ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ 30– 01-ಏಪ್ರಿಲ್-2013
ಹಿಂದೆಲ್ಲಾ ಪತ್ರ ಬರೆದು ಅಂಚೆ ಕಚೇರಿಗೆ ಹೋಗಿ ಡಬ್ಬಕ್ಕೆ ಹಾಕಿ ಮೂರ್ನಾಲ್ಕು ದಿನ ಕಾದ ಬಳಿಕ ಸಂದೇಶ ರವಾನೆಯಾಗುತ್ತಿತ್ತು. ಈ ಕ್ಷಿಪ್ರ ಯುಗದಲ್ಲಿ ಪತ್ರ ಬರೆದು ಮುಗಿಸಿದಾಕ್ಷಣ ಸಂದೇಶವನ್ನು ತಲುಪಬೇಕಾದವರಿಗೆ ತಲುಪಿಸುವುದು ಈಗಿನ ಇ-ಮೇಲ್‌ಗಳ ಪಾತ್ರ. ನಗರ ಪ್ರದೇಶಗಳಲ್ಲಿ ಹೆಚ್ಚಿನವರು ಇ-ಮೇಲ್ ಮೂಲಕವೇ ಎಲ್ಲ ಕೆಲಸಗಳನ್ನೂ ಮಾಡಿಸಿಕೊಳ್ಳುತ್ತಾರೆ. ಬಹುತೇಕ ಕಚೇರಿಗಳಲ್ಲಿ ಪ್ರತಿಯೊಬ್ಬರಿಗೂ ಕಂಪನಿ ಮೇಲ್ ಐಡಿ ಇರುತ್ತದೆ. ಆದರೆ ಗ್ರಾಮೀಣ ಭಾಗದಲ್ಲಿರುವ ಕೆಲವರಿಗೆ ಇಮೇಲ್ ಖಾತೆ ತೆರೆಯಲು ಜ್ಞಾನದ ಕೊರತೆಯೂ, ಆತಂಕವೂ, ಹಿಂಜರಿಕೆಯೂ, ಅದೊಂದು ದೊಡ್ಡ ತಲೆನೋವಿನ ಸಂಗತಿ ಎಂಬ ಭಾವನೆಯೂ ಇದೆ ಎಂಬುದು ಇತ್ತೀಚೆಗಷ್ಟೇ ಕೆಲವರೊಂದಿಗೆ ಮಾತನಾಡುತ್ತಿದ್ದಾಗ ಗಮನಕ್ಕೆ ಬಂದ ಅಂಶ. ಅಂಥವರಿಗಾಗಿ, ಇಮೇಲ್‍ನ ಕೆಲವು ಪ್ರಯೋಜನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:
* ಹಳ್ಳಿಯಲ್ಲೇ ಕುಳಿತುಕೊಂಡು ದೂರದ ಅಮೆರಿಕ ಅಥವಾ ಲಂಡನ್‌ನಲ್ಲಿರುವ ತಮ್ಮ ಮಗ/ಮಗಳೊಂದಿಗೆ ನೇರವಾಗಿ ಮಾತನಾಡುವಂತಾದರೆ? ಹೀಗೆ ಇಂಟರ್ನೆಟ್ ಮೂಲಕ ಮಾತುಕತೆ (ಚಾಟಿಂಗ್), ವೀಡಿಯೋ ಸಂವಾದ ನಡೆಸಬೇಕಿದ್ದರೆ ಇ-ಮೇಲ್ ಖಾತೆ ಅವಶ್ಯ.
* ಮನೆಯಲ್ಲೇ ಕುಳಿತು ಬ್ಯಾಂಕ್ ಖಾತೆಯ ನಿಭಾವಣೆ, ಒಂದು ಖಾತೆಯಿಂದ ಇನ್ನೊಂದಕ್ಕೆ ಹಣ ವರ್ಗಾವಣೆ ಹಾಗೂ ಮೊಬೈಲ್ ರೀಚಾರ್ಜಿಂಗ್, ಡಿಟಿಎಚ್ ಟಿವಿ ಸಂಪರ್ಕಗಳಿಗೆ ರೀಚಾರ್ಜಿಂಗ್… ಇತ್ಯಾದಿಗಳಿಗೆ ಅನುಕೂಲಕರವಾದ ಇಂಟರ್ನೆಟ್ ಬ್ಯಾಂಕ್ ಸೌಲಭ್ಯ ಹೊಂದಬೇಕಿದ್ದರೆ ಇ-ಮೇಲ್ ಅತ್ಯಗತ್ಯ.
* ಕೆಲವು ನಗರಗಳಲ್ಲಿ ಕರೆಂಟ್ ಬಿಲ್, ನೀರಿನ ಬಿಲ್ ಅಥವಾ ದೂರವಾಣಿ ಬಿಲ್ ಕಟ್ಟಲು ಉದ್ದ ಕ್ಯೂನಲ್ಲಿ ನಿಲ್ಲಬೇಕಾಗುತ್ತದೆ. ಇದು ತಪ್ಪಿಸಬೇಕಿದ್ದರೆ, ಮನೆಯಲ್ಲೇ ಕುಳಿತು ಆಯಾ ಸರಕಾರಿ ಇಲಾಖೆಗಳ ವೆಬ್‌ಸೈಟ್ ಮೂಲಕ ಬಿಲ್ ಪಾವತಿ ವ್ಯವಸ್ಥೆ ಇರುತ್ತದೆ. ಇದಕ್ಕೆ ಇ-ಮೇಲ್ ಮತ್ತು ದೂರವಾಣಿ ಸಂಖ್ಯೆಯೇ ಮೂಲ ಆಧಾರ.
* ಉದ್ಯೋಗ ಹುಡುಕಾಟಕ್ಕಾಗಲೀ, ಇಂಟರ್ನೆಟ್ ಮೂಲಕ ವೈವಾಹಿಕ ಸಂಬಂಧಗಳನ್ನು ಕುದುರಿಸುವುದಕ್ಕಾಗಲೀ, ಆಯಾ ವೆಬ್ ಸೈಟ್‌ಗಳಲ್ಲಿ ನೋಂದಾಯಿಸಬೇಕಿದ್ದರೆ ಇ-ಮೇಲ್ ಐಡಿ ಕಡ್ಡಾಯವಾಗಿರುತ್ತದೆ.
* ಈಗ ಜನಪ್ರಿಯವಾಗುತ್ತಿರುವ ಸಾಮಾಜಿಕ ಅಂತರ್ಜಾಲ ತಾಣಗಳಾದ ಫೇಸ್‌ಬುಕ್, ಟ್ವಿಟರ್ ಮುಂತಾದವುಗಳಲ್ಲಿ ಖಾತೆ ತೆರೆಯಲು ಕೂಡ ಇ-ಮೇಲ್ ಬೇಕೇಬೇಕು.
* ಬಸ್ಸು, ರೈಲು ಅಥವಾ ವಿಮಾನ ಪ್ರಯಾಣಕ್ಕೆ ಮನೆಯಲ್ಲೇ ಕುಳಿತು ಸೀಟು ಕಾದಿರಿಸಬೇಕಿದ್ದರೆ ಇ-ಮೇಲ್ ಖಾತೆ ಅವಶ್ಯ.
* ಈಗಿನ ಅತ್ಯಾಧುನಿಕ ಸ್ಮಾರ್ಟ್‌ಫೋನ್/ಟ್ಯಾಬ್ಲೆಟ್ ಖರೀದಿಸಿದರೆ, ಆಯಾ ಕಂಪನಿಗಳ ತಂತ್ರಾಂಶಗಳ ಪರಿಪೂರ್ಣ ಪ್ರಯೋಜನ ಪಡೆದುಕೊಳ್ಳಲು, ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಲು, ಸಾಫ್ಟ್‌ವೇರ್ ಅಪ್‌ಗ್ರೇಡ್ ಮಾಡಿಕೊಳ್ಳಲು ಇ-ಮೇಲ್ ಅತ್ಯಗತ್ಯ.
