WhatsApp Tricks: ಬ್ಯಾಕ್ಅಪ್ ಮತ್ತು ಹೊಸ ಫೋನ್‌ಗೆ ವರ್ಗಾವಣೆ ಮಾಡುವುದು ಹೇಗೆ?

WhatsApp Tricks: ಸಂವಹನ ಆ್ಯಪ್ ಅಥವಾ ಸಾಮಾಜಿಕ ಮಾಧ್ಯಮದ ವಾಟ್ಸ್ಆ್ಯಪ್ ಅನ್ನು ಬಳಸುತ್ತಿರುವ ಬಹುತೇಕರಿಗೆ, ಫೋನ್ ಬದಲಾಯಿಸಬೇಕಾದಾಗ ಅದರಲ್ಲಿ ಬಂದಿರುವ ಪ್ರಮುಖ ಸಂದೇಶಗಳು, ಫೊಟೋ ಅಥವಾ ವಿಡಿಯೊಗಳನ್ನು ಕಳೆದುಕೊಳ್ಳಲು ಇಷ್ಟ ಇರುವುದಿಲ್ಲ. ಮುಂದಕ್ಕೂ ಉಪಯೋಗಕ್ಕೆ ಬರುವಂತಹ ಅವುಗಳನ್ನು ಕಾಯ್ದಿಟ್ಟುಕೊಳ್ಳಬೇಕು ಎಂದುಕೊಳ್ಳುವವರಿಗೆ ಇಲ್ಲಿದೆ ಸಲಹೆ. ವಾಟ್ಸ್ಆ್ಯಪ್ ಚಾಟ್‌ಗಳನ್ನು, ಸಂದೇಶಗಳನ್ನು ಹೇಗೆ ಬೇರೆ ಫೋನ್‌ಗೆ ವರ್ಗಾಯಿಸುವುದು ಅಂತ ಹಲವು ಸ್ನೇಹಿತರು ಆಗಾಗ್ಗೆ ಕೇಳುವುದಿದೆ. ಕೆಲವರಿಗೆ ಗೊತ್ತಿದೆ, ಹಲವರಿಗೆ ತಿಳಿದಿಲ್ಲ. ಈಗಷ್ಟೇ ಸ್ಮಾರ್ಟ್‌ಫೋನ್ ತಲುಪುತ್ತಿರುವ ಗ್ರಾಮೀಣ ಬಳಕೆದಾರರಷ್ಟೇ ಅಲ್ಲದೆ, ನಗರದಲ್ಲಿರುವ ಅನೇಕರೂ ಇದು ಹೇಗೆ ಅಂತ ಪ್ರಶ್ನಿಸಿದ್ದಾರೆ. ಅಂಥವರು ಇದನ್ನು ಓದಿ, ಅಗತ್ಯವಿದ್ದವರಿಗೆ ಹೇಳಿಕೊಡಬಹುದು.

ಸಂದೇಶಗಳು, ಆಡಿಯೊ, ವಿಡಿಯೊಗಳನ್ನು ಬ್ಯಾಕ್ಅಪ್ (ಅಂದರೆ ಕಾಯ್ದಿಟ್ಟುಕೊಳ್ಳುವುದು ಅಥವಾ ಸಂಗ್ರಹಿಸಿಟ್ಟುಕೊಳ್ಳುವುದು ಅಂತ) ವೈಶಿಷ್ಟ್ಯವನ್ನು ಸ್ವತಃ ವಾಟ್ಸ್ಆ್ಯಪ್ ಆ್ಯಪ್ ಒದಗಿಸಿದೆ. ಸುರಕ್ಷಿತವಾಗಿ ಗೂಗಲ್ ಡ್ರೈವ್ ಎಂಬ ಕ್ಲೌಡ್‌ನಲ್ಲಿ (ಆನ್‌ಲೈನ್ ಸರ್ವರ್‌ನಲ್ಲಿ) ಅಥವಾ ಫೋನ್‌ನಲ್ಲಿ ಆಂತರಿಕವಾಗಿ ವಾಟ್ಸ್ಆ್ಯಪ್ ಚಾಟ್ ಹಿಸ್ಟರಿ (ಸಂದೇಶಗಳ ಇತಿಹಾಸವನ್ನು) ಉಳಿಸಿಟ್ಟುಕೊಳ್ಳಬಹುದು.

