ಚೀನಾದಿಂದ ಭಾರತಕ್ಕೆ ಬಂದಿರುವ ಫೋನ್ ಕಂಪನಿಗಳಲ್ಲಿ ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿರುವುದು ಒನ್‌ಪ್ಲಸ್. ಪ್ರೀಮಿಯಂ ವಿಭಾಗದಲ್ಲಿ ಭಾರತದಲ್ಲಿ ಅದೀಗ ನಂ.1 ಸ್ಥಾನಕ್ಕೇರಿರುವುದಕ್ಕೆ ಪ್ರಮುಖ ಕಾರಣವೆಂದರೆ, ಗುಣಮಟ್ಟದಲ್ಲಿ ಭಾರತೀಯ ಗ್ರಾಹಕರ ಮನಸ್ಸು ಗೆದ್ದಿರುವುದು ಮತ್ತು ಆ್ಯಪಲ್, ಸ್ಯಾಮ್‌ಸಂಗ್‌ನಂಥ ಕಂಪನಿಗಳ ಪ್ರೀಮಿಯಂ ಫೋನ್‌ಗಳಿಗಿಂತ ಕಡಿಮೆ ಬೆಲೆ. ಅಕ್ಟೋಬರ್ 30ರಂದು ಹೊಸದಿಲ್ಲಿಯಲ್ಲಿ ಈ ವರ್ಷದ ತನ್ನ ಫ್ಲ್ಯಾಗ್‌ಶಿಪ್ ‘ಒನ್‌ಪ್ಲಸ್ 6ಟಿ’ಯನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದ್ದು, ಇದು ಒನ್‌ಪ್ಲಸ್ 6ಕ್ಕಿಂತ ಸ್ವಲ್ಪ ಗುಣಮಟ್ಟದಲ್ಲಿ ಭಿನ್ನ. ಎರಡು ವಾರ ಬಳಸಿ ನೋಡಿದಾಗ ಅನುಭವ ಹೇಗಿತ್ತು ಎಂಬ ಮಾಹಿತಿ ಈ ಕೆಳಗಿದೆ.
ಡಿಸ್‌ಪ್ಲೇ, ವಿನ್ಯಾಸ
ಫೋನ್‌ನ ಎಡ ಮೇಲ್ಭಾಗದ ಬದಿಯಲ್ಲಿ ಸೈಲೆಂಟ್, ವೈಬ್ರೇಟ್ ಹಾಗೂ ರಿಂಗ್ ಆಗುವಂತೆ ಹೊಂದಿಸುವುದಕ್ಕೆ ಪ್ರತ್ಯೇಕ ಬಟನ್ ಇದೆ. ಅದರ ಕೆಳಗೆ ಪವರ್ ಬಟನ್ ಇದ್ದರೆ, ಬಲಭಾಗದಲ್ಲಿ ವಾಲ್ಯೂಮ್ ಬಟನ್ ಮತ್ತು ಸಿಮ್ ಕಾರ್ಡ್ ಟ್ರೇ ಇದೆ. 128 ಜಿಬಿ ಮೆಮೊರಿ ಇರುವುದರಿಂದ ಮೆಮೊರಿ ಹೆಚ್ಚಿಸುವ ಅವಕಾಶವಿಲ್ಲ. ಅಂದರೆ ಮೆಮೊರಿ ಕಾರ್ಡ್ ಸ್ಲಾಟ್ ಇಲ್ಲ. ಎರಡು ಸಿಮ್ ಕಾರ್ಡ್ ಸ್ಲಾಟ್‌ಗಳು ಮಾತ್ರವೇ ಇದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ, ಫ್ಲ್ಯಾಶ್ ಇದ್ದರೆ ಮುಂಭಾಗದಲ್ಲಿ ಕ್ಯಾಮೆರಾ ಮತ್ತು ಪ್ರಾಕ್ಸಿಮಿಟಿ ಸೆನ್ಸರ್ Notchನಲ್ಲೇ ಮಿಳಿತವಾಗಿರುವುದರಿಂದ ಸ್ಕ್ರೀನ್‌ನಲ್ಲಿ ಮತ್ತಷ್ಟು ಸ್ಥಳಾವಕಾಶ ದೊರಕಿದಂತಾಯಿತು. ಹಿಂಭಾಗದ ಕವಚ ಹೊಳೆಯುತ್ತಿದೆ. ಅದಕ್ಕೆ ಬ್ಯಾಕ್ ಕವರ್‌ಗಳನ್ನೂ ನೀಡಲಾಗಿದೆ. ಸ್ಕ್ರೀನ್ ಕೆಳಭಾಗದಲ್ಲಿ 3.5 ಮಿಮೀ ಜ್ಯಾಕ್ ಇಲ್ಲ. ಬದಲಾಗಿ ಟೈಪ್ ಸಿ ಪೋರ್ಟ್ ಇದೆ. ಬ್ಯಾಟರಿ ಚಾರ್ಜ್ ಮಾಡುವುದಕ್ಕೂ, ಇಯರ್‌ಫೋನ್‌ಗೂ ಎರಡಕ್ಕೂ ಒಂದೇ. ಕೆಳಭಾಗದಲ್ಲೇ ಎರಡು ಸ್ಪೀಕರ್‌ಗಳು ಹಾಗೂ ಮೈಕ್ ಇದೆ. ಆದರೆ, ನಿಮ್ಮ ನೆಚ್ಚಿನ 3.5 ಮಿಮೀ ಹೆಡ್‌ಸೆಟ್ ಇದ್ದರೆ, ಅದನ್ನು ಉಪಯೋಗಿಸುವುದಕ್ಕೆ ಕನೆಕ್ಟರ್ ಕೂಡ ಒದಗಿಸಲಾಗಿದೆ. ಟೈಪ್ ಸಿ ಎಂಬುದು ಹೊಸ ಮಾದರಿಯಾಗಿದ್ದು, ಒನ್‌ಪ್ಲಸ್ ಬುಲ್ಲೆಟ್ಸ್ ಎಂಬ ಇಯರ್‌ಫೋನ್‌ಗೆ 1499 ರೂ. ಆಗುತ್ತದೆ.
ಮೂರು ಮಾಡೆಲ್‌ಗಳು ಲಭ್ಯವಿದ್ದು, 6 ಜಿಬಿ ಹಾಗೂ 128 ಜಿಬಿ ಬೆಲೆ 37,999, 8 ಜಿಬಿ + 128 ಜಿಬಿ ಮಾಡೆಲ್ ಬೆಲೆ 40,999 ಹಾಗೂ 8 ಜಿಬಿ+256 ಜಿಬಿ ಮಾಡೆಲ್ ಬೆಲೆ 44,999 ರೂ. ರಿವ್ಯೂಗೆ ದೊರೆತದ್ದು 8 ಜಿಬಿ+128 ಜಿಬಿ ಮಾಡೆಲ್.
ಗೂಗಲ್ ಪಿಕ್ಸೆಲ್ ಬಳಿಕ ಆಂಡ್ರಾಯ್ಡ್ ಪೈ (9.0 ಆವೃತ್ತಿ) ಕಾರ್ಯಾಚರಣಾ ವ್ಯವಸ್ಥೆಯೊಂದಿಗೆ ಮಾರುಕಟ್ಟೆಗೆ ಬಂದಿರುವ ಎರಡನೇ ಫೋನ್ ಒನ್‌ಪ್ಲಸ್ 6ಟಿ. ಆಂಡ್ರಾಯ್ಡ್ ಪಿಯನ್ನು ಕಸ್ಟಮೈಸ್ ಮಾಡುವ ಮೂಲಕ ಆಕ್ಸಿಜನ್ ಒಸ್‌ನಲ್ಲಿ ಈ ಫೋನ್ ಚಲಾವಣೆಯಾಗುತ್ತಿದೆ.
ವೇಗ, ಹಾರ್ಡ್‌ವೇರ್
ನೈಟ್ ಮೋಡ್, ರೀಡಿಂಗ್ ಮೋಡ್ ಹಾಗೂ ಅಡಾಪ್ಟಿವ್ ಬ್ರೈಟ್‌ನೆಸ್ ಇರುವುದರಿಂದ ಕಣ್ಣಿಗೆ ತಂಪು ಹಾಗೂ ಸ್ಕ್ರೀನ್‌ನಲ್ಲಿ ಕಂಟೆಂಟ್ ಸ್ಫುಟವಾಗಿ ಕಾಣಿಸುತ್ತದೆ. ಫಿಂಗರ್‌ಪ್ರಿಂಟ್ ಸೆನ್ಸರ್ ಸ್ಕ್ರೀನ್ ಡಿಸ್‌ಪ್ಲೇಯ ಕೆಳಭಾಗದಲ್ಲಿರುವುದು ಹೊಸ ವೈಶಿಷ್ಟ್ಯ. ರಿಜಿಸ್ಟರ್ ಮಾಡಿಕೊಳ್ಳದ ಬೆರಳನ್ನು ಈ ಜಾಗದಲ್ಲಿ ಒತ್ತಿದಾಗ ಅದರ ಆನಿಮೇಶನ್ ಆನಂದಮಯವಾಗಿದೆ.
