
ಹೀಗೆ ಬನ್ನಿ….
ಇದು ಭ್ರಮಾಧೀನ ಲೋಕವಲ್ಲ, ಕ್ಷಿಪ್ರ ಸಂದೇಶ ಯುಗದ ವಾಸ್ತವಿಕ ಜಗತ್ತು.
ಇತ್ತ ಮತ್ತೊಂದು ಕಡೆಯಲ್ಲಿ….
ದೊಡ್ಡ ಕಂಪ್ಯೂಟರ್ ಪರದೆಯಲ್ಲಿ, ಗುಡ್ ಮಾರ್ನಿಂಗ್ ಎಂದೋ, ಗುಡ್ ನೈಟ್ ಎಂದೋ… ಮಾಡಿದ ಪೋಸ್ಟ್‌ಗಳಿಗೆ ಒಂದೊಂದು ‘ಲೈಕ್’ ಬಿದ್ದಾಗಲೂ ಮನಸ್ಸಿಗೊಂದಿಷ್ಟು ಪುಳಕ, ಒಂದೊಂದು ಕಾಮೆಂಟಿಗೂ ಲೈಕ್ ಮಾಡಿ ಅವರಿಗೆ ಕೃತಜ್ಞತೆ ಸಲ್ಲಿಸುವ ಆವುಟ; ಇನ್ನೊಂದೆಡೆ, ಆಪ್ತ ಬಂಧುವೋ, ಸ್ನೇಹಿತರೋ “ಈಗಷ್ಟೇ ಹೃದಯಾಘಾತದಿಂದ ನಿಧನರಾದರು” ಅಂತ ಬೇಸರದಿಂದಲೇ ಹಾಕಿದ ಪೋಸ್ಟಿಗೂ ಒಂದಷ್ಟು ‘ಲೈಕ್’ ಮುದ್ರೆ (ಇದರ ಹಿಂದೆ ಗಮನ ಸೆಳೆಯುವ ಮತ್ತು ಸಾಂತ್ವನ ನೀಡುವ ಮನಸ್ಸೂ ಇದ್ದಿರಬಹುದು) – ಜತೆಗೆ ನಮ್ಮ ಟೈಮ್‌ಲೈನ್‌ನಲ್ಲಿ ಬೇಕು-ಬೇಡವಾದ ಪೋಸ್ಟುಗಳೆಲ್ಲವೂ ಭರಪೂರ ಪ್ರವಹಿಸುವ ಅವಾಸ್ತವಿಕ ಮತ್ತು ಒಂದು ರೀತಿಯಲ್ಲಿ ಭ್ರಾಮಕ ಸ್ವರ್ಗ…
ಇವೆರಡರಲ್ಲಿ, ದಿನದಿಂದ ದಿನಕ್ಕೆ ಗೋಜಲಾಗತೊಡಗುತ್ತಿರುವ ಸಾಮಾಜಿಕ ಜಾಲತಾಣಗಳನ್ನು ಹೊಸ ಪೀಳಿಗೆಯ ಮಂದಿ ಡಿಸ್‌ಲೈಕ್ ಮಾಡುತ್ತಿದ್ದಾರೆ! ವಾಸ್ತವ ಮಿತ್ರರೊಂದಿಗೆ ಮನದ ತುಮುಲಗಳನ್ನು ಸುಲಭವಾಗಿ ಹಂಚಿಕೊಳ್ಳಬಲ್ಲ, ಪ್ರಮುಖ ಸಂದೇಶಗಳನ್ನು ಕ್ಷಿಪ್ರವಾಗಿ ರವಾನಿಸಬಲ್ಲ, ಸರಳ ಇಮೋಟಿಕಾನ್‌ಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸಬಲ್ಲ, ತ್ವರಿತವಾಗಿ ಫೋಟೋ, ವೀಡಿಯೋ, ಆಡಿಯೋ ಹಂಚಿಕೊಳ್ಳಲು ಸಾಧ್ಯವಾಗುವ, ಸ್ಪ್ಯಾಮ್ ಹಾವಳಿ ಇಲ್ಲದ, ಗೊತ್ತಿಲ್ಲದ ಅಪರಿಚಿತರ ನೆರಳೂ ಸೋಕದ ವಾಟ್ಸಾಪ್, ಹೈಕ್, ಲೈನ್, ವಿಚಾಟ್ ಮುಂತಾದ ಸಂದೇಶವಾಹಕ ಸೇವೆಗಳಿಗೆ ಥಂಬ್ಸ್ ಅಪ್ ಹೇಳುತ್ತಿದ್ದಾರೆ! ಇದು ಈಗಿನ ಟ್ರೆಂಡ್…..
ನೀರು ನಿಂತಲ್ಲಿ ರೋಗಬಾಧೆ ಇರುತ್ತದೆ. ತಂತ್ರಜ್ಞಾನ ನಿಂತ ನೀರಾಗಿದ್ದರಂತೂ ಜಗತ್ತು ಈ ಪರಿ ಬೆಳೆಯುತ್ತಿರಲಿಲ್ಲ. ಬದಲಾವಣೆ ಸಹಜ ಮತ್ತು ಅನಿವಾರ್ಯ. ಪ್ರಕೃತಿ ಸಹಜವಾದ ಈ ಮೂಲಮಂತ್ರಗಳ ತಳಹದಿಯೊಂದಿಗೆ ಸಾಮಾಜಿಕ ಜಾಲತಾಣಗಳ ಪೋಷಕವರ್ಗವೆಂದು ಪ್ರತಿಪಾದಿತವಾಗಿದ್ದ ಯುವ ಸಮೂಹ, ಈಗ ನಿಧಾನವಾಗಿ ಮೆಸೇಜಿಂಗ್ ಕಿರು ತಂತ್ರಾಂಶಗಳತ್ತ ಹೊರಳುತ್ತಿದೆ ಮತ್ತು ಭವಿಷ್ಯದ ಆನ್‌ಲೈನ್ ಪ್ರಜೆಗಳು ಇವರೇ ಆಗಿರುವುದರಿಂದ, ವೆಬ್ ಆಧಾರಿತ ಸಾಮಾಜಿಕ ಮಾಧ್ಯಮಗಳು ಹಿಂದೆ ಸರಿಯುತ್ತಿವೆ.
ಕಿರಿದೇ ಹಿರಿದಾಗುತ್ತಿದೆ
ಕಳೆದರ್ಧ ದಶಕದಲ್ಲಿ ಮಾಹಿತಿ ತಂತ್ರಜ್ಞಾನ ರಂಗದಲ್ಲಿ ನಡೆದ ಕ್ಷಿಪ್ರಕ್ರಾಂತಿಯು ಜಗತ್ತನ್ನು ಕಂಪ್ಯೂಟರಿನ ದೊಡ್ಡ ಪರದೆಯಿಂದ ಸ್ಮಾರ್ಟ್‌ಫೋನ್‌ನ ಅಂಗೈಯಗಲಕ್ಕೆ ಇಳಿಸಿದೆ. ಫೇಸ್‌ಬುಕ್, ಟ್ವಿಟರ್ ಜಾಲತಾಣಗಳೀಗ ಆ್ಯಪ್‌ಗಳೆಂದು ಮುದ್ದಾಗಿ ಕರೆಯಬಲ್ಲ ಕಿರು ತಂತ್ರಾಂಶಗಳ ರೂಪದಲ್ಲಿ ಸ್ಮಾರ್ಟ್‌ಫೋನ್‌ನೊಳಗೆ ಬಂದು ಕುಳಿತಿವೆ. ಇದುವರೆಗೆ ಯುವ ಮನಸ್ಸುಗಳ ಆಟದಂಗಳವಾಗಿದ್ದ ಫೇಸ್‌ಬುಕ್, ಡೆಲೀಷಿಯಸ್, ಕೋರಾ, ಫ್ಲಿಕರ್, ಬ್ಲಾಗ್, ಗೂಗಲ್ ಪ್ಲಸ್, ಹೈಫೈವ್, ಐಬಿಬೋ, ಇನ್‌ಸ್ಟಾಗ್ರಾಂ, ಟ್ವಿಟರ್, ಲಿಂಕ್ಡ್ಇನ್, ನಿಂಗ್, ಪಿನ್‌ಟರೆಸ್ಟ್, ಸ್ಪೇಸಸ್, ಟಂಬ್ಲರ್, ವಾಕ್ಸ್, ಯಾಮರ್, ಲೈವ್‌ಜರ್ನಲ್ ಮುಂತಾದ ತಾಣಗಳು, ಜನಮಾನಸದಿಂದ ಮರೆಯಾಗಿ ಹೋಗಿರುವ ಓರ್ಕುಟ್ ಸಾಲಿಗೆ ಸೇರುತ್ತಿವೆಯೇ?
ಕಳೆದ ದಶಕದ ಉತ್ತರಾರ್ಧವನ್ನೇ ಗಮನಿಸಿ ನೋಡಿ. ಬ್ಲಾಗ್‌ಗಳೆಂಬ ವೆಬ್ ಲಾಗ್‌ಗಳ ಮೂಲಕವಾಗಿ ಸ್ನೇಹ ಸೇತುವನ್ನು ರಚಿಸುತ್ತಿದ್ದವರದೆಷ್ಟು ಮಂದಿ! ಬ್ಲಾಗ್ ಬರೆಯುವುದು, ನನಗೂ ಒಂದು ವೆಬ್ ಸೈಟ್ ಇದೆ ಎಂದು ಹೆಮ್ಮೆ ಪಟ್ಟುಕೊಳ್ಳುತ್ತಿದ್ದ ದಿನಗಳವು. ಬೇರೊಬ್ಬರ ಬ್ಲಾಗಿಗೆ ಇಣುಕಿ, ಇಷ್ಟವಾದರೆ ಒಂದು ಕಾಮೆಂಟ್ ಚಿಟುಕುವುದು, ಕುಟುಕುವುದು, ವಿರೋಧಿಸುವುದು, ಚರ್ಚಿಸುವುದು, ಉಭಯ ಕುಶಲೋಪರಿ… ಹೀಗೆ ಬ್ಲಾಗುಗಳಲ್ಲೇ ಸಂಬಂಧದ ಬೆಸುಗೆಯಾಗುತ್ತಿತ್ತು. ಆ ಕಾಲದಲ್ಲಿ, ಸರಿಸುಮಾರು 11 ವರ್ಷಗಳ ಹಿಂದೆ, 2004ರ ಫೆಬ್ರವರಿ ತಿಂಗಳಲ್ಲಿ, ಮಾರ್ಕ್ ಜುಕರ್‌ಬರ್ಗ್ ತನ್ನ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಕಾಲೇಜು ಸಹಪಾಠಿಗಳಾದ ಆ್ಯಂಡ್ರ್ಯೂ ಮೆಕಲಮ್, ಎಡ್ವರ್ಡೋ ಸವೆರಿನ್, ಕ್ರಿಸ್ ಹ್ಯೂಸ್ ಹಾಗೂ ಡಸ್ಟಿನ್ ಮಾಸ್ಕೊವಿಜ್ ಜತೆಗೆ ಸೇರಿಕೊಂಡು, ಕಾಲೇಜಿನವರಿಗಾಗಿ ಹಚ್ಚಿದ ಕಿಡಿಯೊಂದು ಈ ಪರಿ ಜಾಗತಿಕವಾಗಿ 135 ಕೋಟಿ ಮಾಸಿಕ ಸಕ್ರಿಯ ಬಳಕೆದಾರರೊಂದಿಗೆ ಅಗಾಧವಾಗಿ ಬೆಳೆಯುತ್ತದೆಂದು ಯಾರೂ ಪರಿಭಾವಿಸಿರಲಿಲ್ಲ. ಇಂದು ಬಲುದೊಡ್ಡ ಕಂಪನಿಯಾಗಿ ಬೆಳೆದ ಫೇಸ್‌ಬುಕ್‌ನಲ್ಲಿ ಕೆಲಸ ಮಾಡುತ್ತಿರುವವರ ಸಂಖ್ಯೆ ಎಂಟೂವರೆ ಸಾವಿರ; ಅದರ ಆಸ್ತಿಯ ಮೌಲ್ಯ 1790 ಕೋಟಿ ಡಾಲರ್; ಭಾರತದಲ್ಲಿ ಇರುವ ಮಾಸಿಕ ಸಕ್ರಿಯ ಬಳಕೆದಾರರ ಸಂಖ್ಯೆ 11.20 ಕೋಟಿ; ಇದರಲ್ಲಿ ಪ್ರತಿ ದಿನ ಬಳಸುತ್ತಿರುವ ಭಾರತೀಯರ ಸರಾಸರಿ ಸಂಖ್ಯೆ ಸುಮಾರು ಅರ್ಧದಷ್ಟು, ಅಂದರೆ 5 ಕೋಟಿಯಷ್ಟು ಮಾತ್ರ.
ಸ್ವಲ್ಪವೇ ಹಿಂದೆ ಕಣ್ಣು ಹಾಯಿಸಿದರೆ, ಹುಟ್ಟುಹಬ್ಬದ ದಿನದಂದು ರಾಶಿ ರಾಶಿ ಶುಭಾಶಯಗಳ ಕಾಮೆಂಟ್ ನೋಡಿ ಬೀಗಿದವರು ನಾವು ನೀವು. ಈ ವರ್ಷ ಸಾಮಾನ್ಯ ಪ್ರೊಫೈಲ್ ಒಂದಕ್ಕೆ ಬಿದ್ದಿರುವ ಶುಭಾಶಯಗಳ ಪ್ರಮಾಣ ನೋಡಿದರೆ, ಜನರಿಗೆ ಸಮಯವಿಲ್ಲವೆಂಬೋದು ಗೊತ್ತಾಗುತ್ತದೆ. ಫೇಸ್‌ಬುಕ್ ತಾಣವನ್ನೇ ಅವಲೋಕಿಸಿದರೆ, ಕೆಲವೊಂದಿಷ್ಟು ಅಪವಾದಗಳ ಹೊರತಾಗಿ, ನಮ್ಮ ಸ್ನೇಹಿತ ವರ್ಗದಲ್ಲಿಯೇ ಅಪ್‌ಡೇಟ್‌ಗಳು ಕಡಿಮೆಯಾಗತೊಡಗಿವೆ ಎಂಬುದು ಗಮನಕ್ಕೆ ಬರುತ್ತದೆ. ಅದರಲ್ಲಿನ ಪ್ರೈವೆಸಿ ವಿಚಾರಗಳು, ಅನವಶ್ಯಕ ಕಾಲೆಳೆದಾಟ, ಗುಡ್-ಮಾರ್ನಿಂಗ್-ಗುಡ್ ನೈಟ್‌ಗಷ್ಟೇ ಸೀಮಿತವಾದ ಪೋಸ್ಟುಗಳನ್ನು ನೋಡಿ ಬೇಸತ್ತವರು, ತಮಗೆ ಆತ್ಮೀಯರೆನ್ನಿಸಿಕೊಂಡವರನ್ನು ಕರೆದುಕೊಂಡು ವಾಟ್ಸಾಪ್, ಲೈನ್, ಹೈಕ್, ಟೆಲಿಗ್ರಾಂ, ವೈಬರ್, ವಿಚಾಟ್, ಗೂಗಲ್ ಹ್ಯಾಂಗೌಟ್ಸ್, ಸ್ಕೈಪ್, ಎಫ್‌ಬಿ ಮೆಸೆಂಜರ್ ಮುಂತಾದ ಸಂದೇಶವಾಹಕ ಆ್ಯಪ್‌ಗಳತ್ತ ಮುಖ ಮಾಡುತ್ತಿದ್ದಾರೆ.
ಈ ಅಂಶವು ನಮ್ಮ ಗಮನಕ್ಕೆ ಮಾತ್ರವೇ ಬಂದಿರುವುದಲ್ಲ. ಸ್ವತಃ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಸಂಸ್ಥೆಯ ಕಳೆದ ವರ್ಷದ ಮಹಾಸಭೆಯಲ್ಲಿ. ವಿಶೇಷವಾಗಿ ಹದಿಹರೆಯದ ಬಳಕೆದಾರರ ಸಂಖ್ಯೆ ಕುಸಿಯುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಅಮೆರಿಕ ಮಾರುಕಟ್ಟೆಯಲ್ಲಿ ಫೇಸ್‌ಬುಕ್ ಶೇರು ಬೆಲೆಗಳು ಕುಸಿತವಾಗಿ ‘ಇಲ್ಲಿ ಎಲ್ಲವೂ ಸರಿ ಇಲ್ಲ’ ಎಂಬ ಸಂದೇಶವೂ ಬಂದಿದೆ. ಫೇಸ್‌ಬುಕ್ ಉದ್ಯೋಗಿಗಳ ಕುಸಿಯುತ್ತಿರುವ ಮನಸ್ಥೈರ್ಯ ವರ್ಧಿಸಲೆಂದೇ ಇತ್ತೀಚೆಗೊಂದು ಸಭೆ ನಡೆದಿತ್ತು ಎಂಬುದನ್ನು ವಾಲ್ ಸ್ಟ್ರೀಟ್ ಜರ್ನಲ್ ಈಗಾಗಲೇ ಜಗಜ್ಜಾಹೀರು ಮಾಡಿದೆ.