* ಗೃಹ ಸಾಲ, ವಿಮಾ ಪಾಲಿಸಿಗಳ ಕಂತು ಪಾವತಿಸಬೇಕಿದ್ದರೆ, ಆಯಾ ಕಚೇರಿಗೆ ಹೋಗಬೇಕಾಗಿಲ್ಲ. ಒಂದು ಸಲ ಇ-ಮೇಲ್ ಮೂಲಕ ನೋಂದಾಯಿಸಿಕೊಂಡರೆ ಮನೆಯಿಂದ ಕುಳಿತುಕೊಂಡೇ ಇವೆಲ್ಲವನ್ನೂ ನಿಭಾಯಿಸಬಹುದು.
* ಅಂತರ್ಜಾಲದಲ್ಲಿ ನಿಮ್ಮದೇ ಆದ ಬ್ಲಾಗ್ ತೆರೆಯಲು ಇ-ಮೇಲ್ ಐಡಿಯೇ ಮೂಲಾಧಾರ.
* ಅಂತರ್ಜಾಲ ಮೂಲಕ ಆನ್‌ಲೈನ್ ಶಾಪಿಂಗ್ ಮಾಡಬೇಕಿದ್ದರೆ ಇ-ಮೇಲ್ ಕಡ್ಡಾಯ.
* ದೂರದೂರಿನಲ್ಲಿರುವ ಗೆಳೆಯರನ್ನು, ಬಂಧುಗಳನ್ನು, ಆತ್ಮೀಯರನ್ನು ಸಂಪರ್ಕಿಸುವುದು, ಅವರೊಂದಿಗೆ ನಮ್ಮ ಮನೆಯಲ್ಲಾದ ಕಾರ್ಯಕ್ರಮದ ಚಿತ್ರಗಳನ್ನು ಹಂಚಿಕೊಳ್ಳುವುದು ಇ-ಮೇಲ್‌ನ ಅತ್ಯಂತ ಸಾಮಾನ್ಯ ಉದ್ದೇಶ.
* ಇ-ಮೇಲ್‌ನ ಪಾಸ್‌ವರ್ಡ್ ಮರೆತು ಹೋದರೆ, ಅದನ್ನು ಆಯಾ ಕಂಪನಿಯಿಂದ ಪುನಃ ತಿಳಿದುಕೊಳ್ಳಲು ಮತ್ತೊಂದು ಇ-ಮೇಲ್ ಐಡಿ ಹೊಂದಿರಬೇಕಾಗುತ್ತದೆ.
ಇವಿಷ್ಟು ಇ-ಮೇಲ್ ಹೊಂದುವುದರ ಮೂಲಭೂತ ಪ್ರಯೋಜನಗಳು.
ಇ-ಮೇಲ್ ಖಾತೆ ಹೊಂದಲು ಯಾವುದೇ ರೀತಿ ಹಣ ಖರ್ಚು ಮಾಡಬೇಕಾಗಿಲ್ಲ, ಇಂಟರ್ನೆಟ್ ಸಂಪರ್ಕ, ಹೆಸರು ಮತ್ತು ಮೊಬೈಲ್ ಫೋನ್ ಸಂಖ್ಯೆ ಇದ್ದರೆ ಸಾಕಾಗುತ್ತದೆ. ಬೇಕಿದ್ದರೆ ವಿಳಾಸ, ವಯಸ್ಸು, ಜನ್ಮದಿನ ಇತ್ಯಾದಿ ವಿವರ-ಪ್ರವರ ನಮೂದಿಸಬಹುದು. ಅಷ್ಟೇ.