‘ಅನ್‌ಲಾಕ್ ದ ಸ್ಪೀಡ್’ ಎಂಬ ಘೋಷಾವಾಕ್ಯದೊಂದಿಗೆ, ಫಿಂಗರ್‌ಪ್ರಿಂಟ್ ಅಷ್ಟೇ ವೇಗವಾಗಿ ಅನ್‌ಲಾಕ್ ಆಗುತ್ತದೆ ಎಂಬುದು ಸತ್ಯ. ಕ್ವಿಕ್ ಲಾಂಚ್ ಎಂಬ ಮೋಡ್ ಇದೆ. ಫಿಂಗರ್‌ಪ್ರಿಂಟ್ ಮೂಲಕ ಅನ್‌ಲಾಕ್ ಮಾಡಿ, ಕೆಲ ಕ್ಷಣ ಒತ್ತಿಹಿಡಿದುಕೊಂಡಾಗ, ನೇರವಾಗಿ ಯಾವುದಾದರೂ ಆ್ಯಪ್‌ಗಳಿಗೆ ಹೋಗುವುದಕ್ಕೆ ಫ್ಲೋಟಿಂಗ್ ಶಾರ್ಟ್‌ಕಟ್‌ಗಳು ಗೋಚರಿಸುತ್ತವೆ. ಯಾವುದು ಬೇಕೋ, ಅದರ ಮೇಲೆ ಬೆರಳು ಬಿಟ್ಟರಾಯಿತು. ನಂತರ, ಸುಧಾರಿತ ಗೇಮಿಂಗ್ ಮೋಡ್ ಕೂಡ ಇರುವುದರಿಂದ ಹೆವೀ ಗೇಮ್ ಅಳವಡಿಸಿಕೊಂಡು ಆಟವಾಡುವಾಗ ವೇಗ ಗಮನ ಸೆಳೆದಿದೆ. ಕಾರಣವೆಂದರೆ, ಗೇಮಿಂಗ್ ಮೋಡ್‌ನಲ್ಲಿ ನೋಟಿಫಿಕೇಶನ್‌ಗಳನ್ನು ಕಿರಿದಾಗಿ ತೋರಿಸಲಾಗುತ್ತದೆ.
6/8 ಜಿಬಿ RAM ಹಾಗೂ 128/256 ಜಿಬಿ ಮೆಮೊರಿ ಇರುವುದರಿಂದ ಆಂಡ್ರಾಯ್ಡ್ ಸ್ಮಾರ್ಟ್ ಫೋನ್‌ಗಳಿಂದ ಅತ್ಯುತ್ತಮ ಕಾರ್ಯನಿರ್ವಹಣೆ ಪಡೆಯಲು ಯಾವುದೇ ಅಡ್ಡಿಯಾಗಿಲ್ಲ. ಇದರಲ್ಲಿರುವ ಸ್ಮಾರ್ಟ್ ಬೂಸ್ಟ್ ಎಂಬ ಒಂದು ಆಯ್ಕೆಯ ಮೂಲಕ, ಆ್ಯಪ್‌ಗಳ ಕಾರ್ಯಾಚರಣೆ ಮತ್ತಷ್ಟು ವೇಗ ವರ್ಧನೆಯಾಗುತ್ತದೆ ಎಂಬುದು ಒನ್‌ಪ್ಲಸ್ 6ಟಿಯ ಮತ್ತೊಂದು ವಿಶೇಷತೆಗಳಲ್ಲೊಂದು. ಸದ್ಯಕ್ಕೆ ಗೇಮಿಂಗ್ ಆ್ಯಪ್‌ಗಳು ಮಾತ್ರ ಇದಕ್ಕೆ ಒಳಪಟ್ಟಿದ್ದು, ಮತ್ತಷ್ಟು ಆ್ಯಪ್‌ಗಳನ್ನು ಸೇರಿಸಲಾಗುತ್ತದೆ ಎಂದಿದೆ ಒನ್‌ಪ್ಲಸ್. ಈ ವೈಶಿಷ್ಟ್ಯದಲ್ಲಿ, ಪದೇ ಪದೇ ಡೇಟಾ ಹೆಚ್ಚು ವಿನಿಮಯವಾಗುವ ಆ್ಯಪ್‌ಗಳ ಡೇಟಾ ಸ್ಟೋರ್ ಆಗುವುದರಿಂದ, ಬೇಗನೇ ತೆರೆದುಕೊಳ್ಳಲು ಪೂರಕವಾಗುತ್ತದೆ.
ಕ್ಯಾಮೆರಾ
16 ಮೆಗಾಪಿಕ್ಸೆಲ್‌ನ ಸೋನಿ IMX519 ಹಾಗೂ 20 ಮೆಗಾಪಿಕ್ಸೆಲ್ ಸೋನಿ IMX 376 ಸೆನ್ಸರ್ ಇರುವ ಡ್ಯುಯಲ್ ಕ್ಯಾಮೆರಾದಲ್ಲಿ ಅದ್ಭುತ ಚಿತ್ರಗಳು, ವೀಡಿಯೊಗಳನ್ನು ಸೆರೆಹಿಡಿಯಬಹುದಾಗಿದೆ. ಉತ್ತಮವಾದ ಪೋರ್ಟ್ರೇಟ್ ಚಿತ್ರಗಳು ಇದರಲ್ಲಿ ಮೂಡಿಬಂದಿವೆ. ಕಡಿಮೆ ಬೆಳಕಿನಲ್ಲಿಯೂ ಉತ್ತಮ ಕಾರ್ಯನಿರ್ವಹಣೆಗಾಗಿ ಹಾರ್ಡ್‌ವೇರ್ ಇರುವುದು ಇದರ ಪ್ಲಸ್ ಪಾಯಿಂಟ್. ಆದರೂ, ಹೊರಾಂಗಣದಲ್ಲಿಯೇ ಫೋಟೋಗಳ ಗುಣಮಟ್ಟ ಚೆನ್ನಾಗಿತ್ತು. ನೈಟ್ ಮೋಡ್ ಇದೆ. ಇದರಲ್ಲಿ ಗುಣಮಟ್ಟ ವರ್ಧನೆಯಾಗುತ್ತದೆ ಮತ್ತು ಒಂದು ಫೋಟೋ ಸುಮಾರು 6ಎಂಬಿ ಗಾತ್ರದಲ್ಲಿರುತ್ತದೆ. ಮುಂಭಾಗದ ಸೆಲ್ಫೀ ಕ್ಯಾಮೆರಾದಲ್ಲಿಯೂ 16 ಮೆಗಾಪಿಕ್ಸೆಲ್ ಸೋನಿ IMX 371 ಸೆನ್ಸರ್ ಜತೆಗೆ ಹಾರ್ಡ್‌ವೇರ್ ಬದಲಾವಣೆಯಿಂದಾಗಿ ಹಿಂದಿನ ಫೋನ್‌ಗಿಂತ ಹೆಚ್ಚು ಶಾರ್ಪ್ ಚಿತ್ರಗಳು ಮೂಡಿಬಂದವು. ಸೆಲ್ಫೀಯಲ್ಲಿ ಪೋರ್ಟ್ರೇಟ್ ಮೋಡ್ ತುಂಬಾ ತೀಕ್ಷ್ಣ ಚಿತ್ರಗಳನ್ನು ಸೆರೆಹಿಡಿಯಲು ನೆರವಾಯಿತು. ಉತ್ತಮವಾದ 4ಕೆ ಸಾಮರ್ಥ್ಯದ ವೀಡಿಯೊಗಳು ಕೂಡ ಉತ್ತಮ ಧ್ವನಿಯೊಂದಿಗೆ ರೆಕಾರ್ಡ್ ಮಾಡುವುದು ಸಾಧ್ಯವಾಯಿತು.
ಪನೋರಮಾ, ಟೈಮ್ ಲ್ಯಾಪ್ಸ್, ಸ್ಲೋ-ಮೋಶನ್ ವೀಡಿಯೊ ಮೋಡ್‌ಗಳು ಮೊಬೈಲ್ ಛಾಯಾಗ್ರಾಹಕರಿಗೆ ಅನುಕೂಲಕಾರಿ. ಕ್ಯಾಮೆರಾ ಓಪನ್ ಮಾಡಿ, ಕೆಳಗಿನಿಂದ ಮೇಲಕ್ಕೆ ಸ್ವೈಪ್ ಮಾಡಿದಾಗ ಈ ಆಯ್ಕೆಗಳೆಲ್ಲವೂ ಶಾರ್ಟ್‌ಕಟ್ ರೂಪದಲ್ಲಿ ಕಾಣಿಸುತ್ತವೆ. ಸ್ಲೋ ಮೋಶನ್ ಮೂಲಕ ವಿನೋದಮಯ ವೀಡಿಯೊಗಳನ್ನು ಮಾಡಿ ಹಂಚಬಹುದು. ಇದರಲ್ಲಿ ಅಳವಡಿಸಲಾಗಿರುವ ಲೋ-ಲೈಟ್ (ಕಡಿಮೆ ಬೆಳಕಿನ) ಮೋಡ್, ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಸಹಕಾರಿಯಾಗಿದ್ದು, ಹಿಂದಿನ ಒನ್‌ಪ್ಲಸ್ ಮಾದರಿಗಳಿಗೂ ಈ ಬಹುಕಾಲದ ಬೇಡಿಕೆಯನ್ನು ಸಾಫ್ಟ್‌ವೇರ್ ಪುಷ್ ಅಪ್‌ಡೇಟ್ ಮೂಲಕ ಒದಗಿಸಲಾಗುತ್ತದೆ.
