WhatsApp ನಲ್ಲಿ ನಿಮ್ಮದೇ ಸ್ಟಿಕರ್ ರಚಿಸುವುದು ಹೇಗೆ?

0
286

ವಾಟ್ಸ್ಆ್ಯಪ್‌ನಲ್ಲೀಗ ಸ್ಟಿಕರ್‌ಗಳ ಕ್ರೇಝ್. ಗೊತ್ತಿದ್ದವರು ಅವುಗಳನ್ನು ಬಳಸುತ್ತಿದ್ದಾರೆ. ಮತ್ತಷ್ಟು ತಿಳಿದುಕೊಂಡವರು, ತಮ್ಮ ಫೋಟೋಗಳನ್ನು, ಯಕ್ಷಗಾನದ ವೇಷ ಅಥವಾ ಬೇರೆ ಯಾವುದೇ ಚಿತ್ರಗಳನ್ನು ಸ್ಟಿಕರ್ ರೂಪಕ್ಕೆ ಪರಿವರ್ತಿಸಿ ಹಂಚುತ್ತಿದ್ದಾರೆ. ನೀವೂ ಸ್ಟಿಕರ್‌ಗಳನ್ನು ಬಳಸಬಹುದಷ್ಟೇ ಅಲ್ಲದೆ, ನಿಮ್ಮದೇ ಸ್ಟಿಕರ್‌ಗಳನ್ನು ತಯಾರಿಸಬಹುದು, ಅದೂ ಸುಲಭವಾಗಿ ಎಂಬುದು ಗೊತ್ತೇ? ಇಲ್ಲಿದೆ ಮಾಹಿತಿ.

ಆಂಡ್ರಾಯ್ಡ್ ಅಥವಾ ಐಒಎಸ್ ಮೊಬೈಲ್‌ಗಳಿಗೂ ಇದು ಲಭ್ಯ. ಆದರೆ ವಾಟ್ಸ್ಆ್ಯಪ್ ಅಪ್‌ಡೇಟ್ ಆಗಿರಬೇಕು (2.18.341 ಆವೃತ್ತಿ ಅಥವಾ ಮೇಲ್ಪಟ್ಟು. ಇದನ್ನು ತಿಳಿಯಲು, ವಾಟ್ಸ್ಆ್ಯಪ್ ತೆರೆದು, ಬಲ ಮೇಲ್ಭಾಗದಲ್ಲಿ ಮೂರು ಚುಕ್ಕಿಗಳ ಮೆನು ಬಟನ್, ಬಳಿಕ ಸೆಟ್ಟಿಂಗ್ಸ್, ನಂತರ ಅದರಲ್ಲಿ ‘ಹೆಲ್ಪ್’ ಹಾಗೂ ಬಳಿಕ ‘ಆ್ಯಪ್ ಇನ್ಫೋ’ ಎಂದಿರುವುದನ್ನು ಕ್ಲಿಕ್ ಮಾಡಿದಾಗ ವಾಟ್ಸ್ಆ್ಯಪ್ ಆವೃತ್ತಿಯ ಸಂಖ್ಯೆ ಕಾಣಿಸುತ್ತದೆ).

ಈಗ ಮೆಸೇಜ್ ಕಳುಹಿಸುವ ಬಾಕ್ಸ್‌ನಲ್ಲಿರುವ ಇಮೋಜಿ ಐಕಾನ್ ಕ್ಲಿಕ್ ಮಾಡಿದಾಗ, ಕೆಳಭಾಗದಲ್ಲಿ ನಗುವ ಇಮೋಜಿಯ ಐಕಾನ್ ಪಕ್ಕದಲ್ಲಿ ಜಿಫ್ ಎಂದು ಬರೆದಿರುವ ಐಕಾನ್ ಬಳಿಕ ಪುಟ್ಟದಾದ ಮತ್ತೊಂದು ಐಕಾನ್ ಕಾಣಿಸುತ್ತದೆ. ಅದುವೇ ಸ್ಟಿಕರ್. ಅದನ್ನು ಕ್ಲಿಕ್ ಮಾಡಿ. ಅದರ ಬಲ ಮೇಲ್ಭಾಗದಲ್ಲಿ ಪ್ಲಸ್ ಮಾರ್ಕ್ ಕ್ಲಿಕ್ ಮಾಡಿ. ಅಲ್ಲಿ ನಿಮಗೆ ಸಾಕಷ್ಟು ಸ್ಟಿಕರ್ ಪ್ಯಾಕ್‌ಗಳು ಗೋಚರಿಸುತ್ತವೆ. ನಿಮಗಿಷ್ಟವಾಗಿರುವವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ (ಕೆಳ ಬಾಣ ಗುರುತು ಕ್ಲಿಕ್ ಮಾಡಿದರಾಯಿತು).

ಇಷ್ಟಲ್ಲದೆ, ಮತ್ತಷ್ಟು ಕೆಳಕ್ಕೆ ಸ್ಕ್ರಾಲ್ ಮಾಡಿದರೆ, ‘ಗೆಟ್ ಮೋರ್ ಸ್ಟಿಕರ್ಸ್’ ಅಂತ ಬರೆದಿರುವುದನ್ನು ಕ್ಲಿಕ್ ಮಾಡಿದರೆ, ಗೂಗಲ್ ಪ್ಲೇ ಸ್ಟೋರ್‌ಗೆ ನಿಮ್ಮನ್ನು ಅದು ಕೊಂಡೊಯ್ಯುತ್ತದೆ. ಅಲ್ಲಿ ವೈವಿಧ್ಯಮಯ ಥೀಮ್‌ನ ಸ್ಟಿಕರ್ ಆ್ಯಪ್‌ಗಳು ಕಾಣಿಸುತ್ತವೆ. ನಿಮಗಿಷ್ಟವಾಗಿರುವುದನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ಇನ್‌ಸ್ಟಾಲ್ ಆದ ಬಳಿಕ, ನೀವು ಸಂದೇಶ ಕಳುಹಿಸುವಾಗ, ಸ್ಟಿಕರ್ ವಿಭಾಗಕ್ಕೆ ಹೋದರೆ, ಅಲ್ಲೇ ಅವು ಕಾಣಿಸುತ್ತವೆ.

ಬೇರೆಯವರು ಕಳುಹಿಸಿದ ಸ್ಟಿಕರ್ ನಿಮಗಿಷ್ಟವಾದರೆ, ವಾಟ್ಸ್ಆ್ಯಪ್ ಸಂದೇಶದಲ್ಲೇ ಅದನ್ನು ‘ಫೇವರಿಟ್’ ಆಗಿ ಮಾಡಿಕೊಳ್ಳಿ (ಸ್ಟಿಕರ್ ಒತ್ತಿಹಿಡಿದಾಗ ಅದು ಸೆಲೆಕ್ಟ್ ಆಗುತ್ತದೆ, ನಂತರ ಬಲ ಮೇಲ್ಭಾಗದಲ್ಲಿ ಆಯ್ಕೆಗಳಿಂದ ‘ಸ್ಟಾರ್’ ಅಂತ ಗುರುತು ಮಾಡಿಟ್ಟುಕೊಂಡರಾಯಿತು). ಮುಂದೆ ಯಾರಿಗಾದರೂ ಅದೇ ಸ್ಟಿಕರ್ ಕಳುಹಿಸಬೇಕೆಂದಾಗ, ನೀವು ಮತ್ತೆ ಸ್ಟಿಕರ್ ವಿಭಾಗಕ್ಕೆ ಹೋದರೆ ಅದು ‘ಸ್ಟಾರ್’ ವಿಭಾಗದಡಿ ಲಭ್ಯವಾಗುತ್ತದೆ.

ನಾವೇ ಸ್ಟಿಕರ್ ಮಾಡುವುದು ಹೇಗೆ?
ಇದಕ್ಕೆ ಸಾಕಷ್ಟು ಆ್ಯಪ್‌ಗಳು ಲಭ್ಯ ಇವೆ. ನಾನು ಬಳಸಿದ್ದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ‘Sticker Maker for WhatsApp’ ಅಂತ ಸರ್ಚ್ ಮಾಡಿದರೆ ಸಿಗುವ ಮೊದಲ ಆ್ಯಪ್. ಅದನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ಕನಿಷ್ಠ 3 ಫೋಟೋಗಳು ಹಾಗೂ ಒಂದು ಐಕಾನ್‌ಗೆ ಸೂಕ್ತವಾಗುವ ಚಿತ್ರವನ್ನು ಸಿದ್ಧ ಮಾಡಿಟ್ಟುಕೊಳ್ಳಿ. ಗರಿಷ್ಠ 30 ಫೋಟೋಗಳನ್ನು ಸಿದ್ಧಮಾಡಿಟ್ಟುಕೊಂಡರೆ ಆಗಾಗ್ಗೆ ಪ್ಯಾಕ್ ಕ್ರಿಯೇಟ್ ಮಾಡುವ ತ್ರಾಸ ತಪ್ಪುತ್ತದೆ. ಯಾಕೆಂದರೆ, ಒಂದು ಪ್ಯಾಕ್ ಕ್ರಿಯೇಟ್ ಮಾಡಿದರೆ, ಅದಕ್ಕೆ ಸೇರಿಸಲು ಅಥವಾ ತಿದ್ದುಪಡಿ ಮಾಡಲು ಅಸಾಧ್ಯ. ಆ್ಯಪ್ ಓಪನ್ ಮಾಡಿದಾಗ ‘ಕ್ರಿಯೇಟ್ ನ್ಯೂ ಸ್ಟಿಕರ್ ಪ್ಯಾಕ್’ ಅಂತ ಕ್ಲಿಕ್ ಮಾಡಿ.

ನಿರ್ದಿಷ್ಟ ಫೋಟೋವೊಂದನ್ನು ಅಪ್‌ಲೋಡ್ ಮಾಡಿದಾಗ, ಇಮೇಜ್ ಎಡಿಟರ್‌ಗೆ ಅದು ಬಂದು ಕೂರುತ್ತದೆ. ಅದನ್ನು ಸ್ಟಿಕರ್ ಮಾಡುವುದಕ್ಕಾಗಿ ಫೋಟೋವನ್ನು ಕ್ರಾಪ್ ಮಾಡಬೇಕು. ಅದಕ್ಕಾಗಿ ಚಿತ್ರದ ಸುತ್ತ ನೀವು ಕೈಬೆರಳಿನಿಂದ ಗೆರೆ ಎಳೆಯಿರಿ. ತಪ್ಪಾಗಿ ಗೆರೆ ಎಳೆದರೆ ಸೇವ್ ಮಾಡುವ ಮುನ್ನ ಅದನ್ನು ತಿದ್ದುಪಡಿ ಮಾಡುವ ಆಯ್ಕೆಯೂ ಇದೆ. ಸರಿಯಾಗಿ ಕ್ರಾಪ್ ಮಾಡಿದರೆ, ಉತ್ತಮ ಸ್ಟಿಕರ್‌ಗಳು ಸಿದ್ಧವಾಗುತ್ತವೆ.

ಗಮನಿಸಿ. ನೀವಿಲ್ಲಿ ಸ್ಟಿಕರ್ ಪ್ಯಾಕ್ ರಚಿಸುತ್ತಿದ್ದೀರಿ. ಅದನ್ನು ಬಿಂಬಿಸುವ ಒಂದು ಐಕಾನ್‌ಗಾಗಿ ಮೊದಲ ಚಿತ್ರ ಬಳಕೆಯಾಗುತ್ತದೆ. ಕನಿಷ್ಠ 3 ಚಿತ್ರಗಳಿದ್ದರೆ ಮಾತ್ರ ಐಕಾನ್ ಪ್ಯಾಕ್ ರಚಿಸಬಹುದು.

ಸ್ಟಿಕರ್‌ಗಳು ಸಿದ್ಧವಾದ ಬಳಿಕ, ಅದನ್ನು ಸಬ್‌ಮಿಟ್ ಮಾಡುವಾಗ, ‘ಆ್ಯಡ್ ಟು ವಾಟ್ಸ್ಆ್ಯಪ್’ ಅಂತ ಆಯ್ಕೆ ಗೋಚರಿಸುತ್ತದೆ. ಅದನ್ನು ಒತ್ತಬೇಕು. ಈಗ, ವಾಟ್ಸ್ಆ್ಯಪ್ ಸಂದೇಶ ಕಳುಹಿಸುವಲ್ಲಿರುವ ಸ್ಟಿಕರ್ ಪ್ಯಾನೆಲ್ ನೋಡಿದಾಗ, ಅಲ್ಲಿ ಅವುಗಳು ಸೇರ್ಪಡೆಯಾಗಿರುತ್ತವೆ. ಒಂದು ಸಲ ಮಾಡಿ ನೋಡಿದ್ರೆ ಮತ್ತೆ ನೀವೇ ಎಕ್ಸ್‌ಪರ್ಟ್ ಆಗಿರುತ್ತೀರಿ!

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ಅಂಕಣ, 19 ನವೆಂಬರ್ 2018

LEAVE A REPLY

Please enter your comment!
Please enter your name here