Samsung Galaxy F54: ಗೇಮಿಂಗ್ ದೈತ್ಯ, ಉತ್ತಮ ಬ್ಯಾಟರಿ, ಕ್ಯಾಮೆರಾ

0
227

Samsung Galaxy F54: ಸ್ಮಾರ್ಟ್‌ಫೋನ್-ಪ್ರಿಯ ಯುವಜನಾಂಗವನ್ನೇ ಗುರಿಯಾಗಿರಿಸಿಕೊಂಡು ಸ್ಯಾಮ್‌ಸಂಗ್ ರೂಪಿಸಿರುವ ಗ್ಯಾಲಕ್ಸಿ ಎಫ್ ಸರಣಿಯಲ್ಲಿ ಹೊಚ್ಚ ಹೊಸ ಸ್ಮಾರ್ಟ್‌ಫೋನ್ – ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್54 5ಜಿ ಜೂ.6ರಂದು ಬಿಡುಗಡೆಯಾಗಿದೆ. ಬಿಡುಗಡೆಗೆ ಮುನ್ನ ಪ್ರಜಾವಾಣಿಗೆ ರಿವ್ಯೂಗೆ ದೊರೆತ ಈ ಫೋನ್ ಹೇಗಿದೆ? ಮಧ್ಯಮಶ್ರೇಣಿಯ ಫೋನ್‌ಗಳಲ್ಲಿ ಪ್ರಮುಖವಾಗಿರುವ ಈ ಹೊಚ್ಚ ಹೊಸ ಮಾದರಿಯ ಪ್ರಮುಖ ಆಕರ್ಷಣೆಗಳೇನು ಎಂಬ ವಿವರ ಇಲ್ಲಿದೆ.

ವಿನ್ಯಾಸ, ಡಿಸ್‌ಪ್ಲೇ
ಸ್ಯಾಮ್‌ಸಂಗ್ ಇತ್ತೀಚಿನ ತನ್ನೆಲ್ಲ ಫೋನ್‌ಗಳಲ್ಲಿ ಪ್ರಧಾನ ಕ್ಯಾಮೆರಾದ ವಿನ್ಯಾಸ ಬದಲಾವಣೆ ಮಾಡಿದ್ದು, ಎಫ್54 ಫೋನ್‌ನಲ್ಲೂ ಗ್ಯಾಲಕ್ಸಿ ಎ54 ಅಥವಾ ಎ34ನಲ್ಲಿರುವಂತೆಯೇ ಉಬ್ಬಿದ ಭಾಗದಲ್ಲಿ ಲಂಬವಾಗಿ ಮೂರು ಲೆನ್ಸ್‌ಗಳನ್ನು ಜೋಡಿಸಲಾಗಿದೆ. ಇದು ಪ್ರೀಮಿಯಂ ನೋಟ ನೀಡುತ್ತದೆ. ಹಿಂಭಾಗದಲ್ಲಿರುವ ಸಿಲ್ವರ್ ಬಣ್ಣದ ಪಾಲಿಕಾರ್ಬೊನೇಟ್ ಕವಚಕ್ಕೆ ಬೆಳಕು ಬಿದ್ದಾಗ ಕಾಮನಬಿಲ್ಲಿನ ಬಣ್ಣದ ಪ್ರತಿಫಲನ ಗೋಚರಿಸುತ್ತದೆ. ಆದರೆ, ಇದರಲ್ಲಿ ಸುಲಭವಾಗಿ ಬೆರಳಚ್ಚು ಬೀಳುವುದರಿಂದ ಆಗಾಗ್ಗೆ ಸ್ವಚ್ಛಗೊಳಿಸುತ್ತಿರಬೇಕಾಗುತ್ತದೆ. ಅಲ್ಯೂಮಿನಿಯಂ ಚೌಕಟ್ಟಿನಲ್ಲಿ 6.7 ಇಂಚಿನ FHD+ ಸೂಪರ್ ಅಮೊಲೆಡ್ ಡಿಸ್‌ಪ್ಲೇ ಇದೆ. 120 Hz ರಿಫ್ರೆಶ್ ರೇಟ್, 1080×2400 ಪಿಕ್ಸೆಲ್ ರೆಸೊಲ್ಯುಶನ್‌ನಲ್ಲಿ ಚಿತ್ರಗಳು ಸ್ಫುಟವಾಗಿ ಕಾಣಿಸುತ್ತವೆ. ಕೆಳಭಾಗದಲ್ಲಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಹಾಗೂ ಎಡಭಾಗದಲ್ಲಿ ಬೆರಳಚ್ಚು ಸ್ಕ್ಯಾನರ್ ಸಹಿತವಾದ ಪವರ್ ಬಟನ್, ವಾಲ್ಯೂಮ್ ಬಟನ್‌ಗಳಿವೆ.

8.4 ಮಿಮೀ ದಪ್ಪವಿದ್ದು ಸ್ಲಿಮ್ ಆಗಿದೆ. ಗೊರಿಲ್ಲಾ ಗ್ಲಾಸ್ 5, ಜೊತೆಗೆ ಸಿಲ್ವರ್ ಹಾಗೂ ನೀಲಿ – ಎರಡು ಬಣ್ಣಗಳ ಮಾದರಿಯಲ್ಲಿ ಗ್ಯಾಲಕ್ಸಿ ಎಫ್ 54 ಫೋನ್ ಲಭ್ಯವಿದೆ.

ಕಾರ್ಯಾಚರಣೆ
ಆಂಡ್ರಾಯ್ಡ್ 13 ಆಧಾರಿತ ಒನ್ ಯುಐ 5.1 ಕಾರ್ಯಾಚರಣಾ ವ್ಯವಸ್ಥೆಯಿದ್ದು, ಇಂಟರ್ಫೇಸ್ ಸರಳವಾಗಿದೆ. ಎಕ್ಸಿನೋಸ್ 1380 ಚಿಪ್‌ಸೆಟ್, ಒಕ್ಟಾ ಕೋರ್ ಸಿಪಿಯು ಮತ್ತು ಮಾಲಿ ಜಿ68 ಎಂಪಿ5 ಜಿಪಿಯು – ಇವುಗಳ ಸಂಗಮವು ಗೇಮ್ ಆಡುವುದಕ್ಕೆ, ಆಟದ ಅನುಭವ ಮತ್ತು ನೋಟದ ವರ್ಧನೆಗೆ ಪೂರಕವಾಗಿದೆ. ಜೊತೆಗೆ 8ಜಿಬಿ RAM (RAM ಪ್ಲಸ್ ವೈಶಿಷ್ಟ್ಯದ ಮೂಲಕ ಇನ್ನೂ 8 ಜಿಬಿ ಹೆಚ್ಚಿಸಿಕೊಳ್ಳಬಹುದು) ಹಾಗೂ 256 ಜಿಬಿ ಸ್ಟೋರೇಜ್ ಇದೆ. ಗೇಮಿಂಗ್ ಹಾಗೂ ವಿಡಿಯೊ ವೀಕ್ಷಣೆ ಸಂದರ್ಭದಲ್ಲಿ ಯಾವುದೇ ವಿಳಂಬದ ಅನುಭವ ಆಗಿಲ್ಲ.

25W ಸೂಪರ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವ 6000 mAh ಸಾಮರ್ಥ್ಯದ ಬ್ಯಾಟರಿ ಒಳಗೊಂಡಿದ್ದು, ಸಾಮಾನ್ಯ ಬಳಕೆಯಲ್ಲಿ ಎರಡು ದಿನಗಳಿಗೆ ಸಾಕಾಗುವಷ್ಟು ಚಾರ್ಜ್ ನಿಲ್ಲುತ್ತದೆ. ಬಾಕ್ಸ್‌ನಲ್ಲಿ ಅಡಾಪ್ಟರ್ ನೀಡಲಾಗಿಲ್ಲ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ನಾಯ್ಸ್ ರಿಡಕ್ಷನ್ ತಂತ್ರಜ್ಞಾನವು, ಪರಿಸರದ ಸದ್ದುಗದ್ದಲವನ್ನು ಫಿಲ್ಟರ್ ಮಾಡಿ ನಮ್ಮ ಧ್ವನಿಯನ್ನು ಅತ್ತ ಕಡೆಯಿರುವ ಮೊಬೈಲ್‌ಗೆ ಸ್ಪಷ್ಟವಾಗಿ ಕೇಳಿಸುತ್ತದೆ.

ಕ್ಯಾಮೆರಾ
ಕ್ಯಾಮೆರಾ ಈ ಫೋನ್‌ನ ಪ್ರಧಾನ ಆಕರ್ಷಣೆ. ವಿನ್ಯಾಸದ ಹೊರತಾಗಿ, ಪ್ರಧಾನ ಕ್ಯಾಮೆರಾ ಲೆನ್ಸ್ 108MP ಸಾಮರ್ಥ್ಯ ಹೊಂದಿದ್ದು, 8ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕೋನದ ಲೆನ್ಸ್ ಹಾಗೂ 2ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಇದೆ. ಪ್ರಧಾನ ಕ್ಯಾಮೆರಾದಲ್ಲಿ ಚಿತ್ರಗಳ ಸ್ಫುಟತೆ, ವರ್ಣವೈವಿಧ್ಯಗಳು ಸಮರ್ಪಕವಾಗಿ ಮೂಡಿಬರುತ್ತವೆ. ಅಲ್ಟ್ರಾವೈಡ್ ಲೆನ್ಸ್ ಮೂಲಕ ಹೆಚ್ಚು ವಿಷಯಗಳನ್ನು ಅಥವಾ ಹೆಚ್ಚು ಜನರನ್ನು ಒಂದೇ ಫ್ರೇಮ್‌ನಲ್ಲಿ ಸೇರ್ಪಡಿಸಿಕೊಳ್ಳುವುದು ಸಾಧ್ಯ. ಕ್ಯಾಮೆರಾದ ಆಟೋಫೋಕಸ್ ವೈಶಿಷ್ಟ್ಯವು ಚೆನ್ನಾಗಿ ಕೆಲಸ ಮಾಡುತ್ತದೆ.

ಕಡಿಮೆ ಬೆಳಕಿರುವಲ್ಲಿ ನೈಟೋಗ್ರಫಿ ವೈಶಿಷ್ಟ್ಯವು ಹೆಚ್ಚು ಸ್ಪಷ್ಟವಾಗಿರುವ ಫೋಟೊಗಳನ್ನು ನೀಡುತ್ತದೆ. ಬೆಳಕಿನ ಪ್ರಮಾಣಕ್ಕೆ ಹೊಂದಿಕೊಂಡಂತೆ ಸ್ವಯಂಚಾಲಿತವಾಗಿ ಸಕ್ರಿಯವಾಗುವ ನೈಟ್ ಮೋಡ್‌ನಲ್ಲಿ, ಸಬ್ಜೆಕ್ಟ್ ಮೇಲೆ ಹೆಚ್ಚು ಬೆಳಕು ಫೋಕಸ್ ಆಗುವ ಮೂಲಕ ಸ್ಪಷ್ಟತೆ ಸಾಧ್ಯವಾಗಿದೆ. ಕ್ಯಾಮೆರಾದ ‘ಪ್ರೋ’ ಮೋಡ್ ಹಾಗೂ ಶೇಕ್ ಆಗುವುದನ್ನು ಸರಿಪಡಿಸುವ ತಂತ್ರಜ್ಞಾನ ಗಮನ ಸೆಳೆದಿದೆ. ಇದರಲ್ಲಿರುವ ಸಿಂಗಲ್ ಟೇಕ್ ಮೋಡ್‌ನಲ್ಲಿ ನಾಲ್ಕು ಫೋಟೊಗಳು ಹಾಗೂ 4 ವಿಡಿಯೊ ತುಣುಕುಗಳು ಸೆರೆಯಾಗುತ್ತಿದ್ದು, ಚೆನ್ನಾಗಿರುವುದನ್ನು ಉಳಿಸಿಕೊಳ್ಳುವ ಆಯ್ಕೆಯಿದೆ. ಇದರ ವಿಶೇಷತೆಯೆಂದರೆ ಬೂಮರಾಂಗ್, ಫಾಸ್ಟ್ ಫಾರ್ವರ್ಡ್, ಹೈಲೈಟ್ ಹಾಗೂ ಮೂಲ ವಿಡಿಯೊಗಳು ಸೆರೆಯಾದರೆ, ಫೋಟೊದಲ್ಲಿಯೂ ಸಾಮಾನ್ಯ ಫೋಟೊ, ಫಿಲ್ಟರ್ ಇರುವ, ಕ್ರಾಪ್ ಆಗಿರುವ ಹಾಗೂ ಕೊಲಾಜ್ ಚಿತ್ರ ಸೆರೆಯಾಗುತ್ತದೆ. 32 ಮೆಗಾಪಿಕ್ಸೆಲ್ ಸಾಮರ್ಥ್ಯದ ಲೆನ್ಸ್ ಇರುವ ಸೆಲ್ಫೀ ಮೂಲಕ ಸೆರೆಹಿಡಿಯಲಾದ ಚಿತ್ರಗಳು ಸ್ಫುಟವಾಗಿವೆ. ಎರಡೂ ಕ್ಯಾಮೆರಾಗಳಲ್ಲಿ ಪೋರ್ಟ್ರೇಟ್ ಮೋಡ್ (ಹಿನ್ನೆಲೆ ನಸುಕಾಗಿಸುವ) ಚೆನ್ನಾಗಿ ಕೆಲಸ ಮಾಡುತ್ತದೆ.

ಗ್ಯಾಲಕ್ಸಿ ಎಫ್54 ಫೋನ್‌ನಲ್ಲಿ ಸ್ಯಾಮ್‌ಸಂಗ್‌ನ ಪ್ರೀಮಿಯಂ ಸ್ಮಾರ್ಟ್‌ಫೋನ್ – ಗ್ಯಾಲಕ್ಸಿ ಎಸ್22 ನಲ್ಲಿ ಕಳೆದ ವರ್ಷ ಪರಿಚಯಿಸಲಾಗಿದ್ದ ನೈಟೋಗ್ರಫಿ ವೈಶಿಷ್ಟ್ಯ ಅಳವಡಿಸಲಾಗಿದೆ. ಅದೇ ರೀತಿ, ಗ್ಯಾಲಕ್ಸಿ ಎಸ್23ರಲ್ಲಿದ್ದ ಆಸ್ಟ್ರೋಲ್ಯಾಪ್ಸ್ ಎಂಬ ವೈಶಿಷ್ಟ್ಯವನ್ನೂ ಈ ಫೋನ್‌ಗೆ ಸೇರಿಸಲಾಗಿದೆ. ಇದು ಆಕಾಶದಲ್ಲಿ ನಕ್ಷತ್ರಗಳ ಫೋಟೊಗ್ರಫಿಯ ಆಸಕ್ತರಿಗೆ ಪೂರಕವಾಗಿದೆ.

ಎಂದಿನಂತೆ ಗ್ಯಾಲಕ್ಸಿ ವೈಶಿಷ್ಟ್ಯಗಳಾದ ಸ್ಯಾಮ್‌ಸಂಗ್ ವ್ಯಾಲೆಟ್, ನಾಕ್ಸ್ (Knox) ಸುರಕ್ಷತಾ ವ್ಯವಸ್ಥೆಗಳಿದ್ದು, 4 ಪೀಳಿಗೆಯ ಕಾರ್ಯಾಚರಣಾ ವ್ಯವಸ್ಥೆಯ (ಬಹುತೇಕ ನಾಲ್ಕು ವರ್ಷ) ಅಪ್‌ಡೇಟ್ ನೀಡಲಾಗುತ್ತದೆ ಹಾಗೂ 5 ವರ್ಷಗಳ ಸುರಕ್ಷತಾ ಅಪ್‌ಡೇಟ್‌ಗಳನ್ನು ಒದಗಿಸಲಾಗುತ್ತದೆ ಎಂದು ಸ್ಯಾಮ್‌ಸಂಗ್ ಭರವಸೆ ನೀಡಿದೆ.

ಒಟ್ಟಿನಲ್ಲಿ, ಉತ್ತಮ ಪ್ರೊಸೆಸರ್, ವೇಗದ ಕಾರ್ಯಾಚರಣೆ, ಬ್ಯಾಟರಿ, ವಿಶೇಷವಾದ ಕ್ಯಾಮೆರಾ ವೈಶಿಷ್ಟ್ಯಗಳ ಮೂಲಕ ಮಧ್ಯಮ ಶ್ರೇಣಿಯ ಫೋನ್‌ಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್54 ಗಮನ ಸೆಳೆಯುತ್ತದೆ. ಇದರ ಬೆಲೆ ₹27,999.

Gadget Review by Avinash B published in Prajavani on 08 Jun 2023

LEAVE A REPLY

Please enter your comment!
Please enter your name here