ಆಂಡ್ರಾಯ್ಡ್ ಫೋನ್‌ಗಳ ‘ಸ್ಮಾರ್ಟ್’ ವೈಶಿಷ್ಟ್ಯಗಳನ್ನು ಎನೇಬಲ್ ಮಾಡುವುದು ಹೇಗೆ?

0
582

ಸಾಮಾನ್ಯ ದೂರವಾಣಿಗಳ ಸ್ಥಾನದಲ್ಲಿ ಬೇಸಿಕ್ ಫೋನ್, ಫೀಚರ್ ಫೋನ್ ಬಳಿಕ ಸ್ಮಾರ್ಟ್ ಫೋನ್‌ಗಳು ಬಂದು ಕಾಲವೆಷ್ಟೋ ಆಯಿತು. ಆದರೆ, ಈ ಫೋನ್‌ಗಳಲ್ಲಿರುವ ಸ್ಮಾರ್ಟ್ ವೈಶಿಷ್ಟ್ಯಗಳ ಬಗ್ಗೆ ಬಹುತೇಕರಿಗೆ ಇನ್ನೂ ಅರಿವಿಲ್ಲ. ಈಗಿನ ಆಂಡ್ರಾಯ್ಡ್ 11 ಕಾರ್ಯಾಚರಣಾ ವ್ಯವಸ್ಥೆಯಿರುವ ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳಲ್ಲಿ ಇರುವ ಕೆಲವೊಂದು ಉಪಯುಕ್ತ ‘ಸ್ಮಾರ್ಟ್’ ವೈಶಿಷ್ಟ್ಯಗಳನ್ನು ತಿಳಿಯೋಣ.

ಸದ್ಯಕ್ಕೆ ಹೊಸ ಫೋನ್‌ಗಳಲ್ಲಿ ಅಗತ್ಯ ಎಂದು ಪರಿಗಣಿಸಬಹುದಾದ ಅಂಶಗಳೆಂದರೆ ಕನಿಷ್ಠ 4 ಜಿಬಿ RAM, ಕನಿಷ್ಠ 64 GB ಸ್ಟೋರೇಜ್ ಸಾಮರ್ಥ್ಯ, ಒಳ್ಳೆಯ ಕ್ಯಾಮೆರಾ, ಉತ್ತಮ ಪ್ರೊಸೆಸರ್ ಮತ್ತು ಸ್ಕ್ರೀನ್ ಅನ್‌ಲಾಕ್ ಮಾಡಲು ಇರುವ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅಥವಾ ಮುಖ ಗುರುತಿಸುವ (ಫೇಸ್ ಅನ್‌ಲಾಕ್) ಸಾಮರ್ಥ್ಯ.

ಈ ಮೂಲಭೂತ ಆಧುನಿಕ ವೈಶಿಷ್ಟ್ಯಗಳೊಂದಿಗೆ ಮೊಬೈಲ್ ಫೋನ್ ತಯಾರಿಕಾ ಸಂಸ್ಥೆಗಳು ಗೂಗಲ್‌ನ ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆ (ಒಎಸ್)ಯನ್ನು ಒಂದಿಷ್ಟು ಬದಲಾಯಿಸಿ, ಕೆಲವೊಂದು ಉಪಯುಕ್ತ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಸೇರಿಸುತ್ತವೆ. ಇವುಗಳನ್ನು ನಾವು ಎನೇಬಲ್ ಮಾಡಿಕೊಳ್ಳಬೇಕಷ್ಟೆ. ಅವುಗಳನ್ನು ಸೆಟ್ಟಿಂಗ್ಸ್ ಆ್ಯಪ್‌ನಲ್ಲಿ ಹುಡುಕಬೇಕಾಗುತ್ತದೆ.

