ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ – ಎಐ) ಎಂಬುದು ಮನುಷ್ಯನಿಗೆ ಸವಾಲೊಡ್ಡುತ್ತಲೇ ಇದೆ. ತಂತ್ರಜ್ಞಾನದ ಪರಾಕಾಷ್ಠೆಯಿದು. ಒಂದು ಯಂತ್ರಕ್ಕೆ ನಾವು ಎಲ್ಲವನ್ನೂ ಒಮ್ಮೆ ಕಲಿಸಿಬಿಟ್ಟರೆ ಸಾಕು, ಅದು ಹೆಚ್ಚಿನದನ್ನು ಕಲಿತುಕೊಂಡು ನಮ್ಮನ್ನೇ ಮೂಲೆಗುಂಪು ಮಾಡಬಲ್ಲಷ್ಟು ಸಾಮರ್ಥ್ಯ ಹೊಂದಿರುತ್ತದೆ. ತಂತ್ರಜ್ಞಾನದ ಅಪಾಯವೇ ಇದು. ಅತಿಯಾದ ಅವಲಂಬನೆ ಆಗಿಬಿಟ್ಟರೆ, ಮನುಷ್ಯನಿಗೆ ಮಾತ್ರವೇ ಇರುವ ಅತ್ಯಂತ ಅಪೂರ್ವ ಬುದ್ಧಿಮತ್ತೆಯ ಪ್ರಗತಿ ಕುಂಠಿತವಾಗಬಹುದು. ಉದಾಹರಣೆಗೆ, ಯಾವುದಾದರೂ ಸ್ಪೆಲ್ಲಿಂಗ್ ಗೊತ್ತಿಲ್ಲವೋ ಅಥವಾ ನಾಲ್ಕೈದ್ಲಿ ಎಷ್ಟೆಂಬ ಮಗ್ಗಿ ಗೊತ್ತಿಲ್ಲವೋ? ಗೂಗಲ್‌ನಲ್ಲಿ ಹಾಕಿಬಿಟ್ಟರೆ ತಕ್ಷಣ ಉತ್ತರ ಸಿಗುತ್ತದೆ. ನಮ್ಮ ಮೆದುಳಿಗೆ ಕೆಲಸವೇ ಇರುವುದಿಲ್ಲ! ಯಾವುದೇ ಅಂಗ ಬಳಕೆ ಕಡಿಮಯಾದಷ್ಟೂ ಅವನತಿ ಹೊಂದುವ ಮಾನವ ವಿಕಾಸದ ನಿಯಮ ನೆನಪಿಸಿಕೊಳ್ಳಬೇಕಾಗಿದೆ.
ಈ ತಂತ್ರಜ್ಞಾನದ ಪ್ರಗತಿಯ ಮತ್ತೊಂದು ಮಗ್ಗುಲನ್ನು ನೋಡೋಣ. ಗೂಗಲ್ ಎಂಬ ಸರ್ಚ್ ಎಂಜಿನ್‌ನಲ್ಲಿ ಹುಡುಕಾಟ ನಡೆಸಬೇಕಿದ್ದರೆ ನಾವು ಟೈಪ್ ಮಾಡಬೇಕಾಗುತ್ತದೆ. ಅದು ಮತ್ತಷ್ಟು ಸರಳೀಕೃತಗೊಂಡು, ಈಗ ನಾವು ಗೂಗಲ್‌ಗೆ ಹೇಳಿದರೆ ಸಾಕು, ಧ್ವನಿಯನ್ನು ಕೇಳಿಕೊಂಡು ಹುಡುಕಿ ಕೊಡುತ್ತದೆ. ಈಗ ಮುಂದಿನ ರೂಪ. ಒಂದು ವಸ್ತುವನ್ನು ನಾವು ತೋರಿಸಿದರೆ ಸಾಕು, ಅದನ್ನು ಗುರುತಿಸಿ, ಅದರ ಕುರಿತು ಪೂರ್ಣ ವಿವರವನ್ನು ಮುಂದಿಡುತ್ತದೆ! ಈ ತಂತ್ರಜ್ಞಾನ ಈಗ ಸ್ಮಾರ್ಟ್ ಮೊಬೈಲ್ ಫೋನುಗಳಲ್ಲಿ, ವಿಶೇಷವಾಗಿ ಆಂಡ್ರಾಯ್ಡ್ ವಿನೂತನ ಆವೃತ್ತಿಯ ಫೋನುಗಳಲ್ಲಿ ಸದ್ದು ಮಾಡಲಾರಂಭಿಸಿದೆ. ಅದನ್ನು ವಿಜಯ ಕರ್ನಾಟಕ ಓದುಗರಿಗೆಲ್ಲ ಪರಿಚಯಿಸೋಣ ಎಂಬುದು ಈ ಬಾರಿಯ ಅಂಕಣದ ಉದ್ದೇಶ. ಇದರ ಬಳಕೆ ಮತ್ತು ಪ್ರಯೋಜನವೇನು, ಬನ್ನಿ ತಿಳಿದುಕೊಳ್ಳೋಣ.
ಇದು ಗೂಗಲ್ ಲೆನ್ಸ್
ತಂತ್ರಜ್ಞಾನ ದಿಗ್ಗಜ ಗೂಗಲ್ ಅಭಿವೃದ್ಧಿಪಡಿಸಿರುವ ಗೂಗಲ್ ಲೆನ್ಸ್ ಎಂಬ ಆ್ಯಪ್ ಇದುವರೆಗೆ ಗೂಗಲ್‌ನದ್ದೇ ಆದ ಅತ್ಯಾಧುನಿಕ ‘ಪಿಕ್ಸೆಲ್’ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗಷ್ಟೇ ಲಭ್ಯವಿತ್ತು. ಆದರೆ, ಇತ್ತೀಚೆಗೆ ಇದನ್ನು ಬೇರೆ ಫೋನುಗಳಿಗೂ ಲಭ್ಯವಾಗುವಂತೆ ಮಾಡಲಾಗಿದೆ.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ಅತ್ಯುತ್ತಮ ಉದಾಹರಣೆಯಾಗಿರುವ ಇದೊಂದು ಅಂತರದೃಷ್ಟಿ ಅಥವಾ ಒಳಗಣ್ಣು ಇದ್ದಂತೆ ಅಂತನೂ ಹೇಳಬಹುದೇನೋ. ಯಾಕೆಂದರೆ, ಈ ಲೆನ್ಸ್ (ಕಣ್ಣು) ಮೂಲಕ ಯಾವುದಾದರೂ ವಸ್ತುವನ್ನು ನೋಡಿದರೆ ಅದರ ವಿವರ ಪ್ರವರವನ್ನೆಲ್ಲ ತಿಳಿಸಿಬಿಡುತ್ತದೆ, ಗೂಗಲ್‌ನಲ್ಲಿ ಹುಡುಕುವ ಮೂಲಕ. ಉದಾಹರಣೆಗೆ, ಒಂದು ಗಾಜಿನ ಲೋಟದಲ್ಲಿ ಪಾನೀಯ ತಂದಿಡುತ್ತೀರಿ ಅಂದುಕೊಳ್ಳೋಣ. ಗೂಗಲ್ ಲೆನ್ಸ್ ಕ್ಯಾಮೆರಾದ ಮೂಲಕ ಇದನ್ನು ನೋಡಿದರೆ, ಅದರಲ್ಲಿರುವುದು ಮದ್ಯವೋ, ನೀರೋ ಅಂತ ಈ ವಂಡರ್ ಕಣ್ಣು ತಕ್ಷಣ ಕಂಡುಹಿಡಿದುಬಿಡುತ್ತದೆ! ಅದೇ ರೀತಿ, ಯಾವುದಾದರೂ ಪುಸ್ತಕದ ಪುಟವನ್ನು ಈ ಗೂಗಲ್ ಲೆನ್ಸ್ ಆ್ಯಪ್ ಮೂಲಕ ಸ್ಕ್ಯಾನ್ ಮಾಡಿ ನೋಡಿ, ಅದರಲ್ಲಿ ಎದ್ದು ಕಾಣಬಲ್ಲ ಮತ್ತು ಲೋಗೋ, ಯುಆರ್‌ಎಲ್, ಇಂಗ್ಲಿಷ್ ಪಠ್ಯ ಅಷ್ಟೇ ಅಲ್ಲದೆ ಕನ್ನಡದ ಅಕ್ಷರಗಳನ್ನು ಕೂಡ ಗೂಗಲ್ ಲೆನ್ಸ್ ಗುರುತಿಸುತ್ತದೆ! ಚಿತ್ರ ನೋಡಿದರೆ ತಿಳಿಯುತ್ತದೆ, ಸರೋಜಾದೇವಿ ಅಥವಾ ಅಂಬರೀಷ್ ಹೆಸರನ್ನು ಕನ್ನಡದಲ್ಲಿ ಓದಿ, ಅರ್ಥ ಮಾಡಿಕೊಂಡು, ಇಂಗ್ಲಿಷಿನಲ್ಲಿ ಅವರ ಕುರಿತು ಮಾಹಿತಿ ಮುಂದಿಡಲು ಗೂಗಲ್ ಸಿದ್ಧವಾಗಿದೆ!
ಹೇಗೆ ಬಳಸುವುದು
ಗೂಗಲ್ ಲೆನ್ಸ್ ಎಂಬುದು ಗೂಗಲ್ ಗಾಗಲ್ಸ್‌ನ (ಕನ್ನಡಕ ತಂತ್ರಜ್ಞಾನ) ಸುಧಾರಿತ ಆವೃತ್ತಿ. ಗಮನಿಸಬೇಕಾದ ಅಂಶವೆಂದರೆ, ಇದನ್ನು ಕೆಲವೊಂದು ಆಂಡ್ರಾಯ್ಡ್ ಸ್ಮಾರ್ಟ್ ಫೋನ್‌ಗಳು ಮಾತ್ರ ಬೆಂಬಲಿಸುತ್ತವೆ. ಪ್ಲೇ ಸ್ಟೋರ್‌ನಿಂದ ಗೂಗಲ್ ಲೆನ್ಸ್ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡು, ಅದನ್ನು ಓಪನ್ ಮಾಡಿ, ಫೋನ್ ಕ್ಯಾಮೆರಾವನ್ನು ಯಾವುದಾದರೂ ಪಠ್ಯ ಅಥವಾ ವಸ್ತುವಿನ ಮುಂದೆ ಹಿಡಿದು ನೋಡಿದರಾಯಿತು.
ಏನೆಲ್ಲಾ ಮಾಡಬಹುದು
ನೀವೊಬ್ಬ ಮೊಬೈಲ್ ಛಾಯಾಗ್ರಹಣ ಪ್ರಿಯಯಾಗಿದ್ದರೆ, ಒಂದು ಹೂವನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯಬೇಕೆಂದುಕೊಳ್ಳಿ. ಅದನ್ನು ಗೂಗಲ್ ಲೆನ್ಸ್ ಮೂಲಕ ಸ್ಕ್ಯಾನ್ ಮಾಡಿ, ಸ್ಕ್ರೀನ್ ಮೇಲೆ ಟಚ್ ಮಾಡಿದರೆ ಸಾಕು, ಅದು ಯಾವ ಹೂವು, ಅದರ ವೈಜ್ಞಾನಿಕ ಹೆಸರೇನು, ಎಲ್ಲಿಯ ಬೆಳೆ… ಹೀಗೆ ಎಲ್ಲ ಮಾಹಿತಿಯು ಗೂಗಲ್ ಸರ್ಚ್ ಎಂಜಿನ್ ಮೂಲಕ ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೆ ಕಾಣಿಸತೊಡಗುತ್ತದೆ. ಪ್ರಾಣಿ, ಪಕ್ಷಿ ಪ್ರಿಯರಾದರೂ ಅಷ್ಟೇ. ನಿರ್ದಿಷ್ಟ ಪ್ರಾಣಿ ಅಥವಾ ಪಕ್ಷಿಯನ್ನು ಗೂಗಲ್ ಲೆನ್ಸ್ ಮೂಲಕ ನೋಡಿ ಸ್ಕ್ರೀನ್ ಸ್ಪರ್ಶಿಸಿದರೆ, ಅದರ ಕುರಿತು ಪ್ರವರ ಲಭ್ಯ.
ಅದೇ ರೀತಿ, ಪತ್ರಿಕೆ ಅಥವಾ ಬೇರೆ ಪುಸ್ತಕದಲ್ಲಿ ಪ್ರಕಟವಾದ ಚಿತ್ರಗಳನ್ನೋ, ಪಠ್ಯವನ್ನೋ ತೋರಿಸಿದರೆ ಸಾಕು. ನಿಮಗೆ ಬೇಕಾದ ಜಾಗವನ್ನು ಸ್ಕ್ರೀನ್‌ನಲ್ಲಿ ಗೂಗಲ್ ಲೆನ್ಸ್ ಮೂಲಕ ಸ್ಪರ್ಶಿಸಿ. ಅದಕ್ಕೆ ಸಂಬಂಧಿಸಿದ ಮಾಹಿತಿ ನಿಮ್ಮ ಮುಂದಿರುತ್ತದೆ.
ಪತ್ರಿಕೆ ಅಥವಾ ಕಾಗದದಲ್ಲಿ ಯಾರದ್ದಾದರೂ ಫೋನ್ ನಂಬರ್ ಇರುತ್ತದೆ. ಅದನ್ನು ಟೈಪ್ ಮಾಡಲು ಉದಾಸೀನ. ಗೂಗಲ್ ಲೆನ್ಸ್ ಇದೆಯಲ್ಲ, ಹಿಡಿಯಿರಿ. ಫೋನ್ ನಂಬರ್ ಇರುವ ಜಾಗದಲ್ಲಿ ಸ್ಪರ್ಶಿಸಿ, ತಕ್ಷಣವೇ ಲೆನ್ಸ್ ಅದನ್ನು ಸೆರೆಹಿಡಿಯುತ್ತದೆ ಮತ್ತು ಸ್ಕ್ರೀನ್ ಮೇಲೆ ಅಲ್ಲಿಂದಲೇ ಸ್ಪರ್ಶಿಸಿದ ಕೂಡಲೇ ಡಯಲ್ ಮಾಡುವ ಆಯ್ಕೆ ಕಾಣಿಸುತ್ತದೆ!
ಹೊರಗೆಲ್ಲೋ ಹೋಗಿರುತ್ತೀರಿ, ಹೋಟೆಲ್‌ಗೆ ಹೋಗಬೇಕೆನ್ನಿಸುತ್ತದೆ. ಹೋಟೆಲ್‌ನ ನಾಮಫಲಕಕ್ಕೆ ಅಥವಾ ಕರಪತ್ರಕ್ಕೆ ಗೂಗಲ್ ಲೆನ್ಸ್ ಹಿಡಿಯಿರಿ. ಆ ಹೋಟೆಲ್‌ಗೆ ಹೋಗುವ ದಾರಿ, ಹೋದವರು ಬರೆದ ಆನ್‌ಲೈನ್ ವಿಮರ್ಶೆಯಲ್ಲಿ ಎಷ್ಟು ಸ್ಟಾರ್ ರೇಟಿಂಗ್ ನೀಡಿದ್ದಾರೆ, ಮೆನು ಏನೆಲ್ಲಾ ಇದೆ, ಕಾಯಬೇಕಾಗುತ್ತದೆಯೇ, ಸಸ್ಯಾಹಾರ ಅಥವಾ ಮಾಂಸಾಹಾರ ಲಭ್ಯವೇ ಎಂಬೆಲ್ಲ ಮಾಹಿತಿ ತಕ್ಷಣವೇ ನಿಮ್ಮ ಮೊಬೈಲ್ ಪರದೆಯ ಮೇಲಿರುತ್ತದೆ. ಜತೆಗೆ ಸಮೀಪದ ಬೇರೆ ಹೋಟೆಲ್‌ಗಳ ವಿವರಗಳೂ ಒಂದು ಕ್ಲಿಕ್ ಅಂತರದಲ್ಲಿ ಗೋಚರಿಸುತ್ತವೆ.
ಕಾಗದದ ಮುಂದೆ ಲೆನ್ಸ್ ಹಿಡಿದಾಗ, ಅದರಲ್ಲಿರುವ ನಿರ್ದಿಷ್ಟ ಪಠ್ಯ ಭಾಗವನ್ನು ಸೆಲೆಕ್ಟ್ ಮಾಡಿದರೆ ಕಾಪಿ ಮಾಡಿಕೊಳ್ಳುವ ಆಯ್ಕೆಯೊಂದಿಗೆ, ಅದರ ಕುರಿತು ಗೂಗಲ್ ಸರ್ಚ್ ಎಂಜಿನ್‌ನಲ್ಲಿ ಹುಡುಕಿ ಎಲ್ಲ ಮಾಹಿತಿಯೂ ನಿಮ್ಮ ಮುಂದೆ ಲಭ್ಯವಾಗುತ್ತದೆ. ಇದು ಗೂಗಲ್ ಸರ್ಚ್ ಸಾಧ್ಯತೆಯನ್ನು ಮತ್ತೊಂದು ಮಟ್ಟಕ್ಕೆ ಏರಿಸಿದಂತೆ.
ಮಾಹಿತಿ@ತಂತ್ರಜ್ಞಾನ ವಿಜಯ ಕರ್ನಾಟಕ ಅಂಕಣ for 25 ಜೂನ್ 2018 by ಅವಿನಾಶ್ ಬಿ.
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು