ಮಹಿಳೆಯರ ಭದ್ರತೆಗಾಗಿ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳು

0
654

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-22 (ಜನವರಿ 28, 2013)

ದೇಶದಲ್ಲಿ ಮಹಿಳೆಯರ ರಕ್ಷಣೆ ಕುರಿತಾಗಿ ಸಾಕಷ್ಟು ಕಾಳಜಿಗಳು ವ್ಯಕ್ತವಾಗುತ್ತಿರುವ ಈ ಹೊತ್ತಿನಲ್ಲಿ, ತಂತ್ರಜ್ಞಾನಿಗಳು ಕೂಡ ಸ್ಮಾರ್ಟ್‌ಫೋನ್‌ಗಳಿಗೆ (ಅಂದರೆ ಆಧುನೀಕೃತ ಮೊಬೈಲ್ ಫೋನ್‌ಗಳಿಗೆ) ಸಾಕಷ್ಟು ಅಪ್ಲಿಕೇಶನ್‌ಗಳನ್ನು ರೂಪಿಸಿಕೊಟ್ಟು, ಕೈಯಲ್ಲಿರೋ ಮೊಬೈಲ್ ಫೋನ್‌ಗಳನ್ನೇ ಅಲಾರಂ (ಎಚ್ಚರಿಕೆ ನೀಡುವ) ಸಿಸ್ಟಂಗಳಾಗಿ ಪರಿವರ್ತಿಸಿದ್ದಾರೆ. ಅಂದರೆ ಮೊಬೈಲ್ ಫೋನ್‌ಗಳಲ್ಲಿ ಒಂದು ಬಟನ್ ಅದುಮಿಬಿಟ್ಟರೆ, ಅದು ‘ನಾವು ಸಂಕಷ್ಟದಲ್ಲಿದ್ದೇವೆ’ ಎಂಬುದನ್ನು ತಕ್ಷಣವೇ ಗೆಳೆಯ/ಗೆಳತಿಯರು ಮತ್ತು ಕುಟುಂಬದವರಿಗೆ, ಪೊಲೀಸರಿಗೆ ಎಸ್ಎಂಎಸ್ ಸಂದೇಶ ರವಾನಿಸುವಂತಹಾ ಅಪ್ಲಿಕೇಶನ್. ಕೆಲವಂತೂ ಜಿಪಿಎಸ್ ಬಳಸಿ ನಕ್ಷೆಗಳ ಮೂಲಕ, ಇಂತಹಾ ಸ್ಥಳದಲ್ಲಿದ್ದೇವೆ ಎಂಬುದರ ಲಿಂಕ್ ಅನ್ನೂ ಕಳುಹಿಸುತ್ತವೆ.

ಮನೆಯಲ್ಲಿ ಒಂಟಿಯಾಗಿರುವಾಗ ಇಲ್ಲವೇ ಬೇರೆಲ್ಲಾದರೂ ಹೋಗಿರುವಾಗ ಸಂಕಷ್ಟಕ್ಕೆ ಸಿಲುಕಿದರೆ, ಗೆಳೆಯ/ಗೆಳತಿಯರಿಗೆ ಎಚ್ಚರಿಕೆಯ ಸಂದೇಶ ರವಾನಿಸಲು ಇಂತಹಾ ಕೆಲವು ಅಪ್ಲಿಕೇಶನ್ನುಗಳು ನೆರವಿಗೆ ಬರಬಹುದು. “ಮೀ ಅಗೇನ್ಸ್ಟ್ ರೇಪ್ (Me against Rape)” ಅಂತ ಇತ್ತೀಚೆಗಷ್ಟೇ ನಾಸಿಕ್ ಯುವಕರು ಆಂಡ್ರಾಯ್ಡ್‌ಗೆ ಅಭಿವೃದ್ಧಿಪಡಿಸಿದ ಅಪ್ಲಿಕೇಶನ್ ಸುದ್ದಿ ಮಾಡಿತು. ಈ ತಂತ್ರಾಂಶದ ಮೂಲಕ, ಕೇವಲ ಒಂದು ಸ್ಪರ್ಶದಿಂದ ಸಹಾಯವಾಣಿ ಸೌಲಭ್ಯ, ರೆಕಾರ್ಡಿಂಗ್ ಸೌಲಭ್ಯ ಮತ್ತು ವ್ಯಕ್ತಿಯ ಆ ಕ್ಷಣದ ಸ್ಥಳದ ಮಾಹಿತಿಯನ್ನು ಸ್ನೇಹಿತವರ್ಗಕ್ಕೆ ಮ್ಯಾಪ್‌ನ ಲಿಂಕ್ ಸಮೇತ ಎಸ್ಸೆಮ್ಮೆಸ್ ಕಳುಹಿಸಬಹುದಾಗಿದೆ.

ಸೆಂಟಿನೆಲ್ (Sentinel): ಇದು ಮಹಿಳಾ ಭದ್ರತೆಗೆ ಸಂಬಂಧಿಸಿ ಹೆಚ್ಚು ಕೇಳಿಬರುತ್ತಿರುವ ಅಪ್ಲಿಕೇಶನ್. ಫೋನನ್ನು ಪುಡಿ ಮಾಡಿದರೂ, ಇಂಟರ್ನೆಟ್ ಸಂಪರ್ಕ ಇಲ್ಲದೇ ಇದ್ದರೂ ಅದು ಎಚ್ಚರಿಕೆ ಸಂದೇಶವನ್ನು ಎಸ್ಎಂಎಸ್ ಮೂಲಕ ರವಾನಿಸುತ್ತದೆ. ಇದು ಹಲವು ಎಸ್ಸೆಮ್ಮೆಸ್ ಮತ್ತು ಇಮೇಲ್‌ಗಳನ್ನು ಏಕಕಾಲದಲ್ಲಿ ಕಳುಹಿಸಬಲ್ಲುದು. ಈ ಸಂದೇಶದಲ್ಲಿ ನೀವಿದ್ದ ಸ್ಥಳ, ಹೋಗುತ್ತಿರುವ ದಿಕ್ಕು, ಸಾರಿಗೆ ವ್ಯವಸ್ಥೆ ಮತ್ತು ಹೋಗುವ ವಾಹನದ ಸಂಖ್ಯೆ (ಬಳಕೆದಾರರು ನಮೂದಿಸಬೇಕು) ಇರುತ್ತದೆ. ಆಂಡ್ರಾಯ್ಡ್, ಬ್ಲ್ಯಾಕ್‌ಬೆರಿ, ಸಿಂಬಿಯಾನ್, ಐಫೋನ್ ಮತ್ತು ಜಾವಾ ಸಿಸ್ಟಂಗಳಿಗೆ ಇದು ಪ್ರಯೋಜನಕಾರಿಯಾಗಿದ್ದು, ನಗರ ಪ್ರದೇಶಕ್ಕಾಗಿಯೇ ವಿನ್ಯಾಸಗೊಳಿಸಲಾಗಿದೆ. ಅಂದರೆ, ಸೆಲ್‌ಫೋನ್ ಸಿಗ್ನಲ್ ನಿರಂತರವಾಗಿರಬೇಕಾಗುತ್ತದೆ. ಇದು ಉಚಿತವಲ್ಲ.

ಸರ್ಕಲ್ ಆಫ್ ಸಿಕ್ಸ್ (Circle of 6): ಇದು ಐಫೋನ್‌ಗೆ ಉಚಿತವಾಗಿ ಲಭ್ಯವಿರುವ ಅಪ್ಲಿಕೇಶನ್. ವಿದ್ಯಾರ್ಥಿನಿಯರಿಗೆ ಅನುಕೂಲಕಾರಿ. ಎರಡು ಬಟನ್ ಒತ್ತಿದ ಬಳಿಕ, ಮೊದಲೇ ಬರೆದಿಟ್ಟ ಸಂದೇಶವೊಂದು ಮುಂಚಿತವಾಗಿ ಆಯ್ಕೆ ಮಾಡಿದ 6 ಮಂದಿಗೆ ರವಾನೆಯಾಗುತ್ತದೆ. ಅದರಲ್ಲಿ ನೀವಿರುವ ಸ್ಥಳದ ವಿಳಾಸ, ಮ್ಯಾಪ್‌ನ ಲಿಂಕ್ ಕೂಡ ಇರುತ್ತದೆ.

ಬಿಸೇಫ್ (bSafe): ಐಫೋನ್, ಬ್ಲ್ಯಾಕ್‌ಬೆರಿ ಮತ್ತು ಆಂಡ್ರಾಯ್ಡ್‌ಗೆ ಉಚಿತವಾಗಿರುವ ಈ ಅಪ್ಲಿಕೇಶನ್ (App)ನಲ್ಲಿ ಮತ್ತಷ್ಟು ಆಧುನಿಕ ಸೌಲಭ್ಯಗಳು ಬೇಕೆಂದಾದರೆ ಹಣ ಪಾವತಿಸಬೇಕಾಗುತ್ತದೆ. ಮೊದಲೇ ನಿರ್ಧರಿಸಿದ ನಿಮ್ಮ ಸ್ನೇಹಿತರ/ಬಂಧುಗಳ ಸಂಖ್ಯೆಗಳಿಗೆ ಎಸ್ಸೆಮ್ಮೆಸ್ ಹಾಗೂ ಒಬ್ಬರಿಗೆ ಕರೆ ಹೋಗುವ ವ್ಯವಸ್ಥೆ ಇದರಲ್ಲಿದೆ. ಸಂದೇಶದಲ್ಲಿ ನೀವಿರುವ ಸ್ಥಳದ ನಕ್ಷೆಯ ಲಿಂಕ್ ಇರುತ್ತದೆ. ಅಲ್ಲದೆ, ಸಂಕಷ್ಟದಲ್ಲಿದ್ದಾಗ, ನಿಮಗೆ ಯಾರಿಂದಲೋ ಕರೆ ಬಂದಂತೆ ನಟಿಸಲು ‘ಅಣಕು ಕರೆ’ ವ್ಯವಸ್ಥೆಯೂ ಇದರಲ್ಲಿದೆ.

ಗಾರ್ಡ್ಲಿ (Guardly): ಐಫೋನ್, ಆಂಡ್ರಾಯ್ಡ್, ಬ್ಲ್ಯಾಕ್‌ಬೆರಿ, ವಿಂಡೋಸ್ ಫೋನ್‌ಗಳಿಗೆ ಉಚಿತವಾಗಿ ಲಭ್ಯ. ಪ್ರೀಮಿಯಂ (ಹಣ ಪಾವತಿಸಬೇಕಾದ) ಆವೃತ್ತಿಯಲ್ಲಿ ಹೆಚ್ಚು ಸೌಲಭ್ಯಗಳಿವೆ. ಈ ಅಪ್ಲಿಕೇಶನ್ ಕ್ಲಿಕ್ ಮಾಡಿದರೆ, ನಿಮ್ಮ ಹೆಸರು, ಸ್ಥಳ, ತುರ್ತು ಸ್ಥಿತಿಯ ವಿಧ ಮುಂತಾದ ಮಾಹಿತಿಯೊಂದಿಗೆ ಸ್ನೇಹಿತರಿಗೆ ಫೋನ್ ಮೂಲಕ ಸಂಪರ್ಕಿಸುತ್ತದೆ.

ಮೈಕ್ರೋ ರೈಸ್ ಅಪ್ (Micro Rise Up): ಇದರಲ್ಲಿ 000 ಒತ್ತಿದರೆ, ಜಿಪಿಎಸ್ ಆಧಾರದಲ್ಲಿ ನಿಮ್ಮ ಸ್ಥಳ ಮಾಹಿತಿಯೊಂದಿಗೆ, ನಿಮ್ಮ ಗೆಳೆಯರಿಗೆ ಎಸ್ಸೆಮ್ಮೆಸ್ ರವಾನೆಯಾಗುತ್ತದೆ. ಆಂಡ್ರಾಯ್ಡ್ ಮತ್ತು ಬ್ಲ್ಯಾಕ್‌ಬೆರಿ ಫೋನ್‌ಗಳಿಗೆ ಇದು ಉಚಿತವಾಗಿ ಲಭ್ಯ.

LEAVE A REPLY

Please enter your comment!
Please enter your name here