Nokia C30 Review: ಭರ್ಜರಿ ಬ್ಯಾಟರಿ, ದೊಡ್ಡ ಗಾತ್ರದ ಬಜೆಟ್ ಸ್ಮಾರ್ಟ್ ಫೋನ್

ಹೆಚ್ಎಂಡಿ ಗ್ಲೋಬಲ್ ತನ್ನ ನೋಕಿಯಾ ಸಿ ಸರಣಿಯಲ್ಲಿ ಬಜೆಟ್ ಶ್ರೇಣಿಯ ಆಂಡ್ರಾಯ್ಡ್ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇದೇ ಸರಣಿಯಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ನೋಕಿಯಾ ಸಿ30 ಹೇಗಿದೆ? ಅದರ ಕಾರ್ಯಾಚರಣೆ ವೈಖರಿ, ವೈಶಿಷ್ಟ್ಯಗಳೇನು? ಇಲ್ಲಿದೆ ಮಾಹಿತಿ.

ನೋಡಿದಾಕ್ಷಣ ಗಮನಕ್ಕೆ ಬರುವುದು ನೋಕಿಯಾ ಸಿ30 ಫೋನ್‌ನ ಗಾತ್ರ. ಭರ್ಜರಿ 6.82 ಇಂಚು (17.3 ಸೆ.ಮೀ.) ಸ್ಕ್ರೀನ್, ಕೈಯಲ್ಲಿ ಹಿಡಿದಾಗ ಒಂದಿಷ್ಟು ಭಾರ ಎನಿಸುತ್ತದೆ. ಇದರ 6000mAh ಬ್ಯಾಟರಿ ಈಗಿನ ಆನ್‌ಲೈನ್ ಮೀಟಿಂಗ್, ತರಗತಿ ಮುಂತಾದ ಪರಿಸ್ಥಿತಿಗಳಿಗೆ ಪೂರಕವಾಗಿದೆ.

ಪ್ರಮುಖ ವೈಶಿಷ್ಟ್ಯಗಳು
6.82 ಇಂಚು ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ
6000mAh ಬ್ಯಾಟರಿ ಸಾಮರ್ಥ್ಯ
13 ಹಾಗೂ 2 ಮೆಗಾಪಿಕ್ಸೆಲ್ ಸಾಮರ್ಥ್ಯದ ಪ್ರಧಾನ ಕ್ಯಾಮೆರಾ
5 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ
ಬೆರಳಚ್ಚು ಸ್ಕ್ಯಾನರ್ ಹಾಗೂ ಮುಖ ಗುರುತಿಸುವ ರಕ್ಷಣೆ
ಆಂಡ್ರಾಯ್ಡ್ 11 ಕಾರ್ಯಾಚರಣಾ ವ್ಯವಸ್ಥೆ

