Tecno Pova 3 Review: ಭರ್ಜರಿ ಬ್ಯಾಟರಿ ಸಹಿತ ಗೇಮಿಂಗ್ ಪ್ರಿಯರಿಗೆ ಇಷ್ಟವಾಗುವ ಫೋನ್

Tecno Pova 3 Review: ಟೆಕ್‌ನೋ ಹೊಸ ಗೇಮಿಂಗ್ ಫೋನ್ ಅನ್ನು ಪೋವಾ ಸರಣಿಯಲ್ಲಿ ಹೊರತಂದಿದೆ. ಕಳೆದ ವಾರ ಘೋಷಣೆಯಾದ ಟೆಕ್‌ನೋ ಪೋವಾ-3 ಫೋನ್ ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಒಂದು ವಾರ ಬಳಸಿ ನೋಡಿದ ಬಳಿಕ ಈ ಹೊಸ ಸಾಧನ ಹೇಗಿದೆ ಎಂಬ ಕುರಿತು ಇಲ್ಲಿದೆ ಮಾಹಿತಿ.

ವಿನ್ಯಾಸ, ನೋಟ
6.9 ಇಂಚಿನ FHD+ ಡಾಟ್-ಇನ್ ನಾಚ್ ಇರುವ ಡಿಸ್‌ಪ್ಲೇ ಮತ್ತು 7000 mAh ಭರ್ಜರಿ ಬ್ಯಾಟರಿ ಸಾಮರ್ಥ್ಯವಿರುವ ಈ ಫೋನ್ ನೋಡಲು ದೊಡ್ಡದಾಗಿದೆ, ಸ್ವಲ್ಪ ತೂಕವೂ ಇದೆ. ಗೇಮರ್‌ಗಳನ್ನೇ ಕೇಂದ್ರೀಕರಿಸಿ ಇದು ರೂಪುಗೊಂಡಿದ್ದು, ಹಿಂಭಾಗದ ಪ್ಲಾಸ್ಟಿಕ್ ಕವಚದಲ್ಲಿ ಮ್ಯಾಟ್ ಫಿನಿಶಿಂಗ್ ಇದೆ. ಹೀಗಾಗಿ ಬೆರಳಚ್ಚಿನ ಕಲೆ ಮೂಡುವುದಿಲ್ಲ. ಅದರ ಮಧ್ಯಭಾಗದಲ್ಲಿ ಉಬ್ಬಿರುವ ಹೊಳೆಯುವ ಭಾಗವು ಆಕರ್ಷಕವಾಗಿದ್ದು, ಫೋನ್‌ಗೆ ಬಲಿಷ್ಠತೆಯ ನೋಟ ನೀಡುತ್ತದೆ. ಕೆಳಭಾಗದಲ್ಲಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್, 3.5ಮಿಮೀ ಇಯರ್‌ಫೋನ್ ಜ್ಯಾಕ್ ಹಾಗೂ ಡ್ಯುಯಲ್ ಡಿಟಿಎಸ್ ಸ್ಪೀಕರ್ ಮತ್ತು ಮೈಕ್ ಇದೆ. ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಪ್ರಧಾನ ಸೆನ್ಸರ್ ಉಳ್ಳ, ಫ್ಲ್ಯಾಶ್ ಸಹಿತ ತ್ರಿವಳಿ ಕ್ಯಾಮೆರಾ ಸೆಟಪ್, ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ಇದೆ. ಎಡ ಭಾಗದಲ್ಲಿ ಎಸ್‌ಡಿ ಕಾರ್ಡ್ ಹಾಗೂ ಎರಡ್ ಸಿಮ್ ಕಾರ್ಡ್‌ಗಳ ಟ್ರೇ ಹಾಗೂ ಬಲಭಾಗದಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಇರುವ ಪವರ್ ಬಟನ್‌, ವಾಲ್ಯೂಮ್ ಬಟನ್‌ಗಳಿವೆ. ಒಟ್ಟು ಮೂರು ಬಣ್ಣಗಳಲ್ಲಿ ಲಭ್ಯವಿದ್ದು, ಪ್ರಜಾವಾಣಿಗೆ ರಿವ್ಯೂಗೆ ದೊರೆತಿದ್ದು ಕಪ್ಪು ಬಣ್ಣದ (ಇಕೋ ಬ್ಲ್ಯಾಕ್), 6ಜಿಬಿ RAM ಹಾಗೂ 128 ಜಿಬಿ ಮೆಮೊರಿ ಇರುವ ಸಾಧನ. ಉಳಿದವು ಟೆಕ್ ಸಿಲ್ವರ್ (ಬೆಳ್ಳಿ ಬಣ್ಣ) ಹಾಗೂ ಎಲೆಕ್ಟ್ರಿಕ್ ಬ್ಲೂ (ಕಡು ನೀಲಿ). ಕಡು ನೀಲಿ ಬಣ್ಣದ ಸಾಧನದ ಹಿಂಭಾಗದಲ್ಲಿ ಆಕರ್ಷಕವಾಗಿರುವ ಎಲ್‌ಇಡಿ ಸ್ಟ್ರಿಪ್ ಉಳಿದೆರಡು ಸಾಧನಗಳಿಗೆ ಲಭ್ಯ ಇಲ್ಲ.

ಯಂತ್ರಾಂಶ, ತಂತ್ರಾಂಶ
ಟೆಕ್‌ನೋ ಪೋವಾ3 ಫೋನ್ ಎರಡು ಮಾದರಿಗಳಲ್ಲಿ ಲಭ್ಯ ಇದೆ. 11ಜಿಬಿ (6ಜಿಬಿ) ಹಾಗೂ 7ಜಿಬಿ (4ಜಿಬಿ) ಮಾದರಿಗಳು. ಅಂದರೆ ಮೆಮೊರಿ ಫ್ಯೂಶನ್ ತಂತ್ರಜ್ಞಾನದ ಮೂಲಕ ಅಗತ್ಯವಿದ್ದಾಗ ವರ್ಚುವಲ್ ಆಗಿ ಹೆಚ್ಚುವರಿ ಮೆಮೊರಿಯನ್ನು ಸೇರಿಸಬಹುದು. ಉದಾಹರಣೆಗೆ, ಗೇಮ್ ಆಡುವಾಗ ಅಥವಾ ಬೇರೆ ಮಲ್ಟಿಟಾಸ್ಕಿಂಗ್ ಸಂದರ್ಭದಲ್ಲಿ, ವೇಗ ಕಡಿಮೆಯಾದಲ್ಲಿ (ಹೆಚ್ಚು RAM ಅಗತ್ಯವಿದೆಯೆಂದಾದಲ್ಲಿ), ಲಭ್ಯ ಮೆಮೊರಿಯಿಂದಲೇ ಹೆಚ್ಚುವರಿಯಾಗಿ RAM ಗೆ ಸೇರ್ಪಡೆ ಮಾಡಿಕೊಳ್ಳಬಹುದು. (ಸೆಟ್ಟಿಂಗ್ಸ್‌ನಲ್ಲಿ ಸ್ಪೆಶಲ್ ಫಂಕ್ಸನ್ ಎಂಬ ವಿಭಾಗದಲ್ಲಿ, ಮೆಮ್‌ಫ್ಯೂಶನ್ ಎಂಬಲ್ಲಿಗೆ ಹೋದರೆ, 2, 3 ಅಥವಾ 5ಜಿಬಿ ವರ್ಚುವಲ್ RAM ಸೇರಿಸುವ ಆಯ್ಕೆ ದೊರೆಯುತ್ತದೆ.). ಟೆಕ್‌ನೋ ಪೋವಾದಲ್ಲಿ ಹೀಲಿಯೋ88 ಪ್ರೊಸೆಸರ್, 1GHz GPU ಇರುವುದು ಗೇಮಿಂಗ್‌ಗೆ ಅನುಕೂಲವಿದೆ. ಆಂಡ್ರಾಯ್ಡ್ 12 ಆಧಾರದಲ್ಲಿ ಹಾಯ್ ಒಎಸ್ 8.6 ಕಾರ್ಯಾಚರಣಾ ವ್ಯವಸ್ಥೆಯಿದ್ದು, ಸಾಕಷ್ಟು ಬ್ಲಾಟ್‌ವೇರ್ (ಅನಗತ್ಯವಾದ) ಆ್ಯಪ್‌ಗಳಿವೆ. ಕೆಲವನ್ನು ಅನ್‌ಇನ್‌ಸ್ಟಾಲ್ ಮಾಡಬಹುದು, ಮತ್ತೆ ಕೆಲವನ್ನು ಡಿಸೇಬಲ್ (ನಿಷ್ಕ್ರಿಯ) ಮಾಡಬಹುದು. 64 ಹಾಗೂ 128 ಜಿಬಿ ಸ್ಟೋರೇಜ್ ಮಾದರಿಗಳಿವೆ. 512 ಜಿಬಿವರೆಗೂ ವಿಸ್ತರಿಸಬಹುದು. ಜೊತೆಗೆ, ನೀರಿನ ಹನಿಗಳು ಬಿದ್ದರೆ ಪಕ್ಕನೇ ಏನೂ ಆಗದಂತೆ, ಐಪಿಎಕ್ಸ್ 2 ಹಂತದ ಜಲನಿರೋಧಕ ವ್ಯವಸ್ಥೆಯಿದೆ.

ಕ್ಯಾಮೆರಾ
50 ಮೆಗಾಪಿಕ್ಸೆಲ್ ಸೆನ್ಸರ್ ಜೊತೆಗೆ 2MP ಡೆಪ್ತ್ ಸೆನ್ಸರ್ ಹಾಗೂ ಒಂದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸೆನ್ಸರ್ ಒಳಗೊಂಡ ತ್ರಿವಳಿ ಕ್ಯಾಮೆರಾ ಹಿಂಭಾಗದಲ್ಲಿದ್ದು, ಉತ್ತಮ ಫೊಟೊಗಳು ಮೂಡಿಬರುತ್ತವೆ. ಇದರಲ್ಲಿರುವ ಬ್ಯೂಟಿ ಮೋಡ್ ಗಮನ ಸೆಳೆಯುತ್ತದೆ. ಅದೆಂದರೆ, ಫೊಟೊ ತೆಗೆಯುವಾಗ ದೇಹದ ಮುಖ, ಕಾಲು, ಸೊಂಟ ಮುಂತಾದ ಅಂಗಗಳನ್ನು ಸ್ಲಿಮ್ ಆಗಿ ತೋರಿಸುವ ವ್ಯವಸ್ಥೆಯನ್ನು (ಎಐ ಬಾಡಿ ಶೇಪ್) ಆಯ್ಕೆ ಮಾಡಿಕೊಳ್ಳಬಹುದು. ಸ್ವಯಂ ಫೋಕಸ್ ಇದ್ದು, ವೃತ್ತಿಪರರಿಗೆ ಪ್ರೊಫೆಶನಲ್ ಮೋಡ್ ಇದೆ. ಸೆಲ್ಫೀಯಲ್ಲಾದರೆ, ಕಣ್ಣುಗಳನ್ನು ದೊಡ್ಡದಾಗಿಸುವ, ಚರ್ಮದ ಬಣ್ಣ ಹೆಚ್ಚು-ಕಡಿಮೆ ಮಾಡುವುದೇ ಮುಂತಾದ ಆಯ್ಕೆಗಳಿವೆ. ಈಗ ಇನ್‌ಸ್ಟಾಗ್ರಾಂ, ಫೇಸ್‌ಬುಕ್ ರೀಲ್ಸ್ ಜನಪ್ರಿಯವಾಗಿರುವುದರಿಂದ, ಅದಕ್ಕಾಗಿಯೇ ಕಿರು ವಿಡಿಯೊಗಳನ್ನು ಮಾಡುವ ಪ್ರತ್ಯೇಕ ಮೋಡ್ (ಸೆಲ್ಫೀ ಹಾಗೂ ಪ್ರಧಾನ ಕ್ಯಾಮೆರಾದಲ್ಲೂ ಕೂಡ) ಇದೆ. ಇದನ್ನು ಬಳಸಿದರೆ, ಮ್ಯೂಸಿಕ್ ಸಹಿತ ಹಾಡುಗಳಿರುವ, ನಮ್ಮ ಮುಖವಿರುವ ವೈವಿಧ್ಯಮಯ ರೀಲ್ಸ್ ಅಥವಾ ಶಾರ್ಟ್ ವಿಡಿಯೊಗಳನ್ನು ಶ್ರಮವಿಲ್ಲದೆ ರಚಿಸಬಹುದು. ವಿಡಿಯೊ ಗುಣಮಟ್ಟವೂ ಉತ್ತಮವಾಗಿದ್ದು, 2ಕೆ ಗುಣಮಟ್ಟದಲ್ಲಿ ವಿಡಿಯೊ ಸೆರೆಹಿಡಿಯಬಹುದು.

ಪೋರ್ಟ್ರೇಟ್ ಫೊಟೋಗಳಿಗೆ ಬೊಕೆ (ಹಿನ್ನೆಲೆ ಮಬ್ಬಾಗಿಸುವ) ಪರಿಣಾಮ ಚೆನ್ನಾಗಿದ್ದು, ಎಐ ಕ್ಯಾಮೆರಾವು ದೃಶ್ಯವನ್ನು ಪತ್ತೆ ಮಾಡಿ, ಅದಕ್ಕೆ ತಕ್ಕಂತೆ ಕ್ಯಾಮೆರಾದ ಸೆಟ್ಟಿಂಗನ್ನು ಬದಲಾಯಿಸಿಕೊಳ್ಳುತ್ತದೆ. ವಿಡಿಯೊಗೆ ಕೂಡ ಬೊಕೆ ಎಫೆಕ್ಟ್ ನೀಡಬಹುದು. ವೈವಿಧ್ಯಮಯ ಫಿಲ್ಟರ್‌ಗಳಂತೂ ತುಂಬ ಚೆನ್ನಾಗಿ ಕೆಲಸ ಮಾಡುತ್ತವೆ. ಗೂಗಲ್ ಲೆನ್ಸ್ ಅಂತರ್ನಿರ್ಮಿತವಾಗಿದ್ದು, ಪ್ರಧಾನ ಕ್ಯಾಮೆರಾದಲ್ಲಿ 10X ಝೂಮ್ ಮಾಡುವ ವ್ಯವಸ್ಥೆ ಗಮನ ಸೆಳೆಯುತ್ತದೆ. ಸ್ಲೋಮೋಶನ್ ವಿಡಿಯೊ, ನೈಟ್ ವಿಡಿಯೊ ಮೋಡ್ ಇದೆ.

ಬ್ಯಾಟರಿ, ಕಾರ್ಯಾಚರಣೆ
ಈಗಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಳಕೆ ಹೆಚ್ಚಾಗುತ್ತಿರುವಂತೆಯೇ ಬ್ಯಾಟರಿ ಚಾರ್ಜ್‌ನ ಬಗ್ಗೆಯೇ ಮಾತು. ಇದಕ್ಕೆ ಪರಿಹಾರವಾಗಿ ಗರಿಷ್ಠ ಅಂದರೆ 7000mAh ಬ್ಯಾಟರಿಯನ್ನು ಟೆಕ್‌ನೋ ಪೋವಾ-3ಯಲ್ಲಿ ಅಳವಡಿಸಲಾಗಿದೆ. ಇದರಿಂದಾಗಿ ಸಾಧನದ ತೂಕವೂ ಕೊಂಚ ಹೆಚ್ಚೇ ಇದೆ. ಜೊತೆಗೆ 33W ವೇಗದ ಫ್ಲ್ಯಾಶ್ ಚಾರ್ಜಿಂಗ್ ಅಡಾಪ್ಟರ್ ಇದೆ. ಅಂದಾಜು ಮುಕ್ಕಾಲು ಗಂಟೆಯಲ್ಲಿ ಅರ್ಧದಷ್ಟು ಚಾರ್ಜ್ ಆಗುತ್ತದೆ. ಇಷ್ಟೇ ಅಲ್ಲ, ದೊಡ್ಡ ಬ್ಯಾಟರಿ ಆಗಿರುವುದರಿಂದ, ರಿವರ್ಸ್ ಚಾರ್ಜಿಂಗ್ ವ್ಯವಸ್ಥೆಯನ್ನೂ ನೀಡಲಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ಈ ಫೋನ್‌ನಿಂದಲೇ 10W ವೇಗದಲ್ಲಿ ಬ್ಲೂಟೂತ್ ಇಯರ್ ಫೋನ್ ಅಥವಾ ಇಯರ್ ಬಡ್ಸ್ ಚಾರ್ಜ್ ಮಾಡಬಹುದು. ಗ್ರಾಫೈಟ್ ಕೂಲಿಂಗ್ ತಂತ್ರಜ್ಞಾನವಿರುವುದರಿಂದ ಸಾಧನವು ಬಿಸಿ ಆಗುವುದಿಲ್ಲ. ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ, ಸಾಮಾನ್ಯ ಬಳಕೆಯಲ್ಲಿ ಎರಡು ದಿನ, ಗೇಮ್ ಆಡಿದರೆ ಒಂದು ದಿನದವರೆಗೆ ಬ್ಯಾಟರಿ ಚಾರ್ಜ್ ಇರುತ್ತದೆ. ಎಸ್‌ಟಿಎಸ್ ಎಂಬ ಬ್ಯಾಟರಿ ಸುರಕ್ಷತಾ ತಂತ್ರಜ್ಞಾನ ಅಳವಡಿಸಲಾಗಿದ್ದು, ಇದು ಯಾವುದೇ ಅಪಘಾತ ಅಥವಾ ಬ್ಯಾಟರಿಗೆ ಹಾನಿಯಾದ ಸಂದರ್ಭದಲ್ಲಿ ಬ್ಯಾಟರಿಯು ಶಾರ್ಟ್ ಸರ್ಕ್ಯುಟ್ ಆಗದಂತೆ (ಬೆಂಕಿ ಹೊತ್ತಿಕೊಳ್ಳದಂತೆ) ತಡೆಯುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಕಾರ್ಯಾಚರಣೆ ಬಗ್ಗೆ ಹೇಳುವುದಿದ್ದರೆ, ಗೇಮಿಂಗ್ ಪ್ರಿಯ ಯುವಜನತೆಗೆ ಈ ಫೋನ್ ಇಷ್ಟವಾಗಬಹುದು. ಹೀಲಿಯಂ ಪ್ರೊಸೆಸರ್ ಮತ್ತು ಮೆಮೊರಿ ಫ್ಯೂಶನ್ ತಂತ್ರಜ್ಞಾನ ಇರುವುದರಿಂದ, ತೀರಾ ಹೆಚ್ಚು ಗ್ರಾಫಿಕ್ಸ್ ಇರುವ ಗೇಮ್ಸ್ ಆಡುವಲ್ಲಿ ತೊಡಕಾಗಿಲ್ಲ. 4ಡಿ ವೈಬ್ರೇಶನ್ ಎಂಬ ವ್ಯವಸ್ಥೆಯು, ಗೇಮಿಂಗ್‌ನ ಅನುಭವವನ್ನು ಮತ್ತಷ್ಟು ರೋಚಕವಾಗಿಸುತ್ತದೆ.

ವಿಶೇಷತೆಗಳು
ವಿಡಿಯೊದಿಂದ ಎಂಪಿ3ಗೆ ಪರಿವರ್ತಿಸುವ ವ್ಯವಸ್ಥೆ ಇದರಲ್ಲಿ ಅಡಕವಾಗಿರುವ ‘ವಿಷಾ’ ಹೆಸರಿನ ವಿಡಿಯೊ ಪ್ಲೇಯರ್‌ನಲ್ಲಿದೆ. ಜೊತೆಗೆ, ನಮ್ಮ ಚಿತ್ರದ ಮೂಲಕ ವೈವಿಧ್ಯಮಯ ಶಾರ್ಟ್ ವಿಡಿಯೊ ರಚಿಸುವ ಹಲವಾರು ಟೆಂಪ್ಲೇಟ್‌ಗಳು ಗಮನ ಸೆಳೆಯುತ್ತವೆ. ‘ವಿ-ಲೈಫ್’ ಆ್ಯಪ್ ಮೂಲಕ ಎಲ್ಲ ಸ್ಮಾರ್ಟ್ ಸಾಧನಗಳನ್ನು ಒಂದೇ ಕಡೆ ಸೇರಿಸಿಕೊಂಡು ನಿಯಂತ್ರಿಸಬಹುದು. ಗಮನ ಸೆಳೆದಿದ್ದೆಂದರೆ ಹಾಯ್ ಟ್ರಾನ್ಸ್‌ಲೇಟ್ ಎಂಬ ಭಾಷಾಂತರ ಆ್ಯಪ್. ಕನ್ನಡವೂ ಸೇರಿದಂತೆ ದೇಶದ ಮತ್ತು ವಿದೇಶದ ಹಲವಾರು ಭಾಷೆಗಳ ಮಧ್ಯೆ ಅನುವಾದವನ್ನು ಪಠ್ಯ, ಧ್ವನಿ ಮೂಲಕವಾಗಿ ಮಾಡಬಹುದು. ಒಂದೊಂದೇ ವಾಕ್ಯವನ್ನು ಅದು ಬಹುತೇಕ ನಿಖರವಾಗಿ ಅನುವಾದಿಸಿಕೊಡುತ್ತದೆ.

ಬೆಲೆ
4GB+64GB ಮಾದರಿಯ ಬೆಲೆ ₹11,499 ಹಾಗೂ 6GB+128GB ಮಾದರಿಯ ಬೆಲೆ ₹12,999.

ಒಟ್ಟಾರೆ ಹೇಗಿದೆ
7000mAh ಬ್ಯಾಟರಿ ಮತ್ತು ಇದರಿಂದಾಗಿ ಸ್ವಲ್ಪ ತೂಕ ಇರುವ ಈ ಸ್ಮಾರ್ಟ್‌ಫೋನ್ ಗೇಮಿಂಗ್ ಪ್ರಿಯರಿಗೆ, ಕ್ಯಾಮೆರಾ ಪ್ರಿಯರಿಗೆ ತುಂಬ ಇಷ್ಟವಾಗಬಹುದು. ಈ ಬೆಲೆಯ ಶ್ರೇಣಿಯಲ್ಲಿ ಸಾಮಾನ್ಯ ಕಾರ್ಯಾಚರಣೆಗೂ ಉತ್ತಮ ಎನ್ನಿಸಬಹುದಾದ ಬಜೆಟ್ ಫೋನ್ ಇದು.

Tecno Pova 3 Review Published in Prajavani on 29 Jun 2022

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಒಂದೇ ಫೋನ್‌ನಲ್ಲಿ ಎರಡು WhatsApp ಖಾತೆ ಬಳಸುವುದು ಹೇಗೆ?

ಕಳೆದ ಅಕ್ಟೋಬರ್ 19ರಂದು ಮೆಟಾ ಒಡೆತನದ WhatsApp ಸಂಸ್ಥೆಯೇ ತನ್ನ ಆ್ಯಪ್‌ಗೆ ಹೊಸ ಅಪ್‌ಡೇಟ್ ನೀಡಿದ್ದು, ಎರಡು ವಾಟ್ಸ್ಆ್ಯಪ್ ಖಾತೆಗಳನ್ನು…

3 months ago

AI Images: Text ಬಳಸಿ ಚಿತ್ರ ತಯಾರಿಸುವುದು ಹೇಗೆ?

AI Images: ನಮ್ಮ ಕಲ್ಪನೆಯನ್ನು ಎಐ ಎಂಜಿನ್‌ಗೆ ಟೆಕ್ಸ್ಟ್ (ಪಠ್ಯ) ಮೂಲಕ ಊಡಿಸಿದರೆ ಸಾಕು, ಕ್ಷಣ ಮಾತ್ರದಲ್ಲಿ ನೀವಂದುಕೊಂಡ ಚಿತ್ರವೊಂದು…

4 months ago

ಬ್ರಾಡ್‌ಬ್ಯಾಂಡ್ ವೇಗ: ಎಂಬಿಪಿಎಸ್ ಎಂದರೆ ಏನು? ನೀವು ಯಾಮಾರುವುದು ಎಲ್ಲಿ?

ಹಾರ್ಡ್ ಡ್ರೈವ್ ಅಥವಾ ಸ್ಟೋರೇಜ್ ಡ್ರೈವ್‌ಗಳಲ್ಲಿರುವ ಫೈಲ್‌ಗಳ ವಿನಿಮಯದ ಸಂದರ್ಭದಲ್ಲಿ ಬಳಸುವುದು ಮೆಗಾಬೈಟ್ಸ್ ಎಂಬ ಪ್ರಮಾಣವನ್ನು. ಇಂಟರ್ನೆಟ್ ವೇಗವನ್ನು ಅಳೆಯುವುದು…

4 months ago

Apple iPhone 15 Plus Review: ಪ್ರೊ ಮಾದರಿಗಳ ವೈಶಿಷ್ಟ್ಯವಿರುವ ಐಫೋನ್ 15 ಪ್ಲಸ್

Apple iPhone 15 Plus Review: ಲೈಟ್ನಿಂಗ್ ಪೋರ್ಟ್ ಬದಲು ಟೈಪ್ ಸಿ ಚಾರ್ಜಿಂಗ್ ಪೋರ್ಟ್, ಡೈನಮಿಕ್ ಐಲೆಂಡ್, ಹೊಸ…

5 months ago

Type in Kannada: ಐಫೋನ್, ಆಂಡ್ರಾಯ್ಡ್ ಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಈಗ ಮತ್ತಷ್ಟು ಸುಲಭ

Type in Kannada: ಗೂಗಲ್‌ನ ಆಂಡ್ರಾಯ್ಡ್ ಹಾಗೂ ಆ್ಯಪಲ್‌ನ ಐಫೋನ್ ಸ್ಮಾರ್ಟ್‌ಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಸುಲಭವಾಗಿಸುವ ಸಾಕಷ್ಟು ಖಾಸಗಿ ಕೀಬೋರ್ಡ್…

5 months ago

iPhone 15 Pro Max Review: ಗೇಮರ್‌ಗಳಿಗೆ ಹಬ್ಬ – ಆ್ಯಪಲ್‌ನ ಶಕ್ತಿಶಾಲಿ, ಐಷಾರಾಮಿ ಸಾಧನ

iPhone 15 Pro Max Review: ವಿನೂತನವಾದ ಟೈಟಾನಿಯಂ ಚೌಕಟ್ಟು ಐಷಾರಾಮದ ಅನುಭವ. ಲೈಟ್ನಿಂಗ್ ಪೋರ್ಟ್ ಬದಲು ಯುಎಸ್‌ಬಿ ಸಿ…

5 months ago