ಮೆಮೊರಿ ಕಾರ್ಡ್‌ನಿಂದ ಡಿಲೀಟ್ ಆದ ಫೈಲುಗಳನ್ನು ರಿಕವರ್ ಮಾಡುವುದು ಹೇಗೆ?

ಡಿಜಿಟಲ್ ತಂತ್ರಜ್ಞಾನ ಕ್ರಾಂತಿಯೊಂದಿಗೆ ಫೋಟೋಗಳು, ವೀಡಿಯೋಗಳು ಹಾಗೂ ಇತರ ಡಿಜಿಟಲ್ ಫೈಲುಗಳ ಧಾವಂತವೂ, ಅನಿವಾರ್ಯತೆಯೂ ಹೆಚ್ಚಾಗುತ್ತಿದೆ. ಪುಟ್ಟ ಸಾಧನದಲ್ಲಿ ಜಿಬಿಗಟ್ಟಲೆ ಫೈಲುಗಳನ್ನು ತುಂಬಿಡುವುದು ಅನುಕೂಲಕರವೂ ಹೌದು. ಇದಕ್ಕೆ ನೆರವಾಗುವುದು ಮೆಮೊರಿ ಕಾರ್ಡ್‌ಗಳೆಂದು ಸಾಮಾನ್ಯವಾಗಿ ಕರೆಯಲಾಗುವ ಪುಟ್ಟದಾಗಿರುವ ಸ್ಟೋರೇಜ್ ಸಾಧನಗಳು. ಅದು ಎಸ್‌ಡಿ ಕಾರ್ಡ್, ಎಸ್‌ಎಚ್‌ಡಿ, ಎಂಎಂಸಿ ಕಾರ್ಡ್, ಮೈಕ್ರೋ ಎಸ್‌ಡಿ ಕಾರ್ಡ್ ಮುಂತಾಗಿ ವಿಭಿನ್ನ ವಿಧಗಳಲ್ಲಿ ಲಭ್ಯ ಇರುತ್ತವೆ. ಆದರೆ ಅದರ ಬಳಕೆಯಲ್ಲಿ ನಾವು ತೋರುವ ಅಸಡ್ಡೆಯಿಂದಾಗಿಯೋ, ವೈರಸ್ ದಾಳಿಯಿಂದಾಗಿಯೋ ಅಥವಾ ಬೇರೆ ಯಾವುದಾದರೂ ಸಮಸ್ಯೆಯಿಂದಾಗಿಯೋ ಈ ಮೆಮೊರಿ ಕಾರ್ಡ್‌ಗಳು ಹಾನಿಗೀಡಾಗುತ್ತವೆ (ತಾಂತ್ರಿಕ ಭಾಷೆಯಲ್ಲಿ ಹೇಳುವುದಾದರೆ ಕರಪ್ಟ್ ಆಗುತ್ತವೆ). ಯುಎಸ್‌ಬಿ ಡ್ರೈವ್ ಅಥವಾ ಪೆನ್ ಡ್ರೈವ್ ಎಂಬ ಇತರ ಸಾಧನಗಳಲ್ಲೂ ಈ ಸಮಸ್ಯೆ ತಪ್ಪಿದ್ದಲ್ಲ. ಹೀಗಾದಾಗ, ನಾವು ಸಂಗ್ರಹಿಸಿಟ್ಟುಕೊಂಡ ಅಮೂಲ್ಯ ಫೋಟೋಗಳು, ವೀಡಿಯೋಗಳು, ಹಾಡುಗಳು ಮುಂತಾದ ಫೈಲುಗಳನ್ನು ಮರಳಿ ಪಡೆಯುವುದು ಹೇಗೆ ಅಂತ ಆತಂಕದಿಂದಲೇ ನನ್ನಲ್ಲಿ ಫೋನ್ ಮಾಡಿ ಕೇಳಿದವರು ಸಾಕಷ್ಟು ಮಂದಿಯಿದ್ದಾರೆ.

ಕಂಪ್ಯೂಟರ್‌ನಲ್ಲಾದರೆ ಹಾರ್ಡ್ ಡಿಸ್ಕ್ ಅಂತ ಕರೆಯಲಾಗುವ ಸ್ಟೋರೇಜ್ ಸಾಧನವೂ ಇದೇ ರೀತಿ ಕರಪ್ಟ್ ಆದಾಗ, ಕಳೆದು ಹೋದ ಫೈಲುಗಳನ್ನು ರಿಕವರ್ ಮಾಡಲು ವೃತ್ತಿಪರರು ಹತ್ತಿಪ್ಪತ್ತು ಸಾವಿರ ರೂ. ಕಿತ್ತುಕೊಂಡರು ಅಂತ ದೂರಿದವರೂ ಇದ್ದಾರೆ. ಕಳೆದು ಹೋದ ಅಥವಾ ಡಿಲೀಟ್ ಆದ ಫೈಲುಗಳನ್ನು ಅಗ್ಗದ ದರದಲ್ಲಿ ಅಥವಾ ಉಚಿತವಾಗಿ ಮರಳಿ ಪಡೆಯುವುದು ಹೇಗೆ ಎಂಬ ಬಗ್ಗೆ ಒಂದಿಷ್ಟು ಮಾಹಿತಿ. ಇದಕ್ಕೆ ನಿಮಗೆ ಬೇಕಾಗಿರುವುದು ಒಂದು ಕಂಪ್ಯೂಟರ್ ಹಾಗೂ ಸಂಬಂಧಪಟ್ಟ ಒಂದು ಸಾಫ್ಟ್‌ವೇರ್. ಮೆಮೊರಿ ಕಾರ್ಡ್ ರಿಕವರಿ ಸಾಫ್ಟ್‌ವೇರ್ ಅಂತ ಗೂಗಲ್ ಮೂಲಕ ಸರ್ಚ್ ಮಾಡಿದರೆ ಸಾಕಷ್ಟು ಉಚಿತ ತಂತ್ರಾಂಶಗಳು ಸಿಗುತ್ತವೆ. ಅವುಗಳಲ್ಲಿ ವಿಶ್ವಾಸಾರ್ಹವಾದುದನ್ನಷ್ಟೇ ಒಂದಿಷ್ಟು ಅಧ್ಯಯನ ಮಾಡಿಯೇ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲಿ ನಾನು ಹೇಳಹೊರಟಿರುವುದು, ಮೆಮೊರಿ ಕಾರ್ಡ್ ಕಂಪನಿ ಟ್ರಾನ್‌ಸೆಂಡ್ ಒದಗಿಸಿರುವ Transcend Secure Digital Card Recovery ಟೂಲ್ ಬಗ್ಗೆ. ಇದರಲ್ಲಿ ಕೆಲವು ಮೆಮೊರಿ ಕಾರ್ಡ್‌ಗಳನ್ನು ತಪಾಸಣೆಗೆ ಒಳಪಡಿಸಿದ್ದೇನೆ. ಕೆಲವು ಕಾರ್ಡ್‌ಗಳಲ್ಲಿ ಶೇ.99 ಫೈಲುಗಳ ರಿಕವರಿ ಆಗಿದ್ದರೆ, ಇನ್ನು ಕೆಲವು ಆಗಿಲ್ಲ. ಇದಕ್ಕೆ ಹಲವಾರು ಕಾರಣಗಳು ಇರುತ್ತವೆ. ಆದರೆ, ನೀವು ಪ್ರಯತ್ನಿಸಿ ನೋಡಬಹುದು. ಇನ್ನುಳಿದಂತೆ Easus, ರೆಮೋ ರಿಕವರಿ ಮುಂತಾದ ವಿಶ್ವಾಸಾರ್ಹ ರಿಕವರಿ ಸಾಫ್ಟ್‌ವೇರ್‌ಗಳು ಲಭ್ಯ ಇವೆ. ಇವುಗಳ ಉಚಿತ ಆವೃತ್ತಿಯಿದೆ ಆದರೂ, ಹಣ ಪಾವತಿಸಿ ಖರೀದಿಸಬಹುದಾದ ಹೆಚ್ಚು ಆಯ್ಕೆಗಳುಳ್ಳ ಆವೃತ್ತಿಯೂ ಇದೆ. ನಿಮ್ಮ ಕಳೆದುಹೋದ ಡೇಟಾ ಎಷ್ಟು ಮುಖ್ಯ ಎಂಬುದರ ಮೇಲೆ ನೀವು ನಿರ್ಧರಿಸಿ ಮುಂದುವರಿಯಬಹುದು.

ಕೆಲವೊಮ್ಮೆ ನಮಗೆ ತಿಳಿಯದಂತೆ ಮೆಮೊರಿ ಕಾರ್ಡ್ ಕರಪ್ಟ್ ಆಗಿಬಿಡಬಹುದು ಅಥವಾ ಆಕಸ್ಮಿಕವಾಗಿ ಫೈಲನ್ನು ನಾವೇ ಡಿಲೀಟ್ ಮಾಡಿರಬಹುದು. ಮಾಲ್‌ವೇರ್ ಅಥವಾ ವೈರಸ್ ದಾಳಿಯಿಂದ ಮೆಮೊರಿ ಕಾರ್ಡ್‌ಗೆ ಹಾನಿಯಾಗಿರಬಹುದು. ಅಲ್ಲದೆ, ಎಸ್‌ಡಿ ಕಾರ್ಡ್ ಬಳಕೆಯಲ್ಲಿರುವಾಗ ಸಾಧನವನ್ನು ಸಡನ್ ಆಗಿ ಶಟ್‌ಡೌನ್ ಅಥವಾ ರೀಸ್ಟಾರ್ಟ್ ಮಾಡುವುದರಿಂದ ಅದಕ್ಕೆ ಹಾನಿಯಾಗುವ ಸಂಭವನೀಯತೆ ಇರುತ್ತದೆ. ಒಂದೇ ಫ್ಲ್ಯಾಶ್ ಡ್ರೈವ್ ಅಥವಾ ಪೆನ್ ಡ್ರೈವನ್ನು ಹಲವು ಸಾಧನಗಳಿಗೆ ಅಳವಡಿಸಿ ತೆಗೆದಾಗಲೂ ಅದಕ್ಕೆ ಹಾನಿಯಾಗುವ ಸಾಧ್ಯತೆಗಳೂ ಇವೆ.

ಏನು ಮಾಡಬೇಕು?
ಮೆಮೊರಿ ಕಾರ್ಡ್ ಕೆಲಸ ಮಾಡುತ್ತಿಲ್ಲವೆಂದಾದರೆ ಮೊದಲು ನೀವು ಗಮನಿಸಬೇಕಾದ ಎಚ್ಚರಿಕೆ ಎಂದರೆ, ಯಾವುದೇ ಕಾರಣಕ್ಕೂ ಅದರಲ್ಲಿ ಪುನಃ ಫೈಲ್ ಸೇವ್ ಮಾಡಬಾರದು. ನಂತರ ನಿಮ್ಮ ಕಂಪ್ಯೂಟರಲ್ಲಿ ರಿಕವರಿ ತಂತ್ರಾಂಶವನ್ನು ಅಳವಡಿಕೊಳ್ಳಿ. ಬಳಿಕ ಕಾರ್ಡ್ ರೀಡರ್ ಮೂಲಕ ಮೆಮೊರಿ ಕಾರ್ಡನ್ನು ಕಂಪ್ಯೂಟರಿಗೆ ಜೋಡಿಸಿ. ರಿಕವರಿ ತಂತ್ರಾಂಶವನ್ನು ರನ್ ಮಾಡಿ. ಅದು ಯಾವ ಡ್ರೈವ್ ಹುಡುಕಬೇಕು ಎಂದು ಕೇಳಿದಾಗ, ಸಂಬಂಧಿತ ಡ್ರೈವ್ ಮೇಲೆ, ಸರಿಯಾಗಿ ನೋಡಿ (ಎಚ್ಚರಿಕೆಯಿಂದ) ಕ್ಲಿಕ್ ಮಾಡಿ. ಸ್ಕ್ಯಾನ್ ಮಾಡಿ, ರಿಕವರ್ ಮಾಡಬಹುದಾದ ಫೈಲುಗಳನ್ನು ತೋರಿಸುತ್ತದೆ. ಬೇಕಾದುದನ್ನು ಆಯ್ಕೆ ಮಾಡಿಕೊಂಡು, ರಿಕವರ್ ಬಟನ್ ಒತ್ತಿಬಿಡಿ. ಅದನ್ನು ಬೇರೆಯೇ ಫೋಲ್ಡರ್‌ಗೆ ಸೇವ್ ಮಾಡುವಂತೆ ಕೇಳುತ್ತದೆ. ಕಂಪ್ಯೂಟರಿನ ‘ಸಿ’ ಡ್ರೈವ್‌ನಲ್ಲಿ ಸೇವ್ ಮಾಡಬಾರದು. ಡಿ ಅಥವಾ ಬೇರಾವುದೇ ಡ್ರೈವ್‌ನಲ್ಲಿ ಸೇವ್ ಮಾಡಿಬಿಡಿ. ರಿಕವರ್ ಆಗಲು (ಎಷ್ಟು ಜಿಬಿ ಅಥವಾ ಎಂಬಿ ಫೈಲುಗಳಿವೆ ಎಂಬುದನ್ನು ಅವಲಂಬಿಸಿ) ಸಾಕಷ್ಟು ಸಮಯ ತೆಗೆದುಕೊಳ್ಳುವುದರಿಂದ ತಾಳ್ಮೆಯಿಂದ ಕಾಯಿರಿ. ಬಹುತೇಕ ರಿಕವರಿ ತಂತ್ರಾಂಶಗಳು ಒಂದೇ ರೀತಿಯಾಗಿ ಕೆಲಸ ಮಾಡುತ್ತವೆ. ಈ ತಂತ್ರಾಂಶವು ನಮ್ಮ ಕಂಪ್ಯೂಟರಿನ ವಿಭಿನ್ನ ಡ್ರೈವ್‌ಗಳಲ್ಲಿ ಡಿಲೀಟ್ ಆದ ಫೈಲುಗಳನ್ನು ರಿಕವರ್ ಮಾಡುವುದಕ್ಕೂ ಅನುಕೂಲ ಮಾಡುತ್ತದೆ.

ಮೆಮೊರಿ ಕಾರ್ಡ್ ಕರಪ್ಟ್ ಆದರೆ ಏನು ಮಾಡಬೇಕು?
ಸಾಫ್ಟ್‌ವೇರ್ ರಿಕವರಿ ಮಾಡಿಕೊಡಲು ದುಬಾರಿ ದರ ವಿಧಿಸುವ ಸೆಂಟರ್‌ಗಳೂ ಇವೆ. ಆದರೆ ಅದಕ್ಕೆ ಮುನ್ನ, ಮೊದಲು ಬೇರೊಂದು ಕಂಪ್ಯೂಟರ್ ಅಥವಾ ಮೊಬೈಲ್ ಮುಂತಾದ ಸಾಧನಕ್ಕೆ ನಿಮ್ಮ ಮೆಮೊರಿ ಕಾರ್ಡನ್ನು ಸಂಪರ್ಕಿಸಿ ನೋಡಿ. ಕೆಲವೊಮ್ಮೆ ಅದರಲ್ಲಿ ವರ್ಕ್ ಆಗಬಹುದು. ಆಗದಿದ್ದರೆ, ಕಂಪ್ಯೂಟರ್ ಬಗ್ಗೆ ಒಂದಿಷ್ಟು ಹೆಚ್ಚು ಗೊತ್ತಿರುವ ಗೆಳೆಯರಲ್ಲಿ ಕೇಳಿ, ಡ್ರೈವರ್ ರೀಇನ್‌ಸ್ಟಾಲ್ ಮಾಡಿ ಪ್ರಯತ್ನಿಸಬಹುದು. ಕೊನೆಯ ಪ್ರಯತ್ನವಾಗಿ ರೀಕವರಿ ಸಾಫ್ಟ್‌ವೇರ್ ಬಳಸಿ.

ಮೆಮೊರಿ ಕಾರ್ಡ್ ಹಾಳಾಗದಂತೆ ಮುನ್ನೆಚ್ಚರಿಕೆ
* ಯಾವುದೇ ಸಾಧನ ಆನ್ ಅಥವಾ ಆಫ್ ಆಗುತ್ತಿರುವಾಗ ಮೆಮೊರಿ ಕಾರ್ಡ್ ಹಾಕಬೇಡಿ ಅಥವಾ ತೆಗೆಯಬೇಡಿ.
* ಸೇವ್ ಆಗುತ್ತಿರುವಾಗ ಅಥವಾ ಫೋಟೋ/ವೀಡಿಯೋ ನೋಡುತ್ತಿರುವಾಗ ಅಥವಾ ಬಳಕೆಯಲ್ಲಿರುವಾಗ ಮೆಮೊರಿ ಕಾರ್ಡ್ ತೆಗೆಯಬೇಡಿ.
* ಬ್ಯಾಟರಿ ತೀರಾ ಕಡಿಮೆ ಇರುವಾಗ ಮೊಬೈಲ್ ಕ್ಯಾಮೆರಾದಿಂದ ಫೋಟೋ ತೆಗೆಯಬೇಡಿ.
* ಕ್ಯಾಮೆರಾ ಆನ್ ಆಗಿರುವಾಗ ಮೆಮೊರಿ ಕಾರ್ಡ್ ಬದಲಾಯಿಸಬೇಡಿ.
* ಒಳ್ಳೆಯ ಬ್ರ್ಯಾಂಡ್‌ನ ಗುಣಮಟ್ಟದ ಮೆಮೊರಿ ಕಾರ್ಡ್‌ಗಳನ್ನೇ ಬಳಸಿ.
* ಮೆಮೊರಿ ಕಾರ್ಡನ್ನು ಸಾಧನದಿಂದ ನೇರವಾಗಿ ತೆಗೆಯಬೇಡಿ. ಸಂಪರ್ಕಿಸಿದ ಕಂಪ್ಯೂಟರ್‌ನಿಂದ ತೆಗೆಯುವುದಾದರೆ, ಬಲ ಕೆಳ ಮೂಲೆಯಲ್ಲಿರುವ ಐಕಾನ್ ಟ್ರೇಯಿಂದ ಮೆಮೊರಿ ಕಾರ್ಡ್ ಆಯ್ಕೆ ಮಾಡಿಕೊಂಡು, ರೈಟ್-ಕ್ಲಿಕ್ ಮಾಡಿ, ಡಿಸ್ಕನೆಕ್ಟ್ ಮಾಡಿದ ಬಳಿಕವೇ ಮೆಮೊರಿ ಕಾರ್ಡನ್ನು ಹೊರತೆಗೆಯಬೇಕು.

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಅಂಕಣ for 27 ನವೆಂಬರ್ 2017

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

1 month ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

1 month ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

2 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

3 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

8 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

8 months ago