iPhone 12 Mini Review | ವಾಮನ ರೂಪದ ತ್ರಿವಿಕ್ರಮ

ಆ್ಯಪಲ್ ಯಾವತ್ತೂ ಪ್ರಯೋಗಶೀಲತೆಗೆ ಪ್ರಸಿದ್ಧಿ. 6 ಇಂಚಿಗಿಂತಲೂ ದೊಡ್ಡದಾದ ಸ್ಕ್ರೀನ್‌ನ ಸ್ಮಾರ್ಟ್ ಫೋನ್‌ಗಳು ಈಗಿನ ಟ್ರೆಂಡ್ ಆಗಿದ್ದರೂ, ಸಣ್ಣ ಸ್ಕ್ರೀನ್‌ನ ಮೊಬೈಲ್ ಸಾಧನ ಪರಿಚಯಿಸುವ ಮೂಲಕ ಆ್ಯಪಲ್, ಆ ವಲಯವನ್ನು ಆಕರ್ಷಿಸುವ ಮಾರುಕಟ್ಟೆ ತಂತ್ರಕ್ಕೆ ಮುಂದಾಗಿದೆ. ಇದರ ಪರಿಣಾಮವೇ ಐಫೋನ್ 12 ಮಿನಿ ಆಗಮನ.

ಐಫೋನ್ 12 ಮಿನಿಯ ಸ್ಕ್ರೀನ್ ಗಾತ್ರ ಕೇವಲ 5.4 ಇಂಚು. ನೋಡಲು ಆಕರ್ಷಕವಾಗಿ, ವಿನ್ಯಾಸದಲ್ಲಿ ಪರಿಪೂರ್ಣವಾಗಿ ಐಫೋನ್ 12 ಅನ್ನೇ ಹೋಲುವ ಈ ಫೋನ್, ಚಿಕ್ಕದಾಗಿ ಮತ್ತು ಬಹುತೇಕ ಐಫೋನ್ 12ರಷ್ಟೇ ಸಾಮರ್ಥ್ಯವನ್ನೂ ಹೊಂದಿದೆ. ಚಿಕ್ಕ ಗಾತ್ರ, ಅದಕ್ಕೆ ತಕ್ಕಂತೆ ಚಿಕ್ಕ ಬೆಲೆ. ಇದನ್ನು ಎರಡು ವಾರ ಬಳಸಿ ನೋಡಿದಾಗ ಹೇಗಿದೆ? ಇಲ್ಲಿದೆ ಅದರ ವಿಮರ್ಶೆ.

ವಿನ್ಯಾಸ
ಹಿಂದೆಯೇ ಹೇಳಿದಂತೆ, ಐಫೋನ್ 12ನಂತೆಯೇ ಆಕರ್ಷಕವಾದ, ಐಫೋನ್ 4 ಅಥವಾ ಐಫೋನ್ 5 ಬಳಸಿ ನೋಡಿದವರಿಗೆ ಥಟ್ಟನೇ ಇಷ್ಟವಾಗುವ ವಿನ್ಯಾಸ. ಅಷ್ಟೇ ಅಲ್ಲದೆ ಬಹುತೇಕ ಅದೇ ಗಾತ್ರ. ಅಂದರೆ ಕಿರಿದಾದ ಸ್ಕ್ರೀನ್ ಸಾಧನಗಳಿಗೇ ಒಗ್ಗಿ ಹೋಗಿ, ಅದರಲ್ಲೇ ತೃಪ್ತಿ ಅನುಭವಿಸಿದವರಿಗೆ ತಮ್ಮ ಫೋನನ್ನು ಈ ಅತ್ಯಾಧುನಿಕ ಸೌಕರ್ಯಗಳುಳ್ಳ ಸಾಧನಕ್ಕೆ ಅಪ್‌ಗ್ರೇಡ್ ಮಾಡಿಕೊಳ್ಳಲು ಮತ್ತೊಮ್ಮೆ ಯೋಚಿಸಬೇಕಿಲ್ಲ ಎನ್ನುವಂಥಾ ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆ ಇದರಲ್ಲಿದೆ.

ಹೆಡ್‌ಫೋನ್ ಜ್ಯಾಕ್ ಇಲ್ಲ, ಒಂದೋ ಲೈಟ್ನಿಂಗ್ ಪೋರ್ಟ್ ಮೂಲಕ ಹಿಂದಿನ ಇಯರ್‌ಫೋನ್ ಬಳಸಬಹುದು ಅಥವಾ ಇಯರ್‌ಪಾಡ್‌ಗಳನ್ನು ವೈರ್‌ಲೆಸ್ ಆಗಿ ಬಳಸಬಹುದು. ಹಿಂಭಾಗದಲ್ಲಿ ಹೊಳೆಯುವ ಗಾಜಿನ ಫಿನಿಶ್ ಇರುವ ಕವಚವಿದ್ದು, ಬಾಕ್ಸ್‌ನಲ್ಲೇ ಬಂದಿರುವ ರಬ್ಬರ್‌ನಂತಿರುವ ರಕ್ಷಾ ಕವಚ ಬಳಸಿದರೆ, ಗೀರುಗಳಾಗದು. ಹಿಂಭಾಗದಲ್ಲಿ ಅವಳಿ ಕ್ಯಾಮೆರಾಗಳು, ಎಡಭಾಗದಲ್ಲಿ ಸೈಲೆಂಟ್ ಸ್ವಿಚ್ ಮತ್ತು ವಾಲ್ಯೂಮ್ ಬಟನ್, ಬಲ ಭಾಗದಲ್ಲಿ ಪವರ್/ವೇಕಪ್ ಬಟನ್ ಇದೆ.

ಕಪ್ಪು, ಬಿಳಿ, ನೀಲಿ, ಹಸಿರು ಮತ್ತು ಕೆಂಪು – ಹೀಗೆ ಐದು ಬಣ್ಣಗಳಲ್ಲಿ ಲಭ್ಯವಿದೆ. ಏರೋಸ್ಪೇಸ್ ದರ್ಜೆಯ ಅಲ್ಯುಮಿನಿಯಂ ಫ್ರೇಮ್ ಇದರಲ್ಲೂ ಇದೆ ಮತ್ತು ಆ್ಯಪಲ್‌ನ ಹೊಸ ‘ಸಿರಾಮಿಕ್ ಶೀಲ್ಡ್’ ಕವಚವು ಬಿದ್ದರೂ ಹಾನಿಯಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಕೂಡ ಐಫೋನ್ 12ರಂತೆಯೇ ಹೊಸ ಮ್ಯಾಗ್‌ಸೇಫ್ ಅಯಸ್ಕಾಂತೀಯ ಚಾರ್ಜರ್ (ವೈರ್‌ಲೆಸ್) ಮತ್ತು ಭಾರತವು ಸಿದ್ಧವಾಗುತ್ತಿರುವ 5ಜಿ ನೆಟ್‌ವರ್ಕ್ ಬೆಂಬಲವಿದೆ.

ರಿವ್ಯೂಗೆ ದೊರೆತ ಫೋನ್ 256 ಜಿಬಿ ಸಾಮರ್ಥ್ಯದ್ದು. ಇದರಲ್ಲಿ ಸ್ಟೋರೇಜ್ ವಿಸ್ತರಿಸುವ ವ್ಯವಸ್ಥೆಯಂತೂ ಇಲ್ಲ. ಎರಡು ಸಿಮ್ ಕಾರ್ಡ್‌ಗಳಿಗೆ ಅವಕಾಶವಿದೆ (ಒಂದು ಇ-ಸಿಮ್ ಹಾಗೂ ಒಂದು ನ್ಯಾನೋ ಸಿಮ್).

ಹಾರ್ಡ್‌ವೇರ್
ಐಫೋನ್ 12ರಂತೆಯೇ ಇದರಲ್ಲೂ ಇರುವುದು ಅತ್ಯಾಧುನಿಕ ಎ14 ಬಯೋನಿಕ್ ಚಿಪ್‌ಸೆಟ್ (ಪ್ರೊಸೆಸರ್). ಅದೇ ಡಿಸ್‌ಪ್ಲೇ ಗುಣಮಟ್ಟ ಮತ್ತು ಕ್ಯಾಮೆರಾ ಸಾಮರ್ಥ್ಯಗಳು ಮಿನಿಯಲ್ಲೂ ಇವೆ. ಪ್ರಮುಖ ವ್ಯತ್ಯಾಸವೆಂದರೆ, ಸ್ಕ್ರೀನ್ ಗಾತ್ರ ಮತ್ತು ಅದರ ರೆಸೊಲ್ಯುಶನ್ ಸ್ವಲ್ಪ ಕಡಿಮೆ ಅಂದರೆ 1080×2340 ಪಿಕ್ಸೆಲ್ ಇದೆ. OLED (ಆರ್ಗ್ಯಾನಿಕ್ ಲೈಟ್ ಎಮಿಟಿಂಗ್ ಡಯೋಡ್) ಪ್ಯಾನೆಲ್ ಇರುವುದರಿಂದ ಮತ್ತು ಸ್ಕ್ರೀನ್ ಗಾತ್ರ ಕಿರಿದಾಗಿದ್ದು, ಪಿಕ್ಸೆಲ್ ಸಾಂದ್ರತೆ (476 ಪಿಪಿಐ) ಹೆಚ್ಚಿರುವುದರಿಂದ ಚಿತ್ರಗಳ ಸ್ಪಷ್ಟತೆಗೆ ಅನುಕೂಲ. ಹ್ಯಾಪ್ಟಿಕ್ ಟಚ್ ಸಾಮರ್ಥ್ಯವಿದೆ.

ರಿವ್ಯೂ ಅವಧಿಯಲ್ಲೇ ಐಒಎಸ್ 14.2.1 ಬಿಡುಗಡೆಯಾಗಿದೆ. ಕಾರ್ಯಾಚರಣಾ ವ್ಯವಸ್ಥೆಯ ಈ ಅಪ್‌ಗ್ರೇಡ್ ಮೂಲಕ, ವರದಿಯಾಗಿದ್ದ ಕೆಲವೊಂದು ತಾಂತ್ರಿಕ ತೊಡಕುಗಳನ್ನು ಸರಿಪಡಿಸಲಾಗಿದೆ. ಮುಂದಿನ ವಾರ ಐಒಎಸ್ 14.3 ಬರಲಿದೆ. ಅದರಲ್ಲಿ ಮತ್ತಷ್ಟು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗಿದೆ ಮತ್ತು ಹೆಚ್ಚುವರಿ ವೈಶಿಷ್ಟ್ಯಗಳನ್ನೂ ಸೇರಿಸಲಾಗಿದೆ.

ಕ್ಯಾಮೆರಾ
ಐಫೋನ್ 12ರಲ್ಲಿರುವಂತೆಯೇ ಹಿಂಭಾಗದಲ್ಲಿ 12 ಮೆಗಾಪಿಕ್ಸೆಲ್ ವೈಡ್ ಮತ್ತು ಅಲ್ಟ್ರಾ ವೈಡ್ ಅವಳಿ ಕ್ಯಾಮೆರಾಗಳು, ಅದೇ 12 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾ ಐಫೋನ್ 12 ಮಿನಿಯಲ್ಲೂ ಇದೆ. ಜೊತೆಗೆ, ಸ್ಕ್ರೀನ್ ಚಿಕ್ಕದಾಗಿರುವುದರಿಂದ, ಫೋಟೊ ಅಥವಾ ವಿಡಿಯೊ ವೀಕ್ಷಣೆಯ ಗುಣಮಟ್ಟದಲ್ಲಿ ಸ್ವಲ್ಪ ಹೆಚ್ಚೇ ಎಂಬಷ್ಟು ಸ್ಪಷ್ಟತೆಯಿತ್ತು. ಇದಕ್ಕೆ ಕಾರಣ ಸ್ಕ್ರೀನ್ ರೆಸೊಲ್ಯುಶನ್ ಸಾಂದ್ರತೆಯೂ 476 ಪಿಪಿಐ ಇದ್ದರೆ, ಐಫೋನ್ 12ರಲ್ಲಿ ಇದು 460 ಪಿಪಿಐ. ಹೀಗಾಗಿ ಚಿತ್ರದ ವಿವರಗಳು (ಡೀಟೇಲ್ಸ್) ಅಂತೂ ಅದ್ಭುತವಾಗಿ ಮೂಡಿಬಂದಿವೆ – ಮಂದ ಬೆಳಕಿನಲ್ಲೂ, ಹೊರಾಂಗಣದಲ್ಲೂ.

ಸ್ಕ್ರೀನ್ ಚಿಕ್ಕದಾಗಿರುವುದು ಅಷ್ಟೇನೂ ದೊಡ್ಡ ಸಮಸ್ಯೆ ತಂದೊಡ್ಡದೇ ಇರಲು ಕಾರಣವಿದೆ. ಐಒಎಸ್ 14 ಕಾರ್ಯಾಚರಣಾ ವ್ಯವಸ್ಥೆಯೇ ಎಲ್ಲವನ್ನೂ ಸರಿದೂಗಿಸುತ್ತದೆ. ಸ್ಕ್ರೀನ್‌ಗೆ ತೊಡಕಾಗುವ ಅಂಚುಗಳ (ಬೆಝೆಲ್) ಅಳತೆ ತೀರಾ ಕಿರಿದಾಗಿರುವುದರಿಂದ, ಇಡೀ ಸ್ಕ್ರೀನನ್ನು ಚಿತ್ರ ಅಥವಾ ವಿಡಿಯೊ ವ್ಯಾಪಿಸುತ್ತವೆ. ದೊಡ್ಡದಾದ ಎಕ್ಸೆಲ್ ಶೀಟುಗಳು ಅಥವಾ ಪಿಡಿಎಫ್‌ಗಳನ್ನು ಓದುವುದು ಮತ್ತು ಟೈಪ್ ಮಾಡುವುದು (ಬಹುಶಃ ದೊಡ್ಡ ಸ್ಕ್ರೀನ್‌ಗಳುಳ್ಳ ಫೋನ್‌ಗಳ ಬಳಕೆಯ ಅಭ್ಯಾಸದಿಂದಾಗಿ) ಸ್ವಲ್ಪ ಕಷ್ಟವೆನಿಸುವುದು ಬಿಟ್ಟರೆ, ಬೇರೆ ಯಾವುದೇ ಸಮಸ್ಯೆಯಾಗಲಿಲ್ಲ. ವಿಶೇಷವೆಂದರೆ, ಈ ಹಿಂದಿನ ಐಫೋನ್ ಎಸ್ಇ 2020 ಮಾಡೆಲ್‌ಗಿಂತಲೂ ದೊಡ್ಡದಾಗಿ ಚಿತ್ರ/ವಿಡಿಯೊಗಳನ್ನು ವೀಕ್ಷಿಸಬಹುದಾಗಿದೆ ಎಂಬುದು ಇದರ ಪ್ಲಸ್ ಪಾಯಿಂಟ್‌ಗಳಲ್ಲೊಂದು. ಬೆಝೆಲ್ ಏರಿಯಾ ತೀರಾ ಕಡಿಮೆ ಇರುವುದರಿಂದ ಇದು ಸಾಧ್ಯವಾಗಿದೆ.

ಐಫೋನ್ ಎಸ್ಇ 2020 ರಿವ್ಯೂ ಇಲ್ಲಿದೆ | Read here for iPhone SE 2020 Review

ಒಂದು ಕೈಯಲ್ಲಿ ಹಿಡಿದುಕೊಳ್ಳುವುದಂತೂ ಆಪ್ಯಾಯಮಾನ. ಪ್ಯಾಕೇಜ್ ಜೊತೆಗೇ ಬರುವ ಹಿಂಭಾಗದ ಕವಚ ಹಾಕಿದರೆ ಅತ್ಯುತ್ತಮ ಗ್ರಿಪ್ ಇರುತ್ತದೆ. ಕೇವಲ 133 ಗ್ರಾಂ ತೂಕವಿರುವುದರಿಂದ ಜೇಬಿಗೆ ತೂಕದಲ್ಲೂ ಭಾರವಿಲ್ಲ.

ಡಿಸ್‌ಪ್ಲೇ ಅದ್ಭುತವೆಂಬಷ್ಟು ಸ್ಪಷ್ಟವಾಗಿದೆ. ಫೋಟೊಗಳು ಕೂಡ ಹೆಚ್ಚು ವಿವರಗಳೊಂದಿಗೆ ಗೋಚರಿಸುತ್ತದೆ. (ಸಂಜೆಗತ್ತಲಲ್ಲಿ ತೆಗೆದ ಬೆಂಗಳೂರಿನ ಎಂ.ಜಿ.ರೋಡ್ ಫೋಟೊ ಕೆಳಗಿದೆ). ಸಹಜ ಬಣ್ಣ, ಶಾರ್ಪ್‌ನೆಸ್, ಚಿತ್ರಗಳ ವಿವರ, ಎಲ್ಲವೂ ಚೆನ್ನಾಗಿದೆ.

ಆಧುನಿಕ ವೈಶಿಷ್ಟ್ಯದಂತೆ, ಹೋಂ ಬಟನ್ ಇಲ್ಲ. ತೆರೆದ ಆ್ಯಪ್‌ಗಳನ್ನು ಮೇಲೆ ಸ್ವೈಪ್ ಮಾಡಿದರೆ ಮರೆಯಾಗುತ್ತವೆ. ಕೆಳಭಾಗದಿಂದ ಮೇಲಕ್ಕೆ, ನಂತರ ಬಲಭಾಗಕ್ಕೆ ಸ್ವೈಪ್ ಮಾಡಿದ ಬಳಿಕ ಒಂದೊಂದೇ ಆ್ಯಪ್‌ಗಳನ್ನು ಮುಚ್ಚಬಹುದು ಅಥವಾ ತಾಂತ್ರಿಕ ಭಾಷೆಯಲ್ಲಿ ಹೇಳುವುದಾದರೆ, ‘ಕಿಲ್’ ಮಾಡಬಹುದು. ಮೇಲ್ಭಾಗದ ಬಲ ಮೂಲೆಯಿಂದ ಕರ್ಣೀಯವಾಗಿ ಬೆರಳು ಸ್ವೈಪ್ ಮಾಡಿದರೆ, ಶಾರ್ಟ್‌ಕಟ್ ಮೆನು ಅಥವಾ ಕಂಟ್ರೋಲ್ ಸೆಂಟರ್ ಕಾಣಿಸುತ್ತದೆ.

ಬ್ಯಾಟರಿ
ಐಫೋನ್ 12ಕ್ಕೂ ಈ ಮಿನಿ ಸಾಧನಕ್ಕೂ ಇರುವ ಪ್ರಮುಖ ವ್ಯತ್ಯಾಸವೆಂದರೆ ಬ್ಯಾಟರಿ. ಐಫೋನ್ 12 ಬ್ಯಾಟರಿ ಸಾಮರ್ಥ್ಯವು 2815 mAh ಇದ್ದರೆ, ಮಿನಿಯ ಬ್ಯಾಟರಿ ಸಾಮರ್ಥ್ಯ 2,227 mAh ಮಾತ್ರ. ಆದರೆ ಇದು ತೊಡಕಾಗದೇ ಇರುವುದಕ್ಕೆ ಎರಡು ಪ್ರಮುಖ ಕಾರಣಗಳು. ಒಂದನೆಯದು ಸ್ಕ್ರೀನ್ ಗಾತ್ರ ಚಿಕ್ಕದು, ಎರಡನೆಯದು ಐಒಎಸ್ 14. ಇದರ ಕಾರ್ಯಾಚರಣೆಯೇ ಬ್ಯಾಟರಿ ಉಳಿತಾಯಕ್ಕೆ ಪೂರಕವಾಗಿದೆ. ಹೀಗಾಗಿ ಎರಡೂ ಫೋನ್‌ಗಳನ್ನು ಬಳಸಿ ನೋಡಿದ ನನಗೆ, ಬ್ಯಾಟರಿ ಸಾಮರ್ಥ್ಯ ಕಡಿಮೆಯಿದ್ದರೂ ವ್ಯತ್ಯಾಸ ನಗಣ್ಯವಾಗಿತ್ತು.

ಇದರಲ್ಲಿಯೂ ಪವರ್ ಅಡಾಪ್ಟರ್ ಜೊತೆಗೆ ಕೊಟ್ಟಿಲ್ಲ. ಆದರೆ ಲೈಟ್ನಿಂಗ್ ಚಾರ್ಜಿಂಗ್ ಪೋರ್ಟ್ ಹಾಗೂ ಟೈಪ್-ಸಿ ಪೋರ್ಟ್ ಇರುವ ಕೇಬಲ್ ಕೊಟ್ಟಿದ್ದಾರೆ. ಇದನ್ನು ಸೂಕ್ತವಾದ ಅಡಾಪ್ಟರ್‌ಗೆ ಅಳವಡಿಸಿ ಚಾರ್ಜಿಂಗ್ ಮಾಡಬಹುದು. ಸ್ವಲ್ಪ ಹಣ ವ್ಯಯಿಸಿದರೆ, ಆ್ಯಪಲ್ ಇತ್ತೀಚೆಗಷ್ಟೇ ಹೊರತಂದಿರುವ ಅಯಸ್ಕಾಂತೀಯ ಕ್ರಿಯೆಯಲ್ಲಿ ಚಾರ್ಜ್ ಆಗುವ ಮ್ಯಾಗ್‌ಸೇಫ್ ಚಾರ್ಜರ್‌ಗೆ ಈ ಫೋನ್ ಕೂಡ ಬೆಂಬಲಿಸುತ್ತದೆ. 15 ವ್ಯಾಟ್ ವೇಗದ ಚಾರ್ಜಿಂಗ್ ಬೆಂಬಲಿಸುತ್ತಿದ್ದು, ಶಿ (Qi) ತಂತ್ರಜ್ಞಾನದ ವೈರ್‌ಲೆಸ್ ಚಾರ್ಜಿಂಗ್ ಪ್ಯಾಡನ್ನೂ ಬಳಸಬಹುದಾಗಿದೆ.

ಬೆಲೆ
ಐಫೋನ್ 12 ಮಿನಿ ಬೆಲೆ 64 ಜಿಬಿ, 128 ಜಿಬಿ ಹಾಗೂ 256 ಜಿಬಿ ಸ್ಟೋರೇಜ್ ಸಾಮರ್ಥ್ಯಕ್ಕೆ ತಕ್ಕಂತೆ 69,900 ರೂ. ನಿಂದ ಆರಂಭವಾಗುತ್ತದೆ. ರೂ. 74,900 (128 ಜಿಬಿ) ಮತ್ತು ರೂ. 84,900 (256 ಜಿಬಿ). ಗಮನಿಸಬೇಕಾದ ಅಂಶವೆಂದರೆ ಆರಂಭಿಕ ಬೆಲೆಯು ಐಫೋನ್ 11 ಬಿಡುಗಡೆಯಾಗಿದ್ದಾಗ ಇದ್ದುದಕ್ಕಿಂತಲೂ ಹೆಚ್ಚು. ಐಫೋನ್ 12 ಪೀಳಿಗೆಯ ಅತ್ಯಂತ ಅಗ್ಗದ ಫೋನ್ ಇದು. ಈ ಪೀಳಿಗೆಯ ಎಲ್ಲ ಫೋನ್‌ಗಳ ಕಾರ್ಯಸಾಮರ್ಥ್ಯವಂತೂ ಬಹುತೇಕ ಏಕರೂಪದಲ್ಲಿದೆ. ಐಫೋನ್ ಮಿನಿ ಈ ಪೀಳಿಗೆಯಲ್ಲೇ ಅಗ್ಗದ ಫೋನ್ ಆಗಿರುವುದರಿಂದಾಗಿ, ಮೇಲೆ ಹೇಳಿದ ಕೆಲವು ವೈಶಿಷ್ಟ್ಯಗಳು ‘ಕುಗ್ಗಿವೆ’ಯಷ್ಟೇ. ದೊಡ್ಡ ವ್ಯತ್ಯಾಸವೇನೂ ಇಲ್ಲ.

ಐಫೋನ್ 12 ರಿವ್ಯೂ ಇಲ್ಲಿದೆ | Read here for iPhone 12 Review

ಒಟ್ಟಾರೆ ಹೇಗಿದೆ?
ಹಿಂದೆಯೇ ಹೇಳಿದಂತೆ, ಆಂಡ್ರಾಯ್ಡ್ ಬಳಸಿದವರಿಗೆ ಐಫೋನ್‌ನ ಕಸ್ಟಮೈಸೇಶನ್ (ವೈಯಕ್ತೀಕರಣಗೊಳಿಸುವ) ಆಯ್ಕೆಗಳು ಕಡಿಮೆ ಅನ್ನಿಸಬಹುದಾದರೂ ಖಾಸಗಿತನ ಮತ್ತು ಸುರಕ್ಷತೆ ಹೆಚ್ಚು. ಜೊತೆಗೆ, ಈ ಕೊರತೆಯು ನಿಧಾನವಾಗಿ ಈಗಾಗಲೇ ಒಂದೊಂದಾಗಿ ತುಂಬುತ್ತಿದೆ. ಆ್ಯಪಲ್ ಐಫೋನ್ ಬೇಕೇ ಬೇಕು ಅಂದುಕೊಳ್ಳುವವರಿಗೆ ಆರಂಭಿಸಲು ಇದು ಅತ್ಯುತ್ತಮ ಸಾಧನ. ಜೇಬಲ್ಲಿ ಅನುಕೂಲಕರವಾಗಿ ಕೂರುವ, ಅತ್ಯುತ್ತಮ ಕಾರ್ಯಕ್ಷಮತೆ, ಆ್ಯಪಲ್ ಗುಣಮಟ್ಟ ಬೇಕೆಂದಾದರೆ, ವಿಶೇಷವಾಗಿ ಐಫೋನ್ 12 ಅಥವಾ ಐಫೋನ್ 12 ‘ಪ್ರೋ’ ಖರೀದಿಸುವ ಸಾಮರ್ಥ್ಯವಿಲ್ಲದಿದ್ದರೆ, ಐಫೋನ್ 12 ಮಿನಿ ಒಂದು ಕೈ ನೋಡಬಹುದು. ಅದ್ಭುತವಾದ ಫೋಟೊ ಮತ್ತು HDR ವಿಡಿಯೊ ಸೆರೆಹಿಡಿಯಬಹುದಾಗಿದ್ದು, ಕ್ಯೂಟ್ ಆಗಿರುವ, ವಾಮನ ರೂಪದಲ್ಲಿರುವ ತ್ರಿವಿಕ್ರಮ ಈ ಫೋನ್ ಎನ್ನಲಡ್ಡಿಯಿಲ್ಲ.

ಐಫೋನ್ 12 ಮಿನಿ ವೈಶಿಷ್ಟ್ಯ
ಸ್ಕ್ರೀನ್: 6.1 ಇಂಚು ಸೂಪರ್ ರೆಟಿನಾ XDR OLED (476 ppi)
ಪ್ರೊಸೆಸರ್: ಆ್ಯಪಲ್ A14 ಬಯೋನಿಕ್
RAM: 4GB
ಮೆಮೊರಿ: 64, 128 ಅಥವಾ 256 GB
ಬೆಲೆ : ರೂ. 69,900 (64ಜಿಬಿ) / ರೂ. 74,900 (128 ಜಿಬಿ) / ರೂ. 84,900 (256 ಜಿಬಿ)
ಕಾರ್ಯಾಚರಣಾ ವ್ಯವಸ್ಥೆ: iOS 14
IP ರೇಟಿಂಗ್: IP68 (ಜಲ ನಿರೋಧಕತೆ)
ಕ್ಯಾಮೆರಾ: ಡ್ಯುಯಲ್ 12 MP ಹಿಂಭಾಗದ ಕ್ಯಾಮೆರಾಗಳು, 12MP ಸೆಲ್ಫೀ ಕ್ಯಾಮೆರಾ
ಸಂಪರ್ಕ ವ್ಯವಸ್ಥೆ: LTE, 5G, Wi-Fi 6, NFC, GPS, ಬ್ಲೂಟೂತ್ 5
ಅಳತೆ: 146.7ಮಿಮೀ x 71.5ಮಿಮೀ x 7.4ಮಿಮೀ, ತೂಕ: 133 ಗ್ರಾಂ
ಬ್ಯಾಟರಿ: 2227 mAh

My Gadget Review Published in Prajavani on 13/14 Dec 2020

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 weeks ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

4 weeks ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

1 month ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

3 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

8 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

8 months ago