ಈ ರೀತಿ ಮಾಡುವುದಕ್ಕಿಂತ ಮೊದಲು, ನಾವು ಕೈಗೊಳ್ಳಬೇಕಾದ ಕೆಲಸವೊಂದಿದೆ. ಅದೆಂದರೆ, ಮೀಡಿಯಾ ಸಹಿತ ಅನಗತ್ಯ ಸಂದೇಶಗಳನ್ನು ಮೊದಲೇ ಡಿಲೀಟ್ ಮಾಡಿಕೊಳ್ಳಬೇಕು. ಸ್ನೇಹಿತರಿಂದ ಬರಬಹುದಾದ ಅಥವಾ ನಾವಿರುವ ಗ್ರೂಪ್‌ಗಳಲ್ಲಿ ಬಂದಿರುವ ಅನಗತ್ಯ ಸಂದೇಶಗಳನ್ನು ವಾರಕ್ಕೊಮ್ಮೆಯಾದರೂ ಡಿಲೀಟ್ ಮಾಡುವುದರಿಂದ (ಅಳಿಸುವುದರಿಂದ), ಫೋನ್ ಮಾತ್ರವಲ್ಲದೆ, ವಿಶೇಷವಾಗಿ ವಾಟ್ಸ್ಆ್ಯಪ್ ಕೂಡ ಕೊಂಚ ವೇಗವಾಗಿ ಕೆಲಸ ಮಾಡುತ್ತದೆ.

ಅಗತ್ಯ ಚಾಟ್ ಉಳಿಸುವುದು
ಯಾವುದೇ ಗ್ರೂಪಿನಲ್ಲಿರುವ ನಿರ್ದಿಷ್ಟ ಸಂದೇಶಗಳನ್ನಷ್ಟೇ ಉಳಿಸಬೇಕೆನಿಸಿದಲ್ಲಿ, ಅದಕ್ಕೂ ಒಂದು ಆಯ್ಕೆಯಿದೆ. ಅದೆಂದರೆ ‘ಫೇವರಿಟ್’ ಅಥವಾ ಸ್ಟಾರ್ ಗುರುತು ಮಾಡಿಟ್ಟುಕೊಳ್ಳುವುದು. ಯಾವುದೇ ಗ್ರೂಪ್‌ನಲ್ಲಿರುವ (ಅಥವಾ ವೈಯಕ್ತಿಕ ಚಾಟ್‌ನಲ್ಲಿರುವ) ನಿರ್ದಿಷ್ಟ ಸಂದೇಶವನ್ನು ಒತ್ತಿ ಹಿಡಿದಾಗ, ಮೇಲ್ಭಾಗದಲ್ಲಿ ನಕ್ಷತ್ರ (ಸ್ಟಾರ್) ಗುರುತು ಕಾಣಿಸಿಕೊಳ್ಳುತ್ತದೆ, ಅದನ್ನು ಒತ್ತಿದರಾಯಿತು. ಆ ಸಂದೇಶವು ಫೇವರಿಟ್ ಆಗಿ ಗುರುತು ಆಗಿದೆ ಎಂದರ್ಥ. ಸ್ಟಾರ್ ಗುರುತಿನ ಸಂದೇಶಗಳನ್ನಷ್ಟೇ ನೋಡಬೇಕಿದ್ದರೆ, ವಾಟ್ಸ್ಆ್ಯಪ್ ತೆರೆದಾಗ ಬಲ ಮೇಲ್ಭಾಗದಲ್ಲಿರುವ ಮೆನು (ಮೂರು ಚುಕ್ಕಿಗಳು) ಒತ್ತಿ, Starred messages ಎಂಬುದನ್ನು ಆಯ್ಕೆ ಮಾಡಿದಾಗ ಗೋಚರಿಸುತ್ತವೆ. ಹೀಗೆ ಎಲ್ಲ ಗ್ರೂಪುಗಳು/ವೈಯಕ್ತಿಕ ಚಾಟ್‌ಗಳಲ್ಲಿರುವ ಅಗತ್ಯವಿರುವ ಸಂದೇಶಗಳನ್ನು ಸ್ಟಾರ್ ಮಾರ್ಕ್ ಮಾಡಿಟ್ಟುಕೊಂಡ ಬಳಿಕ ಈ ಕೆಳಗಿನ ಹಂತವನ್ನು ಅನುಸರಿಸಿ.

ಅನಗತ್ಯ ಚಾಟ್ ಅಳಿಸುವುದು
ವಾಟ್ಸ್ಆ್ಯಪ್‌ನಲ್ಲಿ ಪ್ರತಿಯೊಂದು ಗ್ರೂಪ್ ತೆರೆದು, ಬಲ ಮೇಲ್ಭಾಗದಲ್ಲಿರುವ ಮೂರು ಚುಕ್ಕೆಗಳನ್ನು (ಗ್ರೂಪಿನ ಸೆಟ್ಟಿಂಗ್ಸ್ ಮೆನು) ಒತ್ತಿದ ಬಳಿಕ ಕೆಳಭಾಗದಲ್ಲಿ More ಎಂಬುದನ್ನು ಒತ್ತಿದಾಗ, Clear Chat ಎಂಬ ಆಯ್ಕೆ ದೊರೆಯುತ್ತದೆ. ಅದನ್ನು ಒತ್ತಿ. ಈಗ ಫೇವರಿಟ್ ಅಥವಾ ಸ್ಟಾರ್ ಗುರುತು ಮಾಡಿದ ಸಂದೇಶಗಳನ್ನೂ ಡಿಲೀಟ್ ಮಾಡಬೇಕೇ (Delete Starred Messages) ಎಂಬ ಚೆಕ್ ಬಾಕ್ಸ್ ಒಂದು ಕಾಣಿಸುತ್ತದೆ. ಅದು ಅನ್-ಚೆಕ್ (ರೈಟ್ ಗುರುತು ಇರಬಾರದು) ಆಗಿರಬೇಕು. Clear Chat ಪುನಃ ಒತ್ತಿದಾಗ ಎಲ್ಲ ಅನಗತ್ಯ ಸಂದೇಶಗಳೂ ಅಳಿಸಿ, ಸ್ಟಾರ್ ಗುರುತಿರುವವು ಮಾತ್ರ ಉಳಿದುಕೊಳ್ಳುತ್ತವೆ. ಪ್ರತೀ ಗ್ರೂಪ್‌ಗೂ ಹೀಗೆ ಮಾಡಬೇಕು. ವೈಯಕ್ತಿಕ ಚಾಟ್ ಸಂದೇಶಗಳಾದರೆ, ಅಳಿಸುವುದು ಸುಲಭ. ವಾಟ್ಸ್ಆ್ಯಪ್ ತೆರೆದು, ನಿರ್ದಿಷ್ಟ ವ್ಯಕ್ತಿಯ ಚಾಟ್ ಸಂದೇಶವನ್ನು ಒತ್ತಿಹಿಡಿದಾಗ, ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುವ ರೀಸೈಕಲ್ ಬಿನ್ ಐಕಾನ್ ಒತ್ತಿದರೆ, ಸಂದೇಶಗಳು ಡಿಲೀಟ್ ಆಗುತ್ತವೆ. ನಿರ್ದಿಷ್ಟ ಸಂದೇಶಕ್ಕೆ ಸ್ಟಾರ್ ಗುರುತು ಮಾಡಿದ್ದರೆ, ಅವನ್ನು ಇಲ್ಲೂ ಉಳಿಸಿಕೊಳ್ಳಬಹುದು.

ಹೀಗೆ ಮಾಡುವುದರಿಂದ, ನಾವು ಬ್ಯಾಕ್ಅಪ್ (ಸೇವ್) ಮಾಡಿಟ್ಟುಕೊಳ್ಳಬೇಕೆಂದಿರುವ ಫೈಲ್‌ನ ಗಾತ್ರ ಕಡಿಮೆಯಾಗುತ್ತದೆ ಮತ್ತು ಬೇಕಾಗಿರುವ ಸಂದೇಶಗಳನ್ನು ಮಾತ್ರವೇ ಹೊಸ ಫೋನ್‌ಗೆ ವರ್ಗಾಯಿಸಲು ನೆರವಾಗುತ್ತದೆ.

ಬ್ಯಾಕ್ಅಪ್ ಇರಿಸಿಕೊಳ್ಳುವುದು
ಅನಗತ್ಯ ಸಂದೇಶಗಳೆಲ್ಲವನ್ನೂ ಅಳಿಸಿದ ಬಳಿಕ, ವಾಟ್ಸ್ಆ್ಯಪ್ ತೆರೆದಾಗ ಕಾಣಿಸಿಕೊಳ್ಳುವ ಪ್ರಧಾನ ಸ್ಕ್ರೀನ್‌ನ ಬಲ ಮೇಲ್ಭಾಗದಲ್ಲಿ ಮೂರು ಚುಕ್ಕಿಗಳ (ಮೆನು) ಒತ್ತಿ, ಸೆಟ್ಟಿಂಗ್ಸ್ ಎಂಬಲ್ಲಿಗೆ ಹೋಗಿ, ‘ಚಾಟ್ಸ್’ ಆಯ್ಕೆ ಮಾಡಿಕೊಂಡು, ಕೆಳಗಡೆ ಇರುವ ‘ಚಾಟ್ಸ್ ಬ್ಯಾಕ್ಅಪ್’ ಆಯ್ಕೆ ಮಾಡಿಕೊಳ್ಳಿ. ಆಗ ಫೋನ್‌ನ ಆಂತರಿಕ ಸ್ಟೋರೇಜ್‌ಗೆ ಮಾತ್ರವಲ್ಲದೆ, ಗೂಗಲ್ ಡ್ರೈವ್‌ಗೂ (ನಾವು ಇದಕ್ಕೆ ಜಿಮೇಲ್ ಐಡಿ ಬೆಸೆಯಬೇಕಾಗುತ್ತದೆ) ಸೇವ್ ಆಗುತ್ತದೆ. ಹೊಸ ಫೋನ್‌ನಲ್ಲಿ ಇದೇ ಜಿಮೇಲ್ ಐಡಿ ಮೂಲಕ ಲಾಗಿನ್ ಆದಾಗ, ವಾಟ್ಸ್ಆ್ಯಪ್ ಇನ್‌ಸ್ಟಾಲ್ ಮಾಡುವಾಗಲೇ, Restore From Google Drive? ಅಂತ ಕೇಳುತ್ತದೆ. Yes ಒತ್ತಿದಾಗ, ಗೂಗಲ್ ಡ್ರೈವ್‌ನಲ್ಲಿ ಸೇವ್ ಆಗಿರುವ ವಾಟ್ಸ್ಆ್ಯಪ್ ಸಂದೇಶಗಳೆಲ್ಲವೂ ಹೊಸ ಫೋನ್‌ನ ವಾಟ್ಸ್ಆ್ಯಪ್‌ಗೂ ವರ್ಗಾವಣೆಯಾಗುತ್ತವೆ. ಈ ರೀತಿ, ಬೇಕಾದ ಸಂದೇಶಗಳನ್ನು ಮಾತ್ರವೇ ಉಳಿಸಿಕೊಂಡು ಹೊಸ ಫೋನ್‌ಗೆ ಸುಲಭವಾಗಿ ವಾಟ್ಸ್ಆ್ಯಪ್ ಸಂದೇಶ ಹಾಗೂ ಫೈಲ್‌ಗಳನ್ನು ವರ್ಗಾಯಿಸಿಕೊಳ್ಳಬಹುದು.

My Tech Tips published in Prajavani on 07/08 Jun 2022

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

2 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

2 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

3 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

4 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

9 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

9 months ago