ಇದು ಸೆಲ್ಫೀಯನ್ನೇ ಗುರಿಯಾಗಿರಿಸಿಕೊಂಡು ಬಂದಿರುವ ಫೋನ್ ಎನ್ನಲಡ್ಡಿಯಿಲ್ಲ. ಬೆಲೆ ನೋಡಿದರೆ ಮಧ್ಯಮ ವರ್ಗದವರಿಗೆ ತುಸು ಭಾರವೇ. ಆದರೆ 6.41 ಇಂಚು ಡಿಸ್‌ಪ್ಲೇ, ಒಕ್ಟಾಕೋರ್ ಪ್ರೊಸೆಸರ್, ಭಾರೀ ಎನಿಸುವ 25 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ, 6 ಜಿಬಿ RAM, 64 ಜಿಬಿ ಸ್ಟೋರೇಜ್, 3400 mAh ಬ್ಯಾಟರಿ, ಜತೆಗೆ ಆಂಡ್ರಾಯ್ಡ್ 8.1 ಒರಿಯೋ ಕಾರ್ಯಾಚರಣಾ ವ್ಯವಸ್ಥೆಯುಳ್ಳ, ಹಿಂಭಾಗದಲ್ಲಿ 12 ಹಾಗೂ 5 ಮೆಗಾಪಿಕ್ಸೆಲ್‌ನ ಎರಡು ಲೆನ್ಸ್ ಇರುವ ಕ್ಯಾಮೆರಾ ಇದೆ. ಸ್ಕ್ರೀನ್ ಮೇಲೆಯೇ ಫಿಂಗರ್‌ಪ್ರಿಂಟ್ ಇರಿಸುವ ಆಧುನಿಕ ವ್ಯವಸ್ಥೆಯೂ ಇರುವುದರಿಂದ ಸ್ಪೆಸಿಫಿಕೇಶನ್‌ಗೆ ತಕ್ಕ ಬೆಲೆ ಇದೆ ಎಂದುಕೊಳ್ಳಬಹುದು.
ವಿನ್ಯಾಸ ಹೇಗಿದೆ?
ನೋಡಲು ಒನ್‌ಪ್ಲಸ್ 6 ನಂತೆಯೇ ಹೊಳೆಯುವ ಹಿಂಭಾಗದ ಕವಚ ಹೊಂದಿದೆ. ಆದರೆ ಪ್ಲಾಸ್ಟಿಕ್ ಬಾಡಿ ಇರುವುದರಿಂದ ಹಗುರವಾಗಿದ್ದು, ಸ್ವಲ್ಪ ಉದ್ದವಾಗಿರುವಂತೆ ಕಾಣಿಸುತ್ತದೆ. ಕರ್ಣರೇಖೆಯಲ್ಲಿ 6.41 ಇಂಚು ಸ್ಕ್ರೀನ್ ಇದ್ದು, ‘ಹ್ಯಾಲೋ ಫುಲ್‌ವ್ಯೂ’ ಎಂದು ವಿವೋ ಕರೆದುಕೊಂಡಿರುವ ಪೂರ್ಣ ಪರದೆ ಡಿಸ್‌ಪ್ಲೇ ಇದರ ವಿಶೇಷತೆಗಳಲ್ಲೊಂದು. ಗೊರಿಲ್ಲಾ ಗ್ಲಾಸ್ 3 ಇದ್ದರೂ, ಸ್ಕ್ರೀನ್ ಪ್ರೊಟೆಕ್ಟರ್ ಅಳವಡಿಸಿಯೇ ಬರುತ್ತದೆ. ಐಫೋನ್‌ಗಳ ಮಾದರಿಯಲ್ಲೇ, ಕೆಳಗಿನಿಂದ ಮೇಲಕ್ಕೆ ಸ್ವೈಪ್ ಮಾಡಿದರೆ ಕಂಟ್ರೋಲ್ ಸೆಂಟರ್ ವಿಂಡೋ (ಮೆನು ಶಾರ್ಟ್‌ಕಟ್‌ಗಳಿರುವ) ಕಾಣಿಸುತ್ತದೆ. ಸೂಪರ್ ಅಮೋಲೆಡ್, ಫುಲ್ ಹೆಚ್‌ಡಿ ಡಿಸ್‌ಪ್ಲೇ 400 ಪಿಪಿಐ ಮೂಲಕ ಉತ್ತಮ ಚಿತ್ರಗಳನ್ನು ನೋಡುವಂತೆ ಮಾಡುತ್ತದೆ.
