Samsung Galaxy A14 5G Review: ಸ್ಯಾಮ್‌ಸಂಗ್ ಈ ವರ್ಷದ ಜನವರಿ ತಿಂಗಳ ಮಧ್ಯಭಾಗದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಗ್ಯಾಲಕ್ಸಿ ಸರಣಿಯ ಬಜೆಟ್ ಶ್ರೇಣಿಯ ಸಾಧನ ಗ್ಯಾಲಕ್ಸಿ ಎ14 5ಜಿ. ಪ್ರಜಾವಾಣಿಗೆ ರಿವ್ಯೂಗೆ ದೊರೆತ 8ಜಿಬಿ-128 ಜಿಬಿ ಸಾಮರ್ಥ್ಯದ, ನಸು ಹಸಿರು ಬಣ್ಣದ ಗ್ಯಾಲಕ್ಸಿ ಎ14 ಸಾಧನವನ್ನು ಎರಡು ವಾರ ಬಳಸಿ ನೋಡಿದಾಗ ಅನಿಸಿದ ವಿಚಾರಗಳು ಇಲ್ಲಿವೆ.
ವಿನ್ಯಾಸ ಮತ್ತು ಡಿಸ್‌ಪ್ಲೇ
ಹಿಂಭಾಗದಲ್ಲಿ ಲಂಬವಾಗಿ ಜೋಡಿಸಲಾಗಿರುವ ಮೂರು ತ್ರಿವಳಿ ಕ್ಯಾಮೆರಾ ಸೆನ್ಸರ್‌ಗಳು ಮತ್ತು ಫ್ಲ್ಯಾಶ್ ಗಮನ ಸೆಳೆದರೆ, ಹಿಂಭಾಗದಲ್ಲಿರುವ ದೊರಗಿನ ವಿನ್ಯಾಸದ ಕವಚವು ಈ ಹಗುರ ಸಾಧನವು ಕೈಯಲ್ಲಿ ಭದ್ರವಾಗಿ ಕೂರಲು ನೆರವಾಗುತ್ತದೆ ಹಾಗೂ ಯಾವುದೇ ಬೆರಳಚ್ಚಿನ ಕೊಳೆ ಮೂಡದಂತಿರಲು ಪೂರಕವಾಗಿದೆ. ಫೋನ್‌ನ ಚೌಕಟ್ಟು ಕೂಡ ಪ್ರೀಮಿಯಂ ವಿನ್ಯಾಸವನ್ನು ಹೊಂದಿದ್ದರೆ, ಒಟ್ಟಾರೆಯಾಗಿ ಸ್ಮಾರ್ಟ್ ಫೋನ್‌ನ ಬಿಲ್ಡ್ ಗುಣಮಟ್ಟವೂ ಚೆನ್ನಾಗಿದೆ.
ಗ್ಯಾಲಕ್ಸಿ ಎ14 ಫೋನ್‌ನಲ್ಲಿ 3.5ಮಿಮೀ ಆಡಿಯೋ ಜಾಕ್ ಇದ್ದು, ಇಯರ್ ಫೋನ್ ಮೂಲಕ ಉತ್ತಮ ಗುಣಮಟ್ಟದ ಧ್ವನಿ ಕೇಳಬಹುದು. ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಇದ್ದು, ಪವರ್ ಬಟನ್‌ನಲ್ಲಿಯೇ ಫಿಂಗರ್ ಪ್ರಿಂಟರ್ ಸೆನ್ಸರ್ ಅಡಕವಾಗಿದೆ. ಚಾರ್ಜಿಂಗ್ ಕೇಬಲ್ ಮಾತ್ರ ಬಾಕ್ಸ್‌ನಲ್ಲಿದ್ದು, ಅಡಾಪ್ಟರ್ ಖರೀದಿಸಬೇಕಾಗುತ್ತದೆ.
ಡಿಸ್‌ಪ್ಲೇ (ಸ್ಕ್ರೀನ್): 6.6 ಇಂಚಿನ ಹೆಚ್‌ಡಿ ಪ್ಲಸ್ ಎಲ್‌ಸಿಡಿ ಪ್ಯಾನೆಲ್ ಇದ್ದು, ಅತ್ಯಂತ ಪ್ರಖರವಾಗಿದೆ. ಆದರೆ, ಬಿಸಿಲಿನಲ್ಲಿ ಸಂದೇಶ ಓದುವುದಕ್ಕೆ ಇದರ ಅಡಾಪ್ಟಿವ್ ಬ್ರೈಟ್‌ನೆಸ್ ವ್ಯವಸ್ಥೆಯು ಅಷ್ಟಾಗಿ ನೆರವಿಗೆ ಬರುವುದಿಲ್ಲ. ವಿಡಿಯೊ ವೀಕ್ಷಣೆಗೆ 90Hz ರಿಫ್ರೆಶಿಂಗ್ ರೇಟ್ ಪೂರಕವಾಗಿದ್ದು, ಗೇಮ್ ಆಡುವುದಕ್ಕೂ ಸೂಕ್ತವಾಗಿದೆ. ಚಿತ್ರ ಮತ್ತು ವಿಡಿಯೊಗಳು ಉತ್ತಮ ಗುಣಮಟ್ಟದಲ್ಲಿ ಕಾಣಿಸುತ್ತವೆ.
ಕಾರ್ಯಾಚರಣೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ14 5ಜಿ ಫೋನ್‌ನಲ್ಲಿ ಎಕ್ಸಿನೋಸ್ 1330 ಒಕ್ಟಾ ಕೋರ್ ಚಿಪ್‌ಸೆಟ್ ಇದ್ದು, ಮಾಲಿ ಜಿ68 ಎಂಸಿ-4 ಜಿಪಿಯು ಇದೆ. ಮೂರು ಮಾದರಿಯಲ್ಲಿ ಅಂದರೆ 4GB RAM + 64GB ಸ್ಟೋರೇಜ್, 6GB RAM+128GB ಹಾಗೂ 8GB RAM+128GB ಸ್ಟೋರೇಜ್ ಮಾದರಿಗಳಲ್ಲಿ ಇದು ಲಭ್ಯವಿದೆ. ರಿವ್ಯೂಗೆ ದೊರೆತಿರುವುದು ಕೊನೆಯ ಮಾದರಿ. ದೈನಂದಿನ ಕಾರ್ಯಗಳಿಗೆ ಯಾವುದೇ ತೊಡಕಾಗದೆ ಕಾರ್ಯನಿರ್ವಹಿಸುತ್ತದೆ. ಆಂಡ್ರಾಯ್ಡ್ 13 ಆಧಾರಿತ ಒನ್ ಯುಐ ಕಾರ್ಯಾಚರಣಾ ವ್ಯವಸ್ಥೆಯಿದ್ದು, RAM ಪ್ಲಸ್ ವೈಶಿಷ್ಟ್ಯದ ಮೂಲಕ, ಅವಶ್ಯಕತೆಯಿದ್ದಾಗ 8ಜಿಬಿಯಷ್ಟು RAM ಹೆಚ್ಚಿಸಿಕೊಳ್ಳುವ ಆಯ್ಕೆ ಇದೆ. 5ಜಿಯನ್ನು ಬೆಂಬಲಿಸುವುದರಿಂದ ಏರ್‌ಟೆಲ್ ಮತ್ತು ಜಿಯೋ ಸಿಮ್ (ಎರಡೂ ಸ್ಲಾಟ್‌ಗಳಲ್ಲಿ) 5ಜಿ ಸೇವೆಯನ್ನು ಬಳಸಬಹುದಾಗಿದೆ.
5000 mAh ಬ್ಯಾಟರಿ ಇದ್ದು, ಒಂದುವರೆ ದಿನಗಳಿಗೆ ಯಾವುದೇ ಸಮಸ್ಯೆಯಾಗದು. ಆದರೆ, ಚಾರ್ಜಿಂಗ್ ಸ್ವಲ್ಪ ನಿಧಾನ ಅನ್ನಿಸಿತು. ಪವರ್ ಸೇವಿಂಗ್ ಮೋಡ್ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದು, ಹಲವಾರು ಪ್ರಮುಖ ಆ್ಯಪ್‌ಗಳ ಕೆಲಸವನ್ನು ನಿಲ್ಲಿಸಿ, ಬ್ಯಾಟರಿ ಚಾರ್ಜ್ ಉಳಿತಾಯ ಮಾಡಲು ನೆರವಾಗುತ್ತದೆ. ಈ ಮೂಲಕ ಬ್ಯಾಟರಿ ಚಾರ್ಜ್ ಹೆಚ್ಚು ಸಮಯ ಬರುವಂತಾಗುತ್ತದೆ.
ಕ್ಯಾಮೆರಾ
ಸೂಕ್ತ ಬೆಳಕಿರುವಾಗ ಕ್ಯಾಮೆರಾ ಚೆನ್ನಾಗಿ ಕೆಲಸ ಮಾಡುತ್ತದೆ. ಬೆಳಕು ಕಡಿಮೆ ಇರುವಲ್ಲಿ ಫೋಟೋ ತೆಗೆದಾಗ, ಸೆರೆಹಿಡಿಯಲಾದ ಫೋಟೋ ಸಂಸ್ಕರಣೆಗೊಂಡು ಸೇವ್ ಆಗಲು ಕೆಲ ಕ್ಷಣ ಬೇಕಾಗುತ್ತದೆ. 50 ಮೆಗಾಪಿಕ್ಸೆಲ್ ಸಾಮರ್ಥ್ಯವನ್ನು ಬೇಕಿದ್ದರೆ ಆಯ್ಕೆ ಮಾಡಿಕೊಂಡು ಉತ್ತಮ ಗುಣಮಟ್ಟದ ಫೋಟೋಗಳನ್ನು ಬಳಸಬಹುದು. ಜೊತೆಗೆ ತಲಾ 2 ಮೆಗಾಪಿಕ್ಸೆಲ್ ಸಾಮರ್ಥ್ಯದ ಮ್ಯಾಕ್ರೋ ಮತ್ತು ಡೆಪ್ತ್ ಸೆನ್ಸರ್‌ಗಳಿರುವ ಕ್ಯಾಮೆರಾ ಸೆಟಪ್ ಇದೆ. ಒಳ್ಳೆಯ ಬೆಳಕಿರುವಲ್ಲಿ ಅತ್ಯುತ್ತಮ ಗುಣಮಟ್ಟದ ಚಿತ್ರ, ವಿಡಿಯೊ ಸೆರೆಯಾಗುತ್ತದೆ. 2x ಆಪ್ಟಿಕಲ್ ಝೂಮ್ ವ್ಯವಸ್ಥೆಯು ಈ ಶ್ರೇಣಿಯಲ್ಲಿ ಒಳ್ಳೆಯ ಕೆಲಸ ಮಾಡುತ್ತದೆ. ಆದರೆ, ರಾತ್ರಿ ಮೋಡ್‌ನಲ್ಲಿ ಚಿತ್ರಗಳು ಪಿಕ್ಸಲೇಟ್ ಆಗಿ ಗೋಚರಿಸುತ್ತವೆ. ಪೋರ್ಟ್ರೇಟ್ ಮೋಡ್ ಮೂಲಕ ಅತ್ಯುತ್ತಮವಾದ ಬೊಕೆ ಎಫೆಕ್ಟ್ (ವ್ಯಕ್ತಿಯ ಹಿನ್ನೆಲೆಯನ್ನು ಮಸುಕಾಗಿಸುವ) ಇದೆ. ಇದಲ್ಲದೆ, ಬ್ಲರ್ ಮಾಡುವ, ಸ್ಪಿನ್ ಮಾಡುವ, ಝೂಮ್ ಮಾಡುವ ಮತ್ತು ಬಣ್ಣಗಳ ಎಫೆಕ್ಟ್‌ಗಳಿರುವ ಫಿಲ್ಟರ್‌ಗಳಿವೆ. ಮುಂಭಾಗದಲ್ಲಿ 13 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ಇದೆ. ಒಳಾಂಗಣ ಮತ್ತು ಹೊರಾಂಗಣಗಳಲ್ಲಿ ಕೂಡ, ಉತ್ತಮ ಎನಿಸಬಹುದಾದ ಚಿತ್ರಗಳು ದೊರೆಯುತ್ತವೆ. ಇದರ ಪೋರ್ಟ್ರೇಟ್ ಮೋಡ್ ಉಲ್ಲೇಖಿಸಬಹುದಾದಷ್ಟು ಚೆನ್ನಾಗಿದೆ.
ಒಟ್ಟಾರೆ ಹೇಗಿದೆ…
20 ಸಾವಿರಕ್ಕಿಂತ ಕೆಳಗಿನ ಫೋನ್‌ಗಳಲ್ಲಿ ಇದು ಕ್ಯಾಮೆರಾ ಮತ್ತು ಬ್ಯಾಟರಿಯನ್ನು ಗಮನಿಸಿದರೆ, ಉತ್ತಮ ಪೈಪೋಟಿ ನೀಡಬಲ್ಲ ಸಾಮರ್ಥ್ಯ ಹೊಂದಿದೆ. ಎರಡು ವರ್ಷದ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆ ಹಾಗೂ ನಾಲ್ಕು ವರ್ಷಗಳ ಸೆಕ್ಯುರಿಟಿ ತಂತ್ರಾಂಶದ ಅಪ್‌ಡೇಟ್ ಭರವಸೆಯಿರುವುದರಿಂದ ನಾಲ್ಕು ವರ್ಷಗಳಿಗೆ ಯಾವುದೇ ಅಡ್ಡಿಯಿಲ್ಲ. ಇದರ ಬೆಲೆ ₹16,499ರಿಂದ ಪ್ರಾರಂಭವಾಗುತ್ತದೆ. 8ಜಿಬಿ+128ಜಿಬಿ ಮಾದರಿಯ ಈಗಿನ ಬೆಲೆ ₹20,999.
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…
ಕಳೆದ ಅಕ್ಟೋಬರ್ 19ರಂದು ಮೆಟಾ ಒಡೆತನದ WhatsApp ಸಂಸ್ಥೆಯೇ ತನ್ನ ಆ್ಯಪ್‌ಗೆ ಹೊಸ ಅಪ್‌ಡೇಟ್ ನೀಡಿದ್ದು, ಎರಡು ವಾಟ್ಸ್ಆ್ಯಪ್ ಖಾತೆಗಳನ್ನು…