ಸೆಟ್ಟಿಂಗ್ಸ್‌ನಲ್ಲಿ ಮೊಬೈಸ್ ತಯಾರಿಕ ಸಂಸ್ಥೆಗಳು ವಿಭಿನ್ನ ಹೆಸರುಗಳನ್ನು ನೀಡಿರುತ್ತವೆ. Gestures ಅಥವಾ Smart features ಇಲ್ಲವೇ Intelligent, Advanced features … ಹೀಗೆ ಬೇರೆ ಬೇರೆ ಮೊಬೈಲ್ ಫೋನ್‌ಗಳಲ್ಲಿ ಭಿನ್ನ ಭಿನ್ನ ಹೆಸರುಗಳಿರಬಹುದು. ಸಾಮಾನ್ಯವಾಗಿ ಇತ್ತೀಚಿನ ಸ್ಯಾಮ್‌ಸಂಗ್ ಫೋನ್‌ಗಳಲ್ಲಿ Advanced Features ಹೆಸರಿನಲ್ಲಿ, ಒನ್‌ಪ್ಲಸ್ ಫೋನ್‌ಗಳಲ್ಲಿ Buttons & Gestures, ಮೇಡ್ ಇನ್ ಇಂಡಿಯಾದ ಮೈಕ್ರೋಮ್ಯಾಕ್ಸ್ ಫೋನ್‌ಗಳಲ್ಲಿ Intelligent Assistance ಅಂತ ಹೆಸರುಗಳಿತ್ತವೆ. ಅಲ್ಲಿ ನೋಡಿದಾಗ ನಮಗೆ ಈ ಅತ್ಯಾಧುನಿಕ ವೈಶಿಷ್ಟ್ಯಗಳು ಗೋಚರಿಸುತ್ತವೆ. ಅವುಗಳಲ್ಲಿ ಉಪಯುಕ್ತವಾದ ಕೆಲವು ಇಲ್ಲಿದ್ದು, ಅವುಗಳೆದುರು ಇರುವ ಬಟನ್ ಆನ್ ಮಾಡಿದರಾಯಿತು.

ಗೂಗಲ್ ಅಸಿಸ್ಟೆಂಟ್ ಎಂಬ ಧ್ವನಿ ಸಹಾಯಕ ವೈಶಿಷ್ಟ್ಯವು ಹೆಚ್ಚಿನ ಫೋನ್‌ಗಳ ಹೋಂ ಬಟನ್ ಒತ್ತಿ ಹಿಡಿದಾಗ ಸಕ್ರಿಯಗೊಳ್ಳುತ್ತದೆ. ಅದನ್ನು ಎನೇಬಲ್ ಮಾಡಿದರೆ, ನಾವು ಹೇಳಿದ್ದನ್ನು ಅದು ಹುಡುಕಿ ತೋರಿಸುತ್ತದೆ.

  • ಸೆಟ್ಟಿಂಗ್ಸ್‌ನಲ್ಲಿ ನಾವೇ ಆನ್/ಆಫ್ ಮಾಡಿಕೊಳ್ಳಬಹುದಾದ ಮತ್ತಷ್ಟು ವೈಶಿಷ್ಟ್ಯಗಳು:
  • ಟೇಬಲ್‌ನಲ್ಲಿದ್ದ ಫೋನ್ ಎತ್ತಿಕೊಂಡ ತಕ್ಷಣ ಸ್ಕ್ರೀನ್ ಆನ್ ಆಗುವಂತೆ (ಪ್ರತ್ಯೇಕವಾಗಿ ಪವರ್ ಬಟನ್ ಒತ್ತಬೇಕಾಗಿಲ್ಲ) ಹೊಂದಿಸಬಹುದು.
  • ಡಿಸ್‌ಪ್ಲೇ ಆನ್ ಅಥವಾ ಆಫ್ ಮಾಡಲು ಸ್ಕ್ರೀನ್ ಮೇಲೆ ಎರಡು ಬಾರಿ ತಟ್ಟಿದರೆ ಸಾಕಾಗುತ್ತದೆ.
  • ದೊಡ್ಡ ಲೇಖನ ಓದುತ್ತಿರುವಾಗ, ಸ್ಕ್ರೀನ್ ಸದಾ ಆನ್ ಆಗಿರುವಂತೆ (ಸ್ಲೀಪ್ ಮೋಡ್‌ಗೆ ಹೋಗದಂತೆ) ಹೊಂದಿಸಬಹುದು.
  • ಮಿಸ್ ಕಾಲ್ ಅಥವಾ ಸಂದೇಶ ಇದೆಯೆಂದಾದರೆ, ಫೋನ್ ಎತ್ತಿಕೊಂಡಾಗಲೇ ವೈಬ್ರೇಟ್ ಆಗುವಂತೆ ಹೊಂದಿಸಬಹುದು.
  • ಸ್ಕ್ರೀನ್ ಮೇಲೆ ನಿಮ್ಮ ಹಸ್ತ ಆಡಿಸಿದರೆ ಒಳಕರೆಗಳ ಸಂದರ್ಭದ ರಿಂಗಿಂಗ್ ಟೋನ್ ಅಥವಾ ಅಲಾರಂ ಮ್ಯೂಟ್ ಮಾಡಬಹುದು.
  • ಮೂರು ಬೆರಳಿನಿಂದ ಮೇಲಿಂದ ಕೆಳಕ್ಕೆ ಸ್ವೈಪ್ ಮಾಡಿದರೆ ಸ್ಕ್ರೀನ್ ಶಾಟ್ ತೆಗೆಯಬಹುದು.
  • ಒಳಬರುವ ಕರೆ ಸಂದರ್ಭದಲ್ಲಿ ಫೋನ್ ಕವುಚಿ ಇಟ್ಟರೆ ರಿಂಗಿಂಗ್ ಟೋನ್ ಸದ್ದು ಮ್ಯೂಟ್ ಆಗುವಂತೆ ಹೊಂದಿಸಬಹುದು.
  • ಕರೆ ಬಂದಾಗ, ಫೋನ್ ಎತ್ತಿಕೊಂಡು ಕಿವಿಯ ಬಳಿ ಇರಿಸಿದರೆ ಸಾಕು, ‘Answer’ ಬಟನ್ ಒತ್ತದೆಯೇ ಕರೆಗೆ ಉತ್ತರಿಸಬಹುದು.
  • ಪವರ್ ಬಟನ್ ಒತ್ತಿದರೆ ನೇರವಾಗಿ ಕ್ಯಾಮೆರಾ ಆನ್ ಆಗುವಂತೆ ಹೊಂದಿಸುವುದು.
  • ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಫೋಟೋ ತೆಗೆಯುವಂತೆ ಅಥವಾ ಸ್ಕ್ರೀನ್ ಶಾಟ್ ತೆಗೆಯಲು ಅಥವಾ ಹೋಂ ಸ್ಕ್ರೀನ್‌ಗೆ ಮರಳಲು ಹೊಂದಿಸಬಹುದು.
  • ಕರೆ ಬಂದಾಗ, ಫೋನ್ ಎತ್ತಿಕೊಂಡಾಕ್ಷಣ ರಿಂಗಿಂಗ್ ಧ್ವನಿಯ ವಾಲ್ಯೂಮ್ ಕಡಿಮೆ ಅಥವಾ ನಿಶ್ಶಬ್ದವಾಗುವಂತೆ ಹೊಂದಿಸಬಹುದು.
  • ಕರೆ ಬಂದಾಗ ಫ್ಲ್ಯಾಶ್ ಬೆಳಕು ಆನ್ ಆಗುವಂತೆ ಅಥವಾ ವೈಬ್ರೇಟ್ ಆಗುವಂತೆ ಹೊಂದಿಸಬಹುದು.
  • ಕರೆ ಕಟ್ ಮಾಡಲು ಪವರ್ ಬಟನ್ ಬಳಸುವುದು (ಕೆಲವು ಫೋನ್‌ಗಳಲ್ಲಿ ಇದು ಡೀಫಾಲ್ಟ್ ಆಗಿರುತ್ತದೆ).

ಗಮನಿಸಬೇಕಾದ ವಿಚಾರವೆಂದರೆ, ಮೇಲಿನೆಲ್ಲ ವೈಶಿಷ್ಟ್ಯಗಳು ಎಲ್ಲ ಆಂಡ್ರಾಯ್ಡ್ ಫೋನ್‌ಗಳಲ್ಲಿ ಇರಲೇಬೇಕೆಂದಿಲ್ಲ. ಕೆಲವು ಬ್ರ್ಯಾಂಡ್‌ನ ಫೋನ್‌ಗಳಲ್ಲಿ ಇವುಗಳಲ್ಲಿ ಹೆಚ್ಚಿನ ವೈಶಿಷ್ಟ್ಯಗಳಿರುತ್ತವೆ, ಕೆಲವು ಇಲ್ಲದಿರಲೂಬಹುದು.

My Article Published in Prajavani on 10/11 Aug 2021

LEAVE A REPLY

Please enter your comment!
Please enter your name here