ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ ಡಿಸೆಂಬರ್ 30
ಕಂಪ್ಯೂಟರಿನಲ್ಲಿ ಏನಾದರೂ ಸಮಸ್ಯೆಯಾದರೆ, ಅಥವಾ ಯಾವುದೇ ಸಾಫ್ಟ್‌ವೇರ್‌ನಲ್ಲಿ ತೊಂದರೆ ಕಾಣಿಸಿಕೊಂಡರೆ ನಿಮ್ಮ ಸ್ನೇಹಿತರು ಅಥವಾ ಸಿಸ್ಟಂ ತಜ್ಞರಿಂದ ಸಲಹೆ ಕೇಳಿದಾಗ, ಸಮಸ್ಯೆಯ ಕುರಿತು ಸ್ಕ್ರೀನ್‌ಶಾಟ್ ತೆಗೆದು ಕಳುಹಿಸಿ ಅಂತ ನಿಮಗವರು ಹೇಳಿರಬಹುದು. ಇದರಿಂದ, ಯಾವ ಹಂತದಲ್ಲಿ ಏನು ದೋಷ ಕಂಡುಬಂದಿದೆ ಮತ್ತು ನಿಮ್ಮ ಕಂಪ್ಯೂಟರಿನಲ್ಲಿ ಯಾವ ರೀತಿಯ ಸಂದೇಶ (Error Message) ತೋರಿಸಲಾಗಿದೆ ಎಂದು ತಿಳಿದುಕೊಂಡು, ಅದಕ್ಕೆ ಪರಿಹಾರ ಸೂಚಿಸುವುದು ಸುಲಭವಾಗುತ್ತದೆ. ಕಂಪ್ಯೂಟರಿನ ಕೀಬೋರ್ಡ್‌ನಲ್ಲಿ ಇದಕ್ಕಾಗಿ ಪ್ರತ್ಯೇಕ ಸ್ಕ್ರೀನ್‌ಶಾಟ್ ಕೀ ಇರುತ್ತದೆ. ಆದರೆ, ಕಂಪ್ಯೂಟರುಗಳದ್ದೇ ಮಿನಿ ರೂಪವಾಗಿರುವ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಲ್ಲಿ ಕೂಡ ಇಂಥದ್ದೇ ಸ್ಕ್ರೀನ್ ಶಾಟ್ (ಅಂದರೆ ಕಾಣಿಸಿಕೊಳ್ಳುವ ಸ್ಕ್ರೀನ್‌ನ ಚಿತ್ರ) ತೆಗೆಯಬಹುದು ಎಂಬುದು ಬಹುತೇಕರಿಗೆ ಗೊತ್ತಿರಲಾರದು. ಇಲ್ಲಿದೆ ಈ ಕುರಿತ ಮಾಹಿತಿ.
ಆಂಡ್ರಾಯ್ಡ್
ಹೆಚ್ಚಿನವರು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಹೊಂದಿರುತ್ತಾರೆ. ಕೆಲವೊಮ್ಮೆ ಅವರು ತಮ್ಮ ಸಾಧನದ ಫೋಟೋ ಗ್ಯಾಲರಿ ವಿಭಾಗಕ್ಕೆ ಹೋದಾಗ, ಸ್ಕ್ರೀನ್‌ನಲ್ಲಿ ಆ್ಯಪ್‌ಗಳು ಇರುವ ಚಿತ್ರವೊಂದನ್ನು ಆಕಸ್ಮಿಕವಾಗಿ ನೋಡಿರಬಹುದು. ಅದು ಕೂಡ ಚಿತ್ರ, ಇಲ್ಲಿ ಹೇಗೆ ಬಂತೆಂಬುದು ಹೊಳೆಯುತ್ತಲೇ ಇಲ್ಲ! ಅದಕ್ಕೆ ಕಾರಣವಿದೆ. ಆಂಡ್ರಾಯ್ಡ್ ಸಾಧನಗಳಲ್ಲಿ ವಾಲ್ಯೂಮ್ ಮತ್ತು ಪವರ್ ಕೀಗಳು ವಿರುದ್ಧ ದಿಕ್ಕಿನಲ್ಲಿರುತ್ತವೆ. ಸಾಧನವನ್ನು ಕೈಯಲ್ಲಿ ಹಿಡಿದುಕೊಂಡಿರುವಾಗ ಆಕಸ್ಮಿಕವಾಗಿ ಈ ಎರಡೂ ಕೀಗಳು ಒತ್ತಲ್ಪಟ್ಟು ಆಟೋಮ್ಯಾಟಿಕ್ ಆಗಿ ಸ್ಕ್ರೀನ್ ಶಾಟ್ ಬಂದಿರುತ್ತದೆ. ಈ ಸ್ಕ್ರೀನ್ ಶಾಟ್ ತೆಗೆಯಲು ಮಾಡಬೇಕಾಗಿರುವುದು ಇಷ್ಟೆ – ವಾಲ್ಯೂಮ್ ಕಡಿಮೆ ಮಾಡುವ ಕೀ ಮತ್ತು ಪವರ್ ಕೀಲಿಯನ್ನು ಒಟ್ಟಿಗೆ ಒತ್ತಿದರೆ ನೀವು ಯಾವ ಸ್ಕ್ರೀನ್‌ನಲ್ಲಿದ್ದೀರೋ, ಆ ಸ್ಕ್ರೀನ್‌ನ ಚಿತ್ರವು ಗ್ಯಾಲರಿಯಲ್ಲಿ ಸೇವ್ ಆಗಿರುತ್ತದೆ. ಆಂಡ್ರಾಯ್ಡ್ ಹೊಸ ಆವೃತ್ತಿಯ ಫೋನ್‌ಗಳಲ್ಲಿ ನೋಟಿಫಿಕೇಶನ್ ಪಟ್ಟಿ (ಮೇಲ್ಭಾಗದಲ್ಲಿ ಬ್ಯಾಟರಿ, ಮೊಬೈಲ್ ಸಿಗ್ನಲ್ ತೋರಿಸುವ ಪ್ರದೇಶ) ನೋಡಿದರೆ, ಅಲ್ಲಿ Saving Screenshot ಅಂತ ಕಾಣಿಸಬಹುದು. ಗ್ಯಾಲರಿಗೆ ಹೋಗಿ ನೋಡಿದರೆ, ಸ್ಕ್ರೀನ್‌ಶಾಟ್ ಹೆಸರಿನ ಒಂದು ಫೋಲ್ಡರ್ ಕ್ರಿಯೇಟ್ ಆಗಿರುತ್ತದೆ. ಅದರೊಳಗಿನ ಚಿತ್ರ ಕ್ಲಿಕ್ ಮಾಡಿದರೆ, ಅದೊಂದು ಚಿತ್ರವೆಂದು ಗೊತ್ತೇ ಆಗಲಾರದು, ಯಾಕೆಂದರೆ ಅದು ಸ್ಮಾರ್ಟ್‌ಫೋನ್‌ನಲ್ಲಿನ ಸ್ಕ್ರೀನ್‌ನಂತೆಯೇ ಕಾಣಿಸುತ್ತದೆ. ಅದರಲ್ಲಿರುವ ಆ್ಯಪ್‌ನ ಚಿತ್ರಗಳನ್ನು ಕ್ಲಿಕ್ ಮಾಡಲು ಹೋಗಿ, ‘ಈ ಆ್ಯಪ್’ ಕೆಲಸ ಮಾಡೋದೇ ಇಲ್ಲ ಅಂತ ಬೇಸ್ತು ಬೀಳಬಹುದು! ಇಷ್ಟಲ್ಲದೆ, ನಿಮ್ಮ ಸ್ಮಾರ್ಟ್‌ಫೋನ್‌ನ ಸ್ಕ್ರೀನ್ ಹೀಗಿದೆ ಅಂತ ಸ್ನೇಹಿತರಿಗೆ ತಿಳಿಸಲು, ಈ ಚಿತ್ರಗಳನ್ನು ಅಲ್ಲಿಂದಲೇ ಒಂದು ಸಲ ಬೆರಳಿನಿಂದ ಸ್ಪರ್ಶಿಸಿ, ಫೇಸ್‌ಬುಕ್, ಟ್ವಿಟರ್ ಅಥವಾ ಇಮೇಲ್ ಮೂಲಕ ಹಂಚಿಕೊಳ್ಳುವ ಆಯ್ಕೆಯೂ ಇದೆ. ಇದಕ್ಕೆ ಇಂಟರ್ನೆಟ್ ಸಂಪರ್ಕ ಬೇಕಾಗುತ್ತದೆ.
ಐಫೋನ್
ಆ್ಯಪಲ್ ಐಫೋನ್‌ನ ಇತ್ತೀಚಿನ ಐಒಎಸ್ ಆವೃತ್ತಿಗಳಲ್ಲಾದರೆ, ಇದೇ ರೀತಿ ಎರಡು ಕೀಗಳನ್ನು ಪ್ರೆಸ್ ಮಾಡುವ ಮೂಲಕ ಸ್ಕ್ರೀನ್ ಶಾಟ್ ತೆಗೆಯಬಹುದು. ಸ್ಲೀಪ್/ವೇಕ್ (ಆನ್/ಆಫ್ ಎಂದೂ ಕರೆಯಲಾಗುವ) ಕೀಲಿ ಹಾಗೂ ಹೋಮ್ ಬಟನ್ ಒಟ್ಟಿಗೆ ಒತ್ತಿ ಹಿಡಿದರೆ, ನಿಮ್ಮ ಸ್ಕ್ರೀನ್‌ನ ಚಿತ್ರವು ಫೋಟೋಸ್ ಎಂಬಲ್ಲಿರುವ ಕ್ಯಾಮೆರಾ ರೋಲ್ ಫೋಲ್ಡರ್‌ನಲ್ಲಿ ಸೇವ್ ಆಗುತ್ತದೆ. ಹೊಸ ಐಫೋನ್‌ಗಳಲ್ಲಾದರೆ, ಕ್ಯಾಮರಾದ ಶಟರ್ ಧ್ವನಿ ಕೇಳಿಸುತ್ತದೆ. ಐಪ್ಯಾಡ್ ಮತ್ತು ಐಪಾಡ್-ಟಚ್‌ನಲ್ಲಿಯೂ ಬಹುತೇಕ ಇದೇ ರೀತಿಯಾಗಿ ಸ್ಕ್ರೀನ್ ಶಾಟ್ ತೆಗೆಯಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲಿಂದಲೇ ಶೇರ್ ಮಾಡಿಕೊಳ್ಳಬಹುದು.
ಬ್ಲ್ಯಾಕ್‌ಬೆರಿ
ಪ್ರತಿಷ್ಠೆಯ ಫೋನ್ ಎಂದೇ ಕರೆಸಿಕೊಳ್ಳುವ ಬ್ಲ್ಯಾಕ್‌ಬೆರಿ ಕಂಪನಿಯ ಫೋನ್‌ಗಳಲ್ಲಿ ಸ್ಕ್ರೀನ್ ಶಾಟ್ ತೆಗೆಯಲು ವ್ಯವಸ್ಥೆ ಇಲ್ಲ. ಆದರೆ Capture It ಎಂಬ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಮೊಬೈಲ್ ಫೋನ್‌ನ ಬ್ರೌಸರ್‌ನಲ್ಲಿ www.captureitota.com ಟೈಪ್ ಮಾಡಿದರೆ, ಕೆಳಗೆ ಡೌನ್‌ಲೋಡ್ ಮಾಡಿಕೊಳ್ಳುವ ಆಯ್ಕೆ ಇರುತ್ತದೆ. ಇನ್‌ಸ್ಟಾಲ್ ಮಾಡಿದ ಬಳಿಕ, ನಿಮ್ಮ ಫೋನ್‌ನಲ್ಲಿ Options ಎಂಬಲ್ಲಿ, Application Management ಗೆ ಹೋದರೆ, ಅಲ್ಲಿ Capture It ಇರುತ್ತದೆ. ಮೆನು ಒತ್ತಿ, Edit Permissions ಕ್ಲಿಕ್ ಮಾಡಿ, Allow ಎಂದು ಬದಲಾಯಿಸಿ.
ವಿಂಡೋಸ್ 8 ಫೋನ್
ಇತ್ತೀಚಿನ ವಿಂಡೋಸ್ ಫೋನ್‌ಗಳಲ್ಲಿ ವಿಂಡೋಸ್ ಚಿಹ್ನೆ ಇರುವ ಬಟನ್ ಮತ್ತು ಪವರ್ ಬಟನ್ ಒಟ್ಟಾಗಿ ಒತ್ತಿ ಹಿಡಿದರೆ, ಸ್ಕ್ರೀನ್ ಶಾಟ್ ಚಿತ್ರ ತೆಗೆಯಬಹುದು. ಫೋಟೋ ಗ್ಯಾಲರಿಯಲ್ಲಿ ಪ್ರತ್ಯೇಕವಾದ ಸ್ಕ್ರೀನ್‌ಶಾಟ್ ಎಂಬ ಫೋಲ್ಡರ್ ತಾನಾಗಿಯೇ ರಚನೆಯಾಗಿ, ಅದರೊಳಗೆ ಸ್ಕ್ರೀನ್‌ಶಾಟ್‌ಗಳು ಸೇವ್ ಆಗುತ್ತವೆ. ಈ ಚಿತ್ರವನ್ನು ಕೂಡ ಸ್ನೇಹಿತರೊಂದಿಗೆ ಫೇಸ್‌ಬುಕ್, ಟ್ವಿಟರ್ ಮೂಲಕ ಹಂಚಿಕೊಳ್ಳಬಹುದು, ಇಮೇಲ್ ಮಾಡಬಹುದು.
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…