Artificial Intelligence, Machine Learning – ಯಂತ್ರಗಳಿಗೆ ‘ಯೋಚನಾ’ ಶಕ್ತಿ

Artificial Intelligence (AI) Machine Learning (ML): ಇತ್ತೀಚೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಎಂಬ ಪದವನ್ನು ನಾವು ತುಸು ಹೆಚ್ಚಾಗಿಯೇ ಕೇಳಲಾರಂಭಿಸಿದ್ದೇವೆ. ನಮ್ಮ ಅನುಗಾಲದ ಒಡನಾಡಿಯೇ ಆಗಿಬಿಟ್ಟಿರುವ ಸ್ಮಾರ್ಟ್ ಫೋನ್‌ಗಳಲ್ಲೇ ಈ ಅತ್ಯಾಧುನಿಕ ತಂತ್ರಜ್ಞಾನವು ಅಡಕವಾಗಿದೆ ಮತ್ತು ನಾವದನ್ನು ದಿನನಿತ್ಯ ಬಳಸುತ್ತಿದ್ದೇವೆ ಎಂದರೆ ಕೆಲವರಿಗಾದರೂ ಅಚ್ಚರಿಯಾದೀತು. ಹೌದು, ನಮಗರಿವಿಲ್ಲದಂತೆಯೇ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಬ ಅತ್ಯಾಧುನಿಕ ತಂತ್ರಜ್ಞಾನವನ್ನು ನಾವು ಬಳಸುತ್ತಿದ್ದೇವೆ.

ಏನಿದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್?
ಆಂಗ್ಲ ಜೋಡಿಪದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನ್ನು ಕೃತಕ ಬುದ್ಧಿಮತ್ತೆ ಎಂದೋ ಕೃತಕ ಜಾಣ್ಮೆ ಎಂದೋ ಪದಶಃ ಭಾಷಾಂತರಿಸಿ ಬಹುತೇಕರು ಬಳಸುತ್ತಾರೆ. ಆದರೆ, ಈ ಆರ್ಟಿಫಿಶಿಯಲ್ ತಂತ್ರಜ್ಞಾನವು ಕೃತಕ ಅಥವಾ ಕೃತ್ರಿಮವೂ ಅಲ್ಲ, ನಕಲಿಯೂ ಅಲ್ಲ. ಅಷ್ಟೇಕೆ, ಸಹಜ ಬುದ್ಧಿಮತ್ತೆಯೂ ಅಲ್ಲ. ಹಾಗಿದ್ದರೆ ಏನಿದು? ಎಂಬ ಪ್ರಶ್ನೆಗೆ ಉತ್ತರಿಸಬೇಕಿದ್ದರೆ ಯಾಂತ್ರಿಕ ಕಲಿಕೆ (ಮೆಶಿನ್ ಲರ್ನಿಂಗ್ ಅಥವಾ ಎಂಎಲ್) ಎಂಬ ಮತ್ತೊಂದು ತಂತ್ರಜ್ಞಾನದ ಕುರಿತು ತಿಳಿದುಕೊಳ್ಳಬೇಕಾಗುತ್ತದೆ.

