ವಿರೋಧಿಗಳನ್ನು ನಿರುತ್ತರರಾಗಿಸೋದು ಹೇಗೆ?

8
1071

ಗಾಂಧಿಗಿರಿ ಬಗ್ಗೆ ಕೇಳಿದ್ದೀರಿ. ಎದುರಾಳಿಯನ್ನು ಮತ್ತು ವಿರೋಧಿಸುವವರನ್ನು ಪ್ರೀತಿಯಿಂದಲೇ ಗೆಲ್ಲುವುದು ಹೇಗೆಂಬುದು ಈ ಗಾಂಧಿಗಿರಿಯ ಹಿಂದಿನ ಮರ್ಮ. ಆದರೆ, ಚಾಣಾಕ್ಷತೆಯಿದ್ದರೆ ಎದುರಾಳಿಗಳ ಮನ ಗೆಲ್ಲಲಾಗದಿದ್ದರೂ, ಅವರಿಂದ ಮೇಲುಗೈ ಸಾಧಿಸಬಹುದಲ್ಲವೇ?

ವೃತ್ತಿ ಜೀವನದಲ್ಲಿ ಉನ್ನತ ಮಟ್ಟಕ್ಕೇರಿದವರ ಬಗ್ಗೆ, ಪ್ರಸಿದ್ಧಿಗೆ ಬಂದವರ ಬಗ್ಗೆ ಸಹವರ್ತಿಗಳಲ್ಲಿ, ಕುಟುಂಬಿಕರಲ್ಲಿ, ನಾನೂ ಆ ಮಟ್ಟಕ್ಕೇರಲಿಲ್ಲವಲ್ಲಾ ಎಂದು ಹಲುಬುವವರು ಬಹಳಷ್ಟು ಮಂದಿ. ಯಾಕೆಂದರೆ ಹೊಟ್ಟೆ ಕಿಚ್ಚು, ಅಸೂಯೆ, ಮತ್ಸರ ಎಂಬಿತ್ಯಾದಿಗಳು ಮಾನವಸಹಜ ಗುಣಗಳು ಅಲ್ವಾ?

ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ನಾಣ್ಣುಡಿ ಕೇಳಿದ್ದೀರಿ. ಇದು ನೆನಪಾದಾಗ ಅಕ್ಬರ-ಬೀರಬಲ್ಲರ ಕಥೆಯೊಂದು ಕೂಡ ನೆನಪಿಗೆ ಬರುತ್ತದೆ. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು. ಓದಿ:

ಅಕ್ಬರನ ಆಸ್ಥಾನದಲ್ಲಿ ಬೀರಬಲ್‌ನ ಚಾಣಾಕ್ಷ ತಂತ್ರಗಳು ಸರ್ವ ವಿದಿತ. ಬೀರಬಲ್ಲನ ಸಿದ್ಧಿ-ಪ್ರಸಿದ್ಧಿಯನ್ನು ಸಹಿಸದೆ ಒಳಗಿಂದೊಳಗೆ ಕುದಿಯುತ್ತಿರುವವರಿಗೇನೂ ಕೊರತೆಯಿರಲಿಲ್ಲ. ದರ್ಬಾರಿನಲ್ಲಿದ್ದ ಮುಸ್ತಾಫನಿಗೂ ಬೀರಬಲ್ಲನನ್ನು ಕಂಡರೆ ಹೊಟ್ಟೆ ಕಿಚ್ಚು. ಆಸ್ಥಾನದಲ್ಲಿ ಅವನ ನಿರ್ಭಾವುಕ ಮುಖವು ಸ್ವತಃ ಅಕ್ಬರನಿಗೂ ಅಚ್ಚರಿ ತಂದಿತ್ತು. ಒಂದು ದಿನ ಆತ ಆಸ್ಥಾನದಲ್ಲಿ ಘೋಷಿಸಿದ. ಮುಸ್ತಾಫ ಏನು ಯೋಚಿಸುತ್ತಿದ್ದಾನೆ ಎಂಬುದನ್ನು ಹೇಳಿದವರಿಗೆ ಐನೂರು ವರಹಗಳನ್ನು ಬಹುಮಾನವಾಗಿ ನೀಡುತ್ತೇನೆ ಅಂತ.