ಟೀನೇಜರ್‌ಗಳು ಹಿಂದಿನಷ್ಟು ಉಮೇದಿನಿಂದ ಸಾಮಾಜಿಕ ಜಾಲದಲ್ಲಿ ಸಕ್ರಿಯರಾಗಿಲ್ಲ ಎಂಬುದಕ್ಕೂ, ಫೇಸ್‌ಬುಕ್ ವ್ಯಕ್ತಪಡಿಸಿರುವ ಕಳವಳಕ್ಕೂ, ಈಗಿನ ವಿದ್ಯಮಾನಕ್ಕೂ ಸಾಕಷ್ಟು ತಾಳೆಯಾಗುತ್ತದೆ.
ಅಮೆರಿಕದ ಫ್ರ್ಯಾಂಕ್ ಎನ್ ಮ್ಯಾಗಿಡ್ ಅಸೋಸಿಯೇಟ್ಸ್ ನಡೆಸಿದ ಸಮೀಕ್ಷೆಯಲ್ಲಿ ಕಂಡುಬಂದಿರುವುದೂ ಇದೇ. ಕಳೆದ ವರ್ಷ ಅಮೆರಿಕದ ಶೇ.94ರಷ್ಟು ಟೀನೇಜರ್‌ಗಳು ಫೇಸ್‌ಬುಕ್ ಬಳಸುತ್ತಿದ್ದರೆ, ಈ ವರ್ಷ ಇದೇ ಹದಿಹರೆಯದವರ ಪ್ರಮಾಣ ಶೇ.88 ಮಾತ್ರ. ಅಂತೆಯೇ ಎಲ್ಲ ವಯಸ್ಸಿನವರನ್ನೂ ಸೇರಿಸಿದರೆ, ಎರಡು ವರ್ಷಗಳ ಹಿಂದೆ ಶೇ.93 ಮಂದಿ ಫೇಸ್‌ಬುಕ್‌ಗೆ ಲಾಗಿನ್ ಆಗುತ್ತಿದ್ದರೆ, ಈ ವರ್ಷ ಇದರ ಪ್ರಮಾಣ ಶೇ.90ಕ್ಕೆ ಇಳಿದಿದೆ.
ಪ್ರಸ್ತುತ ಫೇಸ್‌ಬುಕ್‌ನಲ್ಲಿ ಸಕ್ರಿಯರಾಗಿರುವವರಲ್ಲಿ ಅಪ್ಪ, ಅಮ್ಮ, ಆಂಟಿ, ಅಂಕಲ್, ಅಜ್ಜಿ, ತಾತ ಎಲ್ಲರೂ ಸೇರಿದ್ದಾರೆ. ನಾವೇನು ಮಾಡುತ್ತಿದ್ದೇವೆಂಬುದು ನಮ್ಮ ಶಿಕ್ಷಕರಿಗೋ, ನಮ್ಮ ಬಾಸ್‌ಗೋ… ಹೀಗೆ ಇಡೀ ಜಗತ್ತಿಗೇ ತಿಳಿಯುತ್ತದೆ ಎಂಬ ಆತಂಕವೂ ಯುವಜನರನ್ನು ಈ ಜಾಲತಾಣಗಳಿಂದ ವಿಮುಖರನ್ನಾಗಿಸಿರಬಹುದು.
ಹದಿಹರೆಯದ ಪ್ರೇಮ ಸಂಭಾಷಣೆಯಿಂದಾಗಿಯೇ ಸಾಕಷ್ಟು ದುಡ್ಡು ಮಾಡುತ್ತಿದ್ದ ಮೊಬೈಲ್ ಸೇವಾ ಕಂಪನಿಗಳಿಗೆ ಬಲುದೊಡ್ಡ ಹೊಡೆತ ಬಿದ್ದಿದ್ದು ಐದು ವರ್ಷಗಳ ಹಿಂದೆ ಚಾಲ್ತಿಗೆ ಬಂದಿದ್ದ ಈ ಮೊಬೈಲ್ ಟೆಕ್ಸ್ಟ್ ಮೆಸೇಜಿಂಗ್ ಟೂಲ್‌ಗಳಿಂದ. ಇನ್‌ಸ್ಟಾಲ್ ಮಾಡಿಕೊಂಡು ಇಂಟರ್ನೆಟ್ ಪ್ಯಾಕ್ ಹಾಕಿಸಿಕೊಂಡುಬಿಟ್ಟರೆ, ಅನಿಯಮಿತವಾಗಿ ಸಂದೇಶಗಳನ್ನು, ಫೋಟೋ-ವೀಡಿಯೋಗಳನ್ನು ಹಂಚಿಕೊಳ್ಳಬಹುದಷ್ಟೇ ಅಲ್ಲದೆ, ಬೇರೆ ಇಂಟರ್ನೆಟ್ ತಾಣಗಳಲ್ಲಿಯೂ ಆನ್‌ಲೈನ್ ವಿಹಾರ ಮಾಡಬಹುದಾಗಿದೆ. ಎಸ್ಸೆಮ್ಮೆಸ್ ಸಂದೇಶಗಳು ಕೇವಲ ಅಧಿಕೃತವಾದ ಸಂವಹನಕ್ಕಷ್ಟೇ ಸೀಮಿತವಾಗುತ್ತಿರುವುದು ಕಹಿ ಸತ್ಯ.
ಫೇಸ್‌ಬುಕ್‌ನಿಂದ ವಿಮುಖವಾದ ಮನಸ್ಸುಗಳು ಈ ಚಾಟಿಂಗ್ ಆ್ಯಪ್‌ಗಳಲ್ಲಿ ಸಾಕಷ್ಟು ಗ್ರೂಪ್‌ಗಳನ್ನು ಕಟ್ಟಿಕೊಂಡವು. ಕ್ಲಾಸ್‌ಮೇಟ್ಸ್ ಅಂತ ಒಂದು ಗ್ರೂಪ್, ಟೀನ್ ಅಡ್ಡಾ ಅಂತ ತುಂಟತನ ಮತ್ತು ಪೋಲಿ ಸಂದೇಶಗಳನ್ನು ಹಂಚಿಕೊಳ್ಳುವುದಕ್ಕಾಗಿಯೇ ಇರುವ ಗ್ರೂಪ್, ಕ್ಲೋಸ್ ಫ್ರೆಂಡ್ಸ್ ಅಂತ ಮತ್ತೊಂದು ಗ್ರೂಪ್, ಕಲೆ-ಸಂಸ್ಕೃತಿ ಮುಂತಾದವುಗಳಲ್ಲಿ ಆಸಕ್ತಿಯಿದ್ದರೆ ಅದಕ್ಕಾಗಿಯೇ ಮತ್ತೊಂದು ಗ್ರೂಪ್…. ಹೀಗೆ, ಸೀಮಿತ ವಿಷಯಗಳಿಗೆ ಸಂಬಂಧಿಸಿದ ಪ್ರತ್ಯೇಕ ಬಳಗ ಕಟ್ಟಿಕೊಂಡು ಪ್ರತಿ ದಿನ ಪ್ರತಿ ಕ್ಷಣ ಸಂವಹನ ನಡೆಸುವುದು ಸಾಧ್ಯ. ಫೇಸ್‌ಬುಕ್‌ನಲ್ಲಿರುವಂತೆ ನಾವು ಲೈಕ್ ಮಾಡಿದವರೆಲ್ಲರ ಚಟುವಟಿಕೆಗಳು ನಮ್ಮ ನ್ಯೂಸ್‌ಫೀಡ್‌ನಲ್ಲಿ ಬರುವುದು, ಪದೇ ಪದೇ ಅನವಶ್ಯ ನೋಟಿಫಿಕೇಶನ್ ಬರುವುದು… ಈ ತ್ರಾಸ ಇರುವುದಿಲ್ಲ. ಪ್ರೈವೆಸಿಯೂ ಇದೆ. ಇಂಟರ್ನೆಟ್ ದರ ಮತ್ತು ಕೈಗೆಟಕುವಷ್ಟು ಅಗ್ಗವಾಗಿಬಿಟ್ಟಿರುವ ಹ್ಯಾಂಡ್‌ಸೆಟ್‌ಗಳು ಕೂಡ ಈ ಟೆಕ್ಟ್ಸ್ ಮೆಸೇಜಿಂಗ್ ಆ್ಯಪ್‌ಗಳ ಜನಪ್ರಿಯತೆಗೆ ಪೂರಕ ವಾತಾವರಣ ಕಲ್ಪಿಸಿದ್ದು ಸುಳ್ಳಲ್ಲ.
ಫೇಸ್‌ಬುಕ್‌ನಲ್ಲಿ ಒಂದರ್ಧ ಗಂಟೆ ಜಾಲಾಡಿಬಿಟ್ಟರೆ, ಅದು ನಮ್ಮ ಬ್ಯಾಟರಿಯನ್ನಷ್ಟೇ ಕ್ಷಿಪ್ರಗತಿಯಲ್ಲಿ ಹೀರಿಕೊಳ್ಳುವುದಲ್ಲ, ಬದಲಾಗಿ, ನ್ಯೂಸ್‌ಫೀಡ್ ಸ್ಕ್ರಾಲ್ ಮಾಡುತ್ತಿದ್ದಂತೆ ಲೋಡ್ ಆಗುತ್ತಲೇ ಇರುವ ಫೋಟೋಗಳಿಂದಾಗಿ ಡೇಟಾ ಪ್ಯಾಕ್ ಕೂಡ (ಅನಿಯಮಿತ ಇಲ್ಲದಿದ್ದರೆ) ಬೇಗನೇ ಖಾಲಿಯಾಗಿಬಿಡುತ್ತದೆ. ಆದರೆ, ಮೆಸೇಜಿಂಗ್ ಸೇವೆಗಳಿಗೆ ಹಾಗಲ್ಲ, ಬೇಕಾಗಿರುವುದನ್ನು ಮಾತ್ರವೇ ಡೌನ್‌ಲೋಡ್ ಮಾಡಿಕೊಳ್ಳುವ ಆಯ್ಕೆ ಇದೆ. 2ಜಿ ಸಂಪರ್ಕದಲ್ಲೂ ಸಿಗ್ನಲ್ ದುರ್ಬಲ ಎಂಬ ಅಡ್ಡಿಯಿಲ್ಲದೆ ಸುಲಲಿತವಾಗಿ, ಕ್ಷಿಪ್ರವಾಗಿ ಇವು ಕಾರ್ಯನಿರ್ವಹಿಸುತ್ತವೆ; ಜಾಹೀರಾತುಗಳ ಕಿರಿಕಿರಿಯೂ ಇರುವುದಿಲ್ಲ.
ಮೆಸೇಜಿಂಗ್ ಆ್ಯಪ್‌ಗಳು ವಾಸ್ತವ ಬದುಕಿಗೆ ಹತ್ತಿರವಾಗಿದ್ದರೆ, ಫೇಸ್‌ಬುಕ್ ಅವಾಸ್ತವಿಕ ಜಗತ್ತಿನ ಪ್ರತಿನಿಧಿಯಷ್ಟೆ. ನಮಗೆ ಏನೇನೂ ಗೊತ್ತಿಲ್ಲದವರೊಂದಿಗೆ ಹರಟುವುದಕ್ಕಿಂತ ಗೊತ್ತಿರುವವರ ಜತೆಗೆ ನೇರ ಸಂಭಾಷಣೆ ನಡೆಸುವುದರಲ್ಲಿ ಅರ್ಥವಿದೆ ಮತ್ತು ಸುರಕ್ಷಿತ ಎಂಬುದು ಯುವಜನರಿಗೂ ಅನ್ನಿಸತೊಡಗಿದೆ.