ಸ್ಮಾರ್ಟ್ ಫೋನ್‌ಗಳಲ್ಲಿ ನಾವು ಟೈಪ್ ಮಾಡುತ್ತೇವೆ. ಉದಾಹರಣೆಗೆ, ಯಾವುದೋ ಲೇಖನ ಬರೆಯುವಾಗ, ‘ಸೇರ್ಪಡೆ ದಿನಾಂಕ’ ಅಂತ ಬರೆಯಬೇಕಾದಲ್ಲಿ (Date of Joining), ಸಂಕ್ಷಿಪ್ತವಾಗಿ DOJ ಅಂತ ಬರೆಯುತ್ತೇವೆ. ಆಗ, ತಕ್ಷಣವೇ ಫೋನ್‌ನಲ್ಲಿ ಅಡಕವಾಗಿರುವ ಸ್ಮಾರ್ಟ್ ತಂತ್ರಜ್ಞಾನವು ಮೊದಲೇ ಅಳವಡಿಸಿದ್ದ ನಿಘಂಟಿನ ಸಹಾಯ ಪಡೆದು, ಅದು DOG ಆಗಬೇಕೇ? ಅಂತ ನಿಮ್ಮನ್ನು ಅಲ್ಲೇ ಕೇಳುತ್ತದೆ. ‘ಇಲ್ಲ, ಇದು DOJ ಆಗಬೇಕು’ ಅಂತ ನೀವು ಮುಂದುವರಿದರೆ (ಅದನ್ನೇ ಆರಿಸಿಕೊಳ್ಳುವ ಆಯ್ಕೆಯೂ ಅಲ್ಲೇ ಗೋಚರಿಸುತ್ತದೆ), ಮುಂದಿನ ಬಾರಿ ನೀವು DOG ಪದವನ್ನು ಟೈಪ್ ಮಾಡಲು ಹೋದಾಗ, ‘ಅದು DOJ ಆಗಬೇಕೇ?’ ಅಂತ ಆಯ್ಕೆಯನ್ನು ಆ ಫೋನ್ ತೋರಿಸುತ್ತದೆ. ಅಂದರೆ, ಯಂತ್ರವೊಂದು ಕಲಿತು (ಮೆಷಿನ್ ಲರ್ನಿಂಗ್) ಆ ಪದವನ್ನು ಅಥವಾ ಯಾವುದೇ ದತ್ತಾಂಶವನ್ನು ನೆನಪಿಟ್ಟುಕೊಂಡು, ಅದರ ಆಧಾರದಲ್ಲಿ ನಮಗೆ ಬೇಕಾದಾಗಲೆಲ್ಲಾ ಸ್ವಯಂ ಆಗಿ ನಮ್ಮ ನೆರವಿಗೆ ಬರುವುದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್. ಇದು ವಿದ್ಯಾರ್ಜನೆ ಮಾಡಿದಂತೆ, ಅದು ಕೂಡ ಹೊಸ ಹೊಸ ವಿದ್ಯೆಗಳನ್ನು ಆರ್ಜಿಸಿಕೊಳ್ಳುತ್ತದೆ. ಹೀಗಾಗಿ ‘ಆರ್ಜಿತ ಬುದ್ಧಿಮತ್ತೆ’ ಅಥವಾ ‘ಕಲಿತುಕೊಂಡ ಬುದ್ಧಿಮತ್ತೆ’ ಅಂತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನ್ನು ನಾವು ಪರಿಗಣಿಸಬಹುದು.

ಈ ಆರ್ಜಿತ ಬುದ್ಧಿಮತ್ತೆ ತಂತ್ರಜ್ಞಾನವೀಗ ಬೃಹದಾಕಾರವಾಗಿ ಬೆಳೆದುನಿಂತಿದೆ. ಅದರ ಪರಿಣಾಮವನ್ನು ನಾವು ಈ ತಂತ್ರಜ್ಞಾನದ ಯುಗದಲ್ಲಿ ಪ್ರತಿಯೊಂದು ಹೆಜ್ಜೆಯಲ್ಲಿಯೂ ಕಾಣುತ್ತೇವೆ. ಫೇಸ್‌ಬುಕ್‌ನಲ್ಲಿ ಜಾಲಾಡುವಾಗ ನಮಗೆ ಜಾಹೀರಾತುಗಳು ಕಾಣಿಸುತ್ತವೆಯಲ್ಲ? ಅದರ ಹಿಂದೆಯೂ ಈ ಎಐ ತಂತ್ರಜ್ಞಾನ ಕೆಲಸ ಮಾಡುತ್ತಿರುತ್ತದೆ. ನೀವೂ ಗಮನಿಸಿರಬಹುದು, ನಿಮಗೇನೋ ಬೇಕಾದುದನ್ನು ಗೂಗಲ್‌ನಲ್ಲಿ ನೀವು ಹುಡುಕಾಡುತ್ತಿರುತ್ತೀರಿ; ಕೆಲವೇ ಕ್ಷಣಗಳಲ್ಲಿ ನಿಮ್ಮ ಫೇಸ್‌ಬುಕ್ ತಾಣದಲ್ಲಿ ಅಥವಾ ನೀವು ಭೇಟಿ ನೀಡುವ ಬೇರೆ ಯಾವುದೇ ಜಾಲತಾಣಗಳಲ್ಲಿ ಅದಕ್ಕೆ ಸಂಬಂಧಿಸಿದ ಜಾಹೀರಾತುಗಳೇ ಕಾಣಸಿಗುತ್ತವೆ. ಉದಾಹರಣೆಗೆ ಎಲೆಕ್ಟ್ರಿಕ್ ಸ್ಕೂಟರ್ ಕುರಿತಾಗಿ ಗೂಗಲ್‌ನಲ್ಲಿ ಹುಡುಕಾಟ ಮಾಡಿದ್ದರೆ, ಈ ಸ್ಕೂಟರ್‌ಗಳ ಕಂಪನಿಗಳ ಜಾಹೀರಾತುಗಳೇ ಹೆಚ್ಚು ಹೆಚ್ಚು ಕಾಣಲಾರಂಭಿಸುತ್ತವೆ. ಇದು ಕೂಡ ಮೆಶಿನ್ ಲರ್ನಿಂಗ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನಗಳ ಸಂಗಮದ ಫಲ.

ಮೆಶಿನ್ ಲರ್ನಿಂಗ್ ಅಥವಾ ಯಾಂತ್ರಿಕ ಕಲಿಕೆ ಎಂಬುದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನ ಒಂದು ಭಾಗ. ನಿರ್ದಿಷ್ಟ ನಿರ್ಧಾರ ಕೈಗೊಳ್ಳಲು ಅಥವಾ ಬುದ್ಧಿಮತ್ತೆಯನ್ನು ಆರ್ಜಿಸಿಕೊಳ್ಳಲು, ಪ್ರೋಗ್ರಾಮಿಂಗ್ ಯಂತ್ರಗಳು ಮತ್ತು ತಂತ್ರಾಂಶಗಳ ನೆರವಿನಿಂದ ದತ್ತಾಂಶವನ್ನು ತನಗೆ ಬೇಕಾದಂತೆ ಸಂಗ್ರಹಿಸಿಟ್ಟುಕೊಳ್ಳುವುದು ಮೆಶಿನ್ ಲರ್ನಿಂಗ್. ಈ ದತ್ತಾಂಶದ ಆಧಾರದಲ್ಲಿ ಯಾವ ಸಮಯದಲ್ಲಿ, ಹೇಗೆ ‘ಯೋಚಿಸಿ’, ಯಾವ ರೀತಿಯಲ್ಲಿ ಕೆಲಸ ಮಾಡಬೇಕು ಎಂಬುದನ್ನು ಕಂಪ್ಯೂಟರ್‌ಗೆ ಅಥವಾ ಸ್ಮಾರ್ಟ್ ಫೋನ್‌ಗಳಿಗೆ ಹೇಳಿಕೊಡುವುದು ಈ ಯಾಂತ್ರಿಕ ಕಲಿಕೆ. ಅದು ಸೂಚಿಸಿದಂತೆ, ತಾನು ಆರ್ಜಿಸಿಕೊಂಡ ಜ್ಞಾನದ ಆಧಾರದಲ್ಲಿ ಕೆಲಸ ಮಾಡುವುದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್.

ಸ್ಮಾರ್ಟ್ ಫೋನ್‌ಗಳಲ್ಲಿ…
ತಂತ್ರಜ್ಞಾನ ಪ್ರಪಂಚದಲ್ಲಿ ಒಂದನ್ನೊಂದು ಬಿಟ್ಟಿರಲಾರದ ‘ಅಣ್ತಮ್ಮಾಸ್’ ರೀತಿಯಲ್ಲಿ ಕೆಲಸ ಮಾಡುವ ಎಂಎಲ್ ಮತ್ತು ಎಐ ತಂತ್ರಜ್ಞಾನಗಳು ನಮ್ಮ ಸ್ಮಾರ್ಟ್ ಫೋನ್‌ಗಳಲ್ಲಿ ಹಾಸುಹೊಕ್ಕಾಗಿವೆ ಮತ್ತು ನಮ್ಮ ಕೆಲಸಗಳನ್ನು ಸುಲಭವಾಗಿಸುತ್ತವೆ, ವೇಗವಾಗಿಸುತ್ತವೆ. ಅವುಗಳಲ್ಲಿ ನಾವು ಸಾಮಾನ್ಯವಾಗಿ ಬಳಸುವ ಕೆಲವನ್ನಷ್ಟೇ ಉಲ್ಲೇಖಿಸಬಹುದಾದರೆ, ಟೈಪ್ ಮಾಡಲು ಸಮಯವಿಲ್ಲವೆಂದಾದರೆ, ನಮ್ಮ ಧ್ವನಿಯನ್ನು ಪಠ್ಯವಾಗಿಸುವ ಸ್ಪೀಚ್-ಟು-ಟೆಕ್ಸ್ಟ್ (ಮಾತಿನಿಂದ ಪಠ್ಯಕ್ಕೆ ಬದಲಿಸುವ) ತಂತ್ರಜ್ಞಾನ, ಅದೇ ರೀತಿ, ಪಠ್ಯವನ್ನು ಧ್ವನಿಯಾಗಿಸುವ ‘ಟೆಕ್ಸ್ಟ್-ಟು-ಸ್ಪೀಚ್’ ತಂತ್ರಜ್ಞಾನ, ನಮ್ಮದೇ ಸೆಲ್ಫೀ ಫೋಟೊಗಳಿಗೆ ವೈವಿಧ್ಯಮಯ ಸ್ಟಿಕರ್ ಬಳಸಿ ವಿಚಿತ್ರ ರೂಪದಲ್ಲಿ ತೋರಿಸುವ (ಮನರಂಜನೆ ಅಥವಾ ಹಾಸ್ಯಕ್ಕಾಗಿ) ಇಲ್ಲವೇ, ನಮ್ಮ ಮುಖವನ್ನು ‘ಅರೆ! ಇದು ನಾನಾ?’ ಅಂತ ನಾವೇ ಅಚ್ಚರಿಪಟ್ಟುಕೊಳ್ಳುವಂತೆ ಸುಂದರವಾಗಿಸುವ ಫೋಟೋ ಫಿಲ್ಟರ್‌ಗಳು, ನಾವು ಬೆರಳಚ್ಚಿಸುತ್ತಾ ಹೋದಂತೆ, ಅಕ್ಷರ ದೋಷಗಳನ್ನು ಸರಿಪಡಿಸುತ್ತಾ, ವ್ಯಾಕರಣ ದೋಷವನ್ನೂ ಸರಿಪಡಿಸುವ ಸಲಹೆಗಳನ್ನು ಕೊಡುವ ತಂತ್ರಜ್ಞಾನ. ಈ ರೀತಿಯ ತಂತ್ರಜ್ಞಾನಗಳ ಸಮ್ಮಿಲನದಿಂದಾಗಿ ಚಿತ್ರವಿಚಿತ್ರವಾದ ಮತ್ತು ವೈವಿಧ್ಯಮಯವಾದ ವಿಡಿಯೊಗಳನ್ನು ರೀಲ್ಸ್ ಅಥವಾ ಸ್ಟೇಟಸ್ ಅಥವಾ ಸ್ಟೋರೀಸ್ ರೂಪದಲ್ಲಿಯೂ ನಾವಿಂದು ಕಾಣುತ್ತೇವೆ.

ಸ್ಮಾರ್ಟ್ ಫೋನ್‌ಗಳಲ್ಲಿ ಕ್ಯಾಮೆರಾ ತಂತ್ರಜ್ಞಾನದಲ್ಲಿ ಅದ್ಭುತ ಎನಿಸುವ ಆಧುನಿಕತೆ ಬಂದಿರುವುದು ಇದೇ ಎಐ ಸಹಾಯದಿಂದ. ಮಂದ ಬೆಳಕಿನಲ್ಲಿಯೂ ಉತ್ತಮವಾದ ಫೋಟೊ ಮೂಡಿಬರಲು ಕಾರಣವಾಗುವುದು; ನಮ್ಮ ಮುಖದ ಕಲೆಗಳನ್ನೆಲ್ಲ ನಿವಾರಿಸಿ, ಹೊಳೆಯುವಂತೆ ಮಾಡಿ, ಸುಂದರವಾದ ಪ್ರೊಫೈಲ್ ಚಿತ್ರ ಮಾಡಿಕೊಳ್ಳಲು ನೆರವಾಗುವುದು; ನಮ್ಮ ಮುಖವನ್ನಷ್ಟೇ ಫೋಕಸ್ ಮಾಡಿ, ಹಿನ್ನೆಲೆಯನ್ನು ಮಬ್ಬಾಗಿಸುವ ಪೋರ್ಟ್ರೇಟ್ ಅಥವಾ ಬೊಕೆ ಎಫೆಕ್ಟ್… ಇವೆಲ್ಲವೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್. ಅಷ್ಟೇ ಅಲ್ಲ, ನಾವು ನಮ್ಮ ಸ್ಮಾರ್ಟ್ ಗ್ಯಾಜೆಟ್‌ಗಳಿಗೆ ಲಾಗಿನ್ ಆಗಬೇಕಿದ್ದರೆ ಅಥವಾ ಸ್ಕ್ರೀನ್ ಅನ್‌ಲಾಕ್ ಮಾಡಬೇಕಿದ್ದರೆ, ಮುಖ ಗುರುತಿಸುವ ಹಾಗೂ ಬೆರಳಚ್ಚು ಗುರುತಿಸುವ ತಂತ್ರಜ್ಞಾನವನ್ನು ಬಳಸುತ್ತೇವೆ. ಇದು ಕೂಡ ಎಐ ಪರಿಣಾಮ. ಆಂಡ್ರಾಯ್ಡ್ ಫೋನ್ ಬಳಸುತ್ತಿರುವವರು ಗೂಗಲ್ ಫೋಟೋಸ್ ಆ್ಯಪ್‌ನಲ್ಲಿರುವ ಸರ್ಚ್ ಬಟನ್ ಒತ್ತಿದಾಗ, ನಮ್ಮದೂ ಸೇರಿದಂತೆ ಹಲವು ಮುಖಗಳು ಕಾಣಿಸುತ್ತವೆ. ಆ ಚಿತ್ರವನ್ನು ಬೆರಳಿನಿಂದ ಒತ್ತಿದರೆ, ಆ ಮುಖ ಇರುವ ಎಲ್ಲ ಫೋಟೊಗಳೂ ಒಂದೇ ಕಡೆ ಕಾಣಿಸುತ್ತವೆ. ಅದಕ್ಕೆ ನಾವು ಹೆಸರುಗಳನ್ನು ನೀಡಿ ಸೇವ್ ಮಾಡಿಟ್ಟುಕೊಳ್ಳಬಹುದು. ಮುಂದೆಂದಾದರೂ ಆ ವ್ಯಕ್ತಿಯ ಚಿತ್ರ ಬೇಕಿದ್ದರೆ ಮತ್ತೆ ಪುನಃ ಅಲ್ಲೇ ಹುಡುಕಿದರಾಯಿತು.

ಅದೇ ರೀತಿ, ಗೂಗಲ್ ವಾಯ್ಸ್ ಅಸಿಸ್ಟೆಂಟ್, ಅಮೆಜಾನ್ ಅಲೆಕ್ಸಾ, ಆ್ಯಪಲ್ ಸಿರಿ, ಸ್ಯಾಮ್‌ಸಂಗ್ ಬಿಕ್ಸ್‌ಬಿ ಮುಂತಾದ ಧ್ವನಿ ಸಹಾಯಕ ತಂತ್ರಾಂಶಗಳು ಕೆಲಸ ಮಾಡುವುದೇ ಎಐ-ಎಂಎಲ್‌ಗಳ ಸಂಗಮದಿಂದ. ಇಲ್ಲಿ ಯಂತ್ರಗಳು ನಮ್ಮ ಧ್ವನಿಯನ್ನು ಗುರುತಿಸುತ್ತವೆ. ತಂತ್ರಜ್ಞಾನ ದಿಗ್ಗಜ ಕಂಪನಿಗಳು ನಮ್ಮ ದತ್ತಾಂಶವನ್ನು (ಉದಾಹರಣೆಗೆ ಧ್ವನಿಯನ್ನು) ಈ ರೀತಿಯಾಗಿ ಸಂಗ್ರಹಿಸಲು (ಅನಿವಾರ್ಯವಾಗಿ ಕೊಡಲೇಬೇಕಾಗುವ) ಅನುಮತಿ ಕೇಳುತ್ತವೆ. ಈ ಬೃಹತ್ ದತ್ತಾಂಶವನ್ನು ಸಂಗ್ರಹಿಸಿ, ನಾವು ತಪ್ಪು ಮಾಡುತ್ತಾ, ಬಳಿಕ ಸರಿಪಡಿಸಿಕೊಳ್ಳುವುದನ್ನು ಈ ಯಂತ್ರಾಂಶಗಳೂ ಕಲಿತುಕೊಂಡು, ಒಂದು ದೋಷರಹಿತ ತಂತ್ರಜ್ಞಾನ ರೂಪುಗೊಳ್ಳಲು ಕಾರಣವಾಗುತ್ತವೆ. ಗೂಗಲ್ ಅನುವಾದ ಎಂಜಿನ್ ಕೂಡ ಹೀಗೆಯೇ ಕೆಲಸ ಮಾಡುತ್ತದೆ. ಈ ತಂತ್ರಜ್ಞಾನದ ವ್ಯಾಪ್ತಿ-ವಿಸ್ತಾರಗಳು ಅಗಾಧ. ಆತ್ಯಾಧುನಿಕ ರೋಬೋಗಳು, ಚಾಲಕರಹಿತ ವಾಹನಗಳು, ಬಾಟ್ ಸಂದೇಶಕಾರರು ರೂಪುಗೊಂಡಿರುವುದು ಇದೇ ತಂತ್ರಜ್ಞಾನದ ಫಲ. ತತ್ಸಂಬಂಧಿತ ನೂರಾರು ಆ್ಯಪ್‌ಗಳು ಕೂಡ ನಮ್ಮ ಕಾರ್ಯಕ್ಷೇತ್ರಗಳನ್ನು ಸುಲಭವಾಗಿಸಿವೆ.

ಹೀಗೆ, ಆಧುನಿಕ ತಂತ್ರಜ್ಞಾನ ಮತ್ತು ವೇಗದ ಯುಗದಲ್ಲಿ ಕೆಲಸಗಳನ್ನು ಸುಲಭವಾಗಿಸುವ ಮತ್ತು ವೇಗವಾಗಿಸುತ್ತಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ ಆರ್ಜಿತ ಬುದ್ಧಿಮತ್ತೆ ತಂತ್ರಜ್ಞಾನವನ್ನು ನಮಗರಿವಿಲ್ಲದಂತೆಯೇ ನಾವು ಆನಂದಿಸುತ್ತಿದ್ದೇವೆ, ನಾವೂ ಅದಕ್ಕೆ ಕೊಡುಗೆ ನೀಡುತ್ತಿದ್ದೇವೆ ಮತ್ತು ಅದರ ಭಾಗವಾಗಿಬಿಟ್ಟಿದ್ದೇವೆ. ಪರಿಣಾಮ, ನಮ್ಮ ಯೋಚನಾ ಶಕ್ತಿಗೆ ಕೆಲಸ ಕಡಿಮೆಯಾಗಿ, ಯಂತ್ರಗಳ ‘ಆಲೋಚನಾ’ ಶಕ್ತಿ ವಿಸ್ತಾರಗೊಳ್ಳುತ್ತಿದೆ, ವ್ಯಾಪಕವೂ ಆಗುತ್ತಿದೆ.

My Tech Article Published in Prajavani on 19/20 Jul 2022

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 weeks ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

4 weeks ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

1 month ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

3 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

8 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

8 months ago