ಸ್ಮಾರ್ಟಾಗುವ ಸ್ಲೇಟುಗಳು; ಬಳಪ ಹಿಡಿವ ಟೆಕೀಗಳು

[ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಲೇಖನ]

ಆಧುನಿಕ ತಂತ್ರಜ್ಞಾನದ ಅಭಿವೃದ್ಧಿಯ ಭರಾಟೆಯಿಂದಾಗಿ ಈ ವಿಶಾಲವಾದ ಜಗತ್ತು ನಮ್ಮ ಕೈಬೆರಳುಗಳ ಎಡೆಯಲ್ಲಿ ಸಿಲುಕಿ ನರಳುವಂತಾಗಿದೆೆ. ಆದರೆ ಭೂಮಿ ಗುಂಡಗಿದೆ ಎಂಬುದನ್ನು ಮರೆಯುವಂತಿಲ್ಲ. ಭೂಮಿ ಗುಂಡಗಿರುವುದಕ್ಕೂ ತಂತ್ರಜ್ಞಾನ ಬೆಳೆದಿದ್ದಕ್ಕೂ ಏನು ಸಂಬಂಧ ಅಂತ ಅಚ್ಚರಿ ಪಡುತ್ತಿದ್ದೀರಾ? ಹಾಗಿದ್ದರೆ ಮುಂದೆ ಓದಿ.

ಒಂದು ರಸ್ತೆ ವರ್ತುಲಾಕಾರದಲ್ಲಿದೆ ಎಂದಾದರೆ, ಅದರಲ್ಲಿ ಎಷ್ಟೇ ಮುಂದಕ್ಕೆ ನುಗ್ಗಿ ನಡೆದು ಸಾಗಿದರೂ ನಾವು ಎಲ್ಲಿಂದ ಆರಂಭಿಸಿದ್ದೇವೋ ಅಲ್ಲಿಗೇ ಬಂದು ಸೇರುತ್ತವಲ್ಲವೇ? ಹಾಗೆಯೇ ಈ ತಂತ್ರಜ್ಞಾನ ಮತ್ತು ಫ್ಯಾಶನ್ ಇತ್ಯಾದಿ ಕೂಡ.

ಇನ್ನೂ ಒಂಚೂರು ಸ್ಪಷ್ಟವಾಗಿ ಹೇಳಬೇಕೆಂದಾದರೆ, ಹಿಂದಿನ ಕಾಲದಲ್ಲಿ ಕೌಪೀನದ ಜಾಗದಲ್ಲಿ ಬಂದ ಚಡ್ಡಿ, ಲಂಗ-ರವಿಕೆ ಫ್ಯಾಶನ್ ಆಗಿಬಿಟ್ಟಿತು. ಆ ಬಳಿಕ ಸ್ವಲ್ಪ ಉದ್ದನೆಯ ಪ್ಯಾಂಟು, ಮತ್ತೂ ಉದ್ದದ ಲಂಗ ಸಹಿತ ದಾವಣಿ ಬಂತು. ಈಗ ಮತ್ತೆ ಮರಳಿ ಚಡ್ಡಿಗೇ ಮತ್ತು ಮಿಡ್ಡಿಗೇ, ಕೊಂಚ ಗಿಡ್ಡವಾಗಿಯೇ ಬಂದು ನಿಂತಿದೆಯಲ್ಲಾ! ಅದನ್ನು ಬರ್ಮುಡಾ, ಮಿನಿ, ಮಿಡಿ, ಟೂಪೀಸ್ ಎಂದೆಲ್ಲಾ ಬಹು ನಾಮಗಳಿಂದ ಕರೆಯುತ್ತಾರಷ್ಟೇ. ಅದೇ ರೀತಿ, ಸೀರೆಯೇ ನಮ್ಮ ಸಂಪ್ರದಾಯ, ಪರಂಪರೆ ಎಂದೆಲ್ಲಾ ನಾವು ಸ್ವೀಕರಿಸಿಕೊಂಡುಬಿಟ್ಟಿದ್ದೆವು. ಒಂದು ಸಂಧಿಕಾಲದಲ್ಲಿ ಅದು ಇನ್ನೇನು ಅವಸಾನ ಕಾಣುತ್ತದೆ ಎಂಬಂತಹಾ ಪರಿಸ್ಥಿತಿಯೂ ಇತ್ತು. ಅದರ ಜಾಗದಲ್ಲಿ ಚೂಡಿದಾರ, ಪ್ಯಾಂಟು ಶರಟು, ಜೀನ್ಸ್, ಅದು ಇದು ಎಂದೆಲ್ಲಾ ಬಂದು ಸೇರಿಕೊಂಡವು. ಇದೀಗ ಸೀರೆ ಮತ್ತೆ ಗಮನ ಸೆಳೆಯುತ್ತಿದೆ, ಆಕರ್ಷಣೆ ಪಡೆಯುತ್ತಿದೆ. ಅದು ಕೂಡ ಹೇಗೆ? ಫ್ಯಾಶನ್‌ನ ಹೊಸಾ ರೂಪದಲ್ಲಿ! ಅಂದ್ರೆ ಸೀರೆ ಉಡೋದು ಕೂಡ ಫ್ಯಾಶನ್ ಅಂತ ಆಗತೊಡಗಿದೆ. ಅಂದರೆ ಎಲ್ಲವೂ ಒಂದು ಸುತ್ತು ತಿರುಗಿ ಕೊನೆಗೆ ಹಿಂದೆ ಇದ್ದಲ್ಲಿಗೇ ಬಂದು ತಲುಪಿದೆ.

