ವಾರ್ಷಿಕ 500 ರೂ. ಆಸುಪಾಸಿನಲ್ಲಿ ಸ್ವಂತ ವೆಬ್‌ಸೈಟ್ ಹೊಂದುವುದು ಹೇಗೆ?

4
642

Avinash-Logo_thumb.pngಡೊಮೇನ್ ಹೆಸರು ರಿಜಿಸ್ಟ್ರೇಶನ್, ಹೋಸ್ಟಿಂಗ್ ಸೇವೆ ಮೂಲಕ ಸುಲಭವಾಗಿ ನಮ್ಮದೇ ಸ್ವಂತ ವೆಬ್ ತಾಣ ಹೊಂದುವುದು ಹೇಗೆ ಅಂತ ಕಳೆದ ವಾರದ ಅಂಕಣದಲ್ಲಿ ಹೇಳಿದ್ದೆ. ಈ ಬಗ್ಗೆ ಸಾಕಷ್ಟು ಕರೆಗಳು, ಇಮೇಲ್‌ಗಳು ಬಂದಿವೆ. ಈಗ ಸಾಮಾನ್ಯನೊಬ್ಬ ಕೇವಲ ಐನೂರು ರೂ. ಆಸುಪಾಸು ವಾರ್ಷಿಕ ಶುಲ್ಕ ಪಾವತಿಸುತ್ತಾ ಬಂದರೆ ತಮ್ಮದೇ ವೆಬ್ ತಾಣವನ್ನು ಹೇಗೆ ಹೊಂದಬಹುದು ಎಂಬುದಾಗಿ ಹೇಳಿದಾಗ, ಹುಬ್ಬೇರಿಸಿ ಕರೆ ಮಾಡಿದವರೇ ಹೆಚ್ಚು. ಆದರೆ ಇದು ಅಸಾಧ್ಯವಲ್ಲವೇ ಅಲ್ಲ. ಈಗಿನ ಕೊಡುಗೆಯ ಪ್ರಕಾರ, ಕೇವಲ 99 ರೂಪಾಯಿಯಲ್ಲೂ ನಮ್ಮದೇ ವೆಬ್ ಸೈಟ್ ಮಾಡಬಹುದು! ಅಚ್ಚರಿಯಾಗುತ್ತಿದೆಯೇ? ಮಾಹಿತಿ ಇಲ್ಲಿದೆ.

ನೀವೇ ಗಮನಿಸಿದಂತೆ, ಈಗ ಕೆಲವು ಡೊಮೇನ್ ಸರ್ವಿಸ್ ಪ್ರೊವೈಡರ್‌ಗಳು ಹಲವು ಕೊಡುಗೆಗಳನ್ನು ನೀಡುತ್ತಿದ್ದಾರೆ. ಅದರ ಪ್ರಕಾರ, ಡೊಮೇನ್ ಹೆಸರು ನೋಂದಣಿಯನ್ನು ಆರಂಭಿಕ ವರ್ಷದಲ್ಲಿ 99 ರೂಪಾಯಿಗೂ ನೋಂದಾಯಿಸಿಕೊಳ್ಳಬಹುದು. ಡೊಮೇನ್ (.in, .net, .com, .biz, .tv, .org ಇತ್ಯಾದಿ) ಆಧಾರದಲ್ಲಿ ಅವುಗಳ ಶುಲ್ಕವೂ ವ್ಯತ್ಯಾಸವಾಗುತ್ತದೆ. ಸಾಮಾನ್ಯವಾಗಿ ಡಾಟ್ ಕಾಂ ಡೊಮೇನ್ ಈಗ ವಾರ್ಷಿಕ ಐನೂರು-ಆರುನೂರು ರೂ. ಆಸುಪಾಸಿನಲ್ಲಿ ಲಭ್ಯವಾಗುತ್ತದೆ. ನಿಮಗೆ ಬೇಕಾದ ಹೆಸರಿನದನ್ನು ಗೋಡ್ಯಾಡಿ, ಬಿಗ್‌ರಾಕ್ ಮುಂತಾಗಿ registry.in ತಾಣದಲ್ಲಿ ನೀಡಲಾಗಿರುವ ಅಧಿಕೃತ ತಾಣಗಳಲ್ಲಿ, ಸರ್ಚ್ ಮಾಡಿ ನೋಂದಾಯಿಸಿಕೊಂಡು ಬಿಡಿ. ಈ ಯುಆರ್‌ಎಲ್‌ಗೆ (ಅಂದರೆ ನಿಮ್ಮ ಡೊಮೇನ್ ಹೆಸರಿಗೆ) ಮಾತ್ರವೇ ನೀವು ವಾರ್ಷಿಕ ಶುಲ್ಕ ಪಾವತಿಸಿದರೆ ಸಾಕು.

