ಫೋನ್‌ನಲ್ಲಿ ಸ್ಟೋರೇಜ್ ಸ್ಪೇಸ್ ಸಮಸ್ಯೆಯೇ? ಇಲ್ಲಿದೆ ಪರಿಹಾರ

ಫೋನ್ ಮೆಮೊರಿ ಕಾರ್ಡ್‌ನಲ್ಲಿರುವ ಫೈಲುಗಳು ಡಿಲೀಟ್ ಆದರೆ ಏನು ಮಾಡಬೇಕೆಂದು ಕಳೆದ ಬಾರಿಯ ಅಂಕಣದಲ್ಲಿ ತಿಳಿಸಿದ್ದೆ. ಪುಟ್ಟ ಸಾಧನದಲ್ಲಿ ಅಷ್ಟೆಲ್ಲಾ ಫೈಲುಗಳು, ಆ್ಯಪ್‌ಗಳನ್ನು ಸೇರಿಸಬೇಕಿದ್ದರೆ ಮೆಮೊರಿ (ಸ್ಟೋರೇಜ್ ಅಥವಾ ಸ್ಥಳಾವಕಾಶ) ಹೆಚ್ಚು ಬೇಕಾಗುತ್ತದೆ. ಸ್ಮಾರ್ಟ್ ಫೋನ್‌ಗಳಲ್ಲಿ ವಿಸ್ತರಿಸಬಹುದಾದ ಮೆಮೊರಿ (ಎಕ್ಸ್‌ಟೆಂಡೆಬಲ್ ಮೆಮೊರಿ) ಅನ್ನೋ ಪದಗುಚ್ಛವನ್ನು ನೀವು ಕೇಳಿರಬಹುದು. ಅಂದರೆ, ಫೋನ್‌ನಲ್ಲಿ ಇರುವ ಇಂಟರ್ನಲ್ ಸ್ಟೋರೇಜ್ ಜಾಗವಷ್ಟೇ ಅಲ್ಲದೆ, ಹೆಚ್ಚುವರಿಯಾಗಿ ಮೆಮೊರಿ ಕಾರ್ಡ್ ಅಳವಡಿಸಿ 128 ಜಿಬಿವರೆಗೂ ವಿಸ್ತರಿಸಬಹುದು ಎಂದರ್ಥ. ಈ ಮೆಮೊರಿ ಬಗ್ಗೆ ಹೇಳಬೇಕಾದರೆ, ಒಂದು ಫೋನ್‌ನಲ್ಲಿ ಎರಡು ರೀತಿಯ ಮೆಮೊರಿ ಇರುತ್ತದೆ. ಒಂದು RAM ಎಂದು ಕರೆಯಲಾಗುವ ಮೆಮೊರಿ ಹಾಗೂ ಮತ್ತೊಂದು ನಿಮ್ಮ ಫೋಟೋ, ವೀಡಿಯೋ ಇತ್ಯಾದಿ ಫೈಲುಗಳನ್ನು ಸೇವ್ ಮಾಡಬಹುದಾದ ಇಂಟರ್ನಲ್ ಮೆಮೊರಿ. ಅದಕ್ಕೆ ಸೇರ್ಪಡೆಯೇ ಎಕ್ಸ್‌ಟರ್ನಲ್ ಎಂದರೆ ಮೆಮೊರಿ ಕಾರ್ಡ್ ಮೂಲಕ ಸಾಧಿಸಬಹುದಾದ ಸ್ಟೋರೇಜ್ (ಸಂಗ್ರಹಣ) ಜಾಗ.

ನೀವು ಹೊಸದಾಗಿ ಆ್ಯಪ್ ಇನ್‌ಸ್ಟಾಲ್ ಮಾಡುವಾಗ ‘ನಾಟ್ ಇನಫ್ ಮೆಮೊರಿ ಟು ಡೌನ್‌ಲೋಡ್’ ಎಂಬ ಸಂದೇಶವೊಂದು ಕಾಣಿಸಬಹುದು. ಅರೆ, ಮೆಮೊರಿ ಕಾರ್ಡ್ ಅಳವಡಿಸಿದ್ದರೂ ಹೀಗೆ ಕೇಳುತ್ತದಲ್ಲಾ ಅಂತ ನನಗೆ ಹಲವರು ಫೋನ್ ಮೂಲಕ ವಿಚಾರಿಸಿದ್ದರು. ಇದಕ್ಕೆ ಕಾರಣಗಳಿವೆ. ಮೆಮೊರಿ ಕಾರ್ಡ್ ಅಳವಡಿಸಿದರೆ ಸಾಲದು, ಕೆಲವೊಂದು ಆ್ಯಪ್‌ಗಳನ್ನು ಇಂಟರ್ನಲ್ ಸ್ಟೋರೇಜ್‌ನಿಂದ ಮೆಮೊರಿ ಕಾರ್ಡಿಗೆ ಮೂವ್ ಮಾಡಬೇಕಾಗುತ್ತದೆ ಮತ್ತು ನಾವು ಫೋನ್ ಮೂಲಕ ತೆಗೆಯುವ ಫೋಟೋ ಹಾಗೂ ವೀಡಿಯೋಗಳು ಮೆಮೊರಿ ಕಾರ್ಡ್‌ನಲ್ಲಿ ಸೇವ್ ಆಗುವಂತೆ ಸೆಟ್ಟಿಂಗ್ ಬದಲಾಯಿಸಿಕೊಳ್ಳಬೇಕಾಗುತ್ತದೆ. ಅದು ಹೇಗೆಂದು ತಿಳಿಯದವರಿಗಾಗಿ ಇದೋ ಇಲ್ಲಿದೆ ಮಾಹಿತಿ.

ಆ್ಯಪ್‌ಗಳನ್ನು ಮೆಮೊರಿ ಕಾರ್ಡ್‌ಗೆ ಮೂವ್ ಮಾಡುವುದು: ಕೆಲವೊಂದು ಆ್ಯಪ್‌ಗಳು ಫೋನ್‌ನಲ್ಲೇ ಇರಬೇಕೆಂದಿಲ್ಲ. ಇನ್‌ಸ್ಟಾಲ್ ಆದ ಬಳಿಕ ಅವನ್ನು ಮೆಮೊರಿ ಕಾರ್ಡ್‌ಗೆ ಮೂವ್ ಮಾಡಿದರೂ ಅವು ಕೆಲಸ ಮಾಡುತ್ತವೆ. ಸೆಟ್ಟಿಂಗ್ಸ್‌ನಲ್ಲಿ ಆ್ಯಪ್ಸ್ ಎಂಬಲ್ಲಿಗೆ ಹೋಗುವ ಮೂಲಕ ಒಂದೊಂದಾಗಿ ಆ್ಯಪ್‌ಗಳನ್ನು ಕ್ಲಿಕ್ ಮಾಡುತ್ತಾ ಹೋದರೆ, ಅವುಗಳಲ್ಲಿ ‘ಮೂವ್ ಟು ಎಸ್‌ಡಿ ಕಾರ್ಡ್’ ಎಂಬ ಬಟನ್ ಇದೆಯೇ ಎಂಬುದನ್ನು ನೋಡಿಕೊಂಡು ಮೆಮೊರಿ ಕಾರ್ಡ್‌ಗೆ ಆ್ಯಪ್‌ಗಳನ್ನು ವರ್ಗಾಯಿಸುವುದು ಸ್ವಲ್ಪ ಸಮಯ ತೆಗೆದುಕೊಳ್ಳುವ ಕೆಲಸ. ಇದರ ಬದಲಾಗಿ, App 2 SD ಎಂಬ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡರೆ, ಅದರ ಮೂಲಕ ಹಲವಾರು ಆ್ಯಪ್‌ಗಳನ್ನು (ಮೂವ್ ಮಾಡಬಹುದಾದ) ಎಸ್‌ಡಿ ಕಾರ್ಡ್‌ಗೆ ಏಕಕಾಲದಲ್ಲಿ ವರ್ಗಾಯಿಸಬಹುದಾಗಿದೆ.

ಗಮನಿಸಿ, ಕೆಲವು ಆ್ಯಪ್‌ಗಳು ಎಸ್‌ಡಿ ಕಾರ್ಡ್ ಮೂಲಕ ಕೆಲಸ ಮಾಡುವುದಿಲ್ಲ. ಉದಾಹರಣೆಗೆ ವಾಟ್ಸಾಪ್‌ನಂತಹಾ ಕೆಲವು ಆ್ಯಪ್‌ಗಳು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಕೆಲಸ ಮಾಡಲಾರವು. ಆ ರೀತಿ ಆ್ಯಪ್ ಮಾಲೀಕರೇ ಸೆಟ್ ಮಾಡಿಬಿಟ್ಟಿದ್ದಾರೆ. ಹೀಗಾಗಿ ಅಂತಹವುಗಳನ್ನು ಮೂವ್ ಮಾಡುವುದು ಸಾಧ್ಯವಾಗುವುದಿಲ್ಲ.

ಇನ್ನು, ನಾವು ತೆಗೆದ ಫೋಟೋ ಅಥವಾ ವೀಡಿಯೋಗಳು ಎಸ್‌ಡಿ ಕಾರ್ಡ್‌ನಲ್ಲೇ ಡೀಫಾಲ್ಟ್ ಆಗಿ ಸೇವ್ ಆಗುವಂತೆ ಮಾಡುವ ಮೂಲಕ ಫೋನ್ ಮೆಮೊರಿಯನ್ನು ಹೆಚ್ಚಿಸಬಹುದಾಗಿದೆ. ಇತ್ತೀಚಿನ ಸ್ಮಾರ್ಟ್ ಫೋನ್‌ಗಳಲ್ಲಿ ಮೆಮೊರಿ ಕಾರ್ಡ್ ಹಾಕಿದ ತಕ್ಷಣ, ಫೋಟೋ/ವೀಡಿಯೋಗಳು ಎಸ್‌ಡಿ ಕಾರ್ಡ್‌ನಲ್ಲೇ ಸೇವ್ ಆಗಬೇಕೇ ಅಂತ ನಿಮ್ಮನ್ನು ಸಿಸ್ಟಂ ಪಾಪ್ ಅಪ್ ವಿಂಡೋದ ಮೆಸೇಜ್ ಮೂಲಕ ಕೇಳುತ್ತದೆ. ಯಸ್ ಒತ್ತಿ ಬಿಟ್ಟರೆ ಕೆಲಸ ಸರಾಗ. ಕೊಂಚ ಹಳೆಯ ಹ್ಯಾಂಡ್‌ಸೆಟ್ ಹೊಂದಿದವರಲ್ಲಾದರೆ, ಫೋನ್‌ನಲ್ಲಿ ಕ್ಯಾಮೆರಾ ಆ್ಯಪ್ ಓಪನ್ ಮಾಡಿ, ಅದರಲ್ಲಿ ಸೆಟ್ಟಿಂಗ್ಸ್ ಬಟನ್ ಇರುತ್ತದೆ. ಅಲ್ಲೇ ಕೆಳಗೆ ‘ಸೇವ್ ಫೈಲ್ಸ್ ಟು ಎಸ್‌ಡಿ ಕಾರ್ಡ್’ ಅಥವಾ ಮೆಮೊರಿ ಕಾರ್ಡ್ ಇಲ್ಲವೇ ಎಕ್ಸ್‌ಟರ್ನಲ್ ಕಾರ್ಡ್ ಎಂದು ಬರೆದಿರುವುದನ್ನು ಹುಡುಕಿ, ಕ್ಲಿಕ್ ಮಾಡಿದರಾಯಿತು. ಡೀಫಾಲ್ಟ್ ಆಗಿ ‘ಸೇವ್ ಟು ಇಂಟರ್ನಲ್ ಮೆಮೊರಿ’ ಅಂತ ಇರುತ್ತದೆ. ಅದನ್ನು ಬದಲಾಯಿಸಿದರಾಯಿತು.

ಅನಗತ್ಯ ಆ್ಯಪ್‌ಗಳು: ಇದಲ್ಲದೆ, ಕೆಲವೊಂದು ಅನಗತ್ಯ ಅಂದರೆ ನಮಗೆ ಬಳಕೆಯ ಅಗತ್ಯವಿಲ್ಲದಿರುವ ಆ್ಯಪ್‌ಗಳನ್ನು ನಮ್ಮ ಸ್ಮಾರ್ಟ್ ಫೋನ್‌ನಿಂದ ತೆಗೆದುಬಿಡಬಹುದು. ಯಾಕೆಂದರೆ ಅವುಗಳು ಕೂಡ ಅನಗತ್ಯವಾಗಿ ಸ್ಪೇಸ್ ಬಳಸಿಕೊಳ್ಳಬಲ್ಲವು. ಅಂತಹಾ ಆ್ಯಪ್‌ಗಳನ್ನು ಸೆಟ್ಟಿಂಗ್ಸ್‌ನಲ್ಲಿ ಆ್ಯಪ್ಸ್ ಎಂಬಲ್ಲಿಗೆ ಹೋಗುವ ಮೂಲಕ ಗುರುತಿಸಿ ಅನ್‌ಇನ್‌ಸ್ಟಾಲ್ ಮಾಡಬಹುದು. ಇಲ್ಲವೇ, ಇಂಟರ್ನೆಟ್ ಸಂಪರ್ಕ ಇರುವಾಗಲೇ, ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ, ಎಡ ಮೇಲ್ಭಾಗದಲ್ಲಿ ಸೆಟ್ಟಿಂಗ್ಸ್‌ನ ಮೂರು ಗೆರೆಗಳ ಬಟನ್ ಒತ್ತಿದಾಗ ಕಾಣಿಸುವ ಡ್ರಾಪ್‌ಡೌನ್ ಮೆನುವಿನಲ್ಲಿ ‘ಮೈ ಆ್ಯಪ್ಸ್’ ಕ್ಲಿಕ್ ಮಾಡಿದರೆ, ನಿಮ್ಮ ಸಾಧನದಲ್ಲಿರುವ ಆ್ಯಪ್‌ಗಳ ಪಟ್ಟಿ ಕಾಣಿಸುತ್ತದೆ. ಒಂದೊಂದನ್ನೇ ಒತ್ತಿಕೊಂಡು ಬೇಡವಾಗಿರುವವನ್ನು ಅಲ್ಲಿಂದಲೂ ಅನ್‌ಇನ್‌ಸ್ಟಾಲ್ ಮಾಡಬಹುದು.

ಇದರ ಜತೆಗೆ, ಫೋನ್‌ನಲ್ಲಿ, ವಿಶೇಷವಾಗಿ ಇಂಟರ್ನಲ್ ಮೆಮೊರಿಯಲ್ಲಿ ಫೈಲುಗಳನ್ನು ಸಾಧ್ಯವಿದ್ದಷ್ಟು ಕಡಿಮೆ ಇರಿಸಿಕೊಂಡರೆ ನಮ್ಮ ಸಾಧನದ ಸುಲಲಿತ ಕಾರ್ಯಾಚರಣೆಗೆ ಅದು ನೆರವಾಗುತ್ತದೆ. ಹ್ಯಾಂಗ್ ಆಗುವುದು ತಪ್ಪುತ್ತದಷ್ಟೇ ಅಲ್ಲದೆ, ಕೆಲವೊಮ್ಮೆ ಮೆಮೊರಿ ಕಡಿಮೆಯಾದ ಕಾರಣದಿಂದಾಗಿ ಕೈತಪ್ಪಿ ಫೈಲುಗಳು ಡಿಲೀಟ್ ಆಗುವ ಪ್ರಮಾದದ ಸಾಧ್ಯತೆಯೂ ದೂರವಾಗುತ್ತದೆ. ಇದಕ್ಕಾಗಿ ತಿಂಗಳಿಗೊಮ್ಮೆಯಾದರೂ, ನಿಮ್ಮ ಫೋನ್‌ನಲ್ಲಿರುವ ಫೋಟೋ, ವೀಡಿಯೋ, ಆಡಿಯೋ, ಪಿಡಿಎಫ್, ಡಾಕ್ ಇತ್ಯಾದಿ ಫೈಲುಗಳನ್ನು ನೋಡಿ, ಅನಗತ್ಯ ಎಂದು ಕಂಡುಬಂದವನ್ನು ಡಿಲೀಟ್ ಮಾಡಿ, ಅಗತ್ಯವಿರುವವುಗಳನ್ನು ಕಂಪ್ಯೂಟರಿಗೆ ವರ್ಗಾಯಿಸಿ, ಸುರಕ್ಷಿತವಾಗಿಟ್ಟುಕೊಳ್ಳಬಹುದು.

ವಾಟ್ಸಾಪ್ ಹೆಚ್ಚಾಗಿ ಬಳಸುತ್ತಿರುವವರಲ್ಲಿ ದೊಡ್ಡ ಸಮಸ್ಯೆ ಈ ಸ್ಟೋರೇಜ್‌ನದು. ನಮಗೆ ಬಂದಿರುವ ಫೋಟೋ, ವೀಡಿಯೋ ಮತ್ತಿತರ ಫೈಲುಗಳು ಮೆಮೊರಿ ಕಾರ್ಡ್‌ಗೆ ಸೇವ್ ಆಗುವಂತೆ ಮಾಡುವ ವ್ಯವಸ್ಥೆಯನ್ನು ವಾಟ್ಸಾಪ್ ಇನ್ನೂ ಒದಗಿಸಿಲ್ಲವಾದುದರಿಂದ ಈ ಸಮಸ್ಯೆ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತದೆ. ಇದಕ್ಕಾಗಿ, ಬೇಕಾದವನ್ನಷ್ಟೇ ಡೌನ್‌ಲೋಡ್ ಮಾಡಿಕೊಂಡು, ಸಮಯವಿದ್ದಾಗ ಆ ಫೈಲುಗಳನ್ನು ಮೆಮೊರಿ ಕಾರ್ಡ್‌ಗೋ, ಬೇರೆ ಕಂಪ್ಯೂಟರಿಗೋ ವರ್ಗಾಯಿಸಿಕೊಂಡಿಟ್ಟುಕೊಳ್ಳಬಹುದು.

ಫೋನ್ ಇದ್ದರೆ ಸಾಲದು, ಅದನ್ನು ಎಚ್ಚರಿಕೆಯಿಂದ ಮತ್ತು ಸುವ್ಯವಸ್ಥಿತವಾಗಿ ಬಳಸಿದರೆ ಎಲ್ಲವೂ ಸುಲಭ ಎಂಬುದು ನೆನಪಿರಲಿ. ಉದಾಹರಣೆಗೆ, ಸ್ನೇಹಿತರು ವಾಟ್ಸಾಪ್, ಟೆಲಿಗ್ರಾಂ, ಮೆಸೆಂಜರ್ ಮುಂತಾದ ಸಂದೇಶ ವಿನಿಮಯ ಆ್ಯಪ್‌ಗಳ ಮೂಲಕ ಫೋಟೋ ಕಳಿಸಿರುತ್ತಾರೆ. ಅದನ್ನು ನೋಡಿ, ಅನಗತ್ಯವೆಂದಾದರೆ ಆಗಲೇ ಡಿಲೀಟ್ ಮಾಡಿಟ್ಟುಕೊಳ್ಳುವುದು ಫೈಲುಗಳನ್ನು ವ್ಯವಸ್ಥಿತವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಮೊದಲ ಹೆಜ್ಜೆ. ಬೇರೆ ಯಾವತ್ತಾದರೂ ಸಮಯವಾದಾಗ ಡಿಲೀಟ್ ಮಾಡೋಣ ಎಂದುಕೊಂಡರೆ ಆ ರಾಶಿ ಫೈಲುಗಳ ಮಧ್ಯೆ ಯಾವುದು ಮುಖ್ಯ, ಯಾವುದು ಅಮುಖ್ಯ ಎಂಬುದು ಮರೆತೇ ಹೋಗಬಹುದು.

ವಿಜಯ ಕರ್ನಾಟಕ ಅಂಕಣ “ಮಾಹಿತಿ@ತಂತ್ರಜ್ಞಾನ”: ಅವಿನಾಶ್ ಬಿ., 04 ಡಿಸೆಂಬರ್ 2017

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

2 days ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

2 weeks ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

2 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

7 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

7 months ago

ಒಂದೇ ಫೋನ್‌ನಲ್ಲಿ ಎರಡು WhatsApp ಖಾತೆ ಬಳಸುವುದು ಹೇಗೆ?

ಕಳೆದ ಅಕ್ಟೋಬರ್ 19ರಂದು ಮೆಟಾ ಒಡೆತನದ WhatsApp ಸಂಸ್ಥೆಯೇ ತನ್ನ ಆ್ಯಪ್‌ಗೆ ಹೊಸ ಅಪ್‌ಡೇಟ್ ನೀಡಿದ್ದು, ಎರಡು ವಾಟ್ಸ್ಆ್ಯಪ್ ಖಾತೆಗಳನ್ನು…

9 months ago