ಕಂಪ್ಯೂಟರಿನಲ್ಲಿ ಪ್ರತಿನಿತ್ಯ ಉಪಯೋಗವಾಗುವ ಒಂದಿಷ್ಟು ಸರಳ ಟ್ರಿಕ್ಸ್

0
765

Avinash columnಬಹುತೇಕ ಎಲ್ಲರೂ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಬಳಸುತ್ತಿರುತ್ತಾರೆ. ದೈನಂದಿನ ಕೆಲಸ ಕಾರ್ಯದಲ್ಲಿ ಸರಳವಾದ ಕೆಲವೊಂದು ಟ್ರಿಕ್‌ಗಳ ಮೂಲಕ ಸಾಕಷ್ಟು ಸಮಯ  ಉಳಿತಾಯ ಮಾಡಬಹುದು. ಅಂಥ ಕೆಲವು ಶಾರ್ಟ್‌ಕಟ್ ವಿಧಾನಗಳು ಇಲ್ಲಿವೆ. ನೀವೂ ಮಾಡಿ ನೋಡಿ, ‘ಟೈಮೇ ಇಲ್ಲ’ ಎನ್ನುವುದನ್ನು ಕೊಂಚ ಕಡಿಮೆ ಮಾಡಿ!

ಟಾಸ್ಕ್ ಬಾರ್ ಪ್ರೋಗ್ರಾಂಗಳನ್ನು ತ್ವರಿತವಾಗಿ ತೆರೆಯುವುದು:
ಸಾಮಾನ್ಯವಾಗಿ ಮಾನಿಟರ್ ಸ್ಕ್ರೀನ್‌ನ ಅಡಿಭಾಗದಲ್ಲಿ ಒಂದು ಪಟ್ಟಿ (ಬಾರ್) ಇರುತ್ತದೆ. ಅದರಲ್ಲಿ ನಾವು ಹೆಚ್ಚಾಗಿ ಬಳಸುವ ಅಪ್ಲಿಕೇಶನ್‌ಗಳನ್ನು ಬೇಗನೇ ಲಾಂಚ್ ಮಾಡುವುದಕ್ಕಾಗಿ, ಇಂಟರ್ನೆಟ್ ಎಕ್ಸ್‌ಪ್ಲೋರರ್ ಅಥವಾ ಬೇರೆ ಬ್ರೌಸರ್, ನೋಟ್‌ಪ್ಯಾಡ್, ಫೋಟೋಶಾಪ್, ಔಟ್‌ಲುಕ್, ಎಕ್ಸೆಲ್ ಇತ್ಯಾದಿ ಕೆಲವೊಂದು ಪ್ರೋಗ್ರಾಂಗಳನ್ನು ಪಿನ್ ಮಾಡಿರುತ್ತೇವೆ. ಇದನ್ನು ಟಾಸ್ಕ್ ಬಾರ್ ಎನ್ನಲಾಗುತ್ತದೆ. ಇವುಗಳನ್ನೆಲ್ಲಾ ಕ್ಲಿಕ್ ಮಾಡದೆಯೇ ಇನ್ನೂ ಬೇಗನೆ ತೆರೆಯಬಹುದು, ಹೇಗೆ ಗೊತ್ತೇ? ಕೀಬೋರ್ಡ್‌ನಲ್ಲಿ ವಿಂಡೋಸ್ ಲಾಂಛನವಿರುವ ಒಂದು ಬಟನ್ ಇರುತ್ತದೆ. ಅದನ್ನು ಹಾಗೂ ಪಿನ್ ಆಗಿರುವ ಆಯಾ ಪ್ರೋಗ್ರಾಂಗಳ ಸ್ಥಾನದ ಆಧಾರದಲ್ಲಿ ಸಂಖ್ಯೆಯ ಕೀಯನ್ನು ಒತ್ತಿ ಹಿಡಿಯಿರಿ. ಉದಾಹರಣೆಗೆ, ಟಾಸ್ಕ್ ಬಾರ್‌ನ 3ನೇ ಐಟಂ, ಗೂಗಲ್ ಕ್ರೋಮ್ ಬ್ರೌಸರ್ ಆಗಿದ್ದರೆ, ಅದನ್ನು ತಕ್ಷಣ ಲಾಂಚ್ ಮಾಡಬೇಕೆಂದಾದರೆ ವಿಂಡೋಸ್ + 3 ಕೀಲಿ ಒತ್ತಿಬಿಡಿ.

ವೇಗ ಹೆಚ್ಚಿಸುವ ಏಳು ಅಕ್ಷರಗಳು: A, C, X, V, Z, Y, P
ಪಠ್ಯ, ಫೈಲ್ ಅಥವಾ ಫೋಲ್ಡರ್‌ಗಳನ್ನು ಎಲ್ಲ ಸೆಲೆಕ್ಟ್ ಮಾಡಲು ಕಂಟ್ರೋಲ್ (Ctrl ಕೀ) ಹಾಗೂ A, ಅದನ್ನು ಕಾಪಿ (ನಕಲು) ಮಾಡಲು ಕಂಟ್ರೋಲ್+C, ಪುನಃ ಪೇಸ್ಟ್ ಮಾಡಲು ಕಂಟ್ರೋಲ್+V ಬಳಸಬೇಕೆಂಬುದು ಹೆಚ್ಚಿನವರಿಗೆ ಗೊತ್ತು. ಇದು ನಮ್ಮ ಸಾಕಷ್ಟು ಸಮಯವನ್ನು ಉಳಿಸುತ್ತದೆ. ನಾವು ಯಾವುದಾದರೂ ಲೇಖನ ಬರೆಯುತ್ತಿರಬೇಕಿದ್ದರೆ, ಒಂದು ಸಾಲನ್ನು ಬೇರೆ ಕಡೆ ಪೇಸ್ಟ್ ಮಾಡಬೇಕೆಂದರೆ ಸುಲಭ ವಿಧಾನ ಇಲ್ಲಿದೆ. ಯಾವ ಸಾಲನ್ನು ಡಿಲೀಟ್ ಮಾಡಬೇಕೋ ಆ ಸಾಲಿನ ಎಲ್ಲಾದರೂ ಕರ್ಸರ್ ಇರಿಸಿ. End ಹೆಸರಿರುವ ಕೀಲಿ ಒತ್ತಿಬಿಡಿ. ಕರ್ಸರ್ ಆ ಸಾಲಿನ ಕೊನೆಗೆ ಬಂದು ನಿಲ್ಲುತ್ತದೆ. ನಂತರ ಶಿಫ್ಟ್ ಹಿಡಿದುಕೊಂಡು Home ಬಟನ್ ಒತ್ತಿ. ಇಡೀ ಸಾಲು ಸೆಲೆಕ್ಟ್ ಆಯಿತು. ಅಲ್ಲಿಂದ ತೆಗೆಯಲು (ಕಟ್ ಮಾಡಲು) ಕಂಟ್ರೋಲ್+X ಬಳಸಿ. ಸೇರಿಸಬೇಕಾದಲ್ಲಿಗೆ ಕರ್ಸರ್ ಇರಿಸಿ, ಕಂಟ್ರೋಲ್+V (ಪೇಸ್ಟ್) ಮಾಡಿ.

ಅಪ್ಪಿ ತಪ್ಪಿ ಏನಾದರೂ ನೀವು ಫೋಲ್ಡರ್‌ನಲ್ಲಿರುವ ಒಂದು ಫೈಲನ್ನೋ, ಲೇಖನ ಬರೆಯುತ್ತಿರುವಾಗ ಒಂದು ಸಾಲನ್ನೋ ಡಿಲೀಟ್ ಮಾಡಿದಿರಿ ಎಂದಾದರೆ, ಅಥವಾ ತಪ್ಪಾಗಿ ಮೂವ್ ಮಾಡಿದಿರಿ ಎಂದಾದರೆ, ಈ ಕೆಲಸವನ್ನು Undo ಮಾಡಲು (ಸ್ವಸ್ಥಾನಕ್ಕೆ ಮರಳಿಸಲು), ಕಂಟ್ರೋಲ್+Z ಬಟನ್ ಒತ್ತಿಬಿಡಿ. ಇದು ಕೂಡ ಸಾಕಷ್ಟು ನೆರವಿಗೆ ಬರುತ್ತದೆ. ಏನನ್ನಾದರೂ ತಿದ್ದುತ್ತಿರುವಾಗ (ಚಿತ್ರವೋ, ಲೇಖನವೋ, ಪುಟವೋ… ಯಾವುದೇ ಇರಲಿ), ಕಂಟ್ರೋಲ್+ಝಡ್ ಹಲವು ಬಾರಿ ಬಳಸಿದರೆ, ಅನುಕ್ರಮ ಕಮಾಂಡ್‌ಗಳ ಅನುಸಾರ ಸಾಕಷ್ಟು ಹಿಂದಕ್ಕೆ ಹೋಗಲು ಸಾಧ್ಯವಾಗುತ್ತದೆ. ಕಂಟ್ರೋಲ್+Z ಒತ್ತಿದ್ದು ಜಾಸ್ತಿಯಾಯಿತೇ? ಕಂಟ್ರೋಲ್+Y ಒತ್ತಿದರೆ, ಆ ಕಮಾಂಡ್ ಅನ್ನು ಪುನಃ ಅನ್ವಯಿಸಬಹುದು ಅಂದರೆ Redo ಮಾಡಬಹುದು.

ತೆರೆದಿರುವ ಯಾವುದೇ ಫೈಲನ್ನು ಪ್ರಿಂಟ್ ಮಾಡಬೇಕಿದ್ದರೆ, ಕಂಟ್ರೋಲ್+P ಒತ್ತಿದರಾಯಿತು. ನಿಮ್ಮ ಡಾಕ್ಯುಮೆಂಟ್ ಅಥವಾ ಚಿತ್ರವು ಆ ಕಂಪ್ಯೂಟರಿಗೆ ಮ್ಯಾಪ್ ಆಗಿರುವ ಪ್ರಿಂಟರ್‌ಗೆ ಕಮಾಂಡ್ ಮೂಲಕ ರವಾನೆಯಾಗುತ್ತದೆ.

ಟಾಸ್ಕ್ ಬಾರ್ ವ್ಯವಸ್ಥಿತವಾಗಿಡಲು: ನೀವು ಯಾವುದೋ ಪ್ರೋಗ್ರಾಂ ಇನ್‌ಸ್ಟಾಲ್ ಮಾಡಿದಾಗ, ಕೆಳಗಿರುವ ಟಾಸ್ಕ್‌ಬಾರ್‌ನಲ್ಲಿ ಅನಗತ್ಯವಾಗಿ ಕೆಲವೊಂದು ಐಕಾನ್‌ಗಳು ಬಂದು ಕೂರುತ್ತವೆ ಮತ್ತು ಆ ಪಟ್ಟಿಯನ್ನು ಗೋಜಲಾಗಿಸುತ್ತವೆ. ಅನಗತ್ಯ ಐಕಾನ್ ಮೇಲೆ ಮೌಸ್‌ನ ಮೂಲಕ ರೈಟ್ ಕ್ಲಿಕ್ ಮಾಡಿ ಡಿಲೀಟ್ ಅಥವಾ ಅನ್‌ಪಿನ್ ಮಾಡಬಹುದು. ಇಲ್ಲಿಂದ ಡಿಲೀಟ್ ಮಾಡುವ ಯಾವುದೇ ಪ್ರೋಗ್ರಾಂಗಳೂ ಅನ್‌ಇನ್‌ಸ್ಟಾಲ್ ಆಗುವುದಿಲ್ಲ ಎಂಬುದು ನೆನಪಿರಲಿ. ಅವುಗಳ ಸ್ಥಾನ ಬದಲಿಸಬೇಕಿದ್ದರೆ, ಮೌಸ್ ಬಟನ್ ಕ್ಲಿಕ್ ಮಾಡಿ ಎಳೆದು, ಬೇಕಾದಲ್ಲಿಗೆ ಕೂರಿಸಬಹುದು (ಡ್ರ್ಯಾಗ್ ಆ್ಯಂಡ್ ಡ್ರಾಪ್). ಎಲ್ಲ ಆದಮೇಲೆ, ಈ ಟಾಸ್ಕ್ ಬಾರ್‌ನ ಮೇಲೆ ರೈಟ್ ಕ್ಲಿಕ್ ಮಾಡಿ, ಬಳಿಕ Lock Taskbar ಎಂದಿರುವಲ್ಲಿ ಟಿಕ್ ಗುರುತು ಹಾಕಿದರೆ, ಆಕಸ್ಮಿಕವಾಗಿ ಅದರ ಸ್ಥಾನ ಬದಲಾಗುವ, ಡಿಲೀಟ್ ಆಗುವ ಅಪಾಯ ಇರುವುದಿಲ್ಲ.

ಟೆಕ್ ಟಾನಿಕ್: ಗೂಗಲ್ ಕೀಬೋರ್ಡ್‌ನಲ್ಲಿ ‘ಒ’ ಸೇರಿಸುವುದು
ಹೊಸ ಆಂಡ್ರಾಯ್ಡ್ ಸಾಧನಗಳಲ್ಲಿ ಅಪ್‌ಡೇಟ್ ಆಗಿರುವ ಗೂಗಲ್ ಕೀಬೋರ್ಡ್‌ನಲ್ಲಿ ಕನ್ನಡ ಆಯ್ಕೆಯಿದೆ, ಅದರಲ್ಲಿ ಯಾವುದೇ ವ್ಯಂಜನಕ್ಕೆ ‘ಒ’ ಹೃಸ್ವ ಸ್ವರ ಸೇರಿಸಲು (ಕೊ, ಗೊ, ಜೊ ಇತ್ಯಾದಿ) ಸಾಧ್ಯವಾಗುವುದಿಲ್ಲ ಎಂದು ಹಿಂದಿನ ಅಂಕಣದಲ್ಲಿ ತಿಳಿಸಿದ್ದೆ. ಆದರೆ, ಅದಕ್ಕೆ ಪ್ರತ್ಯೇಕ ಕೀ ಇಲ್ಲದಿದ್ದರೂ, ‘ಒ’ ಕಾರ ಮೂಡಿಸುವ ವಿಧಾನವನ್ನು ಓದುಗರಾದ ಬೆಂಗಳೂರಿನ ಮಾರ್ಕಾಂಡೇಯ ಎಂಬವರು ಕಂಡುಕೊಂಡು ತಿಳಿಸಿದ್ದಾರೆ. ‘ಕೊ’ ಟೈಪ್ ಮಾಡಬೇಕಿದ್ದರೆ, ಕ + ೆ + ೂ (ಯಾವುದೇ ವ್ಯಂಜನ ಅಕ್ಷರಕ್ಕೆ ಎ ಅಕ್ಷರದ ಸ್ವರಭಾಗ ಮತ್ತು ಊ ಅಕ್ಷರದ ಸ್ವರಭಾಗ ಸೇರಿಸಿದರೆ ಆಯಿತು).

ವಿಜಯ ಕರ್ನಾಟಕದಲ್ಲಿ ಮಾಹಿತಿ@ತಂತ್ರಜ್ಞಾನ ಅಂಕಣ: ಡಿಸೆಂಬರ್ 15, 2014

LEAVE A REPLY

Please enter your comment!
Please enter your name here