ಚಲನೆ ಪತ್ತೆಯಾದ ತಕ್ಷಣ ಫಿಂಗರ್‌ಪ್ರಿಂಟ್ ಲೋಗೋ ಸ್ಕ್ರೀನ್ ಮೇಲೆ ಬೆಳಗುತ್ತದೆ. ಫಿಂಗರ್‌ಪ್ರಿಂಟ್ ಮೂಲಕ ಅನ್‌ಲಾಕ್ ಮಾಡುವುದಕ್ಕಿಂತ, ಫೇಸ್ ರೆಕಗ್ನಿಶನ್ ತುಂಬಾ ವೇಗವಾಗಿ ನಡೆಯುತ್ತದೆ. ಕಣ್ಣು ಮುಚ್ಚಿದರೆ ಫೇಸ್ ರೆಕಗ್ನಿಶನ್ ಮೂಲಕ ಅನ್‌ಲಾಕ್ ಮಾಡದಿರುವುದು ಇದರ ಮತ್ತೊಂದುವಿಶೇಷತೆ.
ನನಗೆ ಸಿಕ್ಕಿರುವ ಸಾಧನವು ಸ್ಟಾರೀ ನೈಟ್ ಹೆಸರಿನ ಡ್ಯುಯಲ್ ಟೋನ್ ಫಿನಿಶ್ ಇರುವ ನೀಲಿ ಬಣ್ಣದ್ದು. ಚಿನ್ನದ ಬಣ್ಣದಲ್ಲಿಯೂ ಈ ಮಾಡೆಲ್ ಲಭ್ಯ. ಬಾಕ್ಸ್‌ನಲ್ಲಿ ಸಿಮ್ ತೆಗೆಯಲು ಇರುವ ಪುಟ್ಟ ಪಿನ್, ಹೆಡ್‌ಸೆಟ್, ಮೈಕ್ರೋ ಯುಎಸ್‌ಬಿ ಕೇಬಲ್ ಮತ್ತು ವೇಗವಾಗಿ ಚಾರ್ಜ್ ಆಗಬಲ್ಲ ಪವರ್ ಅಡಾಪ್ಟರ್ ಇದೆ.
ತಂತ್ರಾಂಶ, ಬ್ಯಾಟರಿ
Vivo V11 Pro ನಲ್ಲಿ ಕ್ವಾಲ್‌ಕಾಂ ಸ್ನ್ಯಾಪ್‌ಡ್ರ್ಯಾಗನ್ 660 ಪ್ರೊಸೆಸರ್ ಇದೆ. ಸದಾ ಕಾಲ ಡಿಸ್‌ಪ್ಲೇ ಆನ್ ಆಗಿರುವಂತೆ ಮಾಡಿಕೊಂಡರೆ, ಸ್ಕ್ರೀನ್ ಆಫ್ ಇರುವಾಗಲೂ ಸಮಯ, ದಿನಾಂಕ, ಬ್ಯಾಟರಿ ಮಟ್ಟ ಮತ್ತು ನೋಟಿಫಿಕೇಶನ್‌ಗಳ ಆ್ಯಪ್ ಐಕಾನ್‌ಗಳು ಕಾಣಿಸುತ್ತವೆ. ಇದು ಆಂಡ್ರಾಯ್ಡ್ 8.1 ಆಧಾರಿತ ಫನ್‌ಟಚ್ 4.5 ಆವೃತ್ತಿಯ ಆಪರೇಟಿಂಗ್ ಸಿಸ್ಟಂ ಹೊಂದಿದೆ. ಸ್ಟಾಕ್ ಆಂಡ್ರಾಯ್ಡ್‌ಗಿಂತ ಭಿನ್ನವಾಗಿರುವುದರಿಂದ ನಮಗೆ ಅಗತ್ಯವಿಲ್ಲದ ಕೆಲವು ಆ್ಯಪ್‌ಗಳು ಅಳವಡಿಕೆಯಾಗಿ ಬರುತ್ತವೆ.
ಸ್ಮಾರ್ಟ್ ಮೋಷನ್
ಈ ವೈಶಿಷ್ಟ್ಯಗಳ ಗುಚ್ಛದ ಮೂಲಕ ಎಲ್ಲ ರೀತಿಯ ಸ್ಮಾರ್ಟ್ ಕಾರ್ಯಗಳನ್ನು ಮಾಡಬಹುದು. ಉದಾಹರಣೆಗೆ, ಸ್ಕ್ರೀನ್ ಮೇಲೆ ಸ್ವೈಪ್ ಮಾಡಿದರೆ ಸ್ಕ್ರೀನ್ ಆನ್ ಆಗುವುದು, ನಿರ್ದಿಷ್ಟ ಆ್ಯಪ್ ತೆರೆಯಲು ನಿರ್ದಿಷ್ಟ ರೀತಿಯಲ್ಲಿ ಸ್ವೈಪ್ ಮಾಡುವುದು, ಅಲುಗಾಡಿಸಿದರೆ ಫ್ಲ್ಯಾಶ್ ಲೈಟ್ ಆನ್ ಆಗುವುದು ಮುಂತಾದ ವೈಶಿಷ್ಟ್ಯಗಳು ಇಲ್ಲಿವೆ. ಜೋವಿ ಹೆಸರಿನ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ವ್ಯವಸ್ಥೆ ಇದೆ. ಇದು ಕ್ಯಾಮೆರಾ ಜತೆಗೆ ಮಿಳಿತವಾದರೆ ಫೋಟೋಗಳನ್ನು ಸುಂದರವಾಗಿಸುವ (ಬ್ಯೂಟಿಫಿಕೇಶನ್) ತೆಲಸ ಮಾಡುತ್ತದೆ. ಲಾಂಚರ್‌ನಲ್ಲಿ, ಸಮೀಪದ ಕಾರ್ಯಕ್ರಮಗಳು, ಹವಾಮಾನ ಮಾಹಿತಿ ಇತ್ಯಾದಿಯನ್ನು ತೋರಿಸಲು ನೆರವಾಗುತ್ತದೆ. ಜತೆಗೆ ಬೈಕ್ ಮೋಡ್, ಗೇಮ್ ಮೋಡ್‌ಗಳಿವೆ.
ಆ್ಯಪಲ್‌ನಲ್ಲಿರುವ ಅನಿಮೋಜಿ (ಅನಿಮೇಶನ್ ಪ್ಲಸ್ ಇಮೋಜಿ)ಯನ್ನೇ ಹೋಲುವ ರೀತಿಯಲ್ಲಿ, Vivo V11 Pro ಮೊಬೈಲ್‌ನಲ್ಲಿ ಟಚ್ ಪಾಲ್ ಕೀಬೋರ್ಡ್‌ನಲ್ಲಿ ಫನ್‌ಮೋಜಿ ಹೆಸರಿನಲ್ಲಿದೆ.
ಕಾರ್ಯ ನಿರ್ವಹಣೆ ಹೇಗಿದೆ?