ಆದರೆ ಇದಕ್ಕೊಂದು ರೈಡರ್ ಇದೆ. ಈಗಾಗಲೇ ನಿಮ್ಮದೇ ಬ್ಲಾಗ್ ಇದ್ದರೆ ಸರಿ. ಇಲ್ಲವಾದಲ್ಲಿ, ಉಚಿತವಾಗಿಯೇ ಲಭ್ಯವಿರುವ ಬ್ಲಾಗ್ ತಾಣವೊಂದನ್ನು ಶುರು ಮಾಡಬೇಕು. ನಿಮಗೆ ಗೊತ್ತಿರುವಂತೆ, ವೆಬ್ ಲಾಗ್ ಎಂದೇ ಕರೆಯಲಾಗುವ ಬ್ಲಾಗ್‌ಗಳು ಈ ಫೇಸ್‌ಬುಕ್, ವಾಟ್ಸಾಪ್ ಬರುವುದಕ್ಕೆ ಮುನ್ನ ಅತ್ಯಂತ ಜನಪ್ರಿಯವಾಗಿದ್ದವು. wordpress.com ಹಾಗೂ ಗೂಗಲ್‌ನ Blogger.com ಮುಂತಾದ ತಾಣಗಳು ಓದುಗರಿಗೆ ತಮ್ಮದೇ ಆದ ಬ್ಲಾಗ್ ರಚಿಸಲು ಉಚಿತ ಅವಕಾಶವನ್ನು ಮಾಡಿಕೊಡುತ್ತಿವೆ. ಅದರಲ್ಲಿ ಒಂದು ತೊಡಕು ಎಂದರೆ, ಯುಆರ್‌ಎಲ್‌ನಲ್ಲಿ blogspot.in ಅಥವಾ wordpress.com ಅಂತ ಎಕ್ಸ್‌ಟೆನ್ಷನ್ ಸೇರಿಕೊಂಡಿರುತ್ತವೆ. ಅದನ್ನು ನಿವಾರಿಸಬೇಕೆಂದಿದ್ದರೆ ನೀವು ಹಣ ಕೊಟ್ಟು ಡೊಮೇನ್ ಹೆಸರು ರಿಜಿಸ್ಟರ್ ಮಾಡಿಸಿಕೊಳ್ಳಬೇಕು. ಮತ್ತು ಈ ಬ್ಲಾಗ್ ಅಪ್‌ಡೇಟ್ ಮಾಡುತ್ತಾ ಹೋದರೆ, ನಿಮ್ಮ ವೆಬ್ ತಾಣವೂ ಅಪ್‌ಡೇಟ್ ಆದಂತೆಯೇ ಅಂದುಕೊಳ್ಳಬಹುದು.

ಬ್ಲಾಗ್ ಮಾಡುವುದಿದ್ದರೆ ಒಂದಿಷ್ಟು ಇತಿಮಿತಿ ಇರುತ್ತದೆ. ನಿಮಗೆ ಗೊತ್ತಿರುವ ಹಾಗೆ, ಉಚಿತವಾಗಿ ಲಭ್ಯವಿರುವ ಬ್ಲಾಗ್‌ಗಳು ಸಾದಾ ಪಠ್ಯ, ಫೋಟೋ, ವೀಡಿಯೋಗಳಿಗೆ ಇಂತಿಷ್ಟು ಸ್ಪೇಸ್ ಅನ್ನು ಉಚಿತವಾಗಿ ನೀಡುತ್ತಿವೆ. ಸಾಮಾನ್ಯವಾಗಿ ದಿನಕ್ಕೊಂದು ಲೇಖನ ಬರೆಯುತ್ತಾ ಇರಲು ಇದು ಸಾಕಾಗುತ್ತದೆ. ಹೆಚ್ಚಿನ ಸಮೃದ್ಧ, ನಮಗೆ ಬೇಕಾದ ರೀತಿಯ ಪೂರ್ಣ ವೆಬ್‌ಸೈಟ್ ಬೇಕೆಂದಾದರೆ, ಹೋಸ್ಟಿಂಗ್ ಸೇವೆಯನ್ನೂ ಖರೀದಿಸಬೇಕು ಮತ್ತು ನಮ್ಮ ತಾಣವನ್ನು ನಮಗೆ ಬೇಕಾದಂತೆ ವಿನ್ಯಾಸಪಡಿಸಿಕೊಳ್ಳಬಹುದು.

