ಚೀನಾ ಫೋನ್‌ಗಳ ಭರಾಟೆಯಲ್ಲಿ ಹೊಳಪು ಕಳೆದುಕೊಂಡು, ಕಾಲಾನಂತರದಲ್ಲಿ ಆಂಡ್ರಾಯ್ಡ್ ಫೋನ್‌ಗಳ ಮೂಲಕ ಮಾರುಕಟ್ಟೆಗೆ ಮರಳಿರುವ ನೋಕಿಯಾ, ಗುಣಮಟ್ಟ ಉಳಿಸಿಕೊಂಡು ಪ್ರತಿಸ್ಫರ್ಧೆಗಿಳಿದಿದೆ ಎಂಬುದು ಸುಳ್ಳಲ್ಲ. ಈಗ 10,399 ರೂ. ಬೆಲೆಯಲ್ಲಿ ನೋಕಿಯಾ 2.4 ಫೋನ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದು, ಈ ಶ್ರೇಣಿಯ ಚೀನಾ ಸ್ಮಾರ್ಟ್‌ಫೋನ್‌ಗಳಾದ ರೆಡ್‌ಮಿ ನೋಟ್ 9, ರೆಡ್‌ಮಿ 9 ಪವರ್, ರಿಯಲ್‌ಮಿ, ಪೋಕೋ ಮುಂತಾದವುಗಳಿಗೆ ಸ್ಫರ್ಧೆ ನೀಡುತ್ತಿದೆ. ಗ್ಯಾಜೆಟ್ ವಿಮರ್ಶೆಗೆ ಬಂದಿರುವ ನೋಕಿಯಾ 2.4 ಫೋನನ್ನು ಎರಡು ವಾರ ಬಳಸಿದಾಗ ಹೇಗಿದೆ? ಇಲ್ಲಿದೆ ವಿವರ.
ವಿನ್ಯಾಸ, ಡಿಸ್‌ಪ್ಲೇ
ನೋಡಿದರೆ ಥಟ್ಟನೇ ಗಮನ ಸೆಳೆಯವುದೇ ಇದರ ಗಾತ್ರ. 6.5 ಇಂಚು ಸ್ಕ್ರೀನ್ (20:9 ಆಸ್ಪೆಕ್ಟ್ ಅನುಪಾತ) ಇರುವ ಈ ಫೋನ್ ಉದ್ದವಿದೆ. ಒಂದು ಕೈಯಲ್ಲಿ ಹಿಡಿದು ಹೆಚ್ಚು ಹೊತ್ತು ಕೆಲಸ ಮಾಡುವುದು ಕಷ್ಟ. ಆದರೆ, ದೊಡ್ಡ ಸ್ಕ್ರೀನ್‌ನಲ್ಲಿ ಅಕ್ಷರಗಳು, ಚಿತ್ರ, ವಿಡಿಯೊಗಳ ಸ್ಪಷ್ಟತೆ ಹೆಚ್ಚು ಎಂಬುದು ಗಮನಿಸಬೇಕಾದ ವಿಷಯ. ಹಿಂಭಾಗದಲ್ಲಿ ಪಾಲಿಕಾರ್ಬೊನೇಟ್ ಕವಚವಿದೆ. ಪ್ಲಾಸ್ಟಿಕ್ ಆಗಿದ್ದರೂ, ವಿನ್ಯಾಸಭರಿತ, ಮ್ಯಾಟ್ ಫಿನಿಶ್ ಇರುವುದರಿಂದ ಪ್ರೀಮಿಯಂ ಲುಕ್ ಹೊಂದಿದೆ. ಜೊತೆಗೆ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಕ್ಯಾಮೆರಾ, ಫ್ಲ್ಯಾಶ್ ಇದೆ. ಡ್ಯುಯಲ್ ಕ್ಯಾಮೆರಾ ಸ್ವಲ್ಪ ಉಬ್ಬಿದ ಜಾಗದಲ್ಲಿದೆ.
ಮುಂಭಾಗದಲ್ಲಿ ಬೆಝೆಲ್ (ಸ್ಕ್ರೀನ್ ವ್ಯಾಪಿಸುವ ಸುತ್ತಲಿನ ಪ್ರದೇಶ) ತೀರಾ ಕಡಿಮೆಯಿದ್ದರೂ, ತಳಭಾಗದಲ್ಲಿ ನೋಕಿಯಾ ಲೋಗೋ ಅಳವಡಿಸಲು ಹೆಚ್ಚು ಜಾಗ ಹೊಂದಿದೆ. ಎಲ್‌ಸಿಡಿ ಸ್ಕ್ರೀನ್ ಒಳ್ಳೆಯ ಬೆಳಕಿನ ಪ್ರದೇಶದಲ್ಲಿ ಅತ್ಯುತ್ತಮವಾದ ಚಿತ್ರ, ವಿಡಿಯೊಗಳನ್ನು ಬಿಂಬಿಸುತ್ತದೆ. ಆದರೆ, ಪ್ರಖರ ಬೆಳಕಿನಲ್ಲಿ ಚಿತ್ರದ ವೀಕ್ಷಣೆ ಸರಿಯಾಗಿ ಮಾಡಬೇಕಿದ್ದರೆ, ಬ್ರೈಟ್‌ನೆಸ್ ಹೆಚ್ಚು ಮಾಡಬೇಕಾಗುತ್ತದೆ. ಹೆಚ್‌ಡಿ ಪ್ಲಸ್ ರೆಸೊಲ್ಯುಶನ್ ಇರುವುದರಿಂದ ಚಿತ್ರಗಳು ಚೆನ್ನಾಗಿಯೇ ಮೂಡಿಬರುತ್ತಿವೆ.
ಇದರಲ್ಲಿ ಎಡಭಾಗದಲ್ಲಿ ಗೂಗಲ್ ಅಸಿಸ್ಟೆಂಟ್‌ಗೆ ಪ್ರತ್ಯೇಕ ಬಟನ್ ಇದ್ದು, ತಳಭಾಗದಲ್ಲಿ ಸ್ಪೀಕರ್ ಗ್ರಿಲ್, ಮೈಕ್ ಹಾಗೂ ಮೈಕ್ರೋ ಯುಎಸ್‌ಬಿ ಪೋರ್ಟ್ ಇದೆ. ಮೇಲ್ಭಾಗದಲ್ಲಿ 3.5 ಮಿಮೀ ಹೆಡ್‌ಫೋನ್ ಜಾಕ್ ಇದೆ, ಸಿಮ್ ಕಾರ್ಡ್ ಟ್ರೇ ಜೊತೆಗೆ ಮೆಮೊರಿ ಕಾರ್ಡ್ ಟ್ರೇ ಕೂಡ ಇದೆ.
ಹೇಗಿದೆ ಕಾರ್ಯಾಚರಣೆ?
ನೋಕಿಯಾ 2.4 ರಲ್ಲಿ ಸ್ಟಾಕ್ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆ ಇದೆ ಎಂಬುದೇ ಹೆಗ್ಗಳಿಕೆ. ಎಂದರೆ, ಅನಗತ್ಯ ಮತ್ತು ಅನ್‌ಇನ್‌ಸ್ಟಾಲ್ ಮಾಡಲಾಗದ ಆ್ಯಪ್‌ಗಳು ಇದರಲ್ಲಿರುವುದಿಲ್ಲ. ಶುದ್ಧ ಆಂಡ್ರಾಯ್ಡ್ ಇರುವುದರಿಂದ ತೀರಾ ಸುಲಲಿತವಾಗಿ ಫೋನ್ ಕೆಲಸ ಮಾಡುತ್ತದೆ. ಆಂಡ್ರಾಯ್ಡ್ 10ರ ಜೊತೆಗೆ ಗೂಗಲ್ ಆ್ಯಪ್‌ಗಳು ಮತ್ತು ನೆಟ್‌ಫ್ಲಿಕ್ಸ್ ಆ್ಯಪ್ ಇನ್‌ಸ್ಟಾಲ್ ಆಗಿಯೇ ಬಂದಿದೆ. ಇದನ್ನು ಅಳಿಸಬಹುದು. ಗೂಗಲ್‌ನ ಆಂಡ್ರಾಯ್ಡ್ ಒನ್ ಕಾರ್ಯಕ್ರಮದಡಿ ನೋಕಿಯಾ 2.4 ಕೆಲಸ ಮಾಡುವುದರಿಂದ, ಎರಡು ವರ್ಷ ಕಾರ್ಯಾಚರಣಾ ವ್ಯವಸ್ಥೆ ಮತ್ತು ಮೂರು ವರ್ಷದ ಸೆಕ್ಯುರಿಟಿ ಅಪ್‌ಡೇಟ್‌ಗಳು ದೊರೆಯುವುದು ಖಚಿತ.
ಹಳೆಯದು ಎನ್ನಬಹುದಾದ ಮೀಡಿಯಾಟೆಕ್ ಹೀಲಿಯೊ ಪಿ22 ಪ್ರೊಸೆಸರ್ ಇದರಲ್ಲಿದ್ದು, 3ಜಿಬಿ RAM ಮತ್ತು 64 ಜಿಬಿ ಸ್ಟೋರೇಜ್ ಸಾಮರ್ಥ್ಯವಿದೆ. ಸೋಷಿಯಲ್ ಮೀಡಿಯಾ ಜಾಲಾಟ, ವೆಬ್, ಇಮೇಲ್, ವಾಟ್ಸ್ಆ್ಯಪ್, ಯೂಟ್ಯೂಬ್ ವೀಕ್ಷಣೆ ಮುಂತಾದ ದೈನಂದಿನ ಕೆಲಸ ಕಾರ್ಯಗಳ ಸಂದರ್ಭದಲ್ಲಿ ಯಾವುದೇ ಸಮಸ್ಯೆಯಾಗಲಿಲ್ಲ, ಬಿಸಿಯಾದ ಅನುಭವವೂ ಇಲ್ಲ ಮತ್ತು ಲೋಡಿಂಗ್ ವಿಳಂಬವಾದ ಅನುಭವವಾಗಿಲ್ಲ.
4500 mAh ಸಾಮರ್ಥ್ಯವಿರುವ ಬ್ಯಾಟರಿಯಂತೂ ಪವರ್ ಬ್ಯಾಂಕ್‌ನಂತಿದೆ. ಸಾಮಾನ್ಯ ಬಳಕೆಗೆ ಸುಮಾರು 40 ಗಂಟೆಗೆ ಯಾವುದೇ ಅಡ್ಡಿಯಾಗಲಿಲ್ಲವಾದರೂ, ಚಾರ್ಚಿಂಗ್‌ಗೆ ಸ್ವಲ್ಪ ಜಾಸ್ತಿ ಸಮಯ ತೆಗೆದುಕೊಳ್ಳುತ್ತದೆ ಎಂಬುದು ನನ್ನ ಗಮನಕ್ಕೆ ಬಂದ ವಿಚಾರ. ಇದು ಕಡಿಮೆ ಬಜೆಟ್ ಫೋನ್ ಆಗಿರುವುದರಿಂದಾಗಿ ಇದೊಂದು ಮಿತಿ ಅನ್ನಬಹುದು.
ಇನ್ನು ಬಯೋಮೆಟ್ರಿಕ್ಸ್ ಬಗ್ಗೆ ಹೇಳುವುದಾದರೆ, ಫೇಸ್ ಐಡಿ (ಮುಖ ಗುರುತು) ಮೂಲಕ ಸ್ಕ್ರೀನ್ ಅನ್‌ಲಾಕ್ ಮಾಡುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವು ಕೆಲವೊಮ್ಮೆ ತೀರಾ ನಿಧಾನವಾಗಿ ಕೆಲಸ ಮಾಡುತ್ತದೆ. ಆದರೆ, ಬೆರಳಚ್ಚು ಸ್ಕ್ಯಾನರ್ ಮೂಲಕ ವೇಗವಾಗಿ, ಪರಿಣಾಮಕಾರಿಯಾಗಿ ಸ್ಕ್ರೀನ್ ಅನ್‌ಲಾಕ್ ಮಾಡಬಹುದು.
ಕ್ಯಾಮೆರಾ
ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಸಾಮರ್ಥ್ಯದ ಪ್ರಧಾನ ಸೆನ್ಸರ್ ಹಾಗೂ 2 ಮೆಗಾಪಿಕ್ಸೆಲ್‌ನ ಡೆಪ್ತ್ ಸೆನ್ಸರ್ ಇರುವ ಅವಳಿ ಕ್ಯಾಮೆರಾ ಸೆಟಪ್ ಇದೆ. ಫೋಟೋ, ಪೋರ್ಟ್ರೇಟ್, ನೈಟ್, ವಿಡಿಯೊ ಮೋಡ್‌ಗಳಿವೆ. ಜೊತೆಗೆ, ಟೈಮರ್, ಗೂಗಲ್ ಲೆನ್ಸ್, ಫ್ಲ್ಯಾಶ್ ವ್ಯವಸ್ಥೆಯೂ ಇದೆ. ಗೂಗಲ್ ಲೆನ್ಸ್ ಮೂಲಕ ಫೋಟೊದಿಂದ ಪಠ್ಯವನ್ನು ಸುಲಭವಾಗಿ ಸೆರೆಹಿಡಿಯಬಹುದು. ನಂತರ ಸ್ವಲ್ಪ ಎಡಿಟ್ ಮಾಡಬೇಕಾಗುತ್ತದೆ.
ಈ ಶ್ರೇಣಿಯ ಫೋನ್‌ಗಳನ್ನು ಪರಿಗಣಿಸಿದರೆ, ಕ್ಯಾಮೆರಾ ಕಾರ್ಯಕ್ಷಮತೆ ಚೆನ್ನಾಗಿಯೇ ಇದೆ. 13 ಮೆಗಾಪಿಕ್ಸೆಲ್ ಇರುವುದರಿಂದಾಗಿಯೋ ಏನೋ, ಫೋಟೊಗಳನ್ನು ಝೂಮ್ ಮಾಡಿ ನೋಡಿದಾಗ ತೀರಾ ಹೆಚ್ಚು ಡೀಟೇಲ್ಸ್ ನಿರೀಕ್ಷಿಸಲಾಗದು. ಆದರೂ, ಪರಿಣಾಮಕಾರಿಯಾದ ಫೋಟೊ, ವಿಡಿಯೊ ಪಡೆಯಬಹುದು. 5 ಮೆಗಾಪಿಕ್ಸೆಲ್ ಸಾಮರ್ಥ್ಯದ ಮುಂಭಾಗದ ಕ್ಯಾಮೆರಾ ಕೂಡ ಉತ್ತಮ ಬೆಳಕಿನಲ್ಲಿ ಒಳ್ಳೆಯ ಸೆಲ್ಫೀ ಫೋಟೊಗಳನ್ನು ಒದಗಿಸಿದೆ.
ತೆರೆದ ಅಥವಾ ಇತ್ತೀಚೆಗೆ ಬಳಸಿದ ಆ್ಯಪ್‌ಗಳನ್ನು ಮುಚ್ಚುವ ವಿಧಾನವನ್ನು ಗಮನಿಸಿದರೆ, ಇದರಲ್ಲಿ ಐಫೋನ್ ಹೋಲಿಕೆ ಕಾಣಿಸುತ್ತದೆ. ಅಂದರೆ, ಸ್ಕ್ರೀನ್‌ನ ಕೆಳ ಮಧ್ಯಭಾಗದಿಂದ ಮೇಲಕ್ಕೆ ಸ್ವೈಪ್ ಮಾಡಿದರೆ, ತೆರೆದ ಆ್ಯಪ್‌ಗಳು ಗೋಚರಿಸುತ್ತವೆ ಮತ್ತು ಅವುಗಳನ್ನು ಒಂದೊಂದಾಗಿ ಮುಚ್ಚಬಹುದು. ಯಾವುದೇ ಸ್ಕ್ರೀನ್‌ನಿಂದ ಹಿಂದಕ್ಕೆ ಹೋಗಲು ಬ್ಯಾಕ್ ಬಟನ್ ಇಲ್ಲ. ಆದರೆ, ಸ್ಕ್ರೀನ್‌ನ ಬಲ ಮಧ್ಯ ಭಾಗದಲ್ಲಿ ಬೆರಳು ಒತ್ತಿ ಹಿಡಿದು ಬಲದಿಂದ ಎಡಕ್ಕೆ ಸ್ವೈಪ್ ಮಾಡಿದರೆ, ಅದು ಬ್ಯಾಕ್ ಬಟನ್ ಆಗಿ ಕೆಲಸ ಮಾಡುತ್ತದೆ.
ಒಟ್ಟಾರೆ ಹೇಗಿದೆ?
ಓದಲು, ಚಿತ್ರ, ವಿಡಿಯೊ ವೀಕ್ಷಣೆಗೆ ಅನುಕೂಲವಾಗುವಂತೆ ಸ್ವಲ್ಪ ದೊಡ್ಡ ಸ್ಕ್ರೀನ್, 10 ಸಾವಿರ ರೂ. ಆಸುಪಾಸಿನಲ್ಲಿ ಒಳ್ಳೆಯ ಬ್ಯಾಟರಿ, ಉತ್ತಮ ಕ್ಯಾಮೆರಾ ಇರುವ ಫೋನ್ ಇದು. ತೆರೆದ ಆ್ಯಪ್ ಮುಚ್ಚುವುದಕ್ಕೆ ಸಂಬಂಧಿಸಿದಂತೆ ಆ್ಯಪಲ್ ಐಫೋನ್ ವಿಧಾನವನ್ನು ಹೋಲುತ್ತದೆ. ಹೆಚ್ಎಂಡಿ ಗ್ಲೋಬಲ್ ಹೊರತಂದಿರುವ ಈ ಫೋನ್ ಉತ್ತಮ ಬಿಲ್ಡ್ ಗುಣಮಟ್ಟ ಮತ್ತು ಸಾಫ್ಟ್‌ವೇರ್ ಅನುಭವ ನೀಡುತ್ತದೆ. ಹಿಂಭಾಗದಲ್ಲಿ ಪ್ಲಾಸ್ಟಿಕ್ ಕವಚವು ಪ್ರೀಮಿಯಂ ವಿನ್ಯಾಸದಲ್ಲಿದ್ದು, ಸ್ಟಾಕ್ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆ ಇರುವುದರಿಂದ ಯೂಸರ್ ಇಂಟರ್ಫೇಸ್ ಆಪ್ತವಾಗುತ್ತದೆ ಮತ್ತು ಜಾಹೀರಾತುಗಳ ಕಿರಿಕಿರಿ ಇರುವುದಿಲ್ಲ.
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…