ಪರಿಸ್ಥಿತಿ ಹೀಗಿರುವಾಗ, ತಂತ್ರಜ್ಞಾನವೂ ಹೀಗೆಯೇ ಅಲ್ಲವೇ? ಒಂದು ಉದಾಹರಣೆಯೆಂದರೆ, ಜಗತ್ತನ್ನೇ ಕಿರಿದಾಗಿಸಿದೆ ಅಂತೆಲ್ಲಾ ಮೆಚ್ಚಿದವರ, ಬೆಚ್ಚಿದವರ, ಟೀಕಾಕಾರರ, ಕುತೂಹಲಿಗಳೆಲ್ಲರಿಂದಲೂ ಆರೋಪವನ್ನು ಹೊತ್ತುಕೊಂಡ ಮೊಬೈಲ್ ಫೋನ್. ಆರಂಭದಲ್ಲಿ ಉದ್ದನೆಯ ಬಾರುಕೋಲು ಮಾದರಿಯ ಆಂಟೆನಾ ಹೊಂದಿದ ದೊಡ್ಡ ಗಾತ್ರದ ಮೊಬೈಲ್ ಫೋನ್‌ಗಳನ್ನು ನೋಡುತ್ತಿದ್ದೆವು. ಜಗತ್ತು ಮತ್ತಷ್ಟು ಕಿರಿದಾಗುತ್ತಿದೆ ಎನ್ನತೊಡಗಿದಾಗ ಅದಕ್ಕೆ ಅನುರೂಪವಾಗಿಯೋ, ಅನುಗುಣವಾಗಿಯೋ, ಮೊಬೈಲ್ ಫೋನ್‌ನ ಗಾತ್ರವೂ ಕಿರಿದಾಗತೊಡಗಿತು. ಅಂಗೈಯೊಳಗೆ ಮೊಬೈಲ್ ಬೆಚ್ಚನೆ ಕುಳಿತಿರುವಷ್ಟು ಕಿರಿದಾಯಿತು. ಅದರಲ್ಲಿ ಟೈಪಿಸಲು ಕಡ್ಡಿಗಳನ್ನು (ಸ್ಟೈಲಸ್) ನೀಡಲಾಯಿತು. ಜೇಬಿನೊಳಗೆ ಮೊಬೈಲ್ ಇದೆ ಎಂದೋ, ಅಥವಾ ಅದೆಲ್ಲಾದರೂ ಬಿದ್ದು ಹೋಯಿತೆಂದೋ ತಿಳಿಯಲಾರದಷ್ಟೂ ಕಿರಿ ಕಿರಿ ರೂಪದಲ್ಲಿ ಬಂದವು ಕೆಲವು ಮೊಬೈಲುಗಳು. ಇಂಥಲ್ಲೆಲ್ಲಾ ಕರೀನಾ ಕಪೂರಳ ‘ಸೈಜ್ ಜೀರೋ’ ನೆನಪಾಗುತ್ತಿತ್ತು. ಆದರೆ ಈಗ?

ಮೊಬೈಲ್ ಫೋನ್‌ಗಳ ಗಾತ್ರ ಮತ್ತೆ ಬೆಳೆಯತೊಡಗಿದೆ. ಪಾಶ್ಚಾತ್ಯ ಜೀವನ ಶೈಲಿಯ ಅನುಕರಣೆಯಿಂದಾಗಿ ಪುರುಷರು-ಮಹಿಳೆಯರೆಂಬ ಭೇದವಿಲ್ಲದೆ ಭಾರತೀಯರ ‘ಸೈಜ್’ ಕೂಡ ಹೇಗೆ ಏರುತ್ತಾ ಹೋಗುತ್ತಿದೆಯೋ, ಮೊಬೈಲ್ ಕೂಡ ಅದೇ ಹಾದಿ ಹಿಡಿಯತೊಡಗಿದೆ. ಜನರು ಎರಡೆರಡು ಮೂರುಮೂರು ಮೊಬೈಲ್ ಫೋನುಗಳನ್ನು ಹಿಡಿಯುವ ಮಟ್ಟಕ್ಕೆ ಬೆಳೆದಿದ್ದಾರಾದರೂ, ಅವುಗಳ ಗಾತ್ರವು ಅವರಿಗೆ ಸಮಸ್ಯೆಯೇ ಆಗುತ್ತಿಲ್ಲ. ಅಗಲ ಸ್ಕ್ರೀನ್‌ನ ಫೋನುಗಳು, ಉದ್ದನೆಯ ಮೊಬೈಲುಗಳು, ಉದ್ದ ಇನ್ನೂ ಸಾಲದಾಯಿತು ಎಂಬ ಕಾರಣಕ್ಕೆ ಪರ್ಸಿನಂತೆ ಮಡಚಿ ಜೇಬಿನೊಳಗಿಟ್ಟುಕೊಳ್ಳಬಲ್ಲ (ಫ್ಲಿಪ್) ಫೋನುಗಳು ಬಂದವು. ಅದನ್ನು ತುಂಬಾನೇ ಸ್ಮಾರ್ಟ್ ಆಗಿರೋ ಫೋನುಗಳೆಂದು ಕರೆದರು. ಇವುಗಳ ಸಾಲಿಗೆ ತೀರಾ ಇತ್ತೀಚಿನವು ಎಂದರೆ ಪ್ಯಾಡುಗಳು ಅಥವಾ ಟ್ಯಾಬ್‌ಗಳು. ಹೆಸರು ಮಾತ್ರ ಬೇರೆ ಬೇರೆ. ನೋಡಲು ಮಾತ್ರ ನಾವು ಅಂಗನವಾಡಿಯಲ್ಲಿ ಬರೆಯುತ್ತಿದ್ದ ಸ್ಲೇಟಿನಂತಿರುತ್ತವೆ. ಐಪ್ಯಾಡ್, ಗ್ಯಾಲಕ್ಸಿ ಟ್ಯಾಬ್ ಎಂದೆಲ್ಲಾ ಕರೆದುಕೊಂಡು ಅತ್ತ ಕಂಪ್ಯೂಟರೂ ಹೌದಾದ, ಇತ್ತ ಮೊಬೈಲ್ ಫೋನೂ ಹೌದಾಗಿರುವ ಭಯಂಕರ ಸಾಧನಗಳು ಬಣ್ಣ ಹಚ್ಚಿ ವೇಷಕ್ಕೆ ಕುಳಿತುಕೊಂಡವು. ಬಹುಶಃ ನಮ್ಮ ಸಾಂಸದರಿಗೂ ಇದರ urge ತಡೆದುಕೊಳ್ಳಲಾಗುತ್ತಿಲ್ಲ ಅನಿಸುತ್ತಿದೆ. ಅವರಿಗೆಲ್ಲರಿಗೂ ಹೈಫೈ ಆಗಿರೋ ಐಪ್ಯಾಡುಗಳನ್ನು ವಿತರಿಸಲು ಕೇಂದ್ರ ಸರಕಾರ ಸಜ್ಜಾಗಿದೆ. ನಮ್ಮ ರಾಜ್ಯದ ಶಾಸಕರು ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ.

ಇಂಥಹಾ ಸ್ಥೂಲದೇಹಿ ಗ್ಯಾಜೆಟುಗಳೊಳಗೆ, ಕೋಪದಿಂದ ಜೋರಾಗಿ ಕೂಡಿ ರೊಯ್ಯನೆ ನೆಗೆದು ಪಾಯಿಂಟುಗಳನ್ನು ಸಂಪಾದಿಸುವ ಆಂಗ್ರಿಬರ್ಡುಗಳು ಬಂದು ಕುಳಿತವು. ರಾ.ಒನ್ ಆಟಗಳು, ನುಂಗುತ್ತಾ ನುಂಗುತ್ತಾ ಉದ್ದವಾಗುವ ಹಾವುಗಳು, ಬೈಕು – ಕಾರು ರೇಸುಗಳು, ಇಡೀ ಭೂಮಿಯನ್ನೇ ಧ್ವಂಸ ಮಾಡಬಲ್ಲಂತಹಾ ಯುದ್ಧೋನ್ಮಾದದ ಆಟಗಳೆಲ್ಲಾ ಸೇರ್ಪಡೆಯಾದವು. ಗಡಚಿಕ್ಕುವ ಸಂಗೀತಗಳನ್ನು ಸರೌಂಡ್ ಸೌಂಡ್ ಅನುಭವದೊಂದಿಗೆ ಕೇಳುವುದು ಸಾಧ್ಯವಾಯಿತು, ಇಡೀ ಜಗತ್ತನ್ನೇ ಜಾಲಾಡಬಲ್ಲ ನಕಾಶೆಗಳು, ಟ್ರಾಫಿಕ್ ಎಲ್ಲಿ ಬ್ಲಾಕ್ ಆಗಿದೆ ಎಂದು ಹೇಳುತ್ತಲೇ, ಈ ದಾರಿಯಾಗಿ ಹೋಗಿ ಎಂದೆಲ್ಲಾ ಕೈಹಿಡಿದು ಮುನ್ನಡೆಸಬಲ್ಲ ಮ್ಯಾಪುಗಳು ತೂರಿಕೊಂಡವು. ಸಂವಹನದ ಓಘಕ್ಕೆ ವೇದಿಕೆಯೊದಗಿಸಿದ ಫೇಸುಬುಕ್ಕು, ಟ್ವಿಟರುಗಳೆಲ್ಲವೂ ಅಂಗೈಗಿಂತ ಅಗಲದ ಜಾಗದೊಳಗೆ ಮೆರೆದಾಡತೊಡಗಿದವು. ಇಷ್ಟೆಲ್ಲಾ ಕೆಲಸ ಕಾರ್ಯಗಳೊಂದಿಗೆ, ಮೇಲು-ಫೀಮೇಲುಗಳ ಸರಸಕ್ಕೆ, ಸಂಭಾಷಣೆಗೆ ಪೂರಕವಾಗುವ ಇಮೇಲುಗಳು ಕೂಡ ಅದರಲ್ಲಿ ಭರ್ಜರಿ ಜಾಗ ಗಿಟ್ಟಿಸಿದವು.

ಹಾಗಿದ್ದರೆ, ತಂತ್ರಜ್ಞಾನ ಬೆಳೆದಂತೆ, ತಂತ್ರಜ್ಞಾನಿಗಳು, ಟೆಕೀಗಳು, ಗ್ಯಾಜೆಟ್ ಗುರುಗಳು ಎಂದೆಲ್ಲಾ ‘ಅಪ’ವಾದಕ್ಕೆ ಸಿಲುಕುವವರೆಲ್ಲರೂ ಸ್ಲೇಟು- ಹಿಡಿಯುವ ತಂತ್ರಜ್ಞಾನಕ್ಕೆ ಮರಳುತ್ತಿದ್ದಾರೆ. ಅಂದು ಕಡ್ಡಿಯಲ್ಲಿ ಗೀಚುತ್ತಿದ್ದರು, ಇಂದು ಕಡ್ಡಿಯನ್ನು ಮುಟ್ಟಿಸಿ, ಅಂದರೆ ಟಚ್ ಮಾಡಿ ಮೆರೆಯುತ್ತಿದ್ದಾರೆ, ಅಷ್ಟೇ ವ್ಯತ್ಯಾಸ! ಅದಕ್ಕೇ ಇರಬೇಕು, ಇತ್ತೀಚೆಗೆ ಸರಕಾರವು ವಿದ್ಯಾರ್ಥಿಗಳಿಗೆ ಕೊಡಿಸುವ 35 ಡಾಲರಿನ (ಒಂದುವರೆ-ಎರಡು ಸಾವಿರ ರೂ. ಬೆಲೆಯ) ಟ್ಯಾಬ್ಲೆಟ್ ಗ್ಯಾಜೆಟ್ಟಿನ ಹೆಸರು ಆಕಾಶ್ ಎಂದಾಗಿದ್ದರೂ, ಅದರ ಮೂಲ ಹೆಸರು ಮಾತ್ರ ಯುಬಿ‘ಸ್ಲೇಟ್ ’ ಅಂತಲೇ!

ಇನ್ನೂ ಒಂದು ವಿಷ್ಯ – ತಂತ್ರಜ್ಞಾನದ ಉನ್ಮಾದದಿಂದಾಗಿ ಜಗತ್ತು ಕಿರಿದಾಗಿದ್ದರೂ, ನಮ್ಮ ಮನಸುಗಳು ಮಾತ್ರ ನಾಲ್ಕು ಗೋಡೆಗಳೊಳಗೆ ಕಿರಿದಾಗುತ್ತಿರುವುದನ್ನು ನೀವು ಗಮನಿಸಿದಿರಾ?

Leave a Reply

Your email address will not be published. Required fields are marked *