Nokia C21 Plus Review: ಹೆಚ್ಎಂಡಿ ಗ್ಲೋಬಲ್ ಸಂಸ್ಥೆಯ ಒಡೆತನದಲ್ಲಿ ಇತ್ತೀಚೆಗೆ ನೋಕಿಯಾ ಸಿ21 ಪ್ಲಸ್ ಎಂಬ ಬಜೆಟ್ ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಬೇಸಿಕ್ ಹಾಗೂ ಫೀಚರ್ ಮೊಬೈಲ್ ಫೋನ್‌ಗಳ ಕಾಲದಲ್ಲಿ ಜನಪ್ರಿಯತೆ ಗಳಿಸಿದ್ದ ನೋಕಿಯಾ, ನಂತರದಲ್ಲಿ ಚೀನಾ ಮೊಬೈಲ್‌ಗಳ ಧಾವಂತದ ಸಂದರ್ಭದಲ್ಲಿ ವಿಂಡೋಸ್ ಹಾಗೂ ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯ ಮೂಲಕ, ಹೊಸ ಪೀಳಿಗೆಯ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಾಕಷ್ಟು ಶ್ರಮಿಸಬೇಕಾಗಿತ್ತು. ಬಳಿಕ ನೋಕಿಯಾವನ್ನು ಹೆಚ್ಎಂಡಿ ಗ್ಲೋಬಲ್ ಸಂಸ್ಥೆಯು ಖರೀದಿಸಿ, ಆ ಬ್ರ್ಯಾಂಡ್‌ನಲ್ಲಿ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಲು ಪ್ರಯತ್ನಿಸುತ್ತಾ ಬಂದಿದೆ.
ತನ್ನ ಸಿ ಸರಣಿಯಲ್ಲಿ ಜುಲೈ ತಿಂಗಳ ಮಧ್ಯ ಭಾಗದಲ್ಲಿ ಸಿ21 ಪ್ಲಸ್ ಆಂಡ್ರಾಯ್ಡ್ ಫೋನ್ ಅನ್ನು ನೋಕಿಯಾ ಭಾರತದಲ್ಲಿ ಪರಿಚಯಿಸಿದ್ದು, ಒಂದು ವಾರ ಬಳಸಿ ನೋಡಿದಾಗ ಕಂಡು ಬಂದ ಅಂಶಗಳು ಇಲ್ಲಿವೆ.
ವಿನ್ಯಾಸ
ಉತ್ತಮ ಬಿಲ್ಡ್ ಹೊಂದಿರುವ ಈ ಫೋನ್, ನೋಡಲು ಸ್ಲಿಮ್ (ತೆಳು) ಆಗಿದೆ. 8.5 ಮಿಮೀ ದಪ್ಪ ಇದ್ದು, ಹಗುರವೂ ಇದೆ, ವಿನ್ಯಾಸ ಚೆನ್ನಾಗಿದೆ. ಅವಳಿ ಸಿಮ್, ಮೆಮೊರಿ ಕಾರ್ಡ್ ಸ್ಲಾಟ್ ಇದ್ದು, ಹಿಂಭಾಗದಲ್ಲಿ ಬೆರಳಚ್ಚು ಸ್ಕ್ಯಾನರ್ ಹಾಗೂ ಅವಳಿ ಕ್ಯಾಮೆರಾ, ಫ್ಲ್ಯಾಶ್ ಇದೆ. ಮೇಲ್ಭಾಗದಲ್ಲಿ 3.5 ಮಿಮೀ ಹೆಡ್‌ಫೋನ್ ಜ್ಯಾಕ್, ಕೆಳಭಾಗದಲ್ಲಿ ಮೈಕ್ರೋ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಇದೆ. 6.5 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ (ಪರದೆ), ಆಂಡ್ರಾಯ್ಡ್ 11 ಗೋ ಆವೃತ್ತಿಯ ಕಾರ್ಯಾಚರಣೆ ವ್ಯವಸ್ಥೆಯಿದ್ದು, ಮುಖ ಗುರುತಿಸುವ ತಂತ್ರಜ್ಞಾನವೂ ಇದೆ. ಪರದೆಯಲ್ಲಿ ವಾಟರ್ ಡ್ರಾಪ್ ನಾಚ್ (ಸೆಲ್ಫೀ ಕ್ಯಾಮೆರಾ ಇರುವ ಜಾಗ) ಇದೆ. ಸ್ಕ್ರೀನ್ ಸುತ್ತ ತೆಳುವಾದ ಬೆಝೆಲ್ ಇದ್ದು, ಕೆಳಭಾಗದಲ್ಲಿ ನೋಕಿಯಾ ಬ್ರ್ಯಾಂಡಿಂಗ್ ಇದೆ. ಹಿಂಭಾಗದ ಪ್ಲಾಸ್ಟಿಕ್ ಕವಚವು ವಿನ್ಯಾಸಭರಿತವಾಗಿದ್ದು, ಬೆರಳಚ್ಚು ಮೂಡದಂತೆ ತಡೆಯುತ್ತದೆ ಮತ್ತು ಒಟ್ಟಾರೆಯಾಗಿ ಕೈಯಲ್ಲಿ ಹಿಡಿದುಕೊಳ್ಳುವುದು ಅನುಕೂಲಕರವಾಗಿದೆ.
