“ನನ್ನ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ, ಯಾರೋ ನನ್ನ ಖಾತೆಯಲ್ಲಿ ಅಶ್ಲೀಲ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ, ದಯವಿಟ್ಟು ನಿರ್ಲಕ್ಷಿಸಿ” ಅಂತ ನಿಮ್ಮ ಸ್ನೇಹಿತರ ಟೈಮ್‌ಲೈನ್‌ನಲ್ಲಿ ಹಲವು ಪೋಸ್ಟ್‌ಗಳನ್ನು ನೋಡಿರಬಹುದು.
ಫೇಸ್‌ಬುಕ್ ಸಾಮಾಜಿಕ ಜಾಲತಾಣದ ಖಾತೆ ಹ್ಯಾಕ್ ಮಾಡುವುದರಿಂದೇನು ಲಾಭ ಅಂತ ನೀವು ಕೇಳಬಹುದು. ಕೆಲವು ವರ್ಷಗಳ ಹಿಂದೆ ಫೇಸ್‌ಬುಕ್ ಖಾತೆಯು ಸೈಬರ್ ಕ್ರಿಮಿನಲ್‌ಗಳಿಗೆ ಅಷ್ಟೇನೂ ಆಸಕ್ತಿ ಹುಟ್ಟಿಸಿರಲಿಲ್ಲ. ಆದರೆ, ಈಗ ಹಾಗಲ್ಲ. ಫೇಸ್‌ಬುಕ್ ಅಗಾಧವಾಗಿ ಬೆಳೆದಿದೆ. ಬಳಕೆದಾರರ ದತ್ತಾಂಶ ಕದ್ದು ಮಾರಾಟ ಮಾಡುವುದಕ್ಕೆ ಅಥವಾ ಬ್ಲ್ಯಾಕ್‌ಮೇಲ್ ಇಲ್ಲವೇ ಸೇಡು ತೀರಿಸಿಕೊಳ್ಳುವುದಕ್ಕೋ ಫೇಸ್‌ಬುಕ್ ಖಾತೆ ಹ್ಯಾಕ್ ಆದ ಅದೆಷ್ಟೋ ಪ್ರಕರಣಗಳಿವೆ. ಉದಾಹರಣೆಗೆ, ಲಕ್ಷಾಂತರ ಲೈಕ್ಸ್ ಇರುವ ಗಣ್ಯ ವ್ಯಕ್ತಿಯೊಬ್ಬರ ಪುಟವನ್ನೇ ಹ್ಯಾಕ್ ಮಾಡಿ, ಯಾವುದಾದರೂ ಉತ್ಪನ್ನ ಅಥವಾ ಬ್ರ್ಯಾಂಡ್‌ನ ಪ್ರಚಾರ ಮಾಡಿಸುವುದು, ಮಾಲ್‌ವೇರ್‌ಗಳನ್ನು ಹರಡುವುದು ಹ್ಯಾಕರ್‌ಗಳ ಉದ್ದೇಶವಾಗಿರಬಹುದು.
ಹ್ಯಾಕ್ ಆಗಲು ಸೆಲೆಬ್ರಿಟಿಯೇ ಆಗಬೇಕೆಂದಿಲ್ಲ. ಹೀಗಾಗಿ, ನಾವು ಫೇಸ್‌ಬುಕ್‌ನಲ್ಲಿ ಹೇಗೆ ಸುರಕ್ಷಿತವಾಗಿರಬಹುದು? ಎಂಬ ಬಗ್ಗೆ ಒಂದಿಷ್ಟು ಸಲಹೆಗಳು ಇಲ್ಲಿವೆ.
ಮೊದಲನೆಯದಾಗಿ, ಸೈಬರ್ ಕೆಫೆ, ಕಚೇರಿ ಮುಂತಾದೆಡೆ, ಅನ್ಯರೂ ಬಳಸುವ ಯಾವುದೇ ಸಾಧನಗಳಲ್ಲಿ (ಕಂಪ್ಯೂಟರ್, ಮೊಬೈಲ್ ಇತ್ಯಾದಿ) ಪಾಸ್‌ವರ್ಡ್ ಸೇವ್ ಮಾಡಲೇಬೇಡಿ. ಕೆಲವರು ಏನು ಬರೆದಿದೆ ಅಂತ ಓದದೆಯೇ ಎಲ್ಲ ವಿಂಡೋಗಳಿಗೂ ‘Yes’ ಅಂತ ಕ್ಲಿಕ್ ಮಾಡುತ್ತಾ ಹೋಗುತ್ತಾರೆ. ಅಲ್ಲಿ, ‘ಪಾಸ್‌ವರ್ಡ್ ಸೇವ್ ಮಾಡಬೇಕೇ’ ಎಂಬ ಪ್ರಶ್ನೆಯೂ ಇರುತ್ತದೆ. ನೋಡದೆಯೇ ಒತ್ತಿದರೆ ಅದು ಆ ಕಂಪ್ಯೂಟರ್ ಬ್ರೌಸರ್‌ನಲ್ಲಿ ಸೇವ್ ಆಗುತ್ತದೆ. ಮುಂದೆ ಬರುವವರು ಇದನ್ನೇ ಬಳಸಿ ನಿಮ್ಮ ಖಾತೆಗೆ ಲಾಗಿನ್ ಆಗಬಹುದು.
ಎರಡನೇ ಪ್ರಮುಖ ವಿಚಾರ, ಯಾವುದೇ ಸಾಧನ ಬಳಸಿದ ಬಳಿಕ ಲಾಗೌಟ್ ಮಾಡಲು ಮರೆಯಬೇಡಿ. ಇಲ್ಲವೆಂದಾದರೆ, ಬೇರೆಯವರು ಫೇಸ್‌ಬುಕ್ ತೆರೆದ ತಕ್ಷಣ ನಿಮ್ಮ ಖಾತೆ ಸ್ವಯಂಚಾಲಿತವಾಗಿ ತೆರೆದುಕೊಳ್ಳಬಹುದು.
ಸುರಕ್ಷಿತವಾಗಿ ಲಾಗಿನ್ ಆಗಲು ಫೇಸ್‌ಬುಕ್ ಒದಗಿಸಿರುವ ಎರಡು ಹಂತದ ದೃಢೀಕರಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಿ. ಪ್ರತೀ ಬಾರಿ ನಿಮ್ಮ ಖಾತೆಗೆ ಲಾಗಿನ್ ಆದಾಗ, ನಿಮ್ಮ ಫೋನ್‌ಗೆ ದೃಢೀಕರಣ ಸಂದೇಶವೊಂದು ಬರುವುದರಿಂದ, ಬೇರೆಯವರು ಲಾಗಿನ್ ಆಗಲು ಪ್ರಯತ್ನಿಸುವಾಗ ನಿಮಗೆ ತಿಳಿಯುತ್ತದೆ.
ಹ್ಯಾಕಿಂಗ್ ಸಮಸ್ಯೆ ಕೇವಲ ವೆಬ್ ಆಧಾರಿತವಲ್ಲ. ಯಾವುದೇ ವ್ಯಕ್ತಿಯು ನಿಮಗೆ ತಿಳಿಯದೆಯೇ (ಪಾಪ್-ಅಪ್ ಜಾಹೀರಾತಿನ ಮೂಲಕ ಲಿಂಕ್ ಕ್ಲಿಕ್ ಮಾಡಿಸಿ) ಮಾಲ್‌ವೇರ್ (ಕುತಂತ್ರಾಂಶ) ಅಳವಡಿಸಿಯೂ ಹ್ಯಾಕ್ ಮಾಡಬಹುದು. ಹೀಗಾಗಿ, ನಮ್ಮ ಕಂಪ್ಯೂಟರ್ ಹಾಗೂ ಮೊಬೈಲ್‌ಗಳಲ್ಲಿ ಸಮರ್ಥವಾದ ಆ್ಯಂಟಿ-ಮಾಲ್‌ವೇರ್ ಅಥವಾ ಆ್ಯಂಟಿ ವೈರಸ್ ತಂತ್ರಾಂಶವನ್ನು ಅಳವಡಿಸಿಕೊಳ್ಳಿ.
ಹ್ಯಾಕ್ ಆಗಿದೆಯೇ ಅಂತ ಹೀಗೆ ಚೆಕ್ ಮಾಡಿಕೊಳ್ಳಿ
ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ ಎಂಬ ಸಂದೇಹ ನಿಮಗಿದ್ದರೆ, ಲಾಗಿನ್ ಆಗಲು ಅಸಾಧ್ಯವಾದರೆ https://www.facebook.com/hacked ಎಂಬಲ್ಲಿ ಸೂಚನೆಗಳನ್ನು ಅನುಸರಿಸಿ, ನಿಮ್ಮ ಖಾತೆಯನ್ನು ಸುರಕ್ಷಿತವಾಗಿಸಿಕೊಳ್ಳಿ.