iPhone SE 2022 Review: ಆಕರ್ಷಕ, ಹಗುರ, ವೇಗಗಳ ಸಮ್ಮಿಶ್ರಣ

iPhone SE Review: ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾದ ಐಫೋನ್ ಎಸ್ಇ 2022 ಆವೃತ್ತಿಯು, ಆ್ಯಪಲ್ ಹೊರತಂದಿರುವ ಅಗ್ಗದ ಐಫೋನ್ (ಎಸ್ಇ) ಸರಣಿಯ 3ನೇ ಪೀಳಿಗೆಯದು. ಪ್ರಜಾವಾಣಿಗೆ ರಿವ್ಯೂಗೆ ದೊರೆತ ಐಫೋನ್ ಎಸ್ಇ 2022 ಹೇಗಿದೆ? ಇಲ್ಲಿದೆ ಮಾಹಿತಿ.

ಐಫೋನ್ ಎಸ್ಇ 2022 ಮೂಲತಃ ಆಧುನಿಕತೆ ಮತ್ತು ಪಾರಂಪರಿಕ ಶೈಲಿಗಳ ಮಿಶ್ರಣದಂತಿದೆ. ಯಾಕೆಂದರೆ, ಇದರಲ್ಲಿ ಹೋಂ ಬಟನ್ ಇದೆ ಮತ್ತು ಅದರಲ್ಲಿ ಟಚ್ ಐಡಿ ಫಿಂಗರ್ ಪ್ರಿಂಟ್ ಸೆನ್ಸರ್ ಇದೆ. ಆದರೆ ಐಫೋನ್ 13 ಸರಣಿಯಲ್ಲಿರುವ ಅತ್ಯಾಧುನಿಕ ಪ್ರೊಸೆಸರ್ ಕೂಡ ಇದೆ.

ವಿನ್ಯಾಸ
2017ಕ್ಕಿಂತ ಹಿಂದಿನ ಐಫೋನ್ ಅಥವಾ ಐಫೋನ್ ಎಸ್ಇ 2ನೇ ಪೀಳಿಗೆ ನೋಡಿದವರಿಗೆ ಐಫೋನ್ ಎಸ್ಇ 2022 ಮಾಡೆಲ್ ಇಷ್ಟವಾಗಬಹುದು. ಯಾಕೆಂದರೆ, ಗಟ್ಟಿ ಮುಟ್ಟಾಗಿದೆ, ಅಂಚುಗಳು ವೃತ್ತಾಕಾರದಲ್ಲಿವೆ, ಸ್ಕ್ರೀನ್ ಮತ್ತು ಹಿಂಭಾಗದ ಕವಚದಲ್ಲಿ ಗೊರಿಲ್ಲಾ ಗ್ಲಾಸ್ 5 ಇರುವುದರಿಂದ ನೋಡುವುದಕ್ಕೂ ಆಕರ್ಷಕವಾಗಿದೆ. ಅಷ್ಟೇ ಅಲ್ಲ, ತೀರಾ ತೆಳುವಾಗಿದೆ ಮತ್ತು ಹಗುರವೂ ಇದೆ. ಸುತ್ತ ಲೋಹದ ಚೌಕಟ್ಟು ಇದ್ದರೆ, ಡಿಸ್‌ಪ್ಲೇ ಮೇಲೆ ಅತಿಯಾಯಿತು ಎಂದು ಹೇಳಬಹುದಾದ ಬೆಝೆಲ್ (ಖಾಲಿ ಜಾಗ) ಇರುವುದು ಹಳೆಯ ಐಫೋನನ್ನು ಹೋಲುತ್ತದೆ. ಐಒಎಸ್ 15.4 ಕಾರ್ಯಾಚರಣೆ ವ್ಯವಸ್ಥೆ, 256 ಜಿಬಿ ಸಂಗ್ರಹಣಾ ಸಾಮರ್ಥ್ಯ ಇದರಲ್ಲಿದೆ. 4.7 ಇಂಚು ಎಲ್‌ಸಿಡಿ ಡಿಸ್‌ಪ್ಲೇ ಇದ್ದು, ಬೆಝೆಲ್ ಹೆಚ್ಚಿರುವುದರಿಂದ, ಚಿತ್ರ ಅಥವಾ ವಿಡಿಯೊ ದೊಡ್ಡದಾಗಿ ನೋಡುವುದು ಸಾಧ್ಯವಿಲ್ಲ. ಅದೇ ರೀತಿ, ಫೇಸ್‌‌ಬುಕ್, ಟ್ವಿಟರ್ ಅಥವಾ ಕಾಲ್ ಆಫ್ ಡ್ಯೂಟಿಯಂತಹಾ ಗೇಮ್‌ಗಳಿಗೆ ದೊಡ್ಡ ಸ್ಕ್ರೀನ್ ಇದ್ದರೆ ಸೂಕ್ತ ಎಂಬ ಭಾವನೆ ಬಂತು.

ಕ್ಯಾಮೆರಾ, ಬ್ಯಾಟರಿ
ಈಗಿನ ಕಾಲದಲ್ಲಿ ಮೂರು-ನಾಲ್ಕು ಲೆನ್ಸ್ ಇರುವ ಕ್ಯಾಮೆರಾ ಸೆಟಪ್‌ಗಳು ಹೆಚ್ಚಿನ ಸ್ಮಾರ್ಟ್ ಫೋನ್‌ಗಳಲ್ಲಿ ಸಾಮಾನ್ಯ. ಆದರೆ ಐಫೋನ್ ಎಸ್ಇ 2022ರಲ್ಲಿರುವುದು ಒಂದೇ ಕ್ಯಾಮೆರಾ ಲೆನ್ಸ್. 12 ಮೆಗಾಪಿಕ್ಸೆಲ್ ಸಾಮರ್ಥ್ಯದ ಈ ಕ್ಯಾಮೆರಾ ಸೆನ್ಸರ್ ಮೂಲಕ ಅತ್ಯುತ್ತಮ ಫೊಟೊಗಳನ್ನು ಮತ್ತು 4ಕೆ ವಿಡಿಯೊಗಳನ್ನು ಕೂಡ ಸೆರೆಹಿಡಿಯಬಹುದಾಗಿದೆ. ಮೂರ್ನಾಲ್ಕು ಸೆನ್ಸರ್‌ಗಳಿರುವ ಆಂಡ್ರಾಯ್ಡ್ ಫೋನ್‌ಗಳಿಗಿಂತಲೂ, ಅಂದರೆ ಟೆಲಿಫೊಟೊ ಅಥವಾ ಅಲ್ಟ್ರಾವೈಡ್ ಲೆನ್ಸ್‌ಗಳಿಲ್ಲದೆಯೂ ಉತ್ತಮವಾಗಿ ಫೊಟೊಗಳು ಮೂಡಿಬರುತ್ತವೆ. ಆಪ್ಟಿಕಲ್ ಝೂಮ್ ಇದೆ. ಪ್ರತ್ಯೇಕವಾದ ನೈಟ್ ಮೋಡ್ ಇಲ್ಲದಿರುವುದರಿಂದ ರಾತ್ರಿಯ ಫೊಟೊಗಳಲ್ಲಿ ಸ್ವಲ್ಪ ಮಸುಕು ಕಾಣಿಸುತ್ತದೆ. ಆದರೆ, ಉತ್ತಮ ಬೆಳಕಿರುವ ಪ್ರದೇಶಗಳಲ್ಲಿ ಒಳ್ಳೆಯ ಫೊಟೊ ಸೆರೆಯಾಗುತ್ತದೆ. ಇದರ ಪೋರ್ಟ್ರೇಟ್ ಮೋಡ್‌ನಲ್ಲಿ ಹಲವು ಆಯ್ಕೆಗಳಿದ್ದು, ಸ್ಟೇಜ್ ಲೈಟ್ ಆಯ್ಕೆ ಮಾಡಿದರೆ, ಕಪ್ಪು-ಬಿಳುಪಿನ ಪೋರ್ಟ್ರೇಟ್ ಫೊಟೊಗಳು ಸುಂದರವಾಗಿ ಮೂಡಿಬರುತ್ತವೆ.

ಮುಂಭಾಗದಲ್ಲಿ 7 ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾ ಇದ್ದು, ಬೆಳಕಿರುವೆಡೆ ಅದು ಕೂಡ ಉತ್ತಮ ಚಿತ್ರಗಳನ್ನು, ಸೆಲ್ಫೀಗಳನ್ನು ಸೆರೆಹಿಡಿಯುತ್ತದೆ. ಪೋರ್ಟ್ರೇಟ್ ಮೋಡ್ (ಹಿನ್ನೆಲೆ ಮಸುಕಾಗಿರುವ) ಫೊಟೊಗಳಂತೂ ಅತ್ಯುತ್ತಮ ಎಂದು ಹೇಳಬಹುದು.

2018 mAh ಬ್ಯಾಟರಿ ಸಾಮರ್ಥ್ಯವಿದ್ದು, ಅತ್ಯಾಧುನಿಕ ಚಿಪ್ ಸೆಟ್ ಮತ್ತು ಇತರ ಹಾರ್ಡ್‌ವೇರ್‌ಗಳಿಂದಾಗಿ ಚಾರ್ಜ್ ಇಡೀ ದಿನದ ಕಾರ್ಯಾಚರಣೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ತೀರಾ ಕಡಿಮೆ ಎಂದರೆ ಕರೆ, ವಾಟ್ಸ್ಆ್ಯಪ್ ಮಾತ್ರ ಬಳಸಿದರೆ ಒಂದುವರೆ ದಿನ ಬರುತ್ತದೆ. 20W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಪೂರ್ತಿ ಚಾರ್ಜ್ ಆಗಲು ಸುಮಾರು ಒಂದು ಗಂಟೆ ಸಾಕಾಗುತ್ತದೆ.

ಕಾರ್ಯಾಚರಣೆ ಹೇಗಿದೆ
ಎ15 ಬಯೋನಿಕ್ ಸಿಪಿಯು ಜೊತೆಗೆ 4-ಕೋರ್ ಜಿಪಿಯು, 16-ಕೋರ್ ನ್ಯೂರಲ್ ಎಂಜಿನ್ ಮತ್ತು 4ಜಿಬಿ RAM – ಇವುಗಳ ಸಮಾಗಮದಿಂದ ಫೋನ್‌ನಲ್ಲಿ ವೆಬ್ ಅಥವಾ ಬೇರಾವುದೇ ಆ್ಯಪ್‌ಗಳಲ್ಲಿ ಜಾಲಾಡುವುದು ತೀರಾ ಸುಲಲಿತವಾಗುತ್ತದೆ. 5ಜಿ ಕೂಡ ಬೆಂಬಲವಿದೆ. ಎಡಕ್ಕೆ ಸ್ವೈಪ್ ಮಾಡಿದರೆ ವಿಜೆಟ್‌ಗಳು, ಬಲಕ್ಕೆ ಸ್ವೈಪ್ ಮಾಡಿದರೆ ಆ್ಯಪ್‌ಗಳ ಲೈಬ್ರರಿ, ಕೆಳಗಿನಿಂದ ಮೇಲಕ್ಕೆ ಸ್ವೈಪ್ ಮಾಡಿದರೆ ಶಾರ್ಟ್ ಕಟ್‌ಗಳಿರುವ ಕಂಟ್ರೋಲ್ ಸೆಂಟರ್ – ಹಳೆಯ ಐಫೋನ್‌ನಂತೆಯೇ ಇವೆ. ಹೊಸ ಐಫೋನ್‌ನಲ್ಲಿ ಕಂಟ್ರೋಲ್ ಸೆಂಟರ್‌ಗೆ ಹೋಗಬೇಕಿದ್ದರೆ, ಸ್ಕ್ರೀನ್ ಬಲ ಮೇಲ್ಭಾಗದಿಂದ ಕೆಳಕ್ಕೆ ಸ್ವೈಪ್ ಮಾಡಬೇಕಾಗುತ್ತದೆ.