ಫ್ಯಾಬ್ಲೆಟ್ ಮಾದರಿಯ (ಫೋನ್+ಟ್ಯಾಬ್ಲೆಟ್‌ನ ಮಿಶ್ರಣ) ಈ ಫೋನ್, ಬಜೆಟ್ ಶ್ರೇಣಿಯ ಫೋನ್‌ಗಳಲ್ಲಿ ಎದ್ದು ಕಾಣುತ್ತದೆ. ಸ್ಕ್ರೀನ್‌ನ ಸುತ್ತ ಬೆಝೆಲ್ (ಖಾಲಿ ಜಾಗ), ಮೇಲ್ಭಾಗದಲ್ಲಿ ವಾಟರ್ ಡ್ರಾಪ್ ನಾಚ್ ಸೆಲ್ಫೀ ಕ್ಯಾಮೆರಾ, ಕೆಳಭಾಗದಲ್ಲಿ ನೋಕಿಯಾ ಬ್ರ್ಯಾಂಡಿಂಗ್, ಪಾಲಿಕಾರ್ಬೋನೇಟ್ ಹಿಂಭಾಗದ ಕವಚ – ಇವು ಪ್ರಮುಖ ಅಂಶಗಳು. ದೊಡ್ಡ ಗಾತ್ರದಿಂದಾಗಿ ಅದರ ವಾಲ್ಯೂಮ್, ಪವರ್ ಬಟನ್‌ಗಳು ಎತ್ತರದಲ್ಲಿದ್ದು, ತೂಕವೂ ಹೆಚ್ಚಿರುವುದರಿಂದ ಒಂದೇ ಕೈಯಲ್ಲಿ ಕೆಲಸ ಕಾರ್ಯಗಳನ್ನು ಮಾಡುವುದು ಸ್ವಲ್ಪ ತ್ರಾಸದಾಯಕ. ಆದರೆ, ಕಣ್ಣುಗಳಿಗೆ ಹಿತಕರ ಎಂಬುದನ್ನೂ ಗಮನಿಸಬೇಕು. ವಿಡಿಯೊ ವೀಕ್ಷಣೆಗೆ, ಗೇಮಿಂಗ್‌ಗೆ ಇದರ ಸ್ಕ್ರೀನ್ ಗಾತ್ರವು ಪೂರಕವಾಗಿದೆ. ರೆಸೊಲ್ಯುಶನ್ ಹೆಚ್‌ಡಿ ಪ್ಲಸ್ ಇದ್ದು, ಎಲ್‌ಸಿಡಿ ಪ್ಯಾನೆಲ್‌ನ ವೀಕ್ಷಣಾ ಕೋನಗಳು ಮತ್ತು ಬಣ್ಣಗಳ ಬಿಂಬಿಸುವಿಕೆ ಚೆನ್ನಾಗಿದೆ. ಕೆಳಭಾಗದಲ್ಲಿ ಮೈಕ್ರೋ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಇದ್ದು, ಮೇಲ್ಭಾಗದಲ್ಲಿ 3.5 ಮಿಮೀ ಇಯರ್‌ಫೋನ್ ಜ್ಯಾಕ್ ಇದೆ.

ಕ್ಯಾಮೆರಾ
ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಹಾಗೂ 2 ಮೆಗಾಪಿಕ್ಸೆಲ್‌ನ ಕ್ಯಾಮೆರಾ ಸೆನ್ಸರ್‌ಗಳಿದ್ದು, ಫ್ಲ್ಯಾಶ್, ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದೆ. ಸ್ವಯಂ ಫೋಕಸ್ ಕ್ಷಿಪ್ರವಾಗಿ ಕೆಲಸ ಮಾಡುತ್ತದೆ. ಉತ್ತಮ ಬೆಳಕಿರುವಲ್ಲಿ ಫೊಟೋಗಳು ಸ್ಪಷ್ಟವಾಗಿವೆ. 5 ಮೆಗಾಪಿಕ್ಸೆಲ್‌ನ ಸೆಲ್ಫೀ ಕ್ಯಾಮೆರಾದಲ್ಲಿ, ವಿಶೇಷವಾಗಿ ಮಂದ ಬೆಳಕಿನ ಚಿತ್ರಗಳು ಅಷ್ಟು ಸ್ಪಷ್ಟವಾಗಿ ದಾಖಲಾಗುವುದಿಲ್ಲ. ರಾತ್ರಿ ಮೋಡ್ ಇಲ್ಲದಿರುವುದರಿಂದ, ಚಿತ್ರ, ವಿಡಿಯೊಗಳು ಸ್ಪಷ್ಟವಾಗಿ ದಾಖಲಾಗುವುದಿಲ್ಲ. ಸೆಲ್ಫೀ ತೆಗೆಯುವಾಗಲೂ ಪೋರ್ಟ್ರೇಟ್ ಮೋಡ್ (ಹಿನ್ನೆಲೆ ಮಸುಕಾಗುವ) ಚಿತ್ರಗಳ ಆಯ್ಕೆ ಇದರಲ್ಲಿದೆ.

ಇದರಲ್ಲಿ ಒಕ್ಟಾಕೋರ್ ಯುನಿಸಾಕ್ ಚಿಪ್‌ಸೆಟ್ (1.6 GHz ಕಾರ್ಟೆಕ್ಸ್ ಎ55) ಜೊತೆಗೆ 3ಜಿಬಿ RAM ಹಾಗೂ 64ಜಿಬಿ ಆಂತರಿಕ ಸ್ಟೋರೇಜ್ ಇದೆ. ಈ ಹಾರ್ಡ್‌ವೇರ್ ಸಾಮಾನ್ಯವಾಗಿ ಮಲ್ಟಿಟಾಸ್ಕಿಂಗ್‌ಗೆ ಬೆಂಬಲಿಸುತ್ತದೆ. ಆದರೆ ಹೆಚ್ಚು ತೂಕ ಅಥವಾ ಗ್ರಾಫಿಕ್ಸ್ ಹೆಚ್ಚಿರುವ ಗೇಮಿಂಗ್ ವೇಳೆ ಕಾರ್ಯಾಚರಣೆಯಲ್ಲಿ ಕೊಂಚ ವಿಳಂಬವಾಗುವುದು ಅನುಭವಕ್ಕೆ ಬಂದಿದೆ.

ನೋಕಿಯಾದ ಆಂಡ್ರಾಯ್ಡ್ 11 ಗೋ ಆವೃತ್ತಿಯನ್ನು ನೆಚ್ಚಿಕೊಂಡಿರುವುದು, ಎಂದರೆ ಯಾವುದೇ ಅನ್ಯ ಆ್ಯಪ್‌ಗಳಿಲ್ಲದ, ಕ್ಲೀನ್ ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆ ಹೊಂದಿರುವುದು ಇದನ್ನು ಆಪ್ತವಾಗಿಸಿದೆ. ನೋಡಲು ಆಕರ್ಷಕವಾಗಿದ್ದು, 6000mAh ಬ್ಯಾಟರಿಯು ಸಾಮಾನ್ಯ ಬಳಕೆಯಲ್ಲಿ (ಬ್ರೌಸಿಂಗ್, ಇಮೇಲ್, ವಾಟ್ಸ್ಆ್ಯಪ್, ಫೋಟೋಗ್ರಫಿ, ಒಂದಿಷ್ಟು ಫೇಸ್‌ಬುಕ್) ಭರ್ಜರಿ ಮೂರು ದಿನಗಳಿಗೆ ಕೊರತೆಯಾಗಿಲ್ಲ. ಸಾಧನದ ಜೊತೆಗೆ 10W ಚಾರ್ಜರ್ ಬಂದಿದ್ದು, ಶೂನ್ಯದಿಂದ ಪೂರ್ಣವಾಗಿ ಚಾರ್ಜ್ ಆಗಲು ಸುಮಾರು 3 ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ. ಬೆಲೆ ₹10,999.

ಒಟ್ಟಾರೆಯಾಗಿ ಹೇಳುವುದಾದರೆ, ದೊಡ್ಡ ಗಾತ್ರ, ಹೆಚ್ಚು ತೂಕದ, ಭರ್ಜರಿ ಬ್ಯಾಟರಿಯುಳ್ಳ, ಉತ್ತಮ ಕ್ಯಾಮೆರಾ ಇರುವ, ತರಗತಿ ಅಥವಾ ಮೀಟಿಂಗ್‌ಗೆ ಅನುಕೂಲಕರವಾದ ದೊಡ್ಡ ಸ್ಕ್ರೀನ್ ಇರುವ ಫೋನ್ ಇದು.

My Gadget Review Published in Prajavani on 20 Nov 2021

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

2 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

2 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

3 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

4 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

9 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

9 months ago