ಅನಿವಾರ್ಯ ಸಹಯೋಗಿಯಾಗಿರುವ ವಾಟ್ಸ್ಆ್ಯಪ್ ಬಳಕೆದಾರರ ಆಸಕ್ತಿಗೆ ಅನುಗುಣವಾಗಿ ಬದಲಾವಣೆಗಳನ್ನು ಮಾಡುತ್ತಲೇ ಬಂದಿದೆ. ತೀರಾ ಇತ್ತೀಚೆಗೆ ಏನೆಲ್ಲ ಹೊಸ ಬದಲಾವಣೆಗಳು ಬಂದಿವೆ ಎಂಬುದನ್ನು ಗಮನಿಸಿ, ಅದರ ಪ್ರಯೋಜನ ಪಡೆದುಕೊಳ್ಳಿ.
ಉತ್ತರಿಸಲು ಸ್ವೈಪ್
ಯಾವುದೇ ಸಂದೇಶವೊಂದಕ್ಕೆ ಉತ್ತರಿಸಬೇಕಿದ್ದರೆ ಆ ಸಂದೇಶದ ಮೇಲೆ ಬೆರಳಿನಿಂದ ಬಲಕ್ಕೆ ಸ್ವೈಪ್ ಮಾಡಿದರಾಯಿತು. ಹಿಂದೆ ಸಂದೇಶವನ್ನು ಒತ್ತಿ ಹಿಡಿದು, ಮೇಲ್ಭಾಗದಲ್ಲಿರುವ ರಿಪ್ಲೈ ಬಟನ್ ಒತ್ತಬೇಕಿತ್ತು.
ಗ್ಯಾಲರಿಯಲ್ಲಿ ಅದೃಶ್ಯವಾಗುವ ಚಿತ್ರಗಳು
ವಾಟ್ಸ್ಆ್ಯಪ್‌ನಲ್ಲಿ ನಮ್ಮ ಸ್ನೇಹಿತರಿಂದ ಅಥವಾ ಗ್ರೂಪ್‌ಗಳಲ್ಲಿ ಸಾಕಷ್ಟು ಚಿತ್ರಗಳು ಬರುತ್ತಿರುತ್ತವೆ. ಅವುಗಳೆಲ್ಲವೂ ಗ್ಯಾಲರಿ ಆ್ಯಪ್ ಮೂಲಕ ಗೋಚರಿಸುತ್ತವೆ. ಡೌನ್‌ಲೋಡ್ ಆಗಿದ್ದರೂ, ಇವು ಗ್ಯಾಲರಿಯಲ್ಲಿ ಕಾಣಿಸದಂತೆ ಮಾಡಲು ಒಂದು ಟ್ರಿಕ್ ಇದೆ. ಸ್ನೇಹಿತರಿಂದ ಅಥವಾ ನಿರ್ದಿಷ್ಟ ಗ್ರೂಪಿನಿಂದ ಬರುವ ಕೆಲವೊಂದು ಸೂಕ್ಷ್ಮವೆನಿಸುವ ಚಿತ್ರಗಳನ್ನು ಹೀಗೆ ನಾವು ಗೌಪ್ಯವಾಗಿರಿಸಬಹುದು. ಇದಕ್ಕಾಗಿ, ವಾಟ್ಸ್ಆ್ಯಪ್ ಸೆಟ್ಟಿಂಗ್ಸ್‌ನಲ್ಲಿ, ಚಾಟ್ಸ್ ಕ್ಲಿಕ್ ಮಾಡಿ, ಕೆಳಭಾಗದಲ್ಲಿರುವ ‘ಶೋ ಮೀಡಿಯಾ ಇನ್ ಗ್ಯಾಲರಿ’ ಎಂಬ ಬಾಕ್ಸ್ ಮೇಲೆ ರೈಟ್ ಗುರುತು ಮಾಡಿದರಾಯಿತು. ನಿರ್ದಿಷ್ಟ ವ್ಯಕ್ತಿ ಅಥವಾ ಗ್ರೂಪ್‌ನ ಮೀಡಿಯಾ (ಫೋಟೋ, ವೀಡಿಯೋ) ಮರೆ ಮಾಡಬೇಕೆಂದಾದರೆ, ಹೆಸರಿನ ಮೇಲೆ ಕ್ಲಿಕ್ ಮಾಡಿದಾಗ, ‘ಮೀಡಿಯಾ ವಿಸಿಬಿಲಿಟಿ’ ಎಂಬುದನ್ನು ಕ್ಲಿಕ್ ಮಾಡಬಹುದು. ನೆನಪಿಡಿ. ಇದು ಫೋಟೋಗಳನ್ನು ಕಾಣಿಸುವುದಿಲ್ಲವಷ್ಟೇ ಹೊರತು, ನಿಮ್ಮ ಗ್ಯಾಲರಿಯಲ್ಲಿ ಸೇವ್ ಆಗಿರುತ್ತದೆ. ‘ಸ್ಪೇಸ್ ಉಳಿತಾಯವಾಗುತ್ತದೆ’ ಎಂಬ ಸಂದೇಶವೊಂದು ಹರಿದಾಡುತ್ತಿದ್ದು, ಅದು ತಪ್ಪು.
ಫಾರ್ವರ್ಡೆಡ್ ಸಂದೇಶ
ಇತ್ತೀಚೆಗೆ ನಕಲಿ ಸಂದೇಶಗಳು ಫಾರ್ವರ್ಡ್ ಆಗುವುದರ ಮೇಲೆ ಕಡಿವಾಣ ಹಾಕಲು ಯಾವುದೇ ಸಂದೇಶವನ್ನು ಬೇರೆ ಗ್ರೂಪುಗಳಿಗೆ ಅಥವಾ ಸ್ನೇಹಿತರಿಗೆ ಫಾರ್ವರ್ಡ್ ಮಾಡುವಾಗ, ಸಂದೇಶದಲ್ಲೇ ‘ಫಾರ್ವರ್ಡೆಡ್’ ಅಂತ ಗೋಚರಿಸುತ್ತದೆ. ಇದು ಸಂದೇಶವು ನಕಲಿಯಾಗಿರಬಹುದು, ದೃಢಪಟ್ಟಿಲ್ಲ ಎಂದುಕೊಳ್ಳುವುದಕ್ಕೆ ಕೂಡ ಅನುವು ಮಾಡುತ್ತದೆ. ಅದೇ ರೀತಿ, ಏಕ ಕಾಲಕ್ಕೆ ಐದು ಮಂದಿಗೆ/ಗ್ರೂಪಿಗೆ ಸಂದೇಶ ಫಾರ್ವರ್ಡ್ ಮಾಡುವುದು ಸಾಧ್ಯವಿಲ್ಲ. ಸುಳ್ಳು ಸಂದೇಶಗಳ ಕ್ಷಿಪ್ರ ಪ್ರಸಾರ ತಡೆಯುವುದಕ್ಕಾಗಿ ವಾಟ್ಸ್ಆ್ಯಪ್ ಕೈಗೊಂಡಿರುವ ಹೆಜ್ಜೆಯಿದು.
ಸಂದೇಶದಲ್ಲಿ ಜಿಫ್
ಇದುವರೆಗೆ ಬ್ರೌಸರ್ ಮೂಲಕ ವಾಟ್ಸ್ಆ್ಯಪ್ ಬಳಸುತ್ತಿರುವವರಿಗೆ ಲಭ್ಯವಿದ್ದ ಜಿಫ್ ಫೈಲ್‌ಗಳ ಆಯ್ಕೆಯು ಸ್ಮಾರ್ಟ್ ಫೋನ್‌ಗೂ ಬಂದಿದೆ. ಸಂದೇಶ ಟೈಪ್ ಮಾಡುವ ಬಾಕ್ಸ್ ಎಡಭಾಗದಲ್ಲಿರುವ ಎಮೋಜಿ ಬಟನ್ ಒತ್ತಿದ ತಕ್ಷಣ, ಎಮೋಜಿಗಳು ಕಾಣಿಸುತ್ತವೆಯಲ್ಲವೇ? ಕೆಳಭಾಗದಲ್ಲಿ ನಗುವಿನ ಎಮೋಜಿ ಹಾಗೂ ಪಕ್ಕದಲ್ಲಿ GIF ಅಂತ ಬರೆದಿರುವ ಬಾಕ್ಸ್ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ, ಆನಿಮೇಟೆಡ್ ಚಿತ್ರಗಳ ಮೂಲಕ ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಆಯ್ಕೆಯಿರುತ್ತದೆ. ಕೆಳ ಎಡಭಾಗದಲ್ಲಿ ಸರ್ಚ್ ಬಟನ್ ಮೂಲಕ ನಮಗೆ ಬೇಕಾಗಿರುವ ಭಾವನೆಯ ಫೈಲನ್ನು ಹುಡುಕಲೂಬಹುದು.
ಕಳುಹಿಸಿದ ಸಂದೇಶ ಡಿಲೀಟ್
ತಪ್ಪಾಗಿ ಕಳುಹಿಸಲಾದ ಸಂದೇಶವನ್ನು ಹಿಂತೆಗೆದುಕೊಳ್ಳಲು, ಅಂದರೆ ಸ್ವೀಕೃತದಾರರಿಗೂ ಕಾಣಿಸದಂತೆ ಡಿಲೀಟ್ ಮಾಡುವ ಅವಧಿಯೆಂದರೆ 1 ಗಂಟೆ 8 ನಿಮಿಷ 16 ಸೆಕೆಂಡು. ತಡ ಮಾಡಿದಷ್ಟೂ, ಸ್ವೀಕರಿಸಿದವರು ಅದನ್ನು ಓದಿ ಆಗಿರುತ್ತದೆ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಕಳುಹಿಸುವವರೂ, ಸ್ವೀಕರಿಸುವವರೂ ವಾಟ್ಸ್ಆ್ಯಪ್‌ನ ಹೊಸ ಆವೃತ್ತಿಯನ್ನು ತಮ್ಮ ಫೋನ್‌ನಲ್ಲಿ ಹೊಂದಿರಬೇಕಾಗುತ್ತದೆ. ಇತ್ತೀಚೆಗೆ ಅದನ್ನು 13 ಗಂಟೆ, 8 ನಿಮಿಷ ಹಾಗೂ 16 ಸೆಕೆಂಡುಗಳಿಗೆ ವಿಸ್ತರಿಸಲಾಗಿದೆ ಎಂಬ ಸುದ್ದಿಯೂ ಬಂತು. ಅದರ ನಿಜವಾದ ಸಂಗತಿಯೇನೆಂದರೆ, ಕಳುಹಿಸಿದ ಸಂದೇಶವನ್ನು 1 ಗಂಟೆ 8 ನಿಮಿಷ ಮತ್ತು 16 ಸೆಕೆಂಡುಗಳೊಳಗೆ ಡಿಲೀಟ್ ಮಾಡಬೇಕಾಗುತ್ತದೆ. ಆಚೆ ಕಡೆಯವರು ‘ಡಿಲೀಟ್ ಮಾಡಲಾಗಿದೆ’ ಎಂಬ ಸಂದೇಶವನ್ನು 13 ಗಂಟೆ 8 ನಿಮಿಷ 16 ಸೆಕೆಂಡುಗಳೊಳಗೆ ಸ್ವೀಕರಿಸದಿದ್ದರೆ (ಅಂದರೆ ಉದಾಹರಣೆಗೆ, ಅವರು ಆ ಸಮಯದಲ್ಲಿ ಫೋನ್ ಆಫ್ ಮಾಡಿದ್ದರೆ), ಅವರ ಫೋನ್‌ನಿಂದ ಆ ಸಂದೇಶ ಡಿಲೀಟ್ ಆಗುವುದಿಲ್ಲ ಎಂದರ್ಥ.
ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಅಂಕಣ, 29 ಅಕ್ಟೋಬರ್ 2018