ChatGPT ಗೆ ಎದುರಾಳಿ Google Bard

0
249

ಅಂತರಜಾಲವನ್ನು ಜಾಲಾಡಿದಷ್ಟೂ ಮಾಹಿತಿ ಭರಪೂರವಾಗಿ ಲಭ್ಯ. ಈ ಮಾಹಿತಿಯ ಪ್ರವಾಹದ ನಡುವೆ ಇತ್ತೀಚೆಗೆ ಸದ್ದು ಮಾಡುತ್ತಿರುವುದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ ಅಥವಾ ಯಾಂತ್ರೀಕೃತ ಬುದ್ಧಿಮತ್ತೆ) ಆಧಾರಿತ ಚಾಟ್ ತಂತ್ರಜ್ಞಾನ. ಆರೇಳು ತಿಂಗಳ ಹಿಂದೆ ತಂತ್ರಜ್ಞಾನ ಕ್ಷೇತ್ರಕ್ಕಷ್ಟೇ ಅಲ್ಲ, ಬಹುತೇಕ ಎಲ್ಲ ಕ್ಷೇತ್ರಗಳಿಗೂ ಸುಳಿಗಾಳಿಯಂತೆ ಬಂದು ಅಪ್ಪಳಿಸಿದ್ದು ಚಾಟ್-ಜಿಪಿಟಿ ಎಂಬ ಸಂಭಾಷಣಾ ತಂತ್ರಾಂಶ. ಅದಕ್ಕೆ ಸಮರ್ಥವಾಗಿ ಸವಾಲೊಡ್ಡುತ್ತಿದೆ ಗೂಗಲ್‌ನ ಬಾರ್ಡ್ (Google Bard) ಎಂಬ ಮತ್ತೊಂದು “ಉತ್ತರಿಸುವ ಯಂತ್ರ”.

ಹೇಳಿ ಕೇಳಿ ಗೂಗಲ್ ಎಂಬುದು ನಮಗೆ ಬೇಕಾದ ಎಲ್ಲವನ್ನೂ (ಒಳ್ಳೆಯದು ಮತ್ತು ಕೆಟ್ಟದ್ದು ಎಂಬ ಆಯ್ಕೆ ಮಾತ್ರ ನಮ್ಮ ಬುದ್ಧಿಗೆ ಬಿಟ್ಟ ವಿಚಾರ) ನೀಡಬಲ್ಲ ತಂತ್ರಜ್ಞಾನ ದಿಗ್ಗಜ ಸರ್ಚ್ ಎಂಜಿನ್. ಚಾಟ್-ಜಿಪಿಟಿ ಈ ಪರಿಯಾಗಿ ಸದ್ದು ಮಾಡುತ್ತಿರಬೇಕಾದರೆ ಬಾರ್ಡ್ ಎಂಬ ಎಐ ತಂತ್ರಜ್ಞಾನದ ಮೇಲೆ ಭರ್ಜರಿ ಹೂಡಿಕೆ ಮಾಡುತ್ತಿದೆ ಗೂಗಲ್ ಒಡೆತನದ ಆಲ್ಫಬೆಟ್ ಸಂಸ್ಥೆ. ಇದು ಕೂಡ ಚಾಟ್-ಜಿಪಿಟಿ ಮಾದರಿಯಲ್ಲೇ, ನಾವು ಪಠ್ಯ ರೂಪದಲ್ಲಿ ಕೇಳುವ ಪ್ರಶ್ನೆಗಳಿಗೆ ಇಡೀ ಅಂತರಜಾಲವನ್ನು ಜಾಲಾಡಿ ಪರಿಹಾರ ನೀಡಬಲ್ಲ, ಸಹಜ ಭಾಷೆಯಲ್ಲೇ ನಮಗೆ ವಿವರ ನೀಡಬಲ್ಲ ತಂತ್ರಜ್ಞಾನ.

ಏನಿದು ಗೂಗಲ್ ಬಾರ್ಡ್?
ಗೂಗಲ್‌ನಲ್ಲಿ ನಾವು ಹೇಳಿದ್ದಕ್ಕೆ ಉತ್ತರಿಸುವ, ಹೇಳಿದ್ದನ್ನು ಮಾಡಬಲ್ಲ ಗೂಗಲ್ ಅಸಿಸ್ಟೆಂಟ್ ಎಂಬ ಸಹಾಯಕ ತಂತ್ರಜ್ಞಾನವನ್ನು ಬಹುಶಃ ಬಹುತೇಕರು ಬಳಸಿರಬಹುದು. ಯಂತ್ರ ಕಲಿಕೆ (ಮಶಿನ್ ಲರ್ನಿಂಗ್) ಆಧಾರದಲ್ಲಿ ಕೆಲಸ ಮಾಡುವ ಈ ಸಹಾಯಕ ತಂತ್ರಾಂಶದ ಸುಧಾರಿತ ಮತ್ತು ಹೆಚ್ಚು ಶಕ್ತಿಶಾಲಿ ರೂಪವೇ ಬಾರ್ಡ್.

ಗೂಗಲ್ ಇಡೀ ಜಗತ್ತಿನ ಬಹುತೇಕ ಭಾಷೆಗಳಲ್ಲಿ ಸೇವೆ ನೀಡುತ್ತಿರುವುದರಿಂದಾಗಿ, ತನ್ನ ವ್ಯಾಪ್ತಿಯಲ್ಲಿರುವ ಭಾರಿ ಪ್ರಮಾಣದ ದತ್ತಾಂಶ ಸಂಚಯದ ಸಹಾಯ ಪಡೆಯುವ ‘ಬಾರ್ಡ್’ ಚಾಟ್‌ಬಾಟ್, ಓಪನ್ ಎಐ ಸಂಸ್ಥೆಯ ಚಾಟ್ ಜಿಪಿಟಿಗಿಂತಲೂ ಒಂದು ಕೈ ಮೇಲೆ. ಇದು ಗೂಗಲ್‌ನ ಸ್ವಂತದ್ದಾದ, LaMDA (ಲ್ಯಾಂಗ್ವೇಜ್ ಮಾಡೆಲ್ ಫಾರ್ ಡೈಲಾಗ್ ಅಪ್ಲಿಕೇಶನ್ಸ್) ಎಂಬ LLM (ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್) ಆಧಾರದಲ್ಲಿ ಕೆಲಸ ಮಾಡುತ್ತದೆ. ಹೀಗಾಗಿ, ಆಂಗ್ಲೇತರ ಭಾಷೆಗಳಲ್ಲಿ ಕೂಡ ಇದು ಹೆಚ್ಚು ಚೆನ್ನಾಗಿ ಕೆಲಸ ಮಾಡುತ್ತಿದೆ. ಆದರೆ, ಸದ್ಯಕ್ಕೆ ಕನ್ನಡ ಸಹಿತ ಭಾರತೀಯ ಭಾಷೆಗಳಲ್ಲಿ ಇದು ಇನ್ನಷ್ಟೇ ಲಭ್ಯವಾಗಬೇಕಿದೆ. ಆದರೆ, ಸಣ್ಣದೊಂದು ಇಂಗ್ಲಿಷ್ ವಾಕ್ಯವನ್ನು ಬರೆದು, ಇದನ್ನು ಕನ್ನಡಕ್ಕೆ ಅನುವಾದಿಸಿಕೊಡು ಅಂತ ಸೂಚನೆ ನೀಡಿದರೆ, ಕನ್ನಡದ ಅನುವಾದ ಲಭ್ಯವಾಗುತ್ತದೆ! ದೊಡ್ಡ ವಾಕ್ಯ ಬರೆದರೆ, “ನಾನಿನ್ನೂ ಈ ಭಾಷೆ ಕಲಿಯಲು ಪ್ರಯತ್ನಿಸುತ್ತಿದ್ದೇನೆ. ಹೀಗಾಗಿ ಈಗ ಇದನ್ನು ಮಾಡಲಾರೆ” ಎಂಬ ಸಂದೇಶ ಕೊಡುತ್ತದೆ.

ಗೂಗಲ್ ಬಾರ್ಡ್ ಏನೆಲ್ಲ ಮಾಡುತ್ತದೆ?
ಒಂದು ಅಂತರರಾಷ್ಟ್ರೀಯ ಕಂಪನಿಯ ನೌಕರಿಗೆ ಅರ್ಜಿ ಸಲ್ಲಿಸಬೇಕಿದ್ದರೆ, ಒಕ್ಕಣೆ ಹೇಗಿರಬೇಕು ಎಂದು ಅದುವೇ ನಮಗೆ ಹೇಳಿಕೊಡಬಲ್ಲುದು. ‘ಅಮ್ಮಾ ಈ ಆಕಾಶವೇಕೆ ನೀಲಿ ಇದೆ?’ ಅಂತ ಕೇಳುವ ಪುಟಾಣಿಗಳಿಗೆ ಸಮರ್ಪಕ ಉತ್ತರ ಕೊಡಬಲ್ಲುದು. ಶುಗರ್, ಬಿಪಿ ಇರುವವರಿಗಾಗಿ ಆರೋಗ್ಯಕರವಾದ ರೆಸಿಪಿ ಮಾಡುವುದು ಹೇಗೆ ಅಂತ ಕೇಳಿದರೆ, ಪಠ್ಯ ರೂಪದಲ್ಲಿ ವಿವರಿಸಬಲ್ಲುದು. ಯಾವುದೋ ಒಂದು ತಂತ್ರಾಂಶ ತಯಾರಿಕೆಗೆ ಕೋಡ್ ತಯಾರಿಸಿಕೊಡಬಲ್ಲುದು, ಪ್ರವಾಸಕ್ಕೆ ಹೋಗುವುದಿದ್ದರೆ ಯೋಜನೆ ರೂಪಿಸಬಲ್ಲುದು, ಅಥವಾ ನಿಮ್ಮ ಮನಸ್ಸು ತೀರಾ ಮ್ಲಾನವಾಗಿದ್ದರೆ, ನನಗೊಂದು ಬೇಸರದ ಕವನ ಬರೆದುಕೊಡು ಎಂದರೆ, ಕಣ್ಣೀರು ತರಿಸುವಷ್ಟು ಭಾವನಾತ್ಮಕ ಕವನ ರಚನೆಯಾಗುತ್ತದೆ! ಪರಿಸರದ ಬಗ್ಗೆ ಒಂದು ಪ್ರಬಂಧ ಬರೆದುಕೊಡು ಎಂದರೂ ಕ್ಷಣ ಮಾತ್ರದಲ್ಲಿ ಕವನ ಸಿದ್ಧ.

ಇಂಥ ಅನೇಕಾನೇಕ ಕೆಲಸಗಳನ್ನು ಮಾಡಬಲ್ಲ ಚಾಟ್ ಜಿಪಿಟಿ, ಗೂಗಲ್ ಬಾರ್ಡ್ ಹಾಗೂ ಮೈಕ್ರೋಸಾಫ್ಟ್‌ನ ಬಿಂಗ್ ಮುಂತಾದವು ಈಗಾಗಲೇ ಸಾಕಷ್ಟು ಉದ್ಯೋಗಗಳಿಗೂ ಕುತ್ತು ನೀಡುತ್ತಿದೆ ಎಂಬ ವರದಿಗಳನ್ನು ನಾವು ಓದಿದ್ದೇವೆ. ಆದರೆ, ಈ ತಂತ್ರಜ್ಞಾನ ರೂಪಿಸಿದವರು ಒಂದು ಅಬಾಧ್ಯತೆ ಅಥವಾ ಹಕ್ಕು ನಿರಾಕರಣೆ (Disclaimer) ವಾಕ್ಯದ ಮೂಲಕ ಎಚ್ಚರಿಸುತ್ತಾರೆ. ಅಂತರಜಾಲದಲ್ಲಿ ಲಭ್ಯವಾಗುವುದೆಲ್ಲವೂ ಎಷ್ಟರ ಮಟ್ಟಿಗೆ ನಿಜವಲ್ಲವೋ, ಈ ಚಾಟ್‌ಬಾಟ್ ಮೂಲಕ ದೊರೆಯುವ ಮಾಹಿತಿಯೂ ಶೇ.100ರಷ್ಟು ನಿಖರ ಆಗಿರಲಾರದು ಅಂತ.

ಬಾರ್ಡ್ ಬಂದಿದ್ದು ಯಾವಾಗ?
ವಾಸ್ತವವಾಗಿ, ಗೂಗಲ್ ಈ ಬಾರ್ಡ್ ಎಂಬ ಚಾಟ್‌ಬಾಟ್ ಅನ್ನು 2021ರ ತನ್ನ ವಾರ್ಷಿಕ ಡೆವಲಪರ್ ಕಾನ್ಫರೆನ್ಸ್‌ನಲ್ಲೇ (I/O) ಘೋಷಿಸಿತ್ತು. ಆದರೆ, ಓಪನ್ ಎಐ ಸಂಸ್ಥೆಯು ಚಾಟ್-ಜಿಪಿಟಿಯನ್ನು 2022ರ ಅಂತ್ಯಭಾಗದಲ್ಲಿ ಯಾವಾಗ ಬಹಿರಂಗಪಡಿಸಿತೋ, ಗೂಗಲ್ ಕೂಡ ಶ್ರಮ ಹಾಕಿ, 2023ರ ಫೆಬ್ರವರಿ ವೇಳೆಗೆ ಬಾರ್ಡ್ ಅನ್ನು ಬಹಿರಂಗಪಡಿಸಿತು. ಆರಂಭದಲ್ಲಿ ಸೀಮಿತ ಜನರಿಗಷ್ಟೇ ಇದಕ್ಕೆ ಪ್ರವೇಶವಿತ್ತು (ಗೂಗಲ್‌ನ ಸಾಮಾನ್ಯ ತಂತ್ರಗಾರಿಕೆ ಎಂದರೆ, ಹೊಸದಾಗಿ ಏನೇ ಘೋಷಿಸುವುದಿದ್ದರೂ ಆಹ್ವಾನ ಆಧಾರಿತ ಪ್ರವೇಶಾವಕಾಶ ನೀಡುವುದು). 2023ರ ಡೆವಲಪರ್ ಸಮಾವೇಶದಲ್ಲಿ ಗೂಗಲ್ ಇದನ್ನು ಎಲ್ಲರಿಗೂ ಮುಕ್ತವಾಗಿಸಿತು. ಮತ್ತು ಈಗಲೂ ಅದಕ್ಕೆ “ಪ್ರಾಯೋಗಿಕ” ಎಂಬ ಲೇಬಲ್ ಇದ್ದೇ ಇದೆ.

ಗೂಗಲ್ ಬಾರ್ಡ್ ಹೇಗೆ ಬಳಸುವುದು
ನಿಮ್ಮಲ್ಲಿ ಜಿಮೇಲ್ ಖಾತೆ ಇದ್ದರಾಯಿತು. ಬ್ರೌಸರಿನಲ್ಲಿಯೇ bard.google.com ಗೆ ಹೋಗಿ, ನೋಂದಣಿ ಮಾಡಿಕೊಂಡು, ಅವರ ಷರತ್ತುಗಳು ಮತ್ತು ನಿಯಮಗಳಿಗೆ ಒಪ್ಪಿಗೆ ಸೂಚಿಸಿದ ತಕ್ಷಣವೇ ಗೂಗಲ್ ಬಾರ್ಡ್ ಬಳಕೆ ಆರಂಭಿಸಬಹುದು. ಅಲ್ಲಿರುವ “Enter a prompt here” ಎಂದಿರುವ ಬಾಕ್ಸ್‌ನಲ್ಲಿ ನಿಮ್ಮ ಪ್ರಶ್ನೆಗಳನ್ನು ಟೈಪ್ ಮಾಡಿ. ಕೆಲವೇ ಕ್ಷಣಗಳಲ್ಲಿ ಉತ್ತರ/ಪರಿಹಾರ ಕಾಣಿಸುತ್ತದೆ.

ಚಾಟ್-ಜಿಪಿಟಿ ಹಾಗೂ ಗೂಗಲ್ ಬಾರ್ಡ್ – ಏನು ವ್ಯತ್ಯಾಸ?
ಗೂಗಲ್ ಬಾರ್ಡ್‌ನ ಒಂದು ಅನುಕೂಲವೆಂದರೆ, ಈ ವಿಷಯದ ಬಗ್ಗೆ ಮತ್ತಷ್ಟು ತಿಳಿಯಬೇಕಿದ್ದರೆ ಗೂಗಲ್ಲ್ ಸರ್ಚ್ ಎಂಜಿನ್ ಮೂಲಕ ಹುಡುಕಲು ಅಲ್ಲೇ ಒಂದು ಬಟನ್ ನೀಡಲಾಗಿದೆ. ಜೊತೆಗೆ, ಒಂದು ಪ್ರಶ್ನೆಗೆ ಒಂದೇ ಉತ್ತರವಲ್ಲ, ಇನ್ನಷ್ಟು ಉತ್ತರಗಳನ್ನು ನೋಡುವ ಆಯ್ಕೆಯೂ ಇದೆ. View Other Drafts ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದಾಗ ಸ್ವಲ್ಪ ಭಿನ್ನವಾದ ಉತ್ತರಗಳು ದೊರೆಯುತ್ತವೆ. ಜೊತೆಗೆ, ನಾವು ಕೇಳಿದ ಪ್ರಶ್ನೆಗಳಿಗೆ ಸಂಬಂಧಿಸಿದ ಅನ್ಯ ವಿಷಯಗಳ ಬಗೆಗೆ ಲಿಂಕ್‌ಗಳನ್ನು ಕೂಡ ಕೆಳಭಾಗದಲ್ಲಿ ಒದಗಿಸುತ್ತದೆ.

ಅದರಿಂದ ಪಡೆದ ಪಠ್ಯವನ್ನು ಗೂಗಲ್ ಡಾಕ್ಸ್ ಅಥವಾ ಜಿಮೇಲ್‌ಗೆ ಎಕ್ಸ್‌ಪೋರ್ಟ್ ಮಾಡುವ ಆಯ್ಕೆ ಇದೆ. ಆದರೆ, ಚಾಟ್-ಜಿಪಿಟಿಗೆ ವ್ಯತಿರಿಕ್ತವಾಗಿ, ನೀವು ಪುನಃ ಲಾಗಿನ್ ಆಗುವಾಗ ಹಿಂದಿನ ಸಂವಾದಗಳು ಲಭ್ಯವಾಗುವುದಿಲ್ಲ. ಅಂದರೆ, ಚಾಟ್ ಕ್ಲೋಸ್ ಮಾಡಿದಾಗ ಅವು ಡಿಲೀಟ್ ಆಗುತ್ತವೆ.

ಒಂದು ನೆನಪಿಡಬೇಕು. ಯಾವುದೇ ತಂತ್ರಜ್ಞಾನ ಬಂದರೂ, ಚಾಟ್‌ಬಾಟ್ ನೀಡುವ ಅಥವಾ ಗೂಗಲ್‌ನಲ್ಲೇ ಸರ್ಚ್ ಮಾಡಿ ಲಭ್ಯವಾಗುವ ಅಂತರಜಾಲದ ಮಾಹಿತಿಯನ್ನು ಬಳಸುವ ಮುನ್ನ, ಅದು ಶೇ.100 ನಿಖರ ಆಗಿರಲಾರದು ಎಂಬ ಸಾಮಾನ್ಯ ಪ್ರಜ್ಞೆ ನಮ್ಮಲ್ಲಿರಬೇಕು.

Avinash B Tech Article Published in Prajavani on 28 Jun 2023

LEAVE A REPLY

Please enter your comment!
Please enter your name here