ಸದ್ಯಕ್ಕೆ ನೀವು ಮಾಡಬೇಕಾದುದೇನೆಂದರೆ, ನಿಮ್ಮ ಹೆಸರಿನ ಡೊಮೇನ್ ನೇಮ್ ಖರೀದಿಸಿ, ಬ್ರೌಸರ್‌ನಲ್ಲಿ ಯಾರಾದರೂ ಆ ಯುಆರ್‌ಎಲ್ ಟೈಪ್ ಮಾಡಿದರೆ, ಅದು ನಿಮ್ಮ ಬ್ಲಾಗ್‌ಗೆ ಹೋಗುವಂತೆ ಮಾಡುವುದು. ಇದಕ್ಕೆ ಯುಆರ್‌ಎಲ್ ರೀಡೈರೆಕ್ಟ್ ಮಾಡುವುದು ಅಂತಾರೆ. ನಿಮಗೆ ಇದನ್ನೆಲ್ಲಾ ಹೇಳುವ ಮುನ್ನ ನಾನೇ ಮಾಡಿ ನೋಡಿದ್ದೇನೆ. avinasha.net ಅಂತ ಟೈಪ್ ಮಾಡಿದರೆ, ವರ್ಡ್‌ಪ್ರೆಸ್‌ನಲ್ಲಿರುವ ನನ್ನ ಉಚಿತ ಬ್ಲಾಗ್ ತಾಣಕ್ಕೆ ಅದು ನಿಮ್ಮನ್ನು ಕರೆದೊಯ್ಯುತ್ತದೆ. ಇದು ನಮ್ಮ ಆನ್‌ಲೈನ್ ವಿಳಾಸವನ್ನು ಅಥವಾ ಆನ್‌ಲೈನ್ ಐಡೆಂಟಿಟಿಯನ್ನು ಕಡಿಮೆ ಖರ್ಚಿನಲ್ಲಿ ಸ್ನೇಹಿತರಿಗೆ ತಿಳಿಸಲು ಸುಲಭವಾದ ಉಪಾಯ!

ವಿಸಿಟಿಂಗ್ ಕಾರ್ಡಿನಲ್ಲಿಯೂ ಕೂಡ ನಿಮ್ಮದೇ ಆನ್‌ಲೈನ್ ಅಸ್ತಿತ್ವವನ್ನು ತೋರಿಸಲು ಈ ಯುಆರ್‌ಎಲ್ ಅಥವಾ ವೆಬ್ ವಿಳಾಸವನ್ನು ಬಳಸಬಹುದಲ್ಲವೇ?

ಈ ರೀತಿ ಫಾರ್ವರ್ಡ್ ಅಥವಾ ರೀಡೈರೆಕ್ಟ್ ಮಾಡಲು ಒಂದು ಸಣ್ಣ ಶ್ರಮ ಇದೆ. ಡೊಮೇನ್ ಹೆಸರು ರಿಜಿಸ್ಟರ್ ಮಾಡಿದಾಗ, ನಿಮಗೊಂದು ಆನ್‌ಲೈನ್ ಕಂಟ್ರೋಲ್ ಪ್ಯಾನೆಲ್ ದೊರೆಯುತ್ತದೆ. ಅದರ ಸೆಟ್ಟಿಂಗ್ಸ್‌ನಲ್ಲಿ ಡೊಮೇನ್ ನೇಮ್ ಫಾರ್ವರ್ಡಿಂಗ್ ಎಂಬ ಆಯ್ಕೆಯನ್ನು ಹುಡುಕಿ, ಅಲ್ಲಿ ನಿಮ್ಮ ಬ್ಲಾಗ್ ವಿಳಾಸ (ಯುಆರ್‌ಎಲ್) ಹಾಕಬೇಕಾಗುತ್ತದೆ. ಯಾರಾದರೂ ನಿಮ್ಮ ವೆಬ್‌ಸೈಟ್ ವಿಳಾಸ ಟೈಪ್ ಮಾಡಿದರೆ, ಅದು ನಿಮ್ಮ ಬ್ಲಾಗ್‌ಗೆ ಅವರನ್ನು ಕರೆದೊಯ್ಯುತ್ತದೆ.

ಬ್ಲಾಗರ್ ಅಥವಾ ವರ್ಡ್‌ಪ್ರೆಸ್ ಬ್ಲಾಗ್ ಹೊಂದಿರುವವರು ಅದರ ಕಂಟ್ರೋಲ್ ಪ್ಯಾನೆಲ್‌ಗೆ ಲಾಗಿನ್ ಆದಾಗ, ಅಲ್ಲಿಂದ ಕೂಡ ಡೊಮೇನ್ ನೇಮ್ ಖರೀದಿ ಮಾಡುವ ಆಯ್ಕೆಯೂ ಲಭ್ಯವಾಗುತ್ತದೆ. ಡೊಮೇನ್ ಹೆಸರಿಗೆ ನೀವು ವಾರ್ಷಿಕ ಶುಲ್ಕ ಪಾವತಿಸುತ್ತಾ ಬಂದರಾಯಿತು.

ವೆಬ್ ವಿನ್ಯಾಸ: ಬ್ಲಾಗ್ ಬಳಸಿರುವವರಿಗೆ ಗೊತ್ತಿದೆ. ಅದರಲ್ಲಿ ವೈವಿಧ್ಯಮಯ ವಿನ್ಯಾಸದ ವೆಬ್ ಪುಟಗಳಿರುವ ಸಾಕಷ್ಟು ಟೆಂಪ್ಲೇಟ್‌ಗಳು ಉಚಿತವಾಗಿ ದೊರೆಯುತ್ತವೆ. ನಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಂಡು, ಲಭ್ಯವಿರುವ ಸೌಕರ್ಯದಲ್ಲೇ ಉತ್ತಮ ವೆಬ್ ಸೈಟನ್ನು ನಾವೇ ರೂಪಿಸಿಕೊಳ್ಳಬಹುದು. ಈ ಬ್ಲಾಗನ್ನೇ ಆಕರ್ಷಕವಾಗಿ ಮಾಡಿಕೊಂಡು, ಡೊಮೇನ್ ಯುಆರ್‌ಎಲ್ ಫಾರ್ವರ್ಡ್ ಮೂಲಕ ನಿಮ್ಮದೇ ತಾಣವನ್ನು ಅಪ್‌ಡೇಟ್ ಮಾಡುತ್ತಾ ಇರಬಹುದು. ಅಥವಾ, ಈಗ ಡೊಮೇನ್ ನೇಮ್ ಖರೀದಿಸಿಟ್ಟುಕೊಂಡು, ಸಮಯವಾದಾಗ ಒಂದೊಳ್ಳೆಯ ವೆಬ್‌ಸೈಟ್ ರೂಪಿಸಬಹುದು.

ಹೋಸ್ಟಿಂಗ್ ಸೇವೆಯನ್ನೂ ಖರೀದಿಸಿದರೆ, ಉಚಿತವಾಗಿ ಲಭ್ಯವಿರುವ ವೆಬ್‌ಸೈಟ್ ಟೆಂಪ್ಲೇಟ್‌ಗಳನ್ನು ಬಳಸಿಕೊಳ್ಳಬಹುದು. ತಾಂತ್ರಿಕವಾಗಿ ಸ್ವಲ್ಪ ಹೆಚ್ಚು ಮಾಹಿತಿ ಇದೆ ಎಂದಾದರೆ, ಆನ್‌ಲೈನ್‌ನಲ್ಲಿ Free Web templates ಅಂತ ಹುಡುಕಿದರೆ ಸಾಕಷ್ಟು ವೈವಿಧ್ಯಮಯ ವಿನ್ಯಾಸದ ವೆಬ್ ತಾಣಗಳಂತೆ ಕಾಣಿಸುವ ಟೆಂಪ್ಲೇಟ್‌ಗಳು ದೊರೆಯುತ್ತವೆ. ಅವುಗಳನ್ನು ನಮಗೆ ಬೇಕಾದಂತೆ ಹೊಂದಿಸಿಕೊಳ್ಳಬಹುದು. ಅಥವಾ, ನಿಮ್ಮ ಪರಿಚಯದ ವೆಬ್ ಡಿಸೈನರ್‌ಗಳನ್ನು ಸಂಪರ್ಕಿಸಿ, ಅವರಲ್ಲಿ ನಮಗೆ ಬೇಕಾದಂತಹಾ ವಿನ್ಯಾಸದ ವೆಬ್ ರೂಪಿಸಲು ಹೇಳಬಹುದು. ಅವರು ಒಂದಷ್ಟು ಶುಲ್ಕ ಪಡೆದು ಆಕರ್ಷಕ ವೆಬ್ ಸೈಟ್ ರೂಪಿಸಿಕೊಡಬಲ್ಲರು.

ಇನ್ನೇಕೆ ತಡ, ನಿಮ್ಮ ಅಥವಾ ಮಕ್ಕಳ ಹೆಸರಿನಲ್ಲೋ, ನಿಮ್ಮ ಕಂಪನಿಯ ಹೆಸರಿನಲ್ಲೋ ಈಗಲೇ ವೆಬ್ ತಾಣವೊಂದನ್ನು ನೋಂದಾಯಿಸಿಕೊಳ್ಳಿ, ಡಿಜಿಟಲ್ ಇಂಡಿಯಾಕ್ಕೆ ನಿಮ್ಮ ಕೊಡುಗೆಯೂ ಸೇರಲಿ!

ಮಾಹಿತಿ@ತಂತ್ರಜ್ಞಾನ, ವಿಜಯ ಕರ್ನಾಟಕ ಅಂಕಣ: ಅವಿನಾಶ್ ಬಿ.

4 COMMENTS

LEAVE A REPLY

Please enter your comment!
Please enter your name here