ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಡಿ.23
2013 ಅಂತ್ಯವಾಗುತ್ತಿದೆ. ಈ ವರ್ಷ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನೋಡಿದರೆ, ನಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್‌ಗಳು ತೀರಾ ಹಳೆಯವು ಅನ್ನಿಸುವ ಸಾಧ್ಯತೆಗಳು ಹೆಚ್ಚಾಗಿದೆ.
ಈಗ ಬರುತ್ತಿರುವ ಮತ್ತು ಮುಂದೆ ಬರಲಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಹೈಡೆಫಿನಿಷನ್ ಡಿಸ್‌ಪ್ಲೇಗಳು ಸಾಮಾನ್ಯವಾಗಿಬಿಟ್ಟಿವೆ. ಐದರಿಂದ 7 ಇಂಚಿನ ಸ್ಕ್ರೀನ್‌ಗಳಿಗೆ ಹೆಚ್ಚು ಬೇಡಿಕೆ ಬರುತ್ತಿದೆ, ಅದರಲ್ಲಿ ಕನಿಷ್ಠ 12 ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮರಾಗಳು ಕೂಡ ಸಾಮಾನ್ಯವಾಗುತ್ತಿವೆ.
ಇಷ್ಟೆಲ್ಲಾ ಸಾಕಾಗುತ್ತದೆ ಎಂದುಕೊಂಡು ಖರೀದಿಸಿದವರಿಗೆ ವರ್ಷಾಂತ್ಯದಲ್ಲಿ ನಡೆದಿರುವ ತಂತ್ರಜ್ಞಾನ ಪ್ರಗತಿಯು ಆಘಾತ ನೀಡಿರುವುದಂತೂ ಸುಳ್ಳಲ್ಲ. ಕಾರಣವಿದೆ. ಸ್ಮಾರ್ಟ್‌ಫೋನ್‌ಗಳ ವಿನ್ಯಾಸದಲ್ಲಿ ಅಭೂತಪೂರ್ವ ಬದಲಾವಣೆಯಾಗುತ್ತಿದೆ. ಹೇಗೆ ಬೇಕೋ ಹಾಗೆ ಬಾಗಬಲ್ಲ ಸ್ಕ್ರೀನ್ (Curved) ಇರುವ ಸ್ಮಾರ್ಟ್ ಫೋನ್‌ಗಳು ಮಾರುಕಟ್ಟೆಗಿಳಿದಿವೆ. ಈ ನಿಟ್ಟಿನಲ್ಲಿ ಎಲ್‌ಜಿ ಕಂಪನಿಯು ‘ಜಿ-ಫ್ಲೆಕ್ಸ್’ ಹಾಗೂ ಸ್ಯಾಮ್ಸಂಗ್ ‘ಗ್ಯಾಲಕ್ಸಿ ರೌಂಡ್’ ಎಂಬ ಮಾಡೆಲ್‌ಗಳ ಮೂಲಕ ಬಾಗುವ ಸ್ಕ್ರೀನ್ ಇರುವ ಸ್ಮಾರ್ಟ್‌ಫೋನ್‌ಗಳಿಗೆ ಮುನ್ನುಡಿ ಬರೆದಿವೆ.
ಇದು ಆರಂಭಿಕ ತಂತ್ರಜ್ಞಾನವಷ್ಟೆ. ಇನ್ನೆರಡು ವರ್ಷಗಳಲ್ಲಿ ಬಹುಶಃ ಜೇಬಿನಲ್ಲಿ ಸುತ್ತಿಡಬಲ್ಲ, ಮಡಚಿಡಬಲ್ಲ ಸ್ಮಾರ್ಟ್ ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳು ಬಂದರೂ ಅಚ್ಚರಿಯಿಲ್ಲ. ತಂತ್ರಜ್ಞಾನ ಅಷ್ಟು ಮುಂದುವರಿದಿದೆ. ದೊಡ್ಡ ಗಾತ್ರದ ಫೋನ್ ಅಥವಾ ಟ್ಯಾಬ್ಲೆಟ್‌ಗಳನ್ನು ಒಯ್ಯುವುದು ನಮಗೆಲ್ಲಾ ದೊಡ್ಡ ಸಮಸ್ಯೆಯ ವಿಷಯ. ಆದರೆ ಅವು ಈಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿರುವುದರಿಂದ ಸಾಫ್ಟ್‌ವೇರ್ ತಯಾರಕರು ಫೋನ್‌ಗಳನ್ನು ಮನುಷ್ಯನಿಗೆ ಮತ್ತಷ್ಟು ಆಪ್ತವಾಗಿಸುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದು, ಈ ಮಡಚುವ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಿದ್ದಾರೆ. ಈಗಾಗಲೇ ನಮ್ಮ ಬಳಕೆಯ ವಿಧಾನವನ್ನು, ದೈನಂದಿನ ಚಲನ ವಲನಗಳನ್ನು ಆಧರಿಸಿ, ಧ್ವನಿ ಗುರುತಿಸುವಿಕೆ ಹಾಗೂ ಮುಖ ಗುರುತಿಸುವಿಕೆ ತಂತ್ರಜ್ಞಾನಗಳ ಮೂಲಕ ಸ್ಮಾರ್ಟ್‌ಫೋನನ್ನು ನಮ್ಮ ಮನೆಯ ಸದಸ್ಯನಂತೆಯೇ ರೂಪಿಸುವ ಕಾರ್ಯವೊಂದು ನಡೆಯುತ್ತಿದೆ ಎಂದರೆ ತಪ್ಪಾಗದು.
ಹಾಗಿದ್ದರೆ, ಮುಂದೆ ಬರಲಿರುವ ಸ್ಮಾರ್ಟ್‌ಫೋನ್‌ಗಳು ಹೇಗಿರಬಲ್ಲವು? ಸ್ಮಾರ್ಟ್‌ಫೋನ್‌ನ ಬಗ್ಗೆ ಯೋಚನೆಯನ್ನೇ ಬಿಟ್ಟು, ಸದಾ ಕಾಲ ಅದು ನಮ್ಮೊಂದಿಗೆ ಇರುವಂತೆ ಮತ್ತು ಅದು ಇಲ್ಲದೆ ಬದುಕುವುದೇ ಕಷ್ಟ ಎಂಬಂತೆ ಇರಬಲ್ಲವು ಎಂಬುದೇ ಉತ್ತರ. ಜಿ ಫ್ಲೆಕ್ಸ್ ಹಾಗೂ ಗ್ಯಾಲಕ್ಸಿ ರೌಂಡ್ ಮೊಬೈಲ್‌ಗಳ ಬೆಲೆ ಸದ್ಯಕ್ಕೆ ಅರ್ಧ ಲಕ್ಷ ಆಸುಪಾಸು ಇದ್ದು, ಅದು ಜನ ಸಾಮಾನ್ಯರ ಕೈಗೆಟುಕುವುದು ಕಷ್ಟ. ಆದರೆ, ಕಾಲ ಸರಿದಂತೆ ಎಲ್ಲರಿಗೂ ಇದು ಲಭ್ಯವಾಗಬಹುದೆಂಬುದು ನಿರೀಕ್ಷೆ.
ಜಿ-ಫ್ಲೆಕ್ಸ್ ಹೇಗೆ ಕೆಲಸ ಮಾಡುತ್ತದೆಯೆಂದರೆ, ಈ ಸ್ಮಾರ್ಟ್‌ಫೋನನ್ನು ಮೇಲಿನಿಂದ ಕೆಳಕ್ಕೆ (ಲಂಬವಾಗಿ) ಕೊಂಚವೇ ಬಾಗಿಸಬಹುದು. ಅದರ ಸ್ಪೀಕರ್ ಭಾಗವು ಬಾಯಿಗೆ ಸಮೀಪ ಬರಲು ಇದು ಸಹಕಾರಿಯಾಗುತ್ತದೆ. ಇದರ ಬ್ಯಾಟರಿ ಕೂಡ ಬಾಗಿದ ಆಕಾರದಲ್ಲಿಯೇ ಇದೆ. ಅಲ್ಲದೆ, ಇದರ ಹೊರ ಕವಚದಲ್ಲಿ ಯಾವುದೇ ಸಣ್ಣಪುಟ್ಟ ಗೀರುಗಳಾಗಿದ್ದರೆ, ಸ್ವಯಂ ಆಗಿ ಸರಿಯಾಗಬಲ್ಲ ರಕ್ಷಣಾತ್ಮಕ ಕೋಟ್ ಕೂಡ ಇದೆ ಅಂತ ಕಂಪನಿಯು ಹೇಳಿಕೊಂಡಿದೆ. ಜಿ-ಫ್ಲೆಕ್ಸ್‌ಗಿಂತ ಗ್ಯಾಲಕ್ಸಿ ರೌಂಡ್ ಹೇಗೆ ಭಿನ್ನವೆಂದರೆ, ಇದು ಅಡ್ಡಡ್ಡ ಬಾಗಿರುತ್ತದೆ.
ಎಲ್ಲಕ್ಕಿಂತ ಹೆಚ್ಚಾಗಿ ಸ್ಮಾರ್ಟ್‌ಫೋನ್‌ಗಳು ಯಾವ ಹಾದಿ ತುಳಿಯುತ್ತಿವೆ ಎಂಬುದರ ಮುನ್ಸೂಚನೆಯೇ ಈ ವಿನೂತನ ಫೋನ್. ಈ ತಂತ್ರಜ್ಞಾನವು ಮುಂದೆ ಸ್ಕ್ರೀನನ್ನು ಪೂರ್ತಿಯಾಗಿ ಬಾಗಿಸಬಲ್ಲ, ನಂತರ ಮಡಚಬಲ್ಲ ತಂತ್ರಜ್ಞಾನಗಳಿಗೂ ನಾಂದಿ ಹಾಡಬಹುದು. ಈ ಮೂಲಕ ದೊಡ್ಡ ಫೋನ್‌ಗಳನ್ನು ಜೇಬಿಗೆ ಹೊಂದುವಂತೆ ಚಿಕ್ಕದಾಗಿ ಮಡಚಿ ಎಲ್ಲಿ ಬೇಕಾದರೂ ತ್ರಾಸವಿಲ್ಲದೆ ಒಯ್ಯಬಹುದು. ಅದುವರೆಗೆ ಕಾಯೋಣ ಅಂತೀರಾ?
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು