ಸ್ಯಾಮ್‌ಸಂಗ್ ಇತ್ತೀಚೆಗೆ ಗ್ಯಾಲಕ್ಸಿ ಎಫ್ 13 (Samsung Galaxy F13) ಹೆಸರಿನ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. 6000mAh ಬ್ಯಾಟರಿ ಮತ್ತು ಅತ್ಯಾಧುನಿಕವಾದ ‘ಡೇಟಾ ಸ್ವಿಚಿಂಗ್’ ವೈಶಿಷ್ಟ್ಯ ಮತ್ತು 50 ಮೆಗಾಪಿಕ್ಸೆಲ್ ಕ್ಯಾಮೆರಾ – ಇವು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್13 ಹೆಗ್ಗಳಿಕೆ. ಒಂದು ವಾರ ಅದನ್ನು ಬಳಸಿ ನೋಡಿದ ಬಳಿಕ ಅದು ಹೇಗಿದೆಯೆಂಬ ಮಾಹಿತಿ ಇಲ್ಲಿದೆ.
ವಿನ್ಯಾಸ
6.6 ಇಂಚಿನ FHD+ಡಿಸ್‌ಪ್ಲೇ ಮತ್ತು ಐಪಿಎಸ್ ಎಲ್‌ಸಿಡಿ ಪ್ಯಾನೆಲ್ ಇರುವ ಸ್ಕ್ರೀನ್ ಗಮನ ಸೆಳೆಯುತ್ತದೆ. 12 ಸಾವಿರ ರೂ. ಆಸುಪಾಸಿನ ಬೆಲೆಯಲ್ಲಿ ಈ ರೀತಿಯ ಡಿಸ್‌ಪ್ಲೇ ದೊರೆಯುವುದು ವಿಶೇಷ. ಗೀರುಗಳು ಆಗದಂತೆ ಗೊರಿಲ್ಲಾ ಗ್ಲಾಸ್ 5.0 ಸಂರಕ್ಷಣೆಯಿದೆ. ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ಮತ್ತು ಫ್ಲ್ಯಾಶ್ ಇದ್ದು, ಹಿಂಭಾಗದ ಕವಚವು ಸುಳಿಗಳಂತಿರುವ ಗೆರೆಗಳ ವಿನ್ಯಾಸದಿಂದ ಆಕರ್ಷಣೀಯವಾಗಿದೆ. ಇದರಿಂದಾಗಿ, ಬೆರಳಚ್ಚು ಮೂಡುವುದಿಲ್ಲ ಮತ್ತು ಹಿಡಿದುಕೊಳ್ಳಲು ಗ್ರಿಪ್ ಕೂಡ ದೊರೆಯುತ್ತದೆ. ಒಂದು ಪಾರ್ಶ್ವದಲ್ಲಿ ವಾಲ್ಯೂಮ್ ಮತ್ತು ಬೆರಳಚ್ಚು ಸೆನ್ಸರ್ ಇರುವ ಪವರ್ ಬಟನ್ ಇದ್ದರೆ, ಮತ್ತೊಂದು ಬದಿಯಲ್ಲಿ ಎರಡು ಮೈಕ್ರೋ ಸಿಮ್ ಹಾಗೂ ಎಸ್‌ಡಿ ಕಾರ್ಡ್ (1TB ವರೆಗಿನ ಸಾಮರ್ಥ್ಯ) ಅಳವಡಿಸಬಹುದಾದ ಟ್ರೇ ಇದೆ. ಕೆಳಭಾಗದಲ್ಲಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್, 3.5ಮಿಮೀ ಜ್ಯಾಕ್, ಮೈಕ್ ಹಾಗೂ ಸ್ಪೀಕರ್ ಗ್ರಿಲ್‌ಗಳಿವೆ. ಹಗಲು ಪ್ರಖರ ಬಿಸಿಲಿನಲ್ಲಿಯೂ ಫೋನ್‌ನಲ್ಲಿ ಸಂದೇಶಗಳನ್ನು ಓದಲು ಈ ಡಿಸ್‌ಪ್ಲೇ ಸೂಕ್ತವಾಗಿದೆ. ಒಟ್ಟಾರೆ ಫೋನ್‌ನ ಬಾಡಿ ಪ್ಲಾಸ್ಟಿಕ್‌ನದ್ದೇ ಆದರೂ ವಿನ್ಯಾಸ ಆಕರ್ಷಕವಾಗಿದೆ ಮತ್ತು ಇಷ್ಟು ಬ್ಯಾಟರಿ ಇದ್ದರೂ ಹಗುರವೂ, ತೆಳುವಾಗಿಯೂ ಇದೆ.
ಕಾರ್ಯಾಚರಣೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್13ರಲ್ಲಿ ಒಕ್ಟಾಕೋರ್ ಎಕ್ಸಿನೋಸ್ 850 ಚಿಪ್‌ಸೆಟ್ ಇದ್ದು, 4GB RAM ನೀಡಲಾಗಿದೆ. ಹೀಗಾಗಿ ಬ್ರೌಸಿಂಗ್ ತೀರಾ ಸುಲಲಿತವಾಗಿದೆ. ತೀರಾ ಹೆಚ್ಚು ತೂಕದ ಅಥವಾ ಗ್ರಾಫಿಕ್ಸ್ ಇರುವ ಗೇಮಿಂಗ್‌ಗೆ ಹೇಳಿಮಾಡಿಸಿದ್ದು ಎಂದಲ್ಲವಾದರೂ, ಯಾವುದೇ ಸಮಸ್ಯೆಯಾಗಲಿಲ್ಲ. ಒಟ್ಟು ಎರಡು ಮಾದರಿಗಳಲ್ಲಿ ಲಭ್ಯ. 4GB 64GB ಹಾಗೂ 4GB 128GB ಮಾದರಿ. ಬೆಲೆಯಲ್ಲಿ 1 ಸಾವಿರ ರೂ. ವ್ಯತ್ಯಾಸವಷ್ಟೇ. ಹೊಸದಾದ ಆಂಡ್ರಾಯ್ಡ್ 12 ಕಾರ್ಯಾಚರಣೆ ವ್ಯವಸ್ಥೆ ಆಧಾರಿತ ಒನ್ ಯುಐ4.1 ಸಿಸ್ಟಂ ಇದರಲ್ಲಿದೆ.
ಕ್ಯಾಮೆರಾ
ಹಿಂಭಾಗದಲ್ಲಿ 50MP+5MP (ಅಲ್ಟ್ರಾವೈಡ್)+2MP (ಡೆಪ್ತ್ ಸೆನ್ಸರ್) ಮೆಗಾಪಿಕ್ಸೆಲ್ ಸಾಮರ್ಥ್ಯದ ಮೂರು ಲೆನ್ಸ್‌ಗಳು ಮತ್ತು ಫ್ಲ್ಯಾಶ್ ಇರುವ ಕ್ಯಾಮೆರಾ ಸೆಟಪ್ ಇದ್ದು, ಗುಣಮಟ್ಟವು ಚೆನ್ನಾಗಿಯೇ ಇದೆ. ಉತ್ತಮ ಬೆಳಕಿರುವಲ್ಲಿ ಚಿತ್ರ ಅಥವಾ ವಿಡಿಯೊಗಳ ನಿಖರತೆ ಚೆನ್ನಾಗಿದ್ದು, ಕಡಿಮೆ ಬೆಳಕಿನಲ್ಲಿ ಕೂಡ ಗುಣಮಟ್ಟವನ್ನು ತಳ್ಳಿಹಾಕುವಂತಿಲ್ಲ. ವಿಶೇಷವಾಗಿ ಪ್ರತ್ಯೇಕವಾಗಿ ನೈಟ್ ಮೋಡ್ ಇರುವುದು ಪ್ಲಸ್ ಪಾಯಿಂಟ್. 8MP ಸೆಲ್ಫೀ ಕ್ಯಾಮೆರಾ ಇದ್ದು, ವಿಡಿಯೊ ಕರೆಗಳಿಗೆ ಹೊಂದಿಕೊಳ್ಳುತ್ತದೆ.
ಗ್ಯಾಲಕ್ಸಿ ಎಫ್13 ಸಾಧನದ ಪ್ರಧಾನ ಆಕರ್ಷಣೆಯೇ ಇದರ ಬ್ಯಾಟರಿ. 6000mAh ಬ್ಯಾಟರಿಯ ಚಾರ್ಜ್ ಸಾಧಾರಣ ಬಳಕೆಯಲ್ಲಿ ಎರಡರಿಂದ 3 ದಿನಗಳ ಕಾಲಕ್ಕೆ ಸಮಸ್ಯೆಯಾಗಿಲ್ಲ. ಕಡಿಮೆ ಫೇಸ್‌ಬುಕ್ ಬಳಕೆ ಮಾಡಿ, ದಿನಕ್ಕೆರಡು ವಿಡಿಯೊ ವೀಕ್ಷಣೆ, ಅರ್ಧರ್ಧ ಗಂಟೆ ಗೇಮ್, ಕೊಂಚ ಬ್ರೌಸಿಂಗ್, ವಾಟ್ಸ್ಆ್ಯಪ್-ಇಮೇಲ್ ಸಂದೇಶ ವಿನಿಮಯ, ಕರೆ- ಇಷ್ಟಾದರೂ 2 ದಿನ ಬ್ಯಾಟರಿ ಚಾರ್ಜ್‌ಗೆ ಸಮಸ್ಯೆಯಾಗಲಿಲ್ಲ. ಬಾಕ್ಸ್‌ನಲ್ಲಿ 15W ವೇಗದ ಚಾರ್ಜಿಂಗ್ ಬೆಂಬಲಿಸುವ ಚಾರ್ಜರ್ ಇದ್ದು, ಒಂದುವರೆ ಗಂಟೆಯಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ.
ಎಂದಿನಂತೆಯೇ ಕೆಲವೊಂದು ಸ್ಮಾರ್ಟ್ ವೈಶಿಷ್ಟ್ಯಗಳಿವೆ. ಉದಾಹರಣೆಗೆ, ಸೆಟ್ಟಿಂಗ್ಸ್‌ನಲ್ಲಿ ಅಡ್ವಾನ್ಸ್ಡ್ ಫೀಚರ್ಸ್ ಎಂಬಲ್ಲಿನ ಮೋಶನ್ಸ್ & ಗೆಶ್ಚರ್ಸ್ ವಿಭಾಗದಲ್ಲಿ, ಫೋನ್ ಕೈಗೆತ್ತಿದಾಗ ಡಿಸ್‌ಪ್ಲೇ ಆನ್ ಆಗುವುದು, ಸ್ಕ್ರೀನ್ ಆನ್/ಆಫ್ ಮಾಡಲು ಡಬಲ್-ಟ್ಯಾಪ್ ಮಾಡುವುದು, ಸ್ಕ್ರೀನ್ ಕಣ್ಣಿನ ಎದುರಲ್ಲಿದ್ದಾಗ ಲಾಕ್ ಆಗದಿರುವುದು, ಮಗುಚಿ ಇಟ್ಟರೆ ಮ್ಯೂಟ್ ಆಗುವುದು ಮುಂತಾದ ಸನ್ನೆಗಳು ಚೆನ್ನಾಗಿ ಕೆಲಸ ಮಾಡುತ್ತವೆ.
ವೈಶಿಷ್ಟ್ಯಗಳು
ಪ್ರಧಾನ ಸಿಮ್‌ನಲ್ಲಿ ಸಿಗ್ನಲ್ ಸಮಸ್ಯೆಯಿಂದ ಇಂಟರ್ನೆಟ್ (ಡೇಟಾ) ಸಂಪರ್ಕಕ್ಕೆ ತೊಡಕಾದರೆ, ಡೇಟಾ ಸ್ವಿಚಿಂಗ್ ವೈಶಿಷ್ಟ್ಯ ಮೂಲಕ ಮತ್ತೊಂದು ಸಿಮ್ ಅನ್ನು ಸ್ವಯಂಚಾಲಿತವಾಗಿ ಡೇಟಾಕ್ಕೆ ಬಳಸುವ ವ್ಯವಸ್ಥೆಯಿದೆ. ಅದೇ ರೀತಿ, 4GB RAM ಇದ್ದರೂ ಅಗತ್ಯಬಿದ್ದರೆ ಅದನ್ನು 8GB ವರೆಗೂ ವಿಸ್ತರಿಸಬಹುದಾದ RAM ಪ್ಲಸ್ ತಂತ್ರಜ್ಞಾನವಿದ್ದು, ಎಐ ಪವರ್ ಮ್ಯಾನೇಜ್‌ಮೆಂಟ್ ವ್ಯವಸ್ಥೆಯು, 3 ದಿನ ಬಳಸದೇ ಇರುವ ಆ್ಯಪ್‌ಗಳನ್ನು ಸ್ಲೀಪ್ ಮೋಡ್‌ಗೆ ಹಾಕುವ ಮೂಲಕ ಬ್ಯಾಟರಿ ಚಾರ್ಜ್ ಉಳಿತಾಯಕ್ಕೆ ಪೂರಕವಾಗಿದೆ.
ಮೂರು ಬಣ್ಣಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್13 ಲಭ್ಯವಿದೆ. ನಸುನೀಲಿ, ತಾಮ್ರ ಬಣ್ಣ ಮತ್ತು ಹಸಿರು. 4GB+64GB ಮಾದರಿಯ ಬೆಲೆ ₹11,999 ಹಾಗೂ 4GB+128GB ಮಾದರಿಯ ಬೆಲೆ ₹12,999.
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.