ಊಹೂಂ, ಆಸ್ಥಾನ ವಿದ್ವಾಂಸರೆಲ್ಲರಿಗೂ ಇದು ಅಸಾಧ್ಯದ ಮಾತು. ಯಾರೂ ಉತ್ತರಿಸಲಾರದ್ದನ್ನು ಕಂಡು ಅಕ್ಬರನ ಮುಖ ಬಾಡುವಷ್ಟರಲ್ಲಿ, ಬೀರಬಲ್ಲ ಎದ್ದುನಿಂತ. ಬೀರಬಲ್ ಎದ್ದು ನಿಂತದ್ದು ನೋಡಿ ಮುಸ್ತಾಫನಿಗೆ ಖುಷಿಯೋ ಖುಷಿ. ಬೀರಬಲ್ ಏನು ಹೇಳುತ್ತಾನೋ, ಅದನ್ನು ನಿರಾಕರಿಸಿದರಾಯಿತು ಎಂದುಕೊಂಡು ಮುಖವನ್ನು ಮತ್ತಷ್ಟು ಗಂಟಿಕ್ಕಿಕೊಂಡ.

ಬೀರಬಲ್ ಹೇಳಿದ: “ಬಾದಷಾ, ಮುಸ್ತಾಫ ಏನು ಯೋಚಿಸ್ತಾನೆ ಎಂಬುದು ನನಗೊತ್ತಿದೆ” ಎಂದ.

ಇಡೀ ಆಸ್ಥಾನದಲ್ಲಿ ಕುತೂಹಲಭರಿತ ಮೌನ. ಎಲ್ಲರೂ ಬೀರಬಲ್ಲನನ್ನೇ ತದೇಕಚಿತ್ತರಿಂದ ನೋಡುವವರೆ. ಅವನನ್ನು ಕಂಡರೆ ಹೊಟ್ಟೆಯುರಿಯುತ್ತಿದ್ದವರೆಲ್ಲರೂ, ಈ ಬಾರಿ ಬೀರಬಲ್ಲನಿಗೆ ಸೋಲು ಕಾದಿದೆ ಎಂದೇ ಮನಸ್ಸಿನಲ್ಲಿ ಮಂಡಿಗೆ ಮೆಲ್ಲುತ್ತಿದ್ದರು.

ಆತ್ಮವಿಶ್ವಾಸದಿಂದ ದಿರಿಸು ಸರಿಪಡಿಸಿಕೊಳ್ಳುತ್ತಾ ಬೀರಬಲ್ಲ, ‘ಸ್ವಾಮಿನ್, ಇವನೇನೂ ಯೋಚಿಸ್ತಾನೆಂದರೆ…. ನೀವು ಯಾವತ್ತೂ ಆರೋಗ್ಯವಂತರಾಗಿ, ಸದಾ ಖುಷಿಯಿಂದಿರಬೇಕು. ಮತ್ತು ನೀವು ದೀರ್ಘಾಯುಷಿಯಾಗಬೇಕು ಎಂದು ಯೋಚಿಸುತ್ತಿದ್ದಾನೆ’!

ಇಡೀ ಸಭೆಯಲ್ಲಿ ವ್ಹಾ ವ್ಹಾ ಎಂಬ ಘೋಷಣೆಯೇ ಜೋರಾಗಿ ಕೇಳಿಬಂತು! ಮುಸ್ತಾಫನ ಮುಖವಂತೂ ತೀರಾ ಬಿಳಿಚಿಕೊಂಡಿತ್ತು, “ಇಲ್ಲ ಇಲ್ಲ, ಬೀರಬಲ್ ಹೇಳಿದ್ದು ಸುಳ್ಳು” ಎಂದು ಹೇಳೋಣವೆಂದು ಬಾಯ್ತೆರೆದು ನಿಂತಿದ್ದವನಿಗೆ ಬಾಯಿ ಕಟ್ಟಿಯೇ ಹೋಯಿತು.

“ಇ…ಇ… ಹೌದು ಸ್ವಾಮಿ, ಬೀರಬಲ್ ಸರಿಯಾಗಿಯೇ ಹೇಳಿದ್ದಾನೆ” ಎಂದುತ್ತರಿಸಿ, ಬೆವರೊರೆಸಿಕೊಳ್ಳುತ್ತಾ ಕೂತನವ. ಅಬ್ಬಾ, ಇಲ್ಲ ಎಂದುಬಿಟ್ಟರೆ, ನಾನು ಬಾದಶಹಾರ ಒಳಿತನ್ನೇ ಬಯಸುತ್ತಿರಲಿಲ್ಲ ಎಂದಾಗುತ್ತಿತ್ತಲ್ಲವೇ? ಎಂದು ನೆನಪಿಸಿಕೊಂಡ ಆತ ಥರಗುಟ್ಟಿಹೋಗಿದ್ದ.