ಕ್ಯಾಮೆರಾ
ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಪ್ರಧಾನ ಸೆನ್ಸರ್ ಹಾಗೂ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಇರುವ ಫ್ಲ್ಯಾಶ್ ಸಹಿತವಾದ ಕ್ಯಾಮೆರಾ ಸೆಟಪ್ ಇದೆ. 5 MP ಸೆಲ್ಫೀ ಕ್ಯಾಮೆರಾ ಇದೆ. ಉತ್ತಮ ಬೆಳಕಿರುವಲ್ಲಿ ಉತ್ತಮವಾದ ಚಿತ್ರಗಳು ಮತ್ತು ವಿಡಿಯೊಗಳು ಮೂಡಿಬರುತ್ತವೆ. ಮಂದ ಬೆಳಕಿನಲ್ಲಿ ಚಿತ್ರಗಳ ಗುಣಮಟ್ಟ ಕಡಿಮೆಯಿದ್ದು, ಚಿತ್ರಗಳ ಡೀಟೇಲ್ಸ್ ಮತ್ತು ಬಣ್ಣಗಳು ಸಾಧಾರಣವಾಗಿರುತ್ತವೆ. ಸ್ವಯಂಚಾಲಿತವಾಗಿ ಫೋಕಸ್ ಆಗುವುದು ಅನುಕೂಲಕರ ವೈಶಿಷ್ಟ್ಯ. ಇದರಲ್ಲಿ ಪನೋರಮ ಮತ್ತು ಪೋರ್ಟ್ರೇಟ್ ಮೋಡ್‌ಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತವೆ.
ಬ್ಯಾಟರಿ, ಕಾರ್ಯಾಚರಣೆ
5050 mAh ನ ಬ್ಯಾಟರಿ ಇದರಲ್ಲಿದ್ದು, ಮೈಕ್ರೋ ಯುಎಸ್‌ಬಿ ಮೂಲಕ ಚಾರ್ಜಿಂಗ್ ಸ್ವಲ್ಪ ನಿಧಾನ ಎನ್ನಬಹುದು. ಸಾಮಾನ್ಯ ಬಳಕೆಯಲ್ಲಿ ಮೂರು ದಿನಗಳ ಕಾಲ ಬ್ಯಾಟರಿ ಚಾರ್ಜ್ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಹಿಂದಿನ ಫೋನ್‌ಗಳಿಗೆ ಹೋಲಿಸಿದರೆ, ಬೇಗನೇ ಬೂಟ್ ಆಗುತ್ತದೆ, ಕಾರ್ಯಾಚರಣೆಯೂ ಸ್ವಲ್ಪಮಟ್ಟಿಗೆ ವೇಗವಿದೆ. ಯುನಿಸಾಕ್ SC9863A ಎಂಬ ಒಕ್ಟಾಕೋರ್ 1.6GHz ಸಾಮರ್ಥ್ಯದ ಪ್ರೊಸೆಸರ್ ಇದ್ದು, ತೀರಾ ಹೆಚ್ಚು ಗ್ರಾಫಿಕ್ಸ್ ಇರುವ ಗೇಮ್‌ಗಳನ್ನು ಆಡುವುದು ಕಷ್ಟ. RAM ಕೂಡ 2GB ಇರುವುದು, ಮತ್ತು ಹಿಂದಿನ ಆಂಡ್ರಾಯ್ಡ್ 11 ಕಾರ್ಯಾಚರಣಾ ವ್ಯವಸ್ಥೆ ಇರುವುದು ಕೂಡ ಇದಕ್ಕೆ ಕಾರಣ. ಆದರೆ, ಇದು ಗೇಮಿಂಗ್ ಫೋನ್ ಅಲ್ಲದಿರುವುದರಿಂದ, ಆ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಲಾಗದು. ಸಾಮಾನ್ಯ ಕಾರ್ಯಾಚರಣೆಗಳಿಗೆ ಈ ಮೌಲ್ಯಕ್ಕೆ ಹೋಲಿಸಿದರೆ, ಯಾವುದೇ ಸಮಸ್ಯೆಯಿಲ್ಲದಂತೆ ಕೆಲಸ ಮಾಡುತ್ತದೆ.
ಆದರೆ, ವೇಗವಾಗಿ ಬೂಟ್ ಆಗುತ್ತದೆ, ವೇಗವಾಗಿ (ಬೆರಳಚ್ಚು ಸ್ಕ್ಯಾನರ್ ಮತ್ತು ಮುಖ ಗುರುತಿಸುವಿಕೆ ತಂತ್ರಜ್ಞಾನದಲ್ಲಿ) ಅನ್‌ಲಾಕ್ ಆಗುತ್ತದೆ, ಜೊತೆಗೆ, ಸಾಮಾನ್ಯ ನ್ಯಾವಿಗೇಶನ್‌ಗೆ ಯಾವುದೇ ಸಮಸ್ಯೆಯಾಗದು. ಸಾಮಾನ್ಯ ಕೆಲಸ ಕಾರ್ಯಗಳಿಗೆ ಎರಡು ದಿನಗಳ ಬ್ಯಾಟರಿ ಚಾರ್ಜ್‌ಗೆ ಸಮಸ್ಯೆಯಾಗದು. ಫೇಸ್‌ಬುಕ್ ಹಾಗೂ ವಿಡಿಯೊ ಹೆಚ್ಚು ಹೊತ್ತು ವೀಕ್ಷಿಸಿದರೆ ಬ್ಯಾಟರಿ ಚಾರ್ಜ್ ಬೇಗನೇ ಕಡಿಮೆಯಾಗುತ್ತದೆ.
ಆಂಡ್ರಾಯ್ಡ್ ಗೋ ಎಂಬ ಮೂಲಭೂತ ಕಾರ್ಯಾಚರಣೆ ವ್ಯವಸ್ಥೆಯಿರುವುದರಿಂದ, ಬ್ಲಾಟ್‌ವೇರ್‌ಗಳಿಲ್ಲದೆ, ಕ್ಲೀನ್ ಆಂಡ್ರಾಯ್ಡ್ ವ್ಯವಸ್ಥೆಯನ್ನು ಅನುಭವಿಸಬಹುದಾಗಿದ್ದು, ಇಂಟರ್ಫೇಸ್ ಕೂಡ ಕ್ಲೀನ್ ಆಗಿ ಗೋಚರಿಸುತ್ತದೆ ಎನ್ನಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಫೋಟೊಗ್ರಫಿ ಬಗ್ಗೆ ಹೆಚ್ಚು ಗಮನ ಇಲ್ಲವೆಂದಾದರೆ, ಉತ್ತಮ ಬ್ಯಾಟರಿ ಮತ್ತು ಸಾಮಾನ್ಯ ಕಾರ್ಯಾಚರಣೆಗಾಗಿ ಬಜೆಟ್ ಶ್ರೇಣಿಯ ಈ ಫೋನ್ ಇಷ್ಟವಾಗಬಹುದು.
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.