ಲಾಕ್ ಅತ್ಯಾಧುನಿಕ ವೈಶಿಷ್ಟ್ಯಗಳೂ ಇರುವುದರಿಂದ, ಕಡಿಮೆ ಬೆಲೆಯಲ್ಲಿ ಇದು ದೊರೆಯುತ್ತದೆ ಎಂಬುದೇ ವಿಶೇಷ.

ಆಂಡ್ರಾಯ್ಡ್ 8.1 ಒರಿಯೋ ಕಾರ್ಯಾಚರಣಾ ವ್ಯವಸ್ಥೆ ಆಧಾರಿತ ಹಾಯ್ ಒಎಸ್ ಅನ್ನು ಕಂಪನಿ ಅಭಿವೃದ್ಧಿಪಡಿಸಿದ್ದು, ಒಕ್ಟಾ ಕೋರ್ ಪ್ರೊಸೆಸರ್ ಇದೆ.

ವಿನ್ಯಾಸ
ತೀರಾ ಹಗುರವಾದ, ಹೊಳೆಯುವ ಪ್ಲಾಸ್ಟಿಕ್ ಕವಚವು ಈ ಫೋನ್‌ಗೆ ಪ್ರೀಮಿಯಂ ಲುಕ್ ನೀಡುತ್ತಿದೆ. ಫೋನ್‌ನ ಎಡಭಾಗದಲ್ಲಿ ವಾಲ್ಯೂಮ್ ಅಪ್/ಡೌನ್ ಹಾಗೂ ಪವರ್ ಬಟನ್ ಇದ್ದರೆ, ಬಲಭಾಗದಲ್ಲಿ 4ಜಿ VoLTE ಸಿಮ್ ಸ್ಲಾಟ್‌ಗಳು ಹಾಗೂ ಮೆಮೊರಿ ಕಾರ್ಡ್ ಹಾಕಲು ಇರುವ ಟ್ರೇ ಇದೆ. ತಳಭಾಗದಲ್ಲಿ ಐಫೋನ್ ಮಾದರಿಯಲ್ಲೇ, ಸ್ಪೀಕರ್‌ಗಳು ಹಾಗೂ ಮೈಕ್ ಜತೆಗೆ, ಇಯರ್ ಫೋನ್‌ಗಾಗಿ 3.5 ಮಿಮೀ ಜ್ಯಾಕ್ ಇದೆ. ಹಗುರ ಇರುವುದರಿಂದ ಕೈಯಲ್ಲಿ ಹಿಡಿದುಕೊಂಡಿರಲು ಅನುಕೂಲವಿದೆ.

ಕ್ಯಾಮೆರಾ
ಇದರ ಮುಖ್ಯ ಸೆಲ್ಲಿಂಗ್ ಅಂಶವೇ, ಕ್ಯಾಮೆರಾ. ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೋಗಳನ್ನು ಇದು ನೀಡುತ್ತದೆ. ರಾತ್ರಿ ವೇಳೆ ಯಾವುದಾದರೂ ಕಾರ್ಯಕ್ರಮದಲ್ಲಿ ಸೆಲ್ಫೀ ತೆಗೆಯಲು ಇದು ಹೆಚ್ಚು ಅನುಕೂಲಕರ. 6.2 ಇಂಚಿನ 720 x 1500 ರೆಸೊಲ್ಯುಶನ್ ಡಿಸ್‌ಪ್ಲೇ ಸ್ಕ್ರೀನ್ ಇದೆ. ಮುಂಭಾಗದಲ್ಲಿ ಒಂದು ಸೆಲ್‌ನ ಎಲ್‌ಇಡಿ ಫ್ಲ್ಯಾಶ್ ಇದ್ದರೆ, ಹಿಂಭಾಗದಲ್ಲಿ ನಾಲ್ಕು ಸೆಲ್‌ಗಳುಳ್ಳ ಫ್ಲ್ಯಾಶ್ ಇದೆ. ಭಾರತೀಯರ ಕ್ಯಾಮೆರಾ ಪ್ರಿಯತೆಗೆ ತಕ್ಕಂತೆ ಇದನ್ನು ರೂಪಿಸಲಾಗಿದೆ. ಮುಂಭಾಗದ ಕ್ಯಾಮೆರಾದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ)ಯುಳ್ಳ ಬ್ಯೂಟಿ ಮೋಡ್, ಬೊಕೇ ಮೋಡ್ ಇರುವುದರಿಂದ ಚಿತ್ರವನ್ನು ಮತ್ತಷ್ಟು ಸುಂದರವಾಗಿಸಲು ಪೂರಕವಾಗಿರುತ್ತದೆ. ಹಿಂಭಾಗದ ಕ್ಯಾಮೆರಾದಲ್ಲಿಯೂ ಎಐ ಬ್ಯೂಟೀ ಮೋಡ್, ಬೊಕೇ ಮೋಡ್ ಜತೆಗೆ, ಪನೋರಮಾ ಮೋಡ್ ಕೂಡ ಇದೆ.

ಬಾಕ್ಸ್‌ನಲ್ಲಿ ಇಯರ್ ಫೋನ್ ಜತೆಗೆ ಇಲ್ಲದಿರುವುದು ಕೊರತೆಯಾದರೂ, ಬೇರೆ ಇಯರ್ ಫೋನ್ ಬಳಸಿದರೂ ಅತ್ಯುತ್ತಮವಾಗಿ ಸಂಗೀತ ಆಲಿಸಬಹುದಾಗಿದೆ. 4 ಜಿಬಿ RAM ಇರುವುದರಿಂದ ಮತ್ತು MT6762 2.0GHz ಪ್ರೊಸೆಸರ್ ಇರುವುದರಿಂದ, ಗೇಮ್‌ಗಳನ್ನು ಆಡುವಾಗಲೂ ಯಾವುದೇ ರೀತಿಯಲ್ಲಿ ಹ್ಯಾಂಗ್ ಆದ ಅನುಭವವಾಗಿಲ್ಲ.

ಗಮನಿಸಬೇಕಾದ ವೈಶಿಷ್ಟ್ಯವೆಂದರೆ, ಇದರಲ್ಲಿ ನ್ಯಾವಿಗೇಶನ್ ಕೀಗಳಿಗಿರುವ ವ್ಯವಸ್ಥೆ. ಕೆಳಭಾಗದಲ್ಲಿರುವ ಮೂರು ಸ್ಕ್ರೀನ್ ಬಟನ್‌ಗಳನ್ನು (ಬ್ಯಾಕ್, ಹೋಮ್ ಮತ್ತು ರೀಸೆಂಟ್) ಅಡಗಿಸಿ, ಆ ಜಾಗದಲ್ಲಿ ಮೇಲಕ್ಕೆ ಸ್ವೈಪ್ ಮಾಡಿದರೆ ಆ ಫಂಕ್ಷನ್‌ಗಳು ಕೆಲಸ ಮಾಡುತ್ತವೆ.

ಜತೆಗೆ, ಮೈಕ್ರೋ ಇಂಟೆಲಿಜೆನ್ಸ್ ಎಂಬ ವೈಶಿಷ್ಟ್ಯಗಳ ಗುಚ್ಛ ಇದೆ. ಕ್ವಿಕ್ ಸ್ಟಾರ್ಟ್ (ನಿರ್ದಿಷ್ಟ ರೂಪದಲ್ಲಿ ಸ್ಕ್ರೀನ್ ಮೇಲೆ ಬರೆದರೆ ನಿರ್ದಿಷ್ಟ ಆ್ಯಪ್ ತೆರೆಯುವ ವ್ಯವಸ್ಥೆ, ಉದಾ. M ಅಂತ ಬರೆದರೆ, ಮ್ಯೂಸಿಕ್ ಆ್ಯಪ್ ಓಪನ್ ಆಗುವಂತೆ ಹೊಂದಿಸಬಹುದು), ಸ್ಕ್ರೀನ್ ಆಫ್ ಇರುವಾಗ, ಡಬಲ್ ಟ್ಯಾಪ್ ಮಾಡಿದರೆ, ಸಮಯ ಕಾಣಿಸುತ್ತದೆ, ಫ್ಲಿಪ್ ಮಾಡಿದರೆ ಮ್ಯೂಟ್ ಆಗುತ್ತದೆ, ಸ್ಕ್ರೀನ್ ಮುಚ್ಚಿದರೆ ಸೈಲೆಂಟ್ ಆಗುತ್ತದೆ. ಮೂರು ಬೆರಳಿನಿಂದ ಸ್ವೈಪ್ ಮಾಡಿದರೆ ಸ್ಕ್ರೀನ್ ಶಾಟ್ ತೆಗೆಯಬಹುದು ಮತ್ತು ಫೋನ್ ಎತ್ತಿದಾಗ, ಸ್ಕ್ರೀನ್ ಆನ್ ಆಗುವಂತೆ ಹೊಂದಿಸಿಕೊಳ್ಳುವ ವ್ಯವಸ್ಥೆಗಳಿವೆ.

ಒಟ್ಟಾರೆ ಹೇಗಿದೆ?
ಬೆಲೆ 13,499 ರೂ.ಗೆ ಲಭ್ಯವಿರುವ ಆಧುನಿಕ ವೈಶಿಷ್ಟ್ಯಗಳಿರುವ ಫೋನ್ ಇದು. ಉತ್ತಮ ಬ್ಯಾಟರಿ ಬಾಳಿಕೆಯೂ, ಹಗುರವೂ ಇದೆ. ಸುಲಲಿತವಾದ (ಸ್ಮೂತ್) ಕಾರ್ಯಾಚರಣೆಯೂ ಕೂಡ ಇದರ ಪ್ಲಸ್ ಪಾಯಿಂಟ್.

11 Oct 2018
Tecno Camon i 2x: ಕ್ಯಾಮೆರಾ ಕೇಂದ್ರಿತ ಫೋನ್ ರಿವ್ಯೂ

LEAVE A REPLY

Please enter your comment!
Please enter your name here