ಸ್ವತಃ ಫೇಸ್‌ಬುಕ್ಕೇ ಕೆಲವು ತಿಂಗಳ ಹಿಂದೆ ವಾಟ್ಸಾಪ್ ಅನ್ನು ಖರೀದಿಸಿಬಿಟ್ಟಿತು ಅಂದರೆ ಮೆಸೇಜಿಂಗ್ ಆ್ಯಪ್‌ಗಳ ಜನಪ್ರಿಯತೆಗೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ? ಇದೇ ಕಾರಣಕ್ಕೆ, ಮೈಕ್ರೋಸಾಫ್ಟ್ (ಸ್ಕೈಪ್), ಗೂಗಲ್ (ಹ್ಯಾಂಗೌಟ್), ಬ್ಲ್ಯಾಕ್‌ಬೆರಿ (ಬಿಬಿ ಮೆಸೆಂಜರ್), ಆ್ಯಪಲ್ (ಐ-ಮೆಸೇಜ್) ಜತೆಗೆ, ಫೇಸ್‌ಬುಕ್ ಕೂಡ ಪ್ರತ್ಯೇಕವಾದ ಮೆಸೆಂಜರ್ ಆ್ಯಪ್‌ಗಳನ್ನು ರೂಪಿಸಿ, ಅದರ ಬೆಳವಣಿಗೆಗೆ ಹೆಚ್ಚು ಒತ್ತು ನೀಡುತ್ತಿವೆ.
ಇಷ್ಟಾಗಿಯೂ ಬದಲಾವಣೆಯೇ ಜಗದ ನಿಯಮ. ಈ ಮೆಸೇಜಿಂಗ್ ಆ್ಯಪ್‌ಗಳ ಜಾಗದಲ್ಲಿ ಹೊಸತನದ ನಿರೀಕ್ಷೆಯಲ್ಲಿ, ನವೀನ ತಂತ್ರಜ್ಞಾನವನ್ನು ಅಪ್ಪಿ-ಒಪ್ಪಿಕೊಳ್ಳಲು ಕಾತರಿಸುತ್ತಿದೆ ಯುವ ಜಗತ್ತು.
ಆ್ಯಪ್ ಅನುಕೂಲಗಳು
* ಗೊತ್ತಿರುವವರನ್ನು ಮಾತ್ರವೇ ಸ್ನೇಹಿತರಾಗಿಸಿಕೊಳ್ಳಬಹುದು. ಮೊಬೈಲ್ ಸಂಖ್ಯೆ ಇರಲೇಬೇಕಲ್ಲ!
* ಕ್ಷಿಪ್ರ ಸಂದೇಶ ರವಾನೆ, ಸಿಗ್ನಲ್ ವೀಕ್ ಎಂಬ ಕಿರಿಕಿರಿ ಇರುವುದಿಲ್ಲ
* ಇವು ಕೇವಲ ಟೆಕ್ಸ್ಟ್ ಕಳುಹಿಸುವ ಆ್ಯಪ್‌ಗಳಾಗಿ ಉಳಿದಿಲ್ಲ; ವೀಡಿಯೋ, ಫೋಟೋ, ಧ್ವನಿ ಸಂದೇಶವೂ ಕ್ಷಿಪ್ರ ರವಾನೆ
* ಸ್ಪ್ಯಾಮ್ ಇಲ್ಲ, ಪರಿಚಯವಿಲ್ಲದವರು ಹಾಯ್ ಹಲೋ!, ಊಟವಾಯಿತಾ? ತಿಂಡಿಯಾಯಿತಾ? ಕೇಳುವುದಿಲ್ಲ
* ಗೊತ್ತಿದ್ದೂ, ಗೊತ್ತಿಲ್ಲದೆಯೂ, ಕ್ಯಾಂಡಿ ಕ್ರಶ್ ಆಟಕ್ಕೋ, ಇನ್ಯಾವುದೋ ಆಟಕ್ಕೋ ಕರೆಯುವ ಫಜೀತಿ ಇಲ್ಲ
* ನಮ್ಮ ಅಕೌಂಟ್ ಹ್ಯಾಕ್ ಮಾಡಿ, ನಮ್ಮ ಪರವಾಗಿ ಅಸಭ್ಯ, ಅಶ್ಲೀಲ ಸಂದೇಶ ರವಾನಿಸುವ ಆತಂಕವಿಲ್ಲ.
[ವಿಜಯ ನೆಕ್ಸ್ಟ್ ವಾರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ]
http://vijayanextepaper.com/Details.aspx?id=4443&boxid=61211171
http://vijayanextepaper.com/Details.aspx?id=4445&boxid=61253125