ಬ್ಯಾಟರಿ
ಹಿಂದಿನ ಒನ್‌ಪ್ಲಸ್ 6 ನಲ್ಲಿ ಹೆಚ್ಚಿನವರು ಬೇಡಿಕ ಒಡ್ಡಿದ್ದು ಹೆಚ್ಚಿನ ಬ್ಯಾಟರಿ. ಇದಕ್ಕಾಗಿ ಬ್ಯಾಟರಿ ಸಾಮರ್ಥ್ಯವನ್ನೂ 400 mAh ನಷ್ಟು ಹೆಚ್ಚಿಸಿ, 3700 mAh ಗೆ ಏರಿಸಲಾಗಿದೆ. ಜತೆಗೆ ಪ್ರೊಸೆಸರ್ ಹಾಗೂ RAM ಕೂಡ ಹೆಚ್ಚಿದೆ, ಇದರೊಂದಿಗೆ ಬ್ಯಾಟರಿ ಸೇವರ್ ಮೋಡ್ ಕೂಡ ಇದೆ. ದಿನವಿಡೀ ವಾಟ್ಸ್ಆ್ಯಪ್, ಇಂಟರ್ನೆಟ್, ಇಮೇಲ್, ಕರೆ, ಆಡಿಯೋ, ವೀಡಿಯೊ ಬಳಸಿದಾಗ 24 ಗಂಟೆ ಬ್ಯಾಟರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಆದರೆ ಫೇಸ್‌ಬುಕ್ ಮತ್ತು ಗೇಮ್ಸ್ ಹೆಚ್ಚು ಬ್ಯಾಟರಿ ಬಳಸಿಕೊಳ್ಳುತ್ತವೆ. ಇದು ಎಲ್ಲ ಫೋನ್‌ಗಳಲ್ಲಿಯೂ ಸಹಜ.
ಒಟ್ಟಾರೆ ಹೇಗಿದೆ?
ಭಾರತೀಯ ಮಾರುಕಟ್ಟೆಗೆ ಅತ್ಯಗತ್ಯವಿರುವ ಇನ್-ಬಿಲ್ಟ್ ಎಫ್ಎಂ ಇಲ್ಲದಿರುವುದು ಕೊರತೆ. ಈ ಕುರಿತು ಒನ್‌ಪ್ಲಸ್ ಕಮ್ಯೂನಿಟಿ ಫೋರಂನಲ್ಲಿ ಸಾಕಷ್ಟು ಚರ್ಚೆಯೂ ಆಗುತ್ತಿದೆ. ನಾನು ಸದ್ಯಕ್ಕೆ All India Radios ಎಂಬ ಆ್ಯಪ್ ಅಳವಡಿಸಿ, ಇಂಟರ್ನೆಟ್ ಮೂಲಕ ರೇಡಿಯೋ ಕೇಳಿಸಿಕೊಂಡೆ. ಈ ಫೋನೇ ಬೇಕು ಅಂತಂದುಕೊಳ್ಳುವವರು ಆಕಾಶವಾಣಿ (ಪ್ರಸಾರ ಭಾರತಿ) ಚಾನೆಲ್‌ಗಳನ್ನು ಕೇಳಲು ಈ ಉತ್ತಮ ಆ್ಯಪ್ ಬಳಸಬಹುದು. ಈ ಕೊರತೆ ಬಿಟ್ಟರೆ ಬೇರೆ ಯಾವುದೇ ಸಮಸ್ಯೆ ಇಲ್ಲ. ಮಾರುಕಟ್ಟೆಯಲ್ಲಿ ಸ್ಫರ್ಧೆ ಹೆಚ್ಚಿರುವುದರಿಂದ ಗುಣಮಟ್ಟ ಹಾಗೂ ದರ – ಇವೆರಡೂ ಮುಖ್ಯವಾಗುತ್ತವೆ. ಗುಣಮಟ್ಟದಲ್ಲಿ ಈ ಫೋನ್ ಗೆದ್ದಿದೆ.
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು