ವಾಟ್ಸ್ಆ್ಯಪ್ ಮಾದರಿಯಲ್ಲೇ ಟ್ವಿಟರ್‌ನಲ್ಲೂ ಧ್ವನಿ ಸಂದೇಶ

0
618

ಇದುವರೆಗೆ 280 ಪದಮಿತಿಯ ಪಠ್ಯ ಹಾಗೂ ವಿಡಿಯೊ, ಜಿಫ್ ಹಾಗೂ ಫೋಟೋ ಫೈಲ್‌ಗಳನ್ನು ಹಂಚಿಕೊಳ್ಳಲು ಅನುವು ಮಾಡುತ್ತಿದ್ದ ಕಿರು ಸಾಮಾಜಿಕ ಜಾಲತಾಣ ಟ್ವಿಟರ್, ಹೊಸ ಸೌಲಭ್ಯವನ್ನು ಪರಿಚಯಿಸುತ್ತಿದೆ.

ನಮ್ಮದೇ ಧ್ವನಿಯನ್ನು ಆಡಿಯೋ ಮೂಲಕ ಹಂಚಿಕೊಳ್ಳಲು ಅನುಕೂಲ ಮಾಡುವ ಈ ವೈಶಿಷ್ಟ್ಯವನ್ನು ಬುಧವಾರದಿಂದ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ ಎಂದು ಟ್ವಿಟರ್ ತಿಳಿಸಿದೆ. ಇದು ಬಹುತೇಕರಿಗೆ ಪರಿಚಯವಿರುವ ವಿಧಾನವೇ ಆಗಿದ್ದು, ಹೊಸದಾಗಿ ಏನೂ ಕಲಿಯಬೇಕಿಲ್ಲ. ವಾಟ್ಸ್ಆ್ಯಪ್ ಸಂದೇಶಗಳಲ್ಲಿ ಧ್ವನಿ ರೆಕಾರ್ಡ್ ಮಾಡಿ ಕಳುಹಿಸುವ ಆಯ್ಕೆಯ ಮಾದರಿಯ ವ್ಯವಸ್ಥೆಯೇ ಟ್ವಿಟರ್‌ಗೂ ಬಂದಿದೆಯಷ್ಟೇ.

ಇದಕ್ಕೆ ನಾವು ಮಾಡಬೇಕಾದುದಿಷ್ಟೇ. ಟ್ವಿಟರ್ ಕಂಪೋಸರ್ ತೆರೆದು, ತರಂಗಾಂತರಗಳನ್ನು ಹೋಲುವ ಐಕಾನ್ ಕ್ಲಿಕ್ ಮಾಡಿದಾಗ, ಕೆಳಗೆ ರೆಕಾರ್ಡ್ ಬಟನ್ ಗೋಚರಿಸುತ್ತದೆ. ಅದನ್ನು ಕ್ಲಿಕ್ ಮಾಡಿ, ನಾವು ಹಂಚಿಕೊಳ್ಳಬೇಕಾದ ವಿಷಯವನ್ನು ಮಾತಿನ ಮೂಲಕ ಹೇಳಬಹುದು.

ಆರಂಭದಲ್ಲಿ ಟ್ವಿಟರ್ ಪಠ್ಯಕ್ಕೆ 140 ಪದ ಮಿತಿ ಇದ್ದಂತೆ, ಇಲ್ಲೂ ಕೂಡ 140 ಸೆಕೆಂಡು ಮಿತಿ ಇದೆ. ಆದರೂ, ಹೆಚ್ಚು ಮಾತುಗಳಿದ್ದರೆ, ಅದು ತಾನಾಗಿಯೇ ಥ್ರೆಡ್ ರೂಪದಲ್ಲಿ ಸೇರಿಕೊಳ್ಳುತ್ತದೆ. ರೆಕಾರ್ಡಿಂಗ್ ಮುಗಿಸಿದ ಬಳಿಕ ‘Done’ ಬಟನ್ ಒತ್ತಿದರಾಯಿತು.

ಸದ್ಯಕ್ಕೆ ಐಒಎಸ್ ಕಾರ್ಯಾಚರಣಾ ವ್ಯವಸ್ಥೆಯಿರುವ ಸಾಧನ ಹೊಂದಿರುವ ಸೀಮಿತ ಬಳಕೆದಾರರಿಗೆ ಈ ಸೌಲಭ್ಯವು ಪರೀಕ್ಷಾರ್ಥವಾಗಿ ಲಭ್ಯವಾಗಿದ್ದು, ದೋಷಗಳಿದ್ದರೆ ಸರಿಪಡಿಸಿದ ನಂತರ ಉಳಿದ ಬಳಕೆದಾರರಿಗೂ ದೊರೆಯಲಿದೆ. ಐಒಎಸ್ (ಆ್ಯಪಲ್) ಸಾಧನಗಳಲ್ಲಿ ಹೊಸ ವಿಂಡೋದಲ್ಲಿ ಇದು ಪ್ಲೇ ಆಗುತ್ತದೆ.

My article in Prajavani on Jun 18, 2020

LEAVE A REPLY

Please enter your comment!
Please enter your name here