ಅಕ್ಬರನಂತೂ ಬೀರಬಲ್ಲನ ಬುದ್ಧಿಮತ್ತೆಗೆ ವಂದಿಸಿದ. ಎಷ್ಟು ಚತುರತೆಯಿಂದ ಮುಸ್ತಾಫನನನ್ನು ಮಟ್ಟ ಹಾಕಿದನಲ್ಲ ಎಂದುಕೊಂಡ. ಆದರೂ, ಬೀರಬಲ್ಲನನ್ನು ಮತ್ತಷ್ಟು ಪರೀಕ್ಷಿಸಬೇಕೆನಿಸಿತು.

ಕೇಳಿದ: “ಹಾಗಿದ್ರೆ ಈಗ ಹೇಳು, ನಾನೇನು ಯೋಚಿಸುತ್ತಿದ್ದೇನೆ ಅಂತ”…

ಬೀರಬಲ್ಲ ಬಹುಶಃ ಇಂಥಹ ಪ್ರಶ್ನೆ ನಿರೀಕ್ಷಿಸಿದ್ದನೇನೋ… ಒಂದಿಷ್ಟೂ ವಿಚಲಿತನಾಗದೆ ಉತ್ತರಿಸಿದ:

“ಬಾದಶಹಾ, ಸ್ವರ್ಗ ಲೋಕದಲ್ಲಿರುವ ನಿಮ್ಮ ಎಲ್ಲಾ ಪಿತೃಗಳು ಆರಾಮವಾಗಿ ನೆಮ್ಮದಿಯ ಜೀವನ ಸವೆಸುತ್ತಿರಬೇಕೆಂದು ಯೋಚಿಸಿದ್ದೀರಲ್ಲಾ” ಎಂದು ಕೇಳಿಬಿಟ್ಟ.

ಅಕ್ಬರ್ ಮನಸ್ಸಿನಲ್ಲೇ ಶಹಭಾಸ್ ಎಂದುಕೊಂಡು ಮರು ಮಾತಾಡದೆ ಐನೂರು ವರಹಗಳನ್ನು ನೀಡಿದ.

ಮೌನವಾಗಿಯೇ ಕೆಲಸ ಸಾಧಿಸುವುದು ಹೀಗೆ! ಏನಂತೀರಿ?

8 COMMENTS

    • ಮಿಂಚುಳ್ಳಿ, 500 ಹಿಟ್ಟು ಕೊಟ್ಟದ್ದಕ್ಕೆ ಥ್ಯಾಂಕ್ಸ್. ಕಥೆ ಮಾತ್ರವಲ್ಲ, ಇದು ನಮ್ಮ ಜೀವನದಲ್ಲಿಯೂ ಉಪಯೋಗಕ್ಕೆ ಬರಬಹುದು. ಈ ಉಪದೇಶಾನ ಭದ್ರವಾಗಿ ಇರಿಸಿಕೊಳ್ಳಿ.

    • ಲಕ್ಷ್ಮಿ, ಎಲ್ಲ ಕಡೆ ಇದು ಉಪಯೋಗಕ್ಕೆ ಬರೋದಿಲ್ಲ. ಯೋಚಿಸಿ ಈ ಉಪದೇಶಾನ ಉಪಯೋಗಿಸ್ಬೇಕು. 🙂

  1. ಸರ್,

    ಇಂಥ ಕತೆಗಳನ್ನು ಕೇಳಿ ತುಂಬಾ ದಿನವಾಗಿತ್ತು. ಓದಿದ ಕೂಡಲೇ ಮನಸ್ಸಿಗೆ ಖುಷಿಯಾಯ್ತು…

    • ಶಿವು,
      ಹೌದು, ಹೀಗೇ ಕೂತಿದ್ದಾಗ ಈ ಹಳೆಯ ಕಥೆ ಜ್ಞಾಪ್ಕ ಬಂತು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣ ಅನ್ನಿಸ್ತು.

LEAVE A REPLY

Please enter your comment!
Please enter your name here