ಆಂಡ್ರಾಯ್ಡ್ ಮೊಬೈಲ್ ಫೋನ್ ಬಳಸುತ್ತಿರುವ ಅನೇಕರು ಅದರ ಆವೃತ್ತಿಗಳ (ವರ್ಶನ್) ಬಗ್ಗೆ ಈಗಲೂ ಗೊಂದಲದಲ್ಲಿದ್ದಾರೆ ಅಂತ ಗೊತ್ತಾಗಿದ್ದು, ಇತ್ತೀಚೆಗೆ ಮೈಸೂರಿಗೆ ಹೋಗಿದ್ದಾಗ. ಆಂಡ್ರಾಯ್ಡ್, ನೌಗಾಟ್, ಒರಿಯೋ, ಗೋ, ಆಂಡ್ರಾಯ್ಡ್ ಒನ್… ಹೀಗೆ ಏನೇನೋ ಮಾರುಕಟ್ಟೆಯಲ್ಲಿ ಕೇಳಿಬರುತ್ತಿದೆ. ಈ ಬಗ್ಗೆ ಗೊಂದಲ ನಿವಾರಿಸಿ, ಯಾವುದು ಒಳ್ಳೆಯದು ಅಂತ ಕೇಳಿದವರು ಹಲವರು. ಈ ಕುರಿತು ಫೋನ್‌ನಲ್ಲಿಯೂ ಸಾಕಷ್ಟು ಮಂದಿ ಸಲಹೆ ಕೇಳಿದ್ದಾರೆ. ನಿಮ್ಮಲ್ಲೂ ಇರಬಹುದಾದ ಗೊಂದಲ ನಿವಾರಣೆಗಾಗಿ ಇಲ್ಲಿದೆ ಮಾಹಿತಿ.
ಆಂಡ್ರಾಯ್ಡ್ ಎಂಬುದು ಸಾಫ್ಟ್‌ವೇರ್ ದಿಗ್ಗಜ ಸಂಸ್ಥೆ ಗೂಗಲ್ ಒಡೆತನದಲ್ಲಿರುವ ಕಾರ್ಯಾಚರಣಾ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ). ಇದು ಮೊಬೈಲ್‌ಗಳಲ್ಲದೆ ಟ್ಯಾಬ್ಲೆಟ್ ಹಾಗೂ ಕಂಪ್ಯೂಟರುಗಳಿಗೂ ಲಭ್ಯ ಮತ್ತು ಇಂಟರ್ನೆಟ್ ಸಂಪರ್ಕ ಆಧಾರಿತ ಕಾರ್ಯಗಳೇ ಇದರ ಪ್ರಧಾನ ಉದ್ದೇಶ. ಈಗ ಮಾರುಕಟ್ಟೆಯಲ್ಲಿರುವ ಆಂಡ್ರಾಯ್ಡ್ ಮೊಬೈಲ್ ಸಾಧನಗಳಲ್ಲಿ ಇರುವುದೇ ಈ ಕಾರ್ಯಾಚರಣಾ ವ್ಯವಸ್ಥೆ. ಈ ಕಾರ್ಯಾಚರಣಾ ವ್ಯವಸ್ಥೆಗಳ ಆವೃತ್ತಿಗಳಿಗೆ ಇಂಗ್ಲಿಷಿನ ಕಾಗುಣಿತ ‘ಎಬಿಸಿಡಿ…’ ಪ್ರಕಾರ ಆರಂಭವಾಗುವ ಅಕ್ಷರಗಳಿರುವ ಸಿಹಿತಿನಿಸಿನ ಹೆಸರು ಇರಿಸುವುದು ಇದುವರೆಗೆ ನಡೆದುಬಂದ ಸಂಪ್ರದಾಯ. ಅದರ ಪ್ರಕಾರ, ಈಗ ಚಾಲ್ತಿಯಲ್ಲಿರುವ ಹೊಸ ಆವೃತ್ತಿಯ ಹೆಸರು ಆರಂಭವಾಗುವುದು ಇಂಗ್ಲಿಷಿನ ‘ಒ’ ಅಕ್ಷರದಿಂದ. ‘ಒರಿಯೋ’ ಹೆಸರಿನ ಸಿಹಿತಿಂಡಿಯ ಹೆಸರಿದೆ ಅದಕ್ಕೆ. ತೀರಾ ಇತ್ತೀಚಿನ ಹೆಸರುಗಳು ಜೆ (ಜೆಲ್ಲಿಬೀನ್), ಕೆ (ಕಿಟ್‌ಕ್ಯಟ್), ಎಲ್ (ಲಾಲಿಪಾಪ್), ಎಂ (ಮಾರ್ಷ್‌ಮೆಲೋ), ಎನ್ (ನೌಗಾಟ್) ಹಾಗೂ ಈಗಿನದು ಓರಿಯೋ ಅಥವಾ 8.0 ಆವೃತ್ತಿ. ಈ ವರ್ಷ ಬಿಡುಗಡೆಯಾಗಿರುವ ಹೊಸ ಆವೃತ್ತಿಯ ಹೆಸರು ಇಂಗ್ಲಿಷಿನ ‘ಪಿ’ ಅಕ್ಷರದಿಂದ ಆರಂಭವಾಗಲಿದೆ. ಆವೃತ್ತಿ ಸುಧಾರಣೆಯಾಗುತ್ತಿರುವಂತೆಯೇ ವೈಶಿಷ್ಟ್ಯಗಳೂ ಹೆಚ್ಚಾಗುತ್ತಾ ಹೋಗುತ್ತವೆ. ಈ ಕಾರ್ಯಾಚರಣಾ ವ್ಯವಸ್ಥೆಯು ಸಾಫ್ಟ್‌ವೇರ್ (ತಂತ್ರಾಂಶ) ಆಗಿದ್ದು, ಅದಕ್ಕೆ ತಕ್ಕಂತೆ ಯಂತ್ರಾಂಶವೂ (ಹಾರ್ಡ್‌ವೇರ್ ಅಂದರೆ ಗರಿಷ್ಠ ಸಾಮರ್ಥ್ಯವಿರುವ ಪ್ರೊಸೆಸರ್, RAM, ಬ್ಯಾಟರಿ ಇತ್ಯಾದಿ) ಅಪ್‌ಗ್ರೇಡ್ ಆಗಬೇಕಾಗುತ್ತದೆ. ಈ ಕಾರಣಕ್ಕೆ, ಹಳೆಯ ಆಂಡ್ರಾಯ್ಡ್ ಸಾಧನಗಳಲ್ಲಿ ಇತ್ತೀಚಿನ ತಂತ್ರಾಂಶವು ರನ್ ಆಗುವುದಿಲ್ಲ. ತತ್ಪರಿಣಾಮವಾಗಿ ಲೇಟೆಸ್ಟ್ ವೈಶಿಷ್ಟ್ಯಗಳಾದ ಫಿಂಗರ್‌ಪ್ರಿಂಟ್ ಅನ್‌ಲಾಕಿಂಗ್, ಫೇಸ್ ರೆಕಗ್ನಿಷನ್ ಅನ್‌ಲಾಕಿಂಗ್, ಗೂಗಲ್ ಅಸಿಸ್ಟೆಂಟ್ ಹಾಗೂ ಇತರ ಹಲವಾರು ಸ್ಮಾರ್ಟ್ ವೈಶಿಷ್ಟ್ಯಗಳು ಹಳೆಯ ಫೋನ್ ಸಾಧನಗಳಲ್ಲಿ ಕೆಲಸ ಮಾಡುವುದಿಲ್ಲ.
ಆಂಡ್ರಾಯ್ಡ್ ಓರಿಯೋ
ಸದ್ಯದ ಪ್ರಕಾರ ಗೂಗಲ್ ಕಂಪನಿಯು ಮೂರು ರೀತಿಯಲ್ಲಿ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯನ್ನು ಒದಗಿಸುತ್ತದೆ. ಒಂದನೆಯದು ಆಂಡ್ರಾಯ್ಡ್‌ನ ಲೇಟೆಸ್ಟ್ ಆವೃತ್ತಿ ಆಂಡ್ರಾಯ್ಡ್ ಓರಿಯೋ. ಎರಡನೆಯದು ಆಂಡ್ರಾಯ್ಡ್ ಒನ್ ಹಾಗೂ ಮೂರನೆಯದು ಆಂಡ್ರಾಯ್ಡ್ ಗೋ (ಒರಿಯೋ ಗೋ). ಒಂದೊಂದಾಗಿ ನೋಡೋಣ.
ಆಂಡ್ರಾಯ್ಡ್ ಓರಿಯೋ, ಮೊದಲೇ ಹೇಳಿದಂತೆ ಪ್ರತಿ ವರ್ಷ ಬಿಡುಗಡೆಯಾಗುವ ಸಾಲಿನಲ್ಲಿ ಕಳೆದ ವರ್ಷ ಬಂದಿರುವ ವಿನೂತನ ಸಾಫ್ಟ್‌ವೇರ್ ಆವೃತ್ತಿ. ಇದರ ಆವೃತ್ತಿ ಸಂಖ್ಯೆ 8.0. ಇದನ್ನು ಮೊಬೈಲ್ ತಯಾರಿಕಾ ಕಂಪನಿಗಳಾದ ಸ್ಯಾಮ್ಸಂಗ್, ಎಂಐ, ಆ್ಯಸುಸ್, ಒಪ್ಪೋ, ವಿವೊ, ಮೋಟೋರೋಲ, ಲೆನೋವೊ, ಹೆಚ್‌ಟಿಸಿ, ನೋಕಿಯಾ ಮುಂತಾದ ಕಂಪನಿಗಳು ತಮಗೆ ಬೇಕಾದಂತೆ ಮಾರ್ಪಾಟುಗಳನ್ನು ಮಾಡಿ (ಹೊಸ ವೈಶಿಷ್ಟ್ಯಗಳನ್ನು ಸೇರಿಸಿ) ತಮ್ಮ ಬ್ರ್ಯಾಂಡ್ ಹೆಸರುಗಳಲ್ಲಿ ಮಾರುಕಟ್ಟೆಗೆ ಇಳಿಸುತ್ತವೆ. ಹೀಗಾಗಿ, ಈ ಕಂಪನಿಗಳಿಂದ ನೀವು ಖರೀದಿಸುವ ಅದೆಷ್ಟೋ ಮೊಬೈಲ್ ಫೋನ್‌ಗಳಲ್ಲಿ ಮೊದಲೇ ಅಳವಡಿಸಲಾದ ಹಲವಾರು ಆ್ಯಪ್‌ಗಳಿರುತ್ತವೆ, ಬೇರೆಯದರಲ್ಲಿ ಇಲ್ಲದಿರುವ ಹೊಸ ವೈಶಿಷ್ಟ್ಯಗಳು/ಸೆಟ್ಟಿಂಗ್‌ಗಳು ಇರುತ್ತವೆ. ಕೆಲವು ಆ್ಯಪ್‌ಗಳು ನಮಗೆ ಅನಗತ್ಯ. ಇವುಗಳನ್ನು ಕೆಲವನ್ನು ಅನ್-ಇನ್‌ಸ್ಟಾಲ್ ಮಾಡುವುದಕ್ಕೂ ಆಗುವುದಿಲ್ಲ. ಅಂಥವನ್ನು ಬ್ಲಾಟ್‌ವೇರ್‌ಗಳು ಅಂತ ಕರೆಯಲಾಗುತ್ತದೆ.
ಓರಿಯೋ ಆಂಡ್ರಾಯ್ಡ್‌ನ ಹೊಚ್ಚ ಹೊಸ ಆವೃತ್ತಿಯಾಗಿರುವುದರಿಂದ, ಅದಕ್ಕೆ ಪೂರಕವಾದ ಪ್ರೊಸೆಸರ್, RAM ಹಾಗೂ ಇಂಟರ್ನಲ್ ಮೆಮೊರಿ ಇದ್ದರೆ, ಅವುಗಳಲ್ಲಿ ಸಾಕಷ್ಟು ವೈಶಿಷ್ಟ್ಯಗಳನ್ನು ನಾವು ಕಾಣಬಹುದು. ಮುಖ್ಯವಾಗಿ, ಪಿಕ್ಚರ್-ಇನ್-ಪಿಕ್ಚರ್ (ಚಿತ್ರದೊಳಗೆ ಮತ್ತೊಂದು ಚಿತ್ರ ಕಾಣಿಸುವ) ಮೋಡ್, ಉದಾಹರಣೆಗೆ ವೀಡಿಯೋ ನೋಡುತ್ತಿರುವಂತೆಯೇ, ಗೂಗಲ್ ಮ್ಯಾಪ್ ಕೂಡ ಮತ್ತೊಂದು ಪುಟ್ಟ ವಿಂಡೋದಲ್ಲಿ ಕಾಣಿಸಿಕೊಳ್ಳಬಹುದಾಗಿದೆ. ಎರಡೆರಡು ಆ್ಯಪ್ ಅನ್ನು ಸ್ಕ್ರೀನ್ (ಸ್ಪ್ಲಿಟ್-ಸ್ಕ್ರೀನ್) ಮೇಲೆ ನೋಡಬಹುದಾಗಿದೆ. ಅದೇ ರೀತಿ, ಗೂಗಲ್ ಡೇಡ್ರೀಮ್ ಎಂಬ ವ್ಯವಸ್ಥೆಯ ಮೂಲಕ ಗೇಮ್ಸ್, ಮೂವೀ, ಶೈಕ್ಷಣಿಕ ಆ್ಯಪ್‌ಗಳ ಮೂಲಕ ವರ್ಚುವಲ್ ರಿಯಾಲಿಟಿ (ಭ್ರಮಾ ವಾಸ್ತವ) ಅನುಭವವನ್ನು ಪಡೆಯಬಹುದು.
ಆಂಡ್ರಾಯ್ಡ್ ಒನ್
ಆಂಡ್ರಾಯ್ಡ್ ಸಾಧನಗಳು ಅಗ್ಗದ ದರದಲ್ಲಿ ಲಭ್ಯವಾಗುವಂತಾಗಲು ಈ ಕಾರ್ಯಾಚರಣಾ ವ್ಯವಸ್ಥೆಯನ್ನು ಗೂಗಲ್ 2014ರಲ್ಲೇ ಘೋಷಿಸಿತ್ತು. ಕೆಳ ಹಂತದ ಸ್ಮಾರ್ಟ್‌ಫೋನ್‌ಗಳಿಗೆ ಸೀಮಿತವಾಗಿದ್ದ ಈ ಕಾರ್ಯಾಚರಣಾ ವ್ಯವಸ್ಥೆಯನ್ನು ಪ್ಯೂರ್ ಆಂಡ್ರಾಯ್ಡ್ ಅಥವಾ ಸ್ಟಾಕ್ ಆಂಡ್ರಾಯ್ಡ್ ಎಂದು ಕರೆಯಲಾಗುತ್ತದೆ. ಅಂದರೆ ಇದರಲ್ಲಿ ಯಾವುದೇ ಹೆಚ್ಚುವರಿ ಬ್ಲಾಟ್‌ವೇರ್‌ಗಳಿರುವುದಿಲ್ಲ, ಗೂಗಲ್ ಅಭಿವೃದ್ಧಿಪಡಿಸುತ್ತಿರುವ ಆಂಡ್ರಾಯ್ಡ್ ಇದಾಗಿದ್ದು, ಆವೃತ್ತಿ ಪರಿಷ್ಕರಣೆಯಾಗುವಾಗಲೆಲ್ಲಾ ಈ ಸಾಧನಗಳಿಗೆ ಮೊದಲು ಅಪ್‌ಡೇಟ್‌ಗಳು ಲಭ್ಯವಾಗುತ್ತವೆ; ಮೊಬೈಲ್ ಸಾಧನ ತಯಾರಕರು ಹೊಸ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡುವವರೆಗೆ ಕಾಯಬೇಕಾಗಿಲ್ಲ. ಎಲ್ಲ ಸೆಕ್ಯುರಿಟಿ ಪ್ಯಾಚ್‌ಗಳು ಕೂಡ ಆದ್ಯತೆಯ ಆಧಾರದಲ್ಲಿ ಲಭ್ಯವಾಗುತ್ತವೆ. ಇದು ಬೇಸಿಕ್ ಹ್ಯಾಂಡ್‌ಸೆಟ್‌ಗಳಿಗೆ ಮಾತ್ರವಷ್ಟೇ ಅಲ್ಲ, ಇತ್ತೀಚೆಗೆ ಗೂಗಲ್ ಪಿಕ್ಸೆಲ್ ಸೇರಿದಂತೆ ಪ್ರಮುಖ ಅತ್ಯಾಧುನಿಕ ಹ್ಯಾಂಡ್‌ಸೆಟ್‌ಗಳಲ್ಲಿಯೂ ಬಳಕೆಯಾಗತೊಡಗಿದೆ. ನೋಕಿಯಾ, ಹೆಚ್‌ಟಿಸಿ, ಶಿಯೋಮಿ ಮುಂತಾದ ಕಂಪನಿಗಳು ಮಾರ್ಪಾಟುಗೊಳಿಸಿದ ಆಂಡ್ರಾಯ್ಡ್ ಸಿಸ್ಟಂ ಇರುವ ಹ್ಯಾಂಡ್‌ಸೆಟ್‌ಗಳಷ್ಟೇ ಅಲ್ಲದೆ, ಆಂಡ್ರಾಯ್ಡ್ ಒನ್ (ಬ್ಲಾಟ್‌ವೇರ್ ಮುಕ್ತ ಪ್ಯೂರ್ ಆಂಡ್ರಾಯ್ಡ್) ಮೊಬೈಲ್ ಫೋನ್‌ಗಳನ್ನೂ ಮಾರುಕಟ್ಟೆಗೆ ಬಿಟ್ಟಿವೆ. ಇದರ ಮತ್ತೊಂದು ಅನುಕೂಲವೆಂದರೆ, ಸ್ಪೇಸ್ ಉಳಿತಾಯ. ಅಂದರೆ, ಅನ್‌ಇನ್‌ಸ್ಟಾಲ್ ಮಾಡಲಾಗದ ಕೆಲವೊಂದು ಅನಗತ್ಯ ಆ್ಯಪ್‌ಗಳು ಮೊದಲೇ ಅಳವಡಿಕೆಯಾಗಿ ಬರುವುದಿಲ್ಲ.
ಆಂಡ್ರಾಯ್ಡ್ ಗೋ
ಈಗ ಇದನ್ನು ಆಂಡ್ರಾಯ್ಡ್ ಓರಿಯೋ ಗೋ ಎಡಿಶನ್ ಅಂತಲೂ ಕರೆಯಲಾಗುತ್ತದೆ. 2017ರ ಮೇ ತಿಂಗಳಲ್ಲಿ ಇದನ್ನು ಘೋಷಣೆ ಮಾಡಲಾಗಿತ್ತು. ಇದು ಆಂಡ್ರಾಯ್ಡ್ ಒನ್‌ನ ಮತ್ತೊಂದು ಕುಗ್ಗಿದ ರೂಪವಾಗಿದ್ದರೂ, ತೀರಾ ಕಡಿಮೆ RAM (1 ಜಿಬಿ ಅಥವಾ ಅದಕ್ಕಿಂತ ಕಡಿಮೆ) ಇರುವ ಸಾಧನಗಳಿಗಾಗಿಯೇ ರೂಪಿಸಲಾಗಿದೆ. ಅಂದರೆ, ಬೇಸಿಕ್ ಸ್ಮಾರ್ಟ್ ಫೋನ್‌ಗಳು ತೀರಾ ಅಗ್ಗದ ದರದಲ್ಲಿ ದೊರೆಯುವಂತೆ ಮಾಡುವ ಉದ್ದೇಶ ಇದರ ಹಿಂದಿದೆ. ಇದರಲ್ಲಿ ಗೂಗಲ್‌ನ ಮೂಲಭೂತ ಆ್ಯಪ್‌ಗಳಾದ ಜಿಮೇಲ್, ಮ್ಯಾಪ್ಸ್, ಯೂಟ್ಯೂಬ್, ಅಸಿಸ್ಟೆಂಟ್, ಕ್ರೋಮ್ ಮುಂತಾದವೆಲ್ಲವೂ ತೀರಾ ಹಗುರವಿರುತ್ತದೆ. ಮೊಬೈಲ್ ಡೇಟಾ (ಇಂಟರ್ನೆಟ್ ಪ್ಯಾಕ್) ಬಳಕೆಯನ್ನು ಕಡಿಮೆ ಮಾಡಲು ಪೂರಕವಾಗುವಂತೆ (ಹಿನ್ನೆಲೆಯಲ್ಲಿ ಡೇಟಾ ಆ್ಯಕ್ಸೆಸ್) ಇದನ್ನು ವಿನ್ಯಾಸಪಡಿಸಲಾಗಿದೆ. ಈ ಹ್ಯಾಂಡ್‌ಸೆಟ್‌ಗಳಲ್ಲಿ ಕಡಿಮೆ ಸಾಮರ್ಥ್ಯದ ಪ್ರೊಸೆಸರ್, ಕಡಿಮೆ ಬ್ಯಾಟರಿ ಇರುವುದರಿಂದ ಅಗ್ಗ. ಭಾರತದಲ್ಲಿ ದೇಶೀ ಉತ್ಪಾದಕರಾದ ಲಾವಾ, ಮೈಕ್ರೋಮ್ಯಾಕ್ಸ್, ಸ್ಪೈಸ್ ಮುಂತಾದವು ಆಂಡ್ರಾಯ್ಡ್ ಗೋ ಆಪರೇಟಿಂಗ್ ಸಿಸ್ಟಂ ಇರುವ ಫೋನುಗಳನ್ನು ಅಗ್ಗದ ದರದಲ್ಲಿ ಮಾರುಕಟ್ಟೆಗೆ ಬಿಟ್ಟಿವೆ. ಬೆಲೆ ನಾಲ್ಕೈದು ಸಾವಿರ ರೂ. ಒಳಗಿರುತ್ತದೆ.