ಆಂಡ್ರಾಯ್ಡ್‌ಗೆ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದರೂ, ಪರ್ಫಾರ್ಮೆನ್ಸ್ ಮೇಲೇನೂ ಇದು ಹೆಚ್ಚು ಪರಿಣಾಮ ಬೀರಿದಂತಿಲ್ಲ. ಇಂಟರ್ಫೇಸ್ ಚೆನ್ನಾಗಿದೆ ಮತ್ತು ಮಲ್ಟಿಟಾಸ್ಕಿಂಗ್ ವೇಳೆ ಸಮಸ್ಯೆ ಕಂಡುಬಂದಿಲ್ಲ. ಸುಲಲಿತ (ಸ್ಮೂತ್) ಎನ್ನಿಸಬಹುದಾದ ಟಚ್ ಕಾರ್ಯಾಚರಣೆಯಿದೆ. ಸೆಲ್ಫೀ ಕ್ಯಾಮೆರಾ 25 ಮೆಗಾಪಿಕ್ಸೆಲ್ ಉತ್ತಮ ಸೆಲ್ಫೀ ಚಿತ್ರ ನೀಡುತ್ತದೆ. ಕ್ಯಾಮೆರಾ ವೈಶಿಷ್ಟ್ಯಗಳ ಬಗ್ಗೆ ಹೇಳಲೇಬೇಕು. ಶುಭ್ರ ಬೆಳಕಿನಲ್ಲಿ ಉತ್ತಮ ಚಿತ್ರ ಹಾಗೂ ವೀಡಿಯೊ ರೆಕಾರ್ಡ್ ಮಾಡಿಕೊಳ್ಳಬಹುದು. ದೊಡ್ಡ ಗುಂಪಿನಲ್ಲಿರುವಾಗ ಸೆಲ್ಫೀ ತೆಗೆದುಕೊಳ್ಳಲು, ಗ್ರೂಪ್ ಸೆಲ್ಫೀ ಎಂಬ ಮೋಡ್ ಇದೆ. ಜತೆಗೆ ಎಐ ಫೇಸ್ ಬ್ಯೂಟಿ, ಬೊಕೇ ಮೋಡ್, ಪ್ರೊಫೆಶನಲ್, ಡಾಕ್ ಮೋಡ್‌ಗಳೊಂದಿಗೆ, ವೈವಿಧ್ಯಮಯ ಸ್ಟಿಕರ್‌ಗಳನ್ನು ಅಳವಡಿಸಿ ಫೋಟೋ ತೆಗೆದುಕೊಂಡು ಹಂಚಿಕೊಳ್ಳಬಹುದು. ಇದು ಜಸ್ಟ್ ಫಾರ್ ಫನ್! ಕ್ಯಾಮೆರಾ ಜಾಸ್ತಿ ಬಳಕೆ ಮಾಡಿದಷ್ಟೂ ಅದು ಬ್ಯಾಟರಿಯನ್ನು ಹೀರಿಕೊಳ್ಳುತ್ತದೆ. ಇದಕ್ಕೆ ಪ್ರಮುಖ ಕಾರಣ, ಉತ್ತಮ ಚಿತ್ರಕ್ಕಾಗಿ ಸುತ್ತಲಿನ ಬೆಳಕನ್ನು ಸ್ವಯಂಚಾಲಿತವಾಗಿ ಹೊಂದಿಸಿಕೊಳ್ಳುವುದು. ಚಾರ್ಜಿಂಗ್ ಬೇಗ ಆಗುತ್ತದೆ.
ಒಟ್ಟಾರೆ ಹೇಗಿದೆ?
ಕ್ಯಾಮೆರಾ ಪ್ರಿಯರ ಮೇಲೆ ಕಣ್ಣಿಟ್ಟಿರುವ ವಿವೋ V11 ಪ್ರೊ, ಅಂಥವರಿಗೆ ಅತ್ಯುತ್ತಮವೇ. 25,990 ರೂ. ಬೆಲೆಯಲ್ಲಿ ಹೈ-ಎಂಡ್ ಫೋನ್‌ಗಳ ವೈಶಿಷ್ಟ್ಯಗಳು ದೊರೆಯುತ್ತವೆ. ಉತ್ತಮ ಬ್ಯಾಟರಿಯೂ ಇದೆ ಮತ್ತು ಎಲ್ಲ ಅತ್ಯಾಧುನಿಕ ವೈಶಿಷ್ಟ್ಯಗಳಿವೆ.
latest android oreo mobile vivo v11 pro specification review on 27 Oct 2018
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…