ವಿಡಿಯೊ ಪ್ಲೇ, ಹೆಚ್ಚು ತೂಕದ ಗೇಮ್‌ಗಳನ್ನು ಆಡುವುದಕ್ಕಾಗಲೀ ಅಥವಾ ವೆಬ್ ಪುಟಗಳ ಬ್ರೌಸಿಂಗ್‌ಗಾಗಲೀ ಯಾವುದೇ ರೀತಿಯಲ್ಲೂ ಸಮಸ್ಯೆಯಾಗಲಿಲ್ಲ. ಇದರಲ್ಲಿರುವ ಸ್ಕ್ಯಾನ್ ಟೆಕ್ಸ್ಟ್ ಎಂಬ ವೈಶಿಷ್ಟ್ಯವು ನಾವು ಬರೆದಿಟ್ಟಿರುವುದನ್ನು ಸ್ಕ್ಯಾನ್ ಮಾಡಿದರೆ, ಸ್ವಯಂಚಾಲಿತವಾಗಿ ದಾಖಲಿಸಿಕೊಂಡು ಪಟ್ಟಿಯ ರೂಪದಲ್ಲಿ ನೋಟ್ಸ್ ಆ್ಯಪ್‌ನಲ್ಲಿ ನಮೂದಿಸುತ್ತದೆ.

ಇದರಲ್ಲಿ ಲೈಟ್ನಿಂಗ್ ಚಾರ್ಜರ್ ಪೋರ್ಟ್ ಇದ್ದು, ಬಾಕ್ಸ್‌ನಲ್ಲಿ ಟೈಪ್ ಸಿ ಮೂಲಕ ಲೈಟ್ನಿಂಗ್ ಚಾರ್ಜಿಂಗ್ ಪೋರ್ಟ್‌ಗೆ ಸಂಪರ್ಕಿಸುವ ಕೇಬಲ್ ಮಾತ್ರ ನೀಡಲಾಗುತ್ತದೆ. ಚಾರ್ಜರ್ (ಅಡಾಪ್ಟರ್) ನಾವೇ ಖರೀದಿಸಬೇಕಾಗುತ್ತದೆ. ಕೆಂಪು, ಬಿಳಿ ಹಾಗೂ ಕಪ್ಪು – ಹೀಗೆ ಮೂರು ಬಣ್ಣಗಳಲ್ಲಿ ಲಭ್ಯ. ಐಪಿ 67 ಶ್ರೇಣಿಯ ಜಲನಿರೋಧಕತೆ ಮತ್ತು ದೂಳು ನಿರೋಧಕತೆಯಿದೆ. 64GB, 128GB ಹಾಗೂ 256GB ಮೂರು ಆವೃತ್ತಿಗಳಿವೆ. ಬೆಲೆ ₹43,900ರಿಂದ ಪ್ರಾರಂಭ.

ಒಟ್ಟಾರೆ ಹೇಗಿದೆ?
ತೆಳು, ಹಗುರ, ಹೊಳೆಯುವ ಗಾಜಿನ ವಿನ್ಯಾಸದ ಪುಟ್ಟ ಐಫೋನ್ ಎಸ್ಇ ಮಾಡೆಲ್‌ನ ಕ್ಯಾಮೆರಾ ಗುಣಮಟ್ಟ ಚೆನ್ನಾಗಿದೆ. ಕಾರ್ಯಾಚರಣೆಯೂ ಸುಲಲಿತವಾಗಿದೆ. ಡಿಸ್‌ಪ್ಲೇ ಚಿಕ್ಕದಾದರೂ ಪರವಾಗಿಲ್ಲ ಎಂದುಕೊಳ್ಳುವವರಿಗೆ ಮತ್ತು ಐಫೋನ್‌ಗಳಲ್ಲೇ ಅತ್ಯಂತ ಕಡಿಮೆ ದರದ ಫೋನ್ ಇದು. ಪುಟ್ಟದಾಗಿರುವುದರಿಂದ ಕೈಯೊಳಗೆ ಚೆನ್ನಾಗಿ ಕೂರುತ್ತದೆ.

My Gadget Review Article Published in Prajavani on 06 April 2022

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

2 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

2 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

3 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

4